ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುರಿಯಾಳುಗಳ ಆಯ್ಕೆ ಕಸರತ್ತಿಗೆ ತೆರೆ

Last Updated 18 ಏಪ್ರಿಲ್ 2013, 7:04 IST
ಅಕ್ಷರ ಗಾತ್ರ

ಹಾಸನ: ಕೊನೆಯ ಕ್ಷಣದವರೆಗೂ ನಡೆದ ಗೊಂದಲದ ನಡುವೆ ಬುಧವಾರ ಮಧ್ಯಾಹ್ನ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಎಚ್.ಎಸ್.ಪ್ರಕಾಶ್ ನಾಮಪತ್ರ ಸಲ್ಲಿಸಿದರು.

ಬುಧವಾರ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದರೂ ಯಾರು ಎಂಬುದು ಸ್ಪಷ್ಟವಾಗಿರಲಿಲ್ಲ. ಬೆಳಿಗ್ಗೆ 10.30ರ ಸುಮಾರಿಗೆ  ನಗರಸಭೆಯ ಮಾಜಿ ಅಧ್ಯಕ್ಷ ಚನ್ನವೀರಪ್ಪ,ಸಿ.ಆರ್.ಶಂಕರ್, ಜಿ.ಪಂ. ಮಾಜಿ ಅಧ್ಯಕ್ಷ ಸತ್ಯನಾರಾಯಣ ಹಾಗೂ ಇತರ ಕೆಲವು ಮುಖಂಡರ ಜತೆಗೆ ಬಂದ ಎಚ್.ಎಸ್. ಪ್ರಕಾಶ್ ನಾಮಪತ್ರ ಸಲ್ಲಿಸಿದಾಗ ಗೊಂದಲ ಮುಗಿದಿದೆ ಎಂದು ಪಕ್ಷದ ಕಾರ್ಯಕರ್ತರು ಭಾವಿಸಿದ್ದರು. ಆದರೆ ನಾಮಪತ್ರದ ಜತೆಗೆ ಬಿ-ಫಾರ್ಮ್ ಕೊಟ್ಟಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಊಹಾಪೋಹಗಳಿಗೆ ಮತ್ತೆ ರೆಕ್ಕೆ     ಮೂಡಿದ್ದವು.

ನಾಮಪತ್ರ ಸಲ್ಲಿಸಿ ಹೊರಬಂದ ಪ್ರಕಾಶ್ ಅವರನ್ನು ಮಾಧ್ಯಮದವರು ಭೇಟಿಮಾಡಲು ಹೋದಾಗ `ಸ್ವಲ್ಪ ತಡೀರಿ, ಇನ್ನು ಬಿ-ಪಾರ್ಮ್ ತರಬೇಕಾಗಿದೆ' ಎಂದು ಅಲ್ಲಿಂದ ಧಾವಿಸಿದ್ದರು. ಇನ್ನೇನು ಬಂದೇ ಬರುತ್ತಾರೆ ಎಂದು 12.30ರವರೆಗೂ ಕಾಯ್ದರೂ ಪ್ರಕಾಶ್ ಬರಲಿಲ್ಲ. ರಾಹುಕಾಲ ಮುಗಿದು, 1.30ರ ನಂತರ ಬಂದು ಬಿ-ಫಾರ್ಮ್ ಸಲ್ಲಿಸುತ್ತಾರೆ        ಎಂದು ಕೆಲವು ಕಾರ್ಯಕರ್ತರು ನುಡಿದರು.

ಅರ್ಜಿಯ ಜತೆಗೆ ಬಿ-ಫಾರ್ಮ್ ಸಲ್ಲಿಸದಿರುವುದು ಮತ್ತು ಮಧ್ಯಾಹ್ನದವರೆಗೂ ಪ್ರಕಾಶ್ ಬಾರದಿರುವುದರಿಂದ ಅಲ್ಲಿಯೇ ಕೆಲವು ಸುದ್ದಿಗಳು ಹುಟ್ಟಿಕೊಂಡವು. ರೇವಣ್ಣಅವರೇ ಹಾಸನಕ್ಕೆ ಬಂದು ನಾಮಪತ್ರ ಸಲ್ಲಿಸುತ್ತಾರಂತೆ ಎಂದು ಕೆಲವರು ನುಡಿದರೆ, 1.30ಕ್ಕೆ ಭವಾನಿ ರೇವಣ್ಣ ನಾಮಪತ್ರ ಸಲ್ಲಿಸುತ್ತಾರಂತೆ ಎಂದು ಇನ್ನೂ ಕೆಲವರು ನುಡಿದರು. ಈ ನಡುವೆ ಪಕ್ಷದ ಕೆಲವು ಮುಖಂಡರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದರಿಂದ ಇನ್ನಷ್ಟು ಗೊಂದಲಗಳು ಸೃಷ್ಟಿಯಾದವು.

1.30ಕ್ಕೆ ಬಂದು ಬಿ-ಫಾರ್ಮ್ ಸಲ್ಲಿಸುತ್ತಾರೆ ಎಂದಿದ್ದ ಪ್ರಕಾಶ್ ಎರಡು ಗಂಟೆಯಾದರೂ ಬಂದಿರಲಿಲ್ಲ. ಇದರಿಂದಾಗಿ ಕುತೂಹಲ ಇನ್ನಷ್ಟು ಹೆಚ್ಚಾಗಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ಪಕ್ಷದ ಮುಖಂಡ ಹೊನ್ನವಳ್ಳಿ ಸತೀಶ್ ಬಂದು ಪ್ರಕಾಶ್ ಪರ ಬಿ-ಫಾರ್ಮ್ ಸಲ್ಲಿಸಿ ತೆರಳಿದರು. ಅಲ್ಲಿಗೆ ಗೊಂದಲ ಕೊನೆಗೊಂಡರೂ ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎಂಬುದು ನಿಚ್ಚಳವಾಗಿತ್ತು.

ಬೇರೇನಾದರೂ ಬೆಳವಣಿಗೆ ಆಗಬಹುದೇ ಎಂಬ ಕುತೂಹಲದಿಂದ ಮಧ್ಯಾಹ್ನ 3 ಗಂಟೆಯವರೆಗೂ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಯುತ್ತಿದ್ದರು.

ಮುಖಂಡರ ಅಸಮಾಧಾನ: ಪ್ರಕಾಶ್‌ಗೆ ಟಿಕೆಟ್ ನೀಡಲು ಪಕ್ಷದ ಕೆಲವು ಮುಖಂಡರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದು  ಗೊಂದಲಕ್ಕೆ ಕಾರಣ ಎನ್ನಲಾಗಿದೆ.

ಬೇಲೂರು ಹಾಗೂ ಹಾಸನ ಕ್ಷೇತ್ರಗಳಲ್ಲಿ ಈ ಗೊಂದಲ ಸೃಷ್ಟಿಯಾಗಿತ್ತು. ಎರಡೂ ಕಡೆ ಸಂಜೆಯವರೆಗೆ ಒಂದೇ ರೀತಿಯ ಬೆಳವಣಿಗೆಗಳಾಗಿವೆ.

ಹಾಸನದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ವಿಚಾರವನ್ನು ಇತ್ಯರ್ಥಪಡಿಸಲು ಪಕ್ಷದ `ವರಿಷ್ಠ'ರಿಗೂ ಸಾಧ್ಯವಾಗಿಲ್ಲ. ಇದರ ಪರಿಣಾಮ ಕೊನೆಗೆ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರ ಕೈಗೆ ಬಿ-ಫಾರ್ಮ್ ಕೊಡಿ ಅವರೇ ಸಮಸ್ಯೆ ಬಗೆಹರಿಸಲಿ ಎಂದು ಸೂಚಿಸಿದ್ದರು ಎನ್ನಲಾಗಿದೆ. ಆದರೆ ಈ ಜವಾಬ್ದಾರಿ ಹೊತ್ತುಕೊಳ್ಳಲು ನಿರಾಕರಿಸಿದ ಶಿವರಾಂ, ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಮತ್ತೆ ಬಿ-ಫಾರ್ಮ್ ಕೊಡುವ ಜವಾಬ್ದಾರಿ `ವರಿಷ್ಠ'ರ ಹೆಗಲಿಗೇ ಬಿತ್ತು. ಕೊನೆಯ ಕ್ಷಣದವರೆಗೂ ಕಾಯ್ದ ವರಿಷ್ಠರು ಪ್ರಕಾಶ್‌ಗೆ ಹಸಿರು ನಿಶಾನೆ ತೋರಿಸಿದರು' ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬೇಲೂರು:  ಕೆ.ಎಸ್. ಲಿಂಗೇಶ್ ಜೆಡಿಎಸ್ ಅಭ್ಯರ್ಥಿ
ಬೇಲೂರು ವರದಿ: ಬೇಲೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಗೊಂದಲ ಕೊನೆ ಕ್ಷಣದವರೆಗೂ ಉಂಟಾಗಿ ಕಾರ್ಯಕರ್ತರು ಗೊಂದಲ ಕ್ಕೀಡಾಗಿದ್ದರು.

ಇಲ್ಲಿ  ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರ ಆರಂಭದಿಂದಲೂ ಗೊಂದಲ ಕ್ಕೀ ಡಾಗಿತ್ತು. ನಾಮಪತ್ರ ಸಲ್ಲಿಸಲು ಸಂಜೆ 3 ಗಂಟೆಯವರೆಗೆ ಮಾತ್ರ ಅವಕಾಶವಿದ್ದರೆ 2.30ರವರೆಗೆ ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗಿರ ಲಿಲ್ಲ. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಜವರೇಗೌಡ ಅಭ್ಯ ರ್ಥಿಯಾಗುತ್ತಾರೆಂದು ಹಿಂದಿನಿಂದಲೇ ಹೇಳಲಾಗುತ್ತಿತ್ತು. ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಬಳಿಕ ಬಿ.ಸಿ.ಮಂಜುನಾಥ್ ಮತ್ತು ಕೆ.ಎಸ್. ಲಿಂಗೇಶ್ ಸಹ ಟಿಕೆಟ್ ಆಕಾಂಕ್ಷಿ ಗಳಾಗಿದ್ದರು.

ಮೂರು ದಿನ ಹಿಂದೆ  ಜವರೇ ಗೌಡರಿಗೆ ಟಿಕೆಟ್ ನೀಡದಿರಲು ಪಕ್ಷದ ವರಿಷ್ಠರು ನಿರ್ಧಾರ ಕೈಗೊಂಡಿದ್ದರು. ಇದಾಗುತ್ತಿದ್ದಂತೆ ಬಿ.ಸಿ.ಮಂಜುನಾಥ್ ಮತ್ತು ಕೆ.ಎಸ್.ಲಿಂಗೇಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪಕ್ಷದ ವರಿಷ್ಠರು ಈ ಇಬ್ಬರ ನಡುವೆ ಅಳೆದು   ತೂಗುವ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ದೇವೇಗೌಡರ ನಿವಾಸ ದಲ್ಲಿ ಅಭ್ಯರ್ಥಿಗಳ ನಡುವೆ ಮೂರ‌್ನಾಲ್ಕು ಸುತ್ತಿನ ಮಾತುಕತೆ ನಡೆದರೂ ಗೊಂದಲ ಬಗೆಹರಿದಿರ ಲಿಲ್ಲ. ಬುಧವಾರ ಬೆಳಿಗ್ಗೆ ರೇವಣ್ಣ ನಿವಾಸದಲ್ಲಿಯೂ ಮಾತುಕತೆ ನಡೆದಿತ್ತು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯರ ಬಳಿ ಖಾಲಿ ಬಿ-ಫಾರಂ ಕೊಟ್ಟು ಕಳುಹಿಸಿದ್ದ ರೇವಣ್ಣ, ತಾವು ಹೇಳಿದ ನಂತರ ಬಿ.ಫಾರಂನಲ್ಲಿ ಹೆಸರು ಬರೆಯುವಂತೆ ಸೂಚಿಸಿದ್ದರು. ಆದರೆ ಮಧ್ಯಾಹ್ನ 2.30 ಆದರೂ ರೇವಣ್ಣನಿಂದ ಸೂಚನೆ ಬಂದಿರಲಿಲ್ಲ. ಭವಾನಿ ರೇವಣ್ಣ ಅಂತಿಮ ಕ್ಷಣದಲ್ಲಿ ಬಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಗಾಳಿ ಸುದ್ದಿಯೂ ಹರಡಿತ್ತು. ಕೊನೆಗೆ 2.45ಕ್ಕೆ ಬಿ.ಫಾರಂನಲ್ಲಿ ಕೆ.ಎಸ್. ಲಿಂಗೇಶ್ ಅವರ ಹೆಸರನ್ನು ಅಧಿಕೃತವಾಗಿ ದಾಖಲಿಸಲಾಯಿತಲ್ಲದೆ, ಬಿ.ಸಿ.ಮಂಜುನಾಥ್ ಅವರ ಹೆಸರನ್ನು ಡಮ್ಮಿ ಅಭ್ಯರ್ಥಿ ಎಂದು ಬರೆದು ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾ ಯಿತು.

ಎಚ್.ಕೆ.ಜವರೇಗೌಡ ರಾಜಕೀಯ ನಿವೃತ್ತಿ?
ಬೇಲೂರು ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದ ಎಚ್.ಕೆ. ಜವರೇಗೌಡ ರಾಜಕೀಯ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

ಎರಡು ವರ್ಷಗಳಿಂದಲೂ ಬೇಲೂರು ಕ್ಷೇತ್ರಕ್ಕೆ ಜವರೇಗೌಡ ಅವರೇ ಅಭ್ಯರ್ಥಿ ಎಂದು ಪಕ್ಷದ ಮುಖಂಡರಾದ ಎಚ್.ಡಿ. ರೇವಣ್ಣ ಹಾಗೂ ದೇವೇಗೌಡರು ಘೋಷಿಸಿದ್ದರು. ಅದರಂತೆ ಬೇಲೂರನ್ನೇ ಕಾರ್ಯಕ್ಷೇತ್ರವಾಗಿಸಿಕೊಂಡು ಎರಡು ವರ್ಷಗಳಿಂದ ಅವರು    ಕೆಲಸ ಮಾಡಿದ್ದರು. ಈಚೆಗೆ ನಡೆದ   ಪುರಸಭೆ ಚುನಾವಣೆಯಲ್ಲೂ  ಪಕ್ಷದ ಸಾಧನೆ ಹಿಂದಿಗಿಂತ      ಉತ್ತಮವಾಗಿತ್ತು. ಆದರೆ   ಕೊನೆಯ ಕ್ಷಣದಲ್ಲಿ ಅವರನ್ನು ಬದಲಿಸಿ ಬೇರೆಯವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದ ಪರವಾಗಿ ದುಡಿದ ವ್ಯಕ್ತಿಗೆ ಮುಖಂಡರು ಅನ್ಯಾಯ         ಮಾಡಿದ್ದಾರೆ. ಮನನೊಂದಿರುವ   ಜವರೇಗೌಡರು ರಾಜಕೀಯದಿಂದ  ನಿವೃತ್ತಿ ಹೊಂದುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT