ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುದ್ದೆ ಭರ್ತಿಗೆ ಹೋರಾಟ ಮಾಡಿ

Last Updated 9 ಅಕ್ಟೋಬರ್ 2012, 10:00 IST
ಅಕ್ಷರ ಗಾತ್ರ

ಧಾರವಾಡ: `ರಾಜ್ಯದಲ್ಲಿ 2010ರಿಂದ ಶಿಕ್ಷಕರ ನೇಮಕಾತಿ ನಡೆದೇ ಇಲ್ಲ. ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗ ಮಾತ್ರ 54 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿದ್ದೆವು. ಈಗ ಸಹಸ್ರಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅವುಗಳ ನೇಮಕಾತಿಗೆ ಒತ್ತಾಯಿಸಿ ಶಿಕ್ಷಕರ ಸಂಘಟನೆಗಳು ಹೋರಾಟ ಮಾಡಬೇಕು~ ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದರು.

ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘವು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಶಿಕ್ಷಕರ ಸಮಾವೇಶದಲ್ಲಿ ಮಾತನಾಡಿದ ಅವರು, `ಶಿಕ್ಷಕರು ಸಂಘಟಿತರಾದರೆ ಮಾತ್ರ ಬೇಡಿಕೆಗಳು ಈಡೇರತ್ತವೆ. ಆದರೆ ಸುಮಾರು ಮೂರು ದಶಕಗಳ ಹಿಂದೆ ಇದ್ದ ಸಮಸ್ಯೆಗಳು ಇಂದಿನ ಶಿಕ್ಷಕರಿಗೆ ಇಲ್ಲ. ಆಗೆಲ್ಲ ಮೂರು ತಿಂಗಳಿಗೊಮ್ಮೆ ವೇತನ ಬರುತ್ತಿತ್ತು. ಈಗ ಪ್ರತಿ ತಿಂಗಳೂ ಬರುವುದರಿಂದ ಯಾರೂ ಸಂಘಟಿತರಾಗಲು ಆಸಕ್ತಿ ವಹಿಸುತ್ತಿಲ್ಲ. ಆದರೆ ಬರೀ ಬೇಡಿಕೆ ಈಡೇರಿಕೆಗಾಗಿಯೇ ಸಂಘಟನೆ ಮಾಡಬಾರದು~ ಎಂದು ಅವರು ಸಲಹೆ ನೀಡಿದರು.

ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, `ಸಂವಿಧಾನದತ್ತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಸರ್ಕಾರದಿಂದ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ~ ಎಂದರು.

ಸಂಘದ ಅಧ್ಯಕ್ಷ ಹೇಮಂತ್ ಕುಂದರಗಿ, `ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಪರಿಶಿಷ್ಟ ಶಿಕ್ಷಕರಿಗೆ ಮೀಸಲಾತಿ ನೀಡಬೇಕು. ಶಿಕ್ಷಕರ ಮಕ್ಕಳಿಗೆ ಶಿಷ್ಯವೇತನ ನೀಡಬೇಕು. ಗ್ರಾಮೀಣ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಕರ್ಯ ಕಲ್ಪಿಸದಿದ್ದರೆ ಮುಖ್ಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಸರ್ಕಾರ ವಾಪಸ್ ಪಡೆಯಬೇಕು~ ಎಂದು ಮನವಿ ಮಾಡಿದರು.

ಸಾಹಿತಿ ಮೋಹನ ನಾಗಮ್ಮನವರ ಸಾರ್ವಜನಿಕ ಶಿಕ್ಷಣ ಇಲಾಖೆ ಬ್ರಿಟಿಷರ ಕಾಲದಿಂದ ಇಂದಿನವರೆಗೆ ಬೆಳೆದು ಬಂದ ಬಗೆಯನ್ನು ತಿಳಿಸಿದರು.
ರೇವಣಸಿದ್ದೇಶ್ವರಮಠದ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT