ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುದ್ದೆ ಆಕಾಂಕ್ಷಿಗಳಿಗೆ ರಾತ್ರಿ ಫೋನ್‌

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಿಸಿ, ಬಿಸಿ ಚರ್ಚೆ
Last Updated 17 ಡಿಸೆಂಬರ್ 2013, 8:21 IST
ಅಕ್ಷರ ಗಾತ್ರ

ಶಿವಮೊಗ್ಗ: ಅಧಿಕಾರಿಯೊಬ್ಬರು ಅಂಗನವಾಡಿ ಹುದ್ದೆ ಆಕಾಂಕ್ಷಿ ಯುವತಿಯರಿಗೆ ರಾತ್ರಿ ವೇಳೆ  ಮೊಬೈಲ್‌ಗೆ ಕರೆ ಮಾಡುವುದು  ಹಾಗೂ ಅಂಗನವಾಡಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ವಿಷಯಗಳು ಚರ್ಚೆಗೆ ಗ್ರಾಸವಾದವು.  

ನಗರದ ತಾಲ್ಲೂಕು ಪಂಚಾಯ್ತಿ ಕಚೇರಿಯ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಸೋಮವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಂಗನವಾಡಿ ಸಮಸ್ಯೆ ಬಗ್ಗೆ ತೀವ್ರ ಚರ್ಚೆಗಳಾದವು.

ಸದಸ್ಯ ನಾಗರಾಜ್‌ ವಿಷಯ ಪ್ರಸ್ತಾಪಿಸಿ, ಅಂಗನವಾಡಿ ಹುದ್ದೆಗೆ ಅರ್ಜಿ ಹಾಕುವ ಯುವತಿಯರು ಹಾಗೂ ಮಹಿಳೆಯರಿಗೆ ಶಿವಮೊಗ್ಗ ನಗರದ ಸಿಡಿಪಿಒ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ವಿಷಯ ನಿರ್ವಾಹಕರೊಬ್ಬರು ರಾತ್ರಿ ವೇಳೆ ಕರೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ರಾತ್ರಿ 9.30ರ  ನಂತರ ಮಹಿಳೆಯರಿಗೆ ಫೋನ್ ಮಾಡಿ ಮಾತನಾಡುತ್ತಾರೆ. ಇದರ ಅರ್ಥವೇನು? ಕಾರ್ಯ ನಿರ್ವಹಣಾಧಿಕಾರಿ ಆ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ  ‘ಅಧಿಕಾರಿ ರಾತ್ರಿ ವೇಳೆ ಅಂಗನವಾಡಿ ಹುದ್ದೆ ಆಕಾಂಕ್ಷಿ ಮಹಿಳೆಯರಿಗೆ ಫೋನ್ ಮಾಡುವುದು ಗಂಭೀರವಾದ ವಿಷಯ. ಈ ಕುರಿತಂತೆ ಆ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ’ ಎಂದು ಸಭೆಯಲ್ಲಿದ್ದ ಸಿಡಿಪಿಒಗೆ ಸೂಚಿಸಿದರು.

ಸಿಡಿಪಿಒ ಮಾತನಾಡಿ, ಆ ಅಧಿಕಾರಿಯ ವಿರುದ್ಧ ಈ ಹಿಂದಿನಿಂದಲೂ ಸಾಕಷ್ಟು ದೂರುಗಳಿವೆ. ಆ ಅಧಿಕಾರಿಯನ್ನು ಆ ಹುದ್ದೆಯಿಂದ ಬೇರೆ ಹುದ್ದೆಗೆ ವರ್ಗ ಮಾಡಲು ತಾವೇ ಕ್ರಮ ಕೈಗೊಳ್ಳಬೇಕು ಎಂದು ಇ.ಒ ಅವರಿಗೆ ಮನವಿ ಮಾಡಿದರು.

ಅಂತಿಮವಾಗಿ ಆ ಅಧಿಕಾರಿಯನ್ನು ಬೇರೆ ಹುದ್ದೆಗೆ ಸ್ಥಳಾಂತರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ಖಾರದ ಪುಡಿ ಪ್ಯಾಕೆಟ್ ತಂದ ಸದಸ್ಯೆ
ಸದಸ್ಯೆ ಶಾರದಾ ಅವರು, ಅಂಗನವಾಡಿಗಳಿಗೆ ಸರಬರಾಜಾದ ಖಾರದ ಪುಡಿ ಪ್ಯಾಕೆಟ್ ಹಾಗೂ ಕಳಪೆ ಗುಣಮಟ್ಟದ ಆಹಾರ ಧಾನ್ಯ ಸಭೆಯಲ್ಲಿ ಪ್ರದರ್ಶಿಸಿದರು.

ತಾಲ್ಲೂಕಿನ ಅಂಗನವಾಡಿಗಳಿಗೆ ಖಾಸಗಿ ಸಂಸ್ಥೆಯೊಂದು ಖಾರದ ಪುಡಿ ಪ್ಯಾಕೆಟ್ ಪೂರೈಕೆ ಮಾಡುತ್ತಿದೆ. ಆದರೆ ಈ ಖಾರದ ಪುಡಿ ಪ್ಯಾಕೆಟ್ ಮೇಲೆ ತಯಾರದ ದಿನಾಂಕ, ಯಾವ ದಿನಾಂಕಕ್ಕೆ ಮುನ್ನ ಉಪಯೋಗಿಸಬೇಕು, ತಯಾರಾಗಿದ್ದು ಎಲ್ಲಿ, ಅವರ ವಿಳಾಸ ಸೇರಿದಂತೆ ಯಾವೊಂದು ವಿವರಗಳು ಇಲ್ಲ. ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.
ಅಂಗನವಾಡಿಗಳಲ್ಲಿ ರವೆಗೆ ಗೋಧಿ ಹಿಟ್ಟು ಮಿಶ್ರಣ ಮಾಡಿ ಪಾಯಸ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ದೂರಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಖಾರದ ಪುಡಿ ಪ್ಯಾಕೆಟ್ ಮೇಲೆ ಉತ್ಪಾದನೆಗೆ ಸಂಬಂಧಿಸಿದ ವಿವರವನ್ನು ಕಡ್ಡಾಯವಾಗಿ ಅಚ್ಚು ಹಾಕಿಸಲು ಹಾಗೂ ರವೆಗೆ ಮಾಡಲಾಗುತ್ತಿರುವ ಹಿಟ್ಟು ಮಿಶ್ರಣದ ಕುರಿತಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಶಿಶು ಅಭಿವೃದ್ಧಿಗೆ ಅಧಿಕಾರಿಗೆ ನಿರ್ದೇಶಿಸಿದರು.

ಸಭೆಯಲ್ಲಿ ಆಸ್ಪತ್ರೆಯಲ್ಲಿನ ಔಷಧ ಕೊರತೆ, ಅಂಗನವಾಡಿ ಕಟ್ಟಡಗಳ ಕಳಪೆ ಕಾಮಗಾರಿ ಮತ್ತಿತರ ವಿಷಯಗಳ ಕುರಿತಂತೆ ವಿವರವಾದ ಚರ್ಚೆಗಳು ನಡೆದವು. ತಾಲ್ಲೂಕು ಪಂಚಾಯ್ತಿ  ಅಧ್ಯಕ್ಷೆ ಉಣ್ಣಾಮಲೈ ದೇಸಿಂಗ್ ವಹಿಸಿದ್ದರು. ಉಪಾಧ್ಯಕ್ಷೆ ಅತೀಯಾ ಬೇಗಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT