ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಕೆಂಪಾದ ಕೇಸರಿ

Last Updated 21 ಅಕ್ಟೋಬರ್ 2012, 12:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರದ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಯುವಮೋರ್ಚಾ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ `ಕಾಂಗ್ರೆಸ್ ಹಠಾವೋ..ದೇಶ್ ಬಚಾವೋ~ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪ್ರತಿಯೊಬ್ಬರೂ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕೆಂಡ ಕಾರಿದರು. ಕಾರ್ಯಕ್ರಮದ ಅಂಗವಾಗಿ ಚಿತ್ರ, ಕಾರ್ಟೂನ್ ಹಾಗೂ ಬರಹದ ಮೂಲಕವೂ ಭ್ರಷ್ಟಾಚಾರದ ಬಗ್ಗೆ ಲೇವಡಿ ಮಾಡಲಾಯಿತು.

ಕಾರ್ಯಕ್ರಮ ನಡೆದ ನೆಹರೂ ಮೈದಾನದ ಒಂದು ಭಾಗದಲ್ಲಿ ಭ್ರಷ್ಟಾಚಾರದ ಬ್ರಹ್ಮಾಂಡ ದರ್ಶನ ಎಂಬ ಹೆಸರಿನಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಹೊರಬಂದ ಅನೇಕ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಪಟ್ಟು ಮಾಧ್ಯಮಗಳಲ್ಲಿ ಪ್ರಕಟಗೊಂಡ ಕಾರ್ಟೂನ್‌ಗಳನ್ನು ಇಲ್ಲಿ ದೊಡ್ಡದಾಗಿ ಪ್ರದರ್ಶಿಸಲಾಗಿತ್ತು. ಕೆಲವು ಕಾರ್ಟೂನ್‌ಗಳನ್ನು ಬಳಸಿಕೊಂಡು ಸಂಘಟಕರ ಠಿಪ್ಪಣಿಯನ್ನು ಕೂಡ ಬರೆಯಲಾಗಿತ್ತು.

ನೆಹರೂ-ಇಂದಿರಾ ಹಾಗೂ ರಾಜೀವ ಗಾಂಧಿ ಅವರ ಚಿತ್ರವನ್ನು ಬಳಸಿ ಭ್ರಷ್ಟಾಚಾರದ ವಂಶಪಾರಂಪರಿಕ ನೋಟ ಎಂಬ ಹೆಸರಿನಲ್ಲಿ ಸಿದ್ಧಪಡಿಸಲಾಗಿದ್ದ ದೊಡ್ಡ ಫಲಕದಲ್ಲಿ 1951ರ ಸೈಕಲ್ ಹಗರಣದಿಂದ ಹಿಡಿದು 1996ರ ಹವಾಲ ಹಗರಣದ ವರೆಗಿನ ಮಾಹಿತಿಯನ್ನು ವಿಡಂಬನಾತ್ಮಕವಾಗಿ ಬರೆಯಲಾಗಿತ್ತು.

ಇನ್ನೊಂದೆಡೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರ ಚಿತ್ರವನ್ನು ಬಳಸಿಕೊಂಡು ತಾಯಿ-ಮಗನ ಸ್ವಾರ್ಥ, ದೇಶಕ್ಕೆ ಅನರ್ಥ ಎಂಬ ಬರಹದಡಿ ಅಕ್ಕಿ ಹಗರಣದಿಂದ ಹಿಡಿದು ಎಲ್‌ಐಸಿಎಚ್‌ಎಫ್ ಹಗರಣದ ವರೆಗಿನ ಮಾಹಿತಿಯನ್ನು ನೀಡಲಾಗಿತ್ತು.

`ಭ್ರಷ್ಟಾಚಾರ ನಮ್ಮ ಸಿದ್ಧಾಂತ~ ಮತ್ತಿತರ ಘೋಷಣೆಗಳು ಕೂಡ ಇಲ್ಲಿ ರಾರಾಜಿಸಿದವು. ಇಷ್ಟೇ ಅಲ್ಲದೆ, ವಿದೇಶಿ ನೇರ ಬಂಡವಾಳ ಹೂಡಿಕೆಯ ದುಷ್ಪರಿಣಾಮಗಳು, ಯುಪಿಎ ಸರ್ಕಾರದ ಅವಧಿಯಲ್ಲಿ ಆದ ಬೆಲೆ ಏರಿಕೆಯ ಮಾಹಿತಿ ಇತ್ಯಾದಿಗಳನ್ನು ಒಳಗೊಂಡ ಬೃಹತ್  ಫಲಕಗಳನ್ನು ಪ್ರದರ್ಶಿಸಲಾಗಿತ್ತು.

ವೇದಿಕೆಯನ್ನೂ ಸಹ ಭ್ರಷ್ಟಾಚಾರದ ಮಾಹಿತಿಯಿಂದ `ಅಲಂಕರಿಸ~ಲಾಗಿತ್ತು. ಸಂಸತ್ ಭವನದ ಮುಂದೆ ಎ.ರಾಜಾ ಅವರ ಭಾವಚಿತ್ರ ಪ್ರಕಟಿಸಿ `ಮಾರಾಟಕ್ಕಿದೆ~ ಎಂದು ಬರೆಯಲಾಗಿತ್ತು. ಪ್ರಜ್ವಲಿಸುವ ಸೂರ್ಯನ ಚಿತ್ರ ಬಿಡಿಸಿ ಒಂದೊಂದು ಕಿರಣದಲ್ಲೂ ಒಂದೊಂದು ಹಗರಣವನ್ನು ಬರೆಯಲಾಗಿತ್ತು. ಆ ಸೂರ್ಯನ ಹೆಸರು `ಕಾಂಗ್ರೆಸ್ ಹಗರಣಗಳು~ ಎಂದಾಗಿತ್ತು.

ಕೆಂಪಾದ ಕೇಸರಿ: ಕಾರ್ಯಕ್ರಮವನ್ನು ಹೋರಾಟದ ಕೆಚ್ಚು ಮೂಡಿಸುವುದಕ್ಕಾಗಿ ಆಯೋಜಿಸಲಾಗಿತ್ತು. ಈ ಕಾರಣದಿಂದಲೇ ವೇದಿಕೆಗೆ ಕೇಸರಿಯ ಬದಲು ಕೆಂಪು ಛಾಯೆ ಬಂದಿತ್ತು. ವೇದಿಕೆಯ ಹಿಂದೆ ಕಾರ್ಯಕ್ರಮದ ಹೆಸರನ್ನು ಕೂಡ ಎಡಪಂಥದ ಕಾರ್ಯಕ್ರಮದ ಹೆಸರಿನಂತೆ ಕೆಂಪು ಬಾರ್ಡರ್ ಬಳಸಿ ಬರೆಯಲಾಗಿತ್ತು. ಮುಷ್ಟಿ ಹಿಡಿದು ಘೋಷಣೆ ಕೂಗುವಂಥ ಸಂಕೇತದಲ್ಲೂ `ಕೆಂಪು~ ಛಾಯೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT