ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ನಾಸಾ ಸಮಾವೇಶ

Last Updated 1 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಓದಿಗೆ ಪೂರಕವಾದ ಚಿಂತನೆಗಳು, ಅನುಭವಿಗಳೊಂದಿಗೆ ಚರ್ಚೆ, ಜೊತೆಗೊಂದಿಷ್ಟು ವಿನೋದದ ಸ್ಪರ್ಧೆಗಳು, ಸಂಜೆಯಾದರೆ ಸಂಗೀತದ ಅಲೆಯಲ್ಲಿ ತೇಲುತ್ತ, ಮೈಮರೆತು ಹೆಜ್ಜೆಹಾಕುತ್ತಿದ್ದ ಯುವ ಮನಸ್ಸುಗಳು...

ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕಾಲೇಜಿನಲ್ಲಿ ಜ.19ರಿಂದ 22ರವರೆಗೆ ನಡೆದ ‘ನಾಸಾ’ ಸಮ್ಮೇಳನ ಇಂತಹ ಕ್ಷಣಗಳಿಗೆ ಸಾಕ್ಷಿಯಾಯಿತು. ನಾಲ್ಕು ದಿನ ಪೂರ ಅಲ್ಲಿ ಯಾವುದೋ ಒಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ದೇಶದ ವಿವಿಧ ಭಾಗಗಳಿಂದ ಬಂದ ಮಂದಿ ಒಟ್ಟಾಗಿ ರಾಷ್ಟ್ರೀಯ ಹಬ್ಬವೊಂದನ್ನ ಆಚರಿಸುತ್ತಿರುವಂತೆ ಭಾಸವಾಗುತ್ತಿತ್ತು.

ವಾಸ್ತುಶಾಸ್ತ್ರ ವಿದ್ಯಾರ್ಥಿಗಳ ರಾಷ್ಟ್ರೀಯ ಒಕ್ಕೂಟ ಅರ್ಥಾತ್ ‘ನಾಸಾ’ ದೇಶದ ದೊಡ್ಡ ವಿದ್ಯಾರ್ಥಿ ಸಂಘಟನೆಗಳಲ್ಲಿ ಒಂದು. ದೇಶದ ಒಂದು ಭಾಗದಲ್ಲಿ ಒಂದೊಂದು ವರ್ಷ ತನ್ನ ವಾರ್ಷಿಕ ಸಮ್ಮೇಳನ ಹಮ್ಮಿಕೊಳ್ಳುವ ಈ ಸಂಘಟನೆ ಈ ಬಾರಿ ತನ್ನ ಸಮಾವೇಶಕ್ಕೆ ಆಯ್ದುಕೊಂಡಿದ್ದು ಹುಬ್ಬಳ್ಳಿಯ ಬಿವಿಬಿ ಕಾಲೇಜನ್ನು. ಯುಟೋಪಿಯಾ-10’ ಎಂದು ಹೆಸರು ಹೊದ್ದ 53ನೇ ನಾಸಾ ವಾರ್ಷಿಕ ಸಮಾವೇಶಕ್ಕೆ ತಿಂಗಳುಗಳ ಹಿಂದೆಯೇ ಸಿದ್ಧತೆ ಆರಂಭವಾಗಿತ್ತು. ದಿನ ಸಮೀಪಿಸಿದಂತೆ ಬಿವಿವಿಯ ಅಂಗಳ ಇನ್ನಷ್ಟು ರಂಗಾಯಿತು, ಗೋಡೆಗಳು ಹೊಸ ಚಿತ್ತಾರ ಪಡೆದರೆ, ಸುತ್ತಲಿನ ಮರಗಳು ರಾತ್ರಿ ಹೊತ್ತಿನಲ್ಲಿ ಹಸಿರು ದೀಪದ ಬೆಳಕಿನಲ್ಲಿ, ಆಕಾಶಬುಟ್ಟಿಗಳ ಕೆಂಬಣ್ಣದಲ್ಲಿ ಕಂಗೊಳಿಸತೊಡಗಿದ್ದವು.

ಜ. 19ರ ಮುಂಜಾನೆ ದೇಶದ ಮೂಲೆಮೂಲೆಗಳಿಂದ ಒಂದೊಂದೇ ತಂಡ ಕ್ಯಾಂಪಸ್ಸಿಗೆ ಕಾಲಿರಿಸತೊಡಗಿತ್ತು. ಹೀಗೆ ಇಲ್ಲಿ ಬಂದ ವಿವಿಧ ಕಾಲೇಜುಗಳ ಸಂಖ್ಯೆ 127. ಒಟ್ಟಾರೆ ಲೆಕ್ಕ ಹಾಕುವುದಾದರೆ 5000 ವಿದ್ಯಾರ್ಥಿಗಳಿಗಿಂತ ಹೆಚ್ಚು, ಇವರೊಟ್ಟಿಗೆ ಸಾರ್ಕ್ ಒಕ್ಕೂಟದ ವಿವಿಧ ದೇಶಗಳಿಂದ ಬಂದ 200ಕ್ಕೂ ಹೆಚ್ಚು ವಿಷಯ ತಜ್ಞರು ಬೆರೆತರು. ಹಿರಿಯರು-ಕಿರಿಯರ ನಡುವೆ ಚರ್ಚೆಗೆ ಇದೊಂದು ವೇದಿಕೆಯೂ ಆಯ್ತು.

ಪ್ರತಿ ಮುಂಜಾನೆ ವಿವಿಧ ವಿಷಯ ತಜ್ಞರಿಂದ ವಿಚಾರ ಗೋಷ್ಠಿ, ಕಾರ್ಯಾಗಾರಗಳು ನಡೆದರೆ, ಮತ್ತೊಂದೆಡೆ ಮನೋರಂಜನೆಯ ಸಲುವಾಗಿ ವಿವಿಧ ವಿನೋದ ಸ್ಪರ್ಧೆಗಳು. ಸಂಜೆ ಕಣ್ಣು ಕೋರೈಸುವ ಬೆಳಕಿನ ದೀಪಗಳ ಭರ್ಜರಿ ವೇದಿಕೆಯಲ್ಲಿ ಒಂದಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು.  ಅದಕ್ಕಿಂತ ಹೆಚ್ಚಾಗಿ ಅಬ್ಬರಿಸುವ ಮೈಕುಗಳಿಂದ ಹೊರಹೊಮ್ಮುವ ಸಂಗೀತ. ಅದರ ಅಲೆಗಳ ಜೊತೆಗೆ ಮೈಮರೆತು ಗುಂಪಾಗಿ ಕುಣಿಯುವ ಸಮೂಹ. ಅಲ್ಲಿಗೆ ದಿನದ ಕಾರ್ಯಕ್ರಮಕ್ಕೆ ತೆರೆ.

ಮೊದಲೆರಡು ದಿನಗಳ ಕಾಲ ಅತ್ಯುತ್ಸಾಹಿಗಳಾಗಿ ರಂಜನೆಗೆ ಹೆಚ್ಚಿನ ಆದ್ಯತೆ ನೀಡಿದ್ದ ವಿದ್ಯಾರ್ಥಿಗಳು ಕ್ರಮೇಣ ಗಂಭೀರವಾದರು. ಕೊನೆಯ ದಿನ ಒಂದಿಷ್ಟು ಚಂದದ ವಿನ್ಯಾಸಗಳನ್ನು ಮುಂದಿಟ್ಟು ವೃತ್ತಿಪರತೆ ಮೆರೆಯುವ ಪ್ರಯತ್ನ ಮಾಡಿದರು. ಈ ನಡುವೆ ಕಸದಿಂದ ಗೊಂಬೆ ತಯಾರಿಕೆ, ರೋಬೋಟ್ ನಿರ್ಮಾಣ, ಪೇಪರ್‌ನಿಂದ ವಸ್ತ್ರವಿನ್ಯಾಸ ಹೀಗೆ ತಮ್ಮ ಕ್ರಿಯಾತ್ಮಕತೆ ತೋರಲು ಮುಂದಾದರು. ರಂಗಭೂಮಿ, ಮಣ್ಣಿನ ಕಲಾಕೃತಿಗಳ ತಯಾರಿಕೆ ಮೊದಲಾದ ಕಲೆಗಳತ್ತಲೂ ಚಿತ್ತ ಹರಿಸಿದರು.

ವೈ-ಫೈ ಸಂಸ್ಕೃತಿಗೆ ತಮ್ಮನ್ನು ಒಡ್ಡಿಕೊಂಡಿರುವ, ರಂಗುರಂಗಿನ ಬಟ್ಟೆ ತೊಟ್ಟು ಬಣ್ಣದ ಚಿಟ್ಟೆಗಳಂತೆ ಬಿವಿಬಿ ಅಂಗಳದ ತುಂಬ ಹಾರಾಡುತ್ತಿದ್ದ ವಿದ್ಯಾರ್ಥಿಗಳನ್ನು ಕಂಡರೆ ಸ್ವರ್ಗದ ತುಣುಕೊಂದು ಕಳಚಿ ನೆಲಕ್ಕೆ ಬಿತ್ತೇನೋ? ಎಂಬ ಭಾವ, ಅಂತಹದ್ದೊಂದು ನಾಜೂಕಿನ ವಾತಾವರಣವೇ ಅಲ್ಲಿ ಸೃಷ್ಟಿಯಾಗಿತ್ತು.

ತಮ್ಮಲ್ಲಿಗೆ ಬಂದ ಹುಡುಗ-ಹುಡುಗರಿಗೆ ತಕ್ಕ ಆತಿಥ್ಯವನ್ನೇ ಉಣಬಡಿಸಲು ಕೆಎಲ್‌ಇ ಸೊಸೈಟಿಯ ಮಂದಿ ಭಾರಿ ಸಿದ್ಧತೆ ಮಾಡಿಕೊಂಡಿದ್ದರು. ಊಟೋಪಚಾರದಲ್ಲೂ ಯಾವುದೇ ಕೊಂಕು ಉಂಟಾಗದಂತೆ ಎಚ್ಚರ ವಹಿಸಿದರು. ಸಮಾವೇಶದಲ್ಲಿ ಪಾಲ್ಗೊಂಡವರಲ್ಲಿ ಶೇ 80ರಷ್ಟು ಮಂದಿ ಉತ್ತರ ಭಾರತೀಯರಾಗಿದ್ದು ಅವರೆಲ್ಲ ಇಲ್ಲಿನ ರೊಟ್ಟಿ, ಎಣ್ಣೆಗಾಯಿ, ಗೋಧಿ ಹುಗ್ಗಿಯನ್ನು ಬಾಯ್ತುಂಬ ಸವಿದು ಮನಸ್ಸಾರೆ ಹೊಗಳಿದರು.

ಉತ್ತರ ಹಾಗೂ ದಕ್ಷಿಣ ಭಾರತದ ಸಂಸ್ಕೃತಿಯ ವಿನಿಮಯಕ್ಕೂ ಇದೊಂದು ವೇದಿಕೆಯಾಯಿತು. ಎರಡೂ ಬಗೆಯ ಊಟೋಪಚಾರ, ವಿಚಾರ, ಸಂಗೀತ, ನೃತ್ಯ ಎಲ್ಲದರಲ್ಲೂ ವೈವಿಧ್ಯತೆ ಕಾಣುತ್ತಿತ್ತು.

ಜ.22ರ ರಾತ್ರಿ ಕಾರ್ಯಕ್ರಮಕ್ಕೆ ಅಂತಿಮ ತೆರೆ ಬಿದ್ದ ನಂತರ ಕಣ್ಣಲ್ಲಿ ನೀರು ತುಂಬಿಕೊಂಡು, ಮನಸ್ಸಿನಲ್ಲಿ ಹುಬ್ಬಳ್ಳಿ ಮಣ್ಣಿನ ನೆನಪು ಹೊತ್ತು ಹೊರಟವರು ಎಷ್ಟೋ ಮಂದಿ. ‘ನಾಸಾ’ದ ಈ ಸಮ್ಮೇಳನ ಕರ್ನಾಟಕದಲ್ಲಿ ನಡೆದದ್ದು ಇದೇ ಮೊದಲು. ಮಾತ್ರವಲ್ಲ, 53 ಸಮ್ಮೇಳನಗಳಲ್ಲಿ ಅತಿದೊಡ್ಡ ಸಮ್ಮೇಳನ ಎಂಬ ಹಿರಿಮೆಯನ್ನೂ ಪಡೆಯಿತು. ಭಾರತದೊಟ್ಟಿಗೆ ನೇಪಾಳ ಮೊದಲಾದ ಕಡೆಗಳಿಂದಲೂ ವಿದ್ಯಾರ್ಥಿಗಳು ಸಮಾವೇಶದಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದು ವಿಶೇಷವಾಗಿತ್ತು.

ಉದ್ಘಾಟನೆಯ ವೇಳೆ ಪಕ್ಕಾ ನೇಪಾಳಿ ವೇಷ ತೊಟ್ಟು ವೇದಿಕೆಯ ಮುಂದೆ ನಡೆದುಹೋದ ಹುಡುಗ-ಹುಡುಗಿಯರ ಚಿತ್ರ ಕಣ್ಮುಂದೆ ಬರುವಂತಿತ್ತು. ಆರಂಭದಲ್ಲಿ, ಅಮೆರಿಕದ ‘ನಾಸಾ’ಕ್ಕೂ ಈ ‘ನಾಸಾ’ಕ್ಕೂ ಸಂಬಂಧ ಇದ್ದೀರಬಹುದೇ? ಎಂಬ ಜನರ ಗೊಂದಲ, ಕುತೂಹಲ ಬಿಟ್ಟರೆ ಬೇರೆಯಾವ ಗದ್ದಲಗಳೂ ನಡೆಯದೇ ಸಮಾವೇಶದ ಯಶಸ್ಸು ನೆನಪಾಗಿ ಉಳಿಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT