ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಗೆ ಮತ್ತೆ ಒಲಿದ ರಣಜಿ

Last Updated 15 ಅಕ್ಟೋಬರ್ 2012, 5:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಮುಖ ಕ್ರಿಕೆಟ್ ಪಂದ್ಯವೊಂದರ ಆನಂದವನ್ನು ಸವಿಯುವ ಹುಬ್ಬಳ್ಳಿಗರ ಕನಸು ಈ ಬಾರಿಯ ರಣಜಿ ಋತುವಿನಲ್ಲಿ ನನಸಾಗಲಿದೆ. ಸುದೀರ್ಘ 19 ವರ್ಷಗಳ ನಂತರ ರಣಜಿ ಪಂದ್ಯವೊಂದಕ್ಕೆ ನಗರ ಆತಿಥ್ಯ ವಹಿಸಲಿದ್ದು ಡಿಸೆಂಬರ್ 22ಕ್ಕೆ ಇದಕ್ಕೆ ಮುಹೂರ್ತ ಕೂಡಿಬಂದಿದೆ. ಈ ಪಂದ್ಯದಲ್ಲಿ ಕರ್ನಾಟಕ ತಂಡ ಹರಿಯಾಣ ತಂಡವನ್ನು ಎದುರಿಸಲಿದೆ.

ಪಂದ್ಯಕ್ಕಾಗಿ ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದಾನ ಸಜ್ಜಾಗಿದ್ದು ಭಾನುವಾರ ಮೈದಾನಕ್ಕೆ ಭೇಟಿ ನೀಡಿದ ಮಾಜಿ ಕ್ರಿಕೆಟಿಗ ಹಾಗೂ ಕೆಎಸ್‌ಸಿಎ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ ಭಾರದ್ವಾಜ್ ಪಿಚ್ ಹಾಗೂ  ಮೈದಾನದ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಣಜಿ ತಂಡದ ಮಾಜಿ ವಿಕೆಟ್ ಕೀಪರ್ ಅವಿನಾಶ ವೈದ್ಯ ಅವರೊಂದಿಗೆ ಬೆಳಿಗ್ಗೆ ಬಂದ ಭಾರದ್ವಾಜ್, ಸುಮಾರು ಎರಡು ತಾಸು ಪರಿಶೀಲನೆ ನಡೆಸಿದರು. ಪೆವಿಲಿಯನ್‌ನಲ್ಲಿ ಮಾಡಬೇಕಾಗಿರುವ ಅಗತ್ಯ ಸಿದ್ಧತೆಗಳ ಬಗ್ಗೆ ಕೆಎಸ್‌ಸಿಎ ಧಾರವಾಡ ವಲಯದ ಸಂಚಾಲಕ ಬಾಬಾ ಭೂಸದ ಅವರಿಗೆ ಸೂಚನೆಗಳನ್ನು ನೀಡಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಭಾರದ್ವಾಜ್ ಮೈದಾನದ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. `ಕೆಎಸ್‌ಸಿಎ, ಎಲ್ಲ ವಲಯಗಳಲ್ಲೂ ರಣಜಿ ಪಂದ್ಯಗಳನ್ನು ಆಡಿಸಲು ಪ್ರಯತ್ನ ಮಾಡುತ್ತಿದ್ದು ಕಳೆದ ಬಾರಿ ಶಿವಮೊಗ್ಗದಲ್ಲಿ ನಡೆದ ಪಂದ್ಯ ಭಾರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಈ ಯೋಜನೆಗೆ ಮತ್ತಷ್ಟು ಚುರುಕು ಮೂಡಿದೆ. ಮುಂದಿನ ವರ್ಷ ಬೆಳಗಾವಿಯಲ್ಲಿ ಪಂದ್ಯವನ್ನು ನಡೆಸಲು ಈಗಲೇ ಪ್ರಯತ್ನಿಸಲಾಗುತ್ತಿದೆ~ ಎಂದು ಅವರು ತಿಳಿಸಿದರು.

`ಕರ್ನಾಟಕ ರಣಜಿ ತಂಡದಲ್ಲಿ ಈ ಬಾರಿಯೂ ಉತ್ತಮ ಆಟಗಾರರು ಇದ್ದಾರೆ. ಹೀಗಾಗಿ ಪ್ರಶಸ್ತಿ ಗೆಲ್ಲುವುದು ಸುಲಭ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಿಗೆ ಈ ಬಾರಿ ಪ್ರತ್ಯೇಕ ಕೋಚ್‌ಗಳನ್ನು ಏರ್ಪಾಡು ಮಾಡಲಾಗಿದ್ದು, ಈ ಪ್ರಯೋಗ ತಂಡದ ಶಕ್ತಿಯನ್ನು ಹೆಚ್ಚಿಸುವ ವಿಶ್ವಾಸವಿದೆ~ ಎಂದು ಅವರು ಹೇಳಿದರು.
ಕೆಎಸ್‌ಸಿಎ ಧಾರವಾಡ ವಲಯ ಅಧ್ಯಕ್ಷ ವೀರಣ್ಣ ಸವಡಿ, ಕೋಚ್‌ಗಳಾದ ಪ್ರಮೋದ ಕಾಮತ್, ಎಂ.ಜಿ.ಅರ‌್ಮುಗಂ, ಮುಖಂಡರಾದ ಶಿವಾನಂದ ಗುಂಜಾಳ, ಅನ್ವರ್ ಮ್ಯಾನೇಜರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT