ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹುಮ್ಮಸ್ಸು ಇದ್ದಲ್ಲಿ ಯಶಸ್ಸು ಖಚಿತ'

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮುರುಘಾ ಶರಣರ ಅಭಿಮತ
Last Updated 7 ಜುಲೈ 2013, 10:53 IST
ಅಕ್ಷರ ಗಾತ್ರ

ಚಿತ್ರದುರ್ಗ: `ಯಾರ ಬದುಕಿನಲ್ಲಿ ಹುಮ್ಮಸ್ಸು ಇರುತ್ತದೆಯೋ ಅವರಿಗೆ ಮುಪ್ಪು ಆವರಿಸುವುದಿಲ್ಲ. ಎಲ್ಲಿ ಹುಮ್ಮಸ್ಸು ಇರುತ್ತದೆಯೋ ಅಲ್ಲಿ ಯಶಸ್ಸು ಇರುತ್ತದೆ' ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ನಗರದ ಮುರುಘಾಮಠದಲ್ಲಿ ಶುಕ್ರವಾರ ನಡೆದ 23 ಜೋಡಿಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಎಲ್ಲರೂ ಯಶಸ್ವಿ ಜೀವನ ಸಾಗಿಸಬೇಕು. ಅದಕ್ಕೆ ಹಣ ಮುಖ್ಯವಲ್ಲ. ಭೌತಿಕವಾದ ಆಸ್ತಿ ಇದ್ದಲ್ಲಿ ಶಾಂತಿ ಸಮಾಧಾನ ಇರುವುದಿಲ್ಲ' ಎಂದು ದಂಪತಿಗಳಿಗೆ ಕಿವಿ ಮಾತು ಹೇಳಿದರು.

`ಕೌಟುಂಬಿಕ ಜೀವನದಲ್ಲಿ ಮಾನವೀಯ ಸಂಬಂಧಗಳು ಕುಸಿಯುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನಾವು ಪರಸ್ಪರ ದ್ವೇಷಕ್ಕೆ ಅವಕಾಶ ಮಾಡಿಕೊಡಬಾರದು. ಮಾನವೀಯ ಸಂಬಂಧ, ಸಾಮರಸ್ಯ, ಪ್ರೀತಿ -ಪ್ರೇಮದ ಕುಸಿತ ಯಾರ ಬದುಕಿನಲ್ಲೂ ಸಂಭವಿಸಬಾರದು. ಸಂಪತ್ತು ಸಂಪಾದಿಸಬಹುದು; ಆದರೆ ಸಾಮರಸ್ಯದ ಸಂಬಂಧ ಪಡೆದುಕೊಳ್ಳುವುದು ಸುಲಭವಲ್ಲ' ಎಂದರು.

ಸೊರಬ ತಾಲ್ಲೂಕಿನ ಹಿರೇಮಾಗಡಿಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಮಾತನಾಡಿ,  `ಮುರುಘಾ ಶರಣರು ಕೈಗೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯ. ಆಡಂಬರವಿಲ್ಲದ ಸಾಮೂಹಿಕ ವಿವಾಹ ಹೆಚ್ಚು ಮನ್ನಣೆಯನ್ನು ಪಡೆದುಕೊಂಡಿದೆ. ಸಾಂಸಾರಿಕ ಜೀವನ ತಿದ್ದಿಕೊಂಡು ಆದರ್ಶ ಕಾಣಬೇಕು. ಪರಸ್ಪರರು ಅರಿತು ನಡೆಯಬೇಕು ಎಂದು ಸಲಹೆ ನೀಡಿದರು.

ಮೊಳಕಾಲ್ಮುರು ಶಾಸಕ ನೇರ‌ಲಗುಂಟೆ ತಿಪ್ಪೇಸ್ವಾಮಿ ಮಾತನಾಡಿ, `ನಾವು ಬಡವರು, ಆಡಂಬರದ ಮದುವೆ ನಮ್ಮಂಥವರಿಂದ ಅಸಾಧ್ಯ. ಸಾಲಬಾಧೆಯಿಂದ ನಾವು ಮುಕ್ತರಾಗಲು ಶ್ರೀಮಠದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಬೇಕು' ಎಂದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, `ಯಾವುದೇ ಜಾತಿಗೆ ಸೀಮಿತವಾಗದೆ ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳುವ ಮುರುಘಾ ಶ್ರೀಗಳ ಕಾರ್ಯ ಶ್ಲಾಘನೀಯ' ಎಂದರು.

ಈ ಸಂದರ್ಭದಲ್ಲಿ ಸಹನಾ ಮಂಡಳಿಯವರು ನವ ವಧು-ವರರಿಂದ ಶ್ರೀಮಠದ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆದರು. ಸಾಮೂಹಿಕ ವಿವಾಹದ ದಾಸೋಹ ಸೇವೆ ಸಲ್ಲಿಸಿದ ಟಿ.ಪಿ.ಈರಮ್ಮ ಮತ್ತು ಮಕ್ಕಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಕೆ.ವಿ.ಪ್ರಭಾಕರ, ಕಾರ್ಯ ನಿರ್ವಹಣಾ ನಿರ್ದೇಶಕ ಡಾ.ಮಲ್ಲಿಕಾರ್ಜುನಪ್ಪ, ಪ್ರೊ.ಈ.ಚಿತ್ರಶೇಖರ್, ವೀರಶೈವ ಸಮಾಜದ ಅಧ್ಯಕ್ಷ ಶಿವಪ್ರಕಾಶ್ ಉಪಸ್ಥಿತರಿದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಪ್ರೊ.ಸಿ.ಎಂ.ಚಂದ್ರಪ್ಪ ಸ್ವಾಗತಿಸಿದರು. ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನಮೂರ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT