ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಗೆ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ

Last Updated 9 ಅಕ್ಟೋಬರ್ 2011, 7:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಲಲಿತಕಲಾ ಅಕಾಡೆಮಿಯು ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕೇಂದ್ರವೊಂದನ್ನು ಆರಂಭಿಸಲಿದೆ. ಇದಕ್ಕೆ ಸಿದ್ಧತೆ ಆರಂಭಗೊಂಡಿದ್ದು, ಕೇಂದ್ರ ತೆರೆಯಲು ಬೇಕಾದ ಸ್ಥಳ ಗುರುತಿಸುವ ಪ್ರಕ್ರಿಯೆ ಆರಂಭಗೊಂಡಿದೆ.

ಅಕಾಡೆಮಿ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕೇಂದ್ರ ತೆರೆಯಲು ತೀರ್ಮಾನಿಸಿದೆ ಎಂದು `ಪ್ರಜಾವಾಣಿ~ಗೆ ಖಚಿತಪಡಿಸಿದ ಕೇಂದ್ರ ಲಲಿತಕಲಾ ಅಕಾಡೆಮಿ ಉಪಾಧ್ಯಕ್ಷ ಕೆ.ಆರ್. ಸುಬ್ಬಣ್ಣ, 2-3 ವರ್ಷಗಳ ಹಿಂದೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ ಎದುರಿರುವ ಚಿಕ್ಕವೀರಯ್ಯ ಆರ್ಟ್ ಗ್ಯಾಲರಿಯಲ್ಲಿ ಪ್ರಾದೇಶಿಕ ಕೇಂದ್ರ ಆರಂಭಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ್ದಾಗಿ ಹೇಳಿದರು.

`ಚಿಕ್ಕವೀರಯ್ಯ ಆರ್ಟ್ ಗ್ಯಾಲರಿಯನ್ನು ಅಕಾಡೆಮಿಗೆ ಹಸ್ತಾಂತರಿಸುತ್ತೇವೆ ಎಂದು ಪಾಲಿಕೆಯ ಆಯುಕ್ತರು ಪತ್ರ ಬರೆದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ~ ಎಂದರು.

`ಪ್ರಾದೇಶಿಕ ಕೇಂದ್ರ ಆರಂಭವಾದರೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಲಾವಿದರು ಬರಲು ಸಾಧ್ಯವಾಗುತ್ತದೆ. ಜೊತೆಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಕಲಾವಿದರ ಚಿತ್ರಕಲಾ ಪ್ರದರ್ಶನ, ಶಿಬಿರ, ವಿಚಾರ ಸಂಕಿರಣ ನಡೆಸಲು ಆಗುತ್ತದೆ. ಪೇಂಟಿಂಗ್, ಸೆರಾಮಿಕ್ಸ್, ಶಿಲ್ಪ ಹಾಗೂ ಗ್ರಾಫಿಕ್ ಸ್ಟುಡಿಯೋಗಳನ್ನು ಆರಂಭಿಸಲಾಗುತ್ತದೆ. ಪ್ರಾದೇಶಿಕ ಕೇಂದ್ರದ ಕಾರ್ಯದರ್ಶಿ ಜೊತೆಗೆ ಇತರ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ~ ಎಂದು ಅವರು ಹೇಳಿದರು.

`ಈಗಾಗಲೇ ಚೆನ್ನೈ, ದೆಹಲಿ, ಲಖನೌ, ಒರಿಸ್ಸಾ, ಕೊಲ್ಕತ್ತ, ಶಿಮ್ಲಾದಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರಗಳಿವೆ. ಮುಂಬೈ ಹಾಗೂ ಗುಜರಾತ್‌ನಲ್ಲಿ ಜಾಗ ತೋರಿಸಿದ್ದಾರೆ. ಬೆಂಗಳೂರಿನಲ್ಲಿ ಒಂದು ಎಕರೆ ಜಾಗವನ್ನು ಕರ್ನಾಟಕ ರಾಜ್ಯ ಸರ್ಕಾರ ನೀಡಿದೆ~ ಎಂದರು.

ಹಿನ್ನೆಲೆ: ಜಮೀನ್ದಾರರಾದ ಚಿಕ್ಕವೀರಯ್ಯ ಅವರು ಪಾಲಿಕೆಗೆ ಜಮೀನನ್ನು ದಾನವಾಗಿ ನೀಡಿದ್ದರು. ಈ ಜಾಗದಲ್ಲಿ ಪಾಲಿಕೆಯು ಆರ್ಟ್ ಗ್ಯಾಲರಿಯನ್ನು 85 ಲಕ್ಷ ರೂಪಾಯಿ ವೆಚ್ಚದಲ್ಲಿ 2005ರಲ್ಲಿ ನಿರ್ಮಿಸಿತು. ಆರ್ಟ್ ಗ್ಯಾಲರಿಗೆ ಚಿಕ್ಕವೀರಯ್ಯ ಅವರ ಹೆಸರನ್ನು ಇಡಲಾಗಿದೆ. ಆದರೆ ನಂತರದ ದಿನಗಳಲ್ಲಿ ಖಾಲಿ ಉಳಿದ ಪರಿಣಾಮ  ದೂಳುಮಯವಾಯಿತು. ನಿರಂತರವಾಗಿ ಬಳಕೆಯಾಗದ ಕಾರಣ ಪಾಲಿಕೆಯು ಕಳೆದ ವರ್ಷ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನಕ್ಕೆ ನೀಡಿತು. ಅಲ್ಲಿ ವಿಜ್ಞಾನ ಕೇಂದ್ರವನ್ನು ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ ನಿರ್ವಹಿಸುತ್ತಿದೆ. `ಇಲ್ಲಿಗೆ ಬರುವ ಮೊದಲು ಇಂದಿರಾ ಗಾಜಿನಮನೆಯಲ್ಲಿ ಅಗಸ್ತ್ಯ ಪ್ರತಿಷ್ಠಾನವಿತ್ತು. ಅದರ ನವೀಕರಣ ಶುರುವಾದ ನಂತರ ಚಿಕ್ಕವೀರಯ್ಯ ಆರ್ಟ್ ಗ್ಯಾಲರಿಗೆ ವರ್ಗಾವಣೆಗೊಂಡಿತು. ಮತ್ತೆ ಬೇರೆಡೆ ಜಾಗ ತೋರಿಸಿದರೆ ಸ್ಥಳಾಂತರಗೊಳಿಸುತ್ತೇವೆ~ ಎನ್ನುತ್ತಾರೆ ಪ್ರತಿಷ್ಠಾನದ ಯೋಜನಾಧಿಕಾರಿ ರಮೇಶ ಹಿಟ್ನಳ್ಳಿ.

`ಹುಬ್ಬಳ್ಳಿಯಲ್ಲಿ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರವಾದರೆ ಉತ್ತರ ಕರ್ನಾಟಕದ ಕಲಾ ವಿದ್ಯಾರ್ಥಿಗಳಿಗೆ ಹಾಗೂ ಕಲಾವಿದರಿಗೆ ಅನುಕೂಲ ಆಗುತ್ತದೆ~ ಎಂದು ಪ್ರತಿಪಾದಿಸುತ್ತಾರೆ ಪ್ರಾದೇಶಿಕ ಕೇಂದ್ರಕ್ಕೆ ಮನವಿ ನೀಡಿದ್ದ ಧಾರವಾಡದ ಕಲಾಮಂಡಳದ ಕಾರ್ಯದರ್ಶಿ ಹಾಗೂ ಚಿತ್ರಕಲಾವಿದ ಮಧು ದೇಸಾಯಿ.
`1935ರಲ್ಲಿ ಸ್ಕೂಲ್ ಆಫ್ ಆರ್ಟ್ ಅನ್ನು ಧಾರವಾಡದಲ್ಲಿ ಡಿ.ವಿ. ಹಾಲಭಾವಿ ಆರಂಭಿಸಿದರು. 1950ರಲ್ಲಿ ಎಂ.ವಿ. ಮಿಣಜಗಿಯವರು ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯವನ್ನು ಹುಬ್ಬಳ್ಳಿಯಲ್ಲಿ ಶುರು ಮಾಡಿದರು. ಇದೇ ಅವಧಿಯಲ್ಲಿ ಗದುಗಿನಲ್ಲಿ ಟಿ.ಪಿ. ಅಕ್ಕಿಯವರು ವಿಜಯ ಕಲಾ ಮಂದಿರ ಆರಂಭಿಸಿದರು.

ಇವುಗಳೆಲ್ಲ ಚಿತ್ರಕಲೆಯನ್ನು ಕಲಿಸುತ್ತವೆ. ಆದರೆ ಕಲಾ ಕೇಂದ್ರಗಳಾಗಿ ಮಾರ್ಪಡುವುದಿಲ್ಲ. 1997ರಲ್ಲಿ ಧಾರವಾಡ ಸರ್ಕಾರಿ ಆರ್ಟ್ ಗ್ಯಾಲರಿ ಆರಂಭವಾಯಿತು. ಇದಕ್ಕಾಗಿ ಹೋರಾಟ ಮಾಡಿದ್ದೆವು. ಈಚಿನ ವರ್ಷಗಳಲ್ಲಿ ಹುಬ್ಬಳ್ಳಿಯಲ್ಲಿ ಚಿಕ್ಕವೀರಯ್ಯ ಆರ್ಟ್ ಗ್ಯಾಲರಿ ಆರಂಭವಾಯಿತು. ಇಲ್ಲಿ ಧಾರವಾಡ ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಎರಡು ಕಲಾಪ್ರದರ್ಶನಗಳಾದವು ಅಷ್ಟೆ. ನಂತರ ಅದರ ಬಳಕೆ ಇಲ್ಲವೇಂದೇ ಹೇಳಬೇಕು.

ಇದಕ್ಕಾಗಿ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರವಾದರೆ ಉತ್ತರ ಕರ್ನಾಟಕದ ಚಿತ್ರಕಲೆ ವಿದ್ಯಾರ್ಥಿಗಳಿಗೆ ಅಲ್ಲದೇ ಕಲಾಸಕ್ತರಿಗೆ ಅನುಕೂಲವಾಗುತ್ತದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಕಲಾವಿದರು ಇಲ್ಲಿ ಬಂದು ಇಲ್ಲಿ ವರ್ಕ್ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಕಲಾ ವಿದ್ಯಾರ್ಥಿಗಳು ಮತ್ತು ಕಲಾವಿದರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಹೀಗಾಗಿ ಶೀಘ್ರದಲ್ಲೇ ಪ್ರಾದೇಶಿಕ ಕೇಂದ್ರ ಆರಂಭವಾಗಲಿ~ ಎಂದು ಮಧು ದೇಸಾಯಿ ಆಗ್ರಹಿಸಿದರು.

`ಎಂ.ವಿ. ಮಿಣಜಗಿಯವರು ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯವನ್ನು ನಡೆಸಲು ಅಸಾಧ್ಯವೆಂದು ಕೈಚೆಲ್ಲಿ ಕುಳಿತಾಗ ಮೂರುಸಾವಿರಮಠದ ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಅದನ್ನು ಕೈಗೆತ್ತಿಕೊಂಡರು. ನಗರದ ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿರುವ ಕಾಲೇಜಿನಲ್ಲಿ ತಿಂಗಳ ಚಿತ್ರವೆಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸುತ್ತಮುತ್ತಲಿನ ಪ್ರತಿಭಾವಂತ ಕಲಾವಿದರನ್ನು ಆಹ್ವಾನಿಸಿ ಅವರ ಕಲೆ ಪ್ರಾತ್ಯಕ್ಷಿಕೆ ನಡೆದ ನಂತರ ಸತ್ಕರಿಸಲಾಗುತ್ತದೆ. ಆದರೆ ಇದನ್ನು ಮೀರಿ ಬೆಳೆಯಲು ಸಾಧ್ಯವಾಗುವುದು ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರವಾದಾಗ. ಕೂಡಲೇ ಆರಂಭಗೊಳ್ಳಲಿ~ ಎನ್ನುವ ಬೇಡಿಕೆ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದ ನಿರ್ದೇಶಕ ಶಶಿ ಸಾಲಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT