ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮರ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯ

Last Updated 22 ಅಕ್ಟೋಬರ್ 2011, 10:25 IST
ಅಕ್ಷರ ಗಾತ್ರ

ಕೊಪ್ಪಳ: ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ನಾಗರಿಕರ ಸುರಕ್ಷತೆಗಾಗಿ ಕರ್ತವ್ಯ ನಿರತವಾಗಿರುವಾಗಲೇ ವೀರ ಮರಣವನ್ನಪ್ಪಿದ ಧೀಮಂತ ಪೊಲೀಸರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್ ಹೇಳಿದರು.

ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.

ಭಾರತ-ಚೀನಾ ಗಡಿಯಲ್ಲಿ 1959ರ ಅ. 21ರಂದು ಚೀನಿ ಸೈನಿಕರಿಂದ ಗಡಿಭಾಗದ ಲೆಹ್ ಪ್ರದೇಶದಲ್ಲಿ ಆಕ್ರಮಣ ನಡೆದಿತ್ತು. ಆಗ ದೇಶದ ಹಾರ್ಟ್‌ಸ್ಪ್ರಿಂಗ್ ಪೋಸ್ಟ್ ಬಳಿಯ ತುಕಡಿಯ ಸೈನಿಕರು ಕೆಚ್ಚೆದೆಯಿಂದ ಹೋರಾಟ ನಡೆಸಿ ಹುತಾತ್ಮರಾದರು. ಸೈನಿಕರ ತ್ಯಾಗ- ಬಲಿದಾನದ ಸ್ಮರಣೆಗಾಗಿ 18,000 ಅಡಿ ಎತ್ತರದ ಈ ಪ್ರದೇಶದಲ್ಲಿ ಬೃಹತ್ ಸ್ಮಾರಕವನ್ನು ನಿರ್ಮಿಸಲಾಗಿದೆ.  ಈ ಘಟನೆಯ ಹಿನ್ನೆಲೆಯಲ್ಲಿ ಹುತಾತ್ಮರ ಸ್ಮರಣೆಗಾಗಿ ಪ್ರತಿ ವರ್ಷ ಅ. 21ರಂದು ಪೊಲೀಸ್ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಕಳೆದ ವರ್ಷ ಹುತಾತ್ಮರಾದ ರಾಜ್ಯದ 10 ಜನ ಸೇರಿದಂತೆ ಒಟ್ಟು 636 ಪೊಲೀಸರು/ಸಶಸ್ತ್ರ ಪಡೆಗಳ ಸದಸ್ಯರ ಹೆಸರುಗಳನ್ನು ಈ ಸಂದರ್ಭದಲ್ಲಿ ಓದಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮಾತನಾಡಿ, ನಮ್ಮ ಸಮಾಜದಲ್ಲಿ ಶಾಂತಿ, ಸೌಹಾರ್ದ ಹಾಗೂ ಸುರಕ್ಷತೆಗೆ ಧಕ್ಕೆ ಬಂದಾಗ ಪೊಲೀಸರು ತಮ್ಮ ಜೀವವನ್ನು
ಪಣಕ್ಕಿಟ್ಟು, ಶಾಂತಿ ಕಾಪಾಡಲು ಶ್ರಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ವೀರ ಮರಣವನ್ನಪ್ಪಿ ಹುತಾತ್ಮರಾಗುವ ಪೊಲೀಸರು ದೇಶದ ಎಲ್ಲಾ ಪೊಲೀಸರಿಗೆ ಆದರ್ಶಪ್ರಾಯವಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಚ್.ಕಾಕನೂರ, ನಗರಸಭೆ ಸದಸ್ಯರಾದ ಇಂದಿರಾ ಭಾವಿಕಟ್ಟಿ, ಗವಿಸಿದ್ದಪ್ಪ ಮುಂಡರಗಿ, ಡಿವೈಎಸ್‌ಪಿ ಪಿ.ಡಿ.ಗಜಕೋಶ ಸೇರಿದಂತೆ ನಗರದ ವಿವಿಧ ಗಣ್ಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT