ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತ್ತಕ್ಕೆ ಕೋಳಿ ರಕ್ತದ ಅಭಿಷೇಕ!

Last Updated 9 ಡಿಸೆಂಬರ್ 2013, 9:22 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ವಿಭಿನ್ನವಾದ ಹಬ್ಬ, ಉತ್ಸವಗಳು ಆಚರಣೆಯಲ್ಲಿವೆ. ಅವುಗಳಿಗೆ ಜನಪದದ ಹಿನ್ನೆಲೆಯೂ ಇದೆ. ಶತಮಾನ ಗಳಿಂದಲೂ ಇಂತಹ ಹಬ್ಬ ಆಚರಿಸಿಕೊಂಡು ಬರುತ್ತಿರುವುದನ್ನು ಕಾಣಬಹುದು. ಇದಕ್ಕೆ ಜಿಲ್ಲೆಯಲ್ಲಿ ಭಾನುವಾರ ಸುಬ್ರಮಣ್ಯ ಷಷ್ಠಿಯಂದು ನಡೆದ ಹುತ್ತದ ಕೋವಿಗೆ ಕೋಳಿಯ ಬಿಸಿರಕ್ತ ಬಿಡುವ ಹಬ್ಬ ನಿದರ್ಶನವಾಗಿದೆ.

ಹುತ್ತಕ್ಕೆ ಹಾಲು ಎರೆಯುವುದು ವಾಡಿಕೆ. ಆದರೆ, ಜಿಲ್ಲೆಯ ಕೆಲವು ಭಾಗದಲ್ಲಿ ಹುತ್ತದ ಕೋವಿಗಳಿಗೆ ಕೋಳಿಯ ಬಿಸಿರಕ್ತ ಬಿಡುವ ಹಬ್ಬ ಆಚರಿಸಲಾಗುತ್ತದೆ. ಚಾಮರಾಜನಗರ ತಾಲ್ಲೂಕಿನ ಕಸಬಾ ಹೋಬಳಿಯ ವಿವಿಧ ಗ್ರಾಮದಲ್ಲಿ ಈ ಹಬ್ಬ ಸಡಗರ ಹೆಚ್ಚಿತ್ತು. ಗ್ರಾಮಗಳ ಹೊರವಲಯದಲ್ಲಿರುವ ಹುತ್ತದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿತ್ತು. ಹೊಸ ಬಟ್ಟೆ ತೊಟ್ಟಿದ್ದ ಹೆಂಗಳೆಯರು ಪೂಜಾ ಸಾಮಗ್ರಿಗಳೊಂದಿಗೆ ಹುತ್ತದ ಬಳಿಗೆ ಆಗಮಿಸಿದರು. ಜತೆಗೆ, ಚೂರಿ ತಂದಿದ್ದರು. ಹುತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕೋಳಿಯ ಕತ್ತು ಕೊಯ್ದು ರಕ್ತವನ್ನು ಹುತ್ತದ ಕೋವಿಗೆ ಬಿಟ್ಟರು.

ಬಳಿಕ, ಜತೆಯಲ್ಲಿ ತಂದಿದ್ದ ಕೋಳಿ ಮೊಟ್ಟೆ ಹಾಗೂ ನಾಗರಹೆಡೆ  ಆಕಾರದ ಆಭರಣವನ್ನು ಕೋವಿಯೊಳಕ್ಕೆ ಹಾಕಿ ಭಕ್ತಿ ಮೆರೆದರು.
ಹೊಲದಲ್ಲಿ ಸಹಜವಾಗಿ ನಾಗರಹಾವುಗಳು ರೈತರ ಕಣ್ಣಿಗೆ ಬೀಳುವುದು ಸಹಜ. ಇದನ್ನು ಕಂಡ ನಾಗರಿಕರು ಭಯಪಡುವುದು ಉಂಟು. ಈ ಹಿನ್ನೆಲೆಯಲ್ಲಿ ಹುತ್ತಕ್ಕೆ ಕೋಳಿಯ ಬಿಸಿರಕ್ತ, ಮೊಟ್ಟೆ ಹಾಗೂ ಹೆಡೆಯಾಕಾರದ ಆಭರಣ ಹಾಕಿದರೆ ಜಮೀನುಗಳಲ್ಲಿ ಹಾವುಗಳ ದರ್ಶನವಾಗುವುದಿಲ್ಲ ಎಂಬ ನಂಬಿಕೆ ಇಂದಿಗೂ ಬೇರೂರಿದೆ. ಈ ಹಿನ್ನೆಲೆಯಲ್ಲಿ ಷಷ್ಠಿಯಂದು ಈ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ಹೆಂಗಳೆಯರೇ ಕೋಳಿಯ ಕತ್ತು ಕತ್ತರಿಸುವುದು ಈ ಹಬ್ಬದ ವಿಶೇಷ. ಕೆಲವು ಸಸ್ಯಹಾರಿಗಳು ಹುತ್ತಕ್ಕೆ ಮೊಟ್ಟೆ, ಹಾವಿನ ಹೆಡೆಯಾಕಾರದ ಆಭರಣ ಅರ್ಪಿಸಿ ಪೂಜೆ ಸಲ್ಲಿಸಿದರು.

ವಿಜೃಂಭಣೆಯ ರಥೋತ್ಸವ
ಕೊಳ್ಳೇಗಾಲ: ಸುಬ್ರಹ್ಮಣ್ಯ ಷಷ್ಠಿ ಹಬ್ಬದ ಪ್ರಯುಕ್ತ ಪಟ್ಟಣದ ಸುಬ್ರಹ್ಮಣ್ಯ ಮತ್ತು ಮರಳೇಶ್ವರ ದೇವಾಲಯಗಳಲ್ಲಿ ರಥೋತ್ಸವ ಸಂಭ್ರಮ ಸಡಗರಗಳಿಂದ ನೆರವೇರಿತು.

ಮರಳೇಶ್ವರ ದೇವಾಲಯದ ಬಳಿ ರಥಕ್ಕೆ ಪ್ರಧಾನ ಅರ್ಚಕ ಶ್ರೀಕಂಠ ದೀಕ್ಷಿತರು ಹಾಗೂ ನಾಗೇಂದ್ರ ಭಟ್‌ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಅಪಾರ ಭಕ್ತರ ಜಯಘೋಷಣೆ ಗಳೊಡನೆ ಮರಳೇಶ್ವರ ದೇವಾಲಯ ರಸ್ತೆ, ಅಗ್ರಹಾರದ ಬೀದಿಗಳಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ನಟರಾಜ್‌ಗುಪ್ತ, ಶಿವಪ್ರಕಾಶ್‌ ರಥೋತ್ಸವದಲ್ಲಿ ಇದ್ದರು.

ಪಟ್ಟಣದ ಸುಬ್ರಹಣ್ಯ ದೇವಾಲಯದಲ್ಲಿಯೂ ಸಹ ರಥೋತ್ಸವ ಸಂಭ್ರಮದಿಂದ ನಡೆಯಿತು. ದೇವಾಲಯದ ಆವರಣದಿಂದ ಚಾಲನೆ ಗೊಂಡ ರಥೋತ್ಸವ ಎಸ್‌.ಟಿ.ರೋಡ್‌, ದೇವಾಂಗಪೇಟೆ, ಮತ್ತಿತರ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ಪ್ರತಿ ಮನೆ ಬಾಗಿಲ ಬಳಿ ಪೂಜೆ ಸಲ್ಲಿಸಿದರು. ಪಟ್ಟಣದ ವಿವಿಧೆಡೆಗಳಲ್ಲಿ ಮಹಿಳೆಯರು ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು.

ಯಳಂದೂರು: ಷಷ್ಠಿ ಸಡಗರ
ಯಳಂದೂರು: ತಾಲ್ಲೂಕಿನ ವಿವಿಧೆಡೆ ಭಾನುವಾರ ಷಷ್ಠಿ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ಪಟ್ಟಣ ಗೌರೇಶ್ವರ ದೇಗುಲ, ಹಾಗೂ ಸುವರ್ಣಾವತಿ ನದಿ ದಡದಲ್ಲಿರುವ ನಾಗರಕಲ್ಲುಗಳು ಹಾಗೂ ಹುತ್ತಗಳಿಗೆ ಭಕ್ತರು ಹಾಲು, ಕೋಳಿಯ ರಕ್ತ, ಮೊಟ್ಟೆ ತನಿ ಎರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT