ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್: ಶಾಲಾ ಪ್ರಾರಂಭೋತ್ಸವ

Last Updated 31 ಮೇ 2012, 5:40 IST
ಅಕ್ಷರ ಗಾತ್ರ

ಹುಮನಾಬಾದ್: 2011-12ನೇ  ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಒಟ್ಟು ಫಲಿತಾಂಶದಲ್ಲಿ ಬೀದರ್ ಜಿಲ್ಲೆ ರಾಜ್ಯಕ್ಕೆ ಕಡೆ ಸ್ಥಾನದಲ್ಲಿರುವುದು ಬೇಸರ ತಂದಿದೆ. ಆದರೆ ಅಗ್ರಶ್ರೇಣಿಯಲ್ಲಿ ಬೀದರ್ ಜಿಲ್ಲೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಿಟ್ಟಿಸಿಕೊಟ್ಟಿಕೊಂಡಿದ್ದು ಹರ್ಷದ ಸಂಗತಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಆರ್.ಬಸಪ್ಪ ತಿಳಿಸಿದರು.

ಇಲ್ಲಿನ ವಿಶ್ವಹಿಂದೂ ಪರಿಷತ್ ಸಂಚಾಲಿಕ ಲಕ್ಷ್ಮೀವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರದಲ್ಲಿ ಬುಧವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸದ್ಯದ ಮಟ್ಟಿಗೆ ಫಲಿತಾಂಶ ಕಡೆ ಸ್ಥಾನದಲ್ಲಿ ಇದ್ದರೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ. 10ರಷ್ಟು ಸುಧಾರಣೆ ಕಂಡಿದೆ. ಇದಕ್ಕೆ ಕಾರಣರಾದ ಅಧಿಕಾರಿ ಹಾಗೂ ಶಿಕ್ಷಕ ವೃಂದಕ್ಕೆ ಅಭಿನಂದಿಸುವುದಾಗಿ ತಿಳಿಸಿದ ಅವರು, ಹೆಚ್ಚಿನ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಅಗತ್ಯ ಯೋಜನೆ ರೂಪಿಸಿ, ಶಿಕ್ಷಕರು ಮತ್ತು ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

ಬೇಸಿಗೆ ರಜೆಯಲ್ಲಿ ವಿಶೇಷ ಶಿಬಿರ ನಡೆಸುವುದು ಮಕ್ಕಳ ಸರ್ವತೋಮುಖ ಬೆಳವಣಿಗೆ ದೃಷ್ಟಿಯಿಂದ ಸೂಕ್ತವಲ್ಲ. ಮಕ್ಕಳು ಯಾವ ಅವಧಿಯಲ್ಲಿ ಏನು ಮಾಡಬೇಕೋ ಅದಕ್ಕಾಗಿ ಮುಕ್ತವಾಗಿ ಬಿಡುವುದು ಪಾಲಕ ಹಾಗೂ ಶಿಕ್ಷಕರ ಜವಾಬ್ದಾರಿ ಎಂದು ಸಲಹೆ ನೀಡಿದರು. ಬೀದರ್ ಜಿಲ್ಲೆಯಲ್ಲೇ ಹುಮನಾಬಾದ್ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಕಾರಣರಾದ ತಾಲ್ಲೂಕಿನ ಸಮಸ್ತ ಅಧಿಕಾರಿ ಹಾಗೂ ಶಿಕ್ಷಕರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಫಲಿತಾಂಶ ಕುಸಿತಕ್ಕೆ ಇರುವ ಕಾರಣಗಳ ಕುರಿತು ವಿವರಿಸಿದರು. ಶಿಕ್ಷಕರು ಶಿಕ್ಷಕರಾಗಬೇಕೆ ಹೊರತು ರಾಜಕಾರಣಿ ಆಗಬಾರದು. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕಿದೆ ಎಂದರು.

ಸಂಸ್ಥೆಯ ಸದಸ್ಯ ನಾರಾಯಣರಾವ ಚಿದ್ರಿ, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ದೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಭಜಂತ್ರಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರಾಮಚಂದ್ರ ಡಿ.ಕುಶೆ, ವಿಷಯ ಪರಿವೀಕ್ಷಕ ಮಾರುತಿ ಜಿ.ಕುಂಬಾರ, ಶಕುಂತಲಾಬಾಯಿ, ಪ್ರೌಢ ಶಾಲೆ ಮುಖ್ಯಗುರು ಕೆ.ಕೆ.ಯರಂತೇಲಿ ಮಠ್ ವೇದಿಕೆಯಲ್ಲಿ ಇದ್ದರು.

ಸರ್ವೇಶಕುಮಾರ ಪ್ರಾರ್ಥಿಸಿದರು. ಕಿಶೋರ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಪ್ಪ ಬಿ.ಹುಲಸೂರೆ ನಿರೂಪಿಸಿದರು. ಅಶೋಕಕುಮಾರ ವಡ್ಡನಕೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT