ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಕನ್ನಡ ಕಲಿತ ಕಷ್ಟ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

`ಹುಬ್ಬಳ್ಳಿ ಕನ್ನಡ ಕಲ್ಯಾಕ್ಹತ್ತೀನಿ~ ಅಂತ ಹೇಳಿ ನಸುನಕ್ಕರು ದೀಪಾ ಸನ್ನಿಧಿ. `ಪರಮಾತ್ಮ~ ಚಿತ್ರದ ನಂತರ ತಾರೆಯರ ಸಾಲಿಗೆ ಸೇರಿರುವ ದೀಪಾಗೆ `ಜಾನು~ ಚಿತ್ರಕ್ಕಾಗಿ ನಿರ್ದೇಶಕ ಪ್ರೀತಂ ಗುಬ್ಬಿ ಹುಬ್ಬಳ್ಳಿ ಕನ್ನಡ ಕಲಿಸಿದ್ದಾರೆ. ಅದನ್ನು ಕಲಿಯಲು ಅವರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ.

`ಹುಬ್ಬಳ್ಳಿ ಭಾಷೆ ಮಾತನಾಡಲು ನಾಲಗೆ ಹೊರಳುವುದು ಒಂಚೂರು ಕಷ್ಟ. ಸ್ಕ್ರಿಪ್ಟ್ ಸಹ ಹುಬ್ಬಳ್ಳಿ ಕನ್ನಡದಲ್ಲಿತ್ತು. ಅದನ್ನು ಓದುವ ಬಗೆಯನ್ನು ಟೇಪ್‌ರೆಕಾರ್ಡ್‌ರ್‌ನಲ್ಲಿ ಟೇಪ್‌ಮಾಡಿಕೊಡಲಾಗಿತ್ತು. ಕೇಳುತ್ತ ಅಭ್ಯಾಸ ಮಾಡಿದೆ. ಭಾಷಾ ಕಲಿಕೆ ಬಿಡುವಿರದಂತೆ ಸಾಗಿತ್ತು. ಕಷ್ಟವಾದರೂ ಹುಬ್ಬಳ್ಳಿಯ ಭಾಷಾ ಶೈಲಿ ಸೊಗಸಾಗಿದೆ. ನನಗಿಷ್ಟವಾಗಿದೆ ~ ಎನ್ನುತ್ತಾರೆ ಅವರು.

ಚಿತ್ರದಲ್ಲಿ ನಶೆಯೇರಿದ ಹಾಡೊಂದರಲ್ಲಿ ಕೂಡ ದೀಪಾ ನಟಿಸಿರುವುದು ವಿಶೇಷ. ಹಿಂದೆ ಮಾಲಾಶ್ರೀ `ಒಳಗೆ ಸೇರಿದರೆ ಗುಂಡು...~ ಹಾಡಿಗೆ ಮತ್ತೇರಿದಂತೆ ಹೆಜ್ಜೆ ಹಾಕಿದ್ದರು. `ನಂಜುಂಡಿ ಕಲ್ಯಾಣ~ ಚಿತ್ರದ ನಂತರ ಕನ್ನಡ ಚಿತ್ರೋದ್ಯಮದಲ್ಲಿ ಅವರ ಸಾಧನೆಯ ಗ್ರಾಫು ಸಹ ಏರುಗತಿಯಲ್ಲಿತ್ತು. ಅದೇ ಧಾಟಿಗೆ ಸೇರುವ ಕುಡಿತದ ಹಾಡಿನ ಅವಕಾಶ ಈಗ ದೀಪಾ ಪಾಲಾಗಿದೆ.

ಬಹುತೇಕ ಎರಡು ದಶಕಗಳ ನಂತರ ಅಂಥದ್ದೊಂದು ಹಾಡು `ಜಾನು~ ಚಿತ್ರದಲ್ಲಿ ಬರುತ್ತಿದೆ. ಆ ಹಾಡಿಗೆಂದೇ ದೀಪಾ ಸನ್ನಿಧಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ರಸ್ತೆ ಮೇಲೆ ಕುಡಿದ ನಶೆಯಲ್ಲಿ.. `ಸ್ವಲ್ಪ..~ ಹಾಡಿಗೆ ಹೆಜ್ಜೆ ಹಾಕುವುದು ಸುಲಭವಲ್ಲ.

ಅದಕ್ಕೇ ಕನ್ನಡದಲ್ಲಿ ಹಾಗೂ ಇನ್ನಿತರ ಚಿತ್ರಗಳಲ್ಲಿ ಇಂಥ ಹಾಡುಗಳನ್ನು ಹೇಗೆ ಚಿತ್ರೀಕರಿಸಲಾಗಿದೆ. ಹೇಗೆ ನಟಿಸಬೇಕು? ನಟಿಸಬಹುದು? ಎಂದೆಲ್ಲಾ ತಲೆಕೆಡಿಸಿಕೊಂಡ ಅವರು ಗಂಭೀರವಾಗಿಯೇ ಚಿತ್ರೀಕರಣಕ್ಕೆ ತಯಾರಾಗಿದ್ದರು.

`ಜಾನು~ ಚಿತ್ರದಲ್ಲಿ ನಯನತಾರಾ ಕೂಡ ಕಾಣಿಸಿಕೊಳ್ಳುವ ಮಾತಿದೆಯಲ್ಲ ಎಂಬ ಪ್ರಶ್ನೆಗೆ, `ಇಂಥದ್ದೊಂದು ಪ್ರಸ್ತಾಪವಿದೆ ಎಂದು ಬಲ್ಲೆ. ಆದರೆ ಈ ಬಗ್ಗೆ ಯಾವುದೂ ಅಂತಿಮ ತೀರ್ಮಾನವಾದಂತಿಲ್ಲ. ನಯನತಾರಾ ಅತ್ಯಾಕರ್ಷಕ ನಟಿ. ಪ್ರತಿಭಾನ್ವಿತೆ. ಅವರಿಂದ ಒಂದೆರಡು ವಿಷಯಗಳನ್ನಾದರೂ ಕಲಿಯುವ ಅವಕಾಶ ಸಿಕ್ಕರೆ ಒಳ್ಳೆಯದೇ~ ಎನ್ನುತ್ತಾರೆ ದೀಪಾ.

ಅನ್ಯಭಾಷೆಯಲ್ಲೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದರೆ ಸದ್ಯಕ್ಕೆ ಕನ್ನಡ ಚಿತ್ರೋದ್ಯಮದಲ್ಲಿಯೇ ನೆಲೆಯೂರುವತ್ತ ಗಮನ ಕೇಂದ್ರೀಕರಿಸಿರುವೆ. ಉತ್ತಮ ಅವಕಾಶಗಳು ಬಂದರೆ ಹಿಂದೆಗೆಯುವುದಿಲ್ಲ~ ಎಂದೂ ಹೇಳಲು ಅವರು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT