ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಕಿಮ್ಸ ಹಗರಣ: ತನಿಖೆ ಆರಂಭ

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕಿಮ್ಸ (ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ)ನಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ತನಿಖೆ ನಡೆಸಲು ನೇಮಕಗೊಂಡಿರುವ ಬೆಂಗಳೂರು ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎನ್. ನಾರಾಯಣ ಅವರು ಸೋಮವಾರ ವಿಚಾರಣೆ ಆರಂಭಿಸಿದರು.

ಏಪ್ರಿಲ್ 11ರಂದು ಕಿಮ್ಸಗೆ ದಿಢೀರ್ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಏಕ ಸದಸ್ಯ ತನಿಖಾ ಆಯೋಗವನ್ನು ನೇಮಕ ಮಾಡುವುದಾಗಿ ಅವರು ಘೋಷಿಸಿದ್ದರು. ಕೆಲವೇ ದಿನಗಳಲ್ಲಿ ಎನ್. ನಾರಾಯಣ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದ್ದರು. ಮೇ ಐದರೊಳಗೆ ತನಿಖಾಧಿಕಾರಿ ಆಗಮಿಸುವ ನಿರೀಕ್ಷೆ ಇದ್ದರೂ ಅವರ ಆಗಮನ ವಿಳಂಬವಾಗಿತ್ತು. ಇದೇ ವೇಳೆ ಹೊಸ ನಿರ್ದೇಶಕರ ನೇಮಕಾತಿಯೂ ನಡೆದು ಡಾ. ವಸಂತಾ ಕಾಮತ್ ಮೇ 27ರಂದು ಅಧಿಕಾರ ಸ್ವೀಕರಿಸಿದ್ದರು.

ಇದೀಗ ವಿಚಾರಣೆ ಆರಂಭಗೊಂಡಿದ್ದು ಎರಡೇ ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ನಾರಾಯಣ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಕಿಮ್ಸನಲ್ಲಿ ಜನನ ಪ್ರಮಾಣ ಪತ್ರ ನೀಡುವ ಹಾಗೂ ಪ್ರಸೂತಿ ವಿಭಾಗಗಳಲ್ಲಿ ಹೆಚ್ಚು ಅವ್ಯವಹಾರ ನಡೆಯುವ ಆರೋಪ ಕೇಳಿ ಬಂದಿತ್ತು.

ಹಾಜರಾತಿ ಮತ್ತು ಹೊರಗುತ್ತಿಗೆ ವಿಷಯದಲ್ಲೂ ಸಮಸ್ಯೆಗಳನ್ನು ಪತ್ತೆ ಹಚ್ಚಿದ ಸಚಿವರು ಸಂಸ್ಥೆಗೆ ಖರೀದಿಸುವ ಔಷಧಿಯ ಗುಣಮಟ್ಟದ ಬಗ್ಗೆ ಹಾಗೂ ಔಷಧಿ ಖರೀದಿಗೆ ಸಂಬಂಧಿಸಿದ ಟೆಂಡರ್ ಬಗ್ಗೆಯೂ ದೂರುಗಳನ್ನು ದಾಖಲಿಸಿಕೊಂಡಿದ್ದರು. ಒಟ್ಟು ಆರು ಮಂದಿಯ ಅಮಾನತಿಗೆ ಆದೇಶ ನೀಡಿದ್ದರು.

ಸೋಮವಾರ ಬೆಳಿಗ್ಗೆ ಕಿಮ್ಸಗೆ ಆಗಮಿಸಿದ ನಾರಾಯಣ ಅವರು ಸಂಸ್ಥೆಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸಂಜೆಯವರೆಗೆ ವಿಚಾರಣೆ ನಡೆಸಿದರು. ತನಿಖಾಧಿಕಾರಿ ಸಂಸ್ಥೆಗೆ ಭೇಟಿ ನೀಡುವ ಕುರಿತು ಜೂನ್ ಮೂರರಂದೇ ಮುಖ್ಯ ಆಡಳಿತಾಧಿಕಾರಿಗಳು ಎಲ್ಲ ವಿಭಾಗಗಳಿಗೆ ಪತ್ರ ಕಳುಹಿಸಿದ್ದು ವಿಚಾರಣೆ ಮುಗಿಯುವ ತನಕ ಯಾರೂ ರಜೆ ಮೇಲೆ ತೆರಳಬಾರದು ಎಂದು ಸೂಚಿಸಿದ್ದರು. 

 ಹಗರಣಗಳ ಪಟ್ಟಿ: ಒಂದು ಮೂಲದ ಪ್ರಕಾರ ತನಿಖಾಧಿಕಾರಿಗಳು ಹಗರಣಗಳ ಪಟ್ಟಿಯೊಂದಿಗೆ ಆಗಮಿಸಿದ್ದು ಇದರ ಪ್ರಕಾರ ಸಂಬಂಧಪಟ್ಟವರಿಂದ ಮಾಹಿತಿ ಪಡೆದಿದ್ದಾರೆ.

ಹೀಗಾಗಿ ಕೇವಲ ಎರಡೇ ದಿನಗಳಲ್ಲಿ ವಿಚಾರಣೆ ಮುಗಿಯಲಿದೆ. ಖರೀದಿಗೆ ಸಂಬಂಧಿಸಿದ ವಿಭಾಗಗಳು, ಲೋಕೋಪಯೋಗಿ ಮುಂತಾದ ವಿಭಾಗಗಳ ಮೇಲೆ ಹೆಚ್ಚು ಗಮನ ನೀಡಲಾಗಿದೆ ಎಂದು ಹೇಳಲಾಗಿದ್ದು ಈಚೆಗೆ ನಡೆದ ಕೆಲವು ನೇಮಕಾತಿಗಳನ್ನು ತಡೆಹಿಡಿದು ಹೊಸ ನೇಮಕಾತಿ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT