ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ, ಚಿರತೆ ಬೋನಿನ ಸುತ್ತ ಜಾಲರಿ..!

Last Updated 11 ಅಕ್ಟೋಬರ್ 2012, 9:00 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಪ್ರಾಣಿ ಸಂಗ್ರಹಾಲಯದಲ್ಲಿರುವ ಕ್ರೂರ ಮೃಗಗಳ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ಅಪಾಯ ಎದುರಾಗದಂತೆ ತಡೆಯಲು ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಗಳು ಮುಂದಾಗಿವೆ.

ಕಳೆದ ಸೋಮವಾರ ಸಂಜೆ ಹುಲಿಯ ಪಂಜರದ ಬಳಿ ಸಾಗಿ ಚಾಕೋಲೇಟ್ ನೀಡಲು ತೆರಳಿದ್ದ ನಿಖಿಲ್ ಎಂಬ ಎರಡು ವರ್ಷ ವಯಸ್ಸಿನ ಪುಟ್ಟ ಮಗುವಿನ ಕೈಯನ್ನು ಹುಲಿ ತಿಂದು ಹಾಕಿರುವ ಘಟನೆ ನಡೆದ ಹಿನ್ನೆಲೆಯಲ್ಲಿ ಈ 
ಸುರಕ್ಷತಾ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಗುರುವಾರದಿಂದ ಜಾಲರಿ ಅಳವಡಿಸುವ ಕಾರ್ಯ ಆರಂಭವಾಗಲಿದೆ.

ಇದುವರೆಗೆ ಸಾರ್ವಜನಿಕರು ಹುಲಿ, ಚಿರತೆ ಮತ್ತು ತೋಳಗಳಿರುವ ಜಾಗೆಗಳ ಬಳಿಯಲ್ಲೇ ಸುಲಭವಾಗಿ ತೆರಳಿ, ಅವುಗಳನ್ನು ಮುಟ್ಟಲು ಅವಕಾಶವಿತ್ತು.  ಹುಲಿಯು ಮಗುವಿನ ಕೈ ತಂದು ಹಾಕಿದ ಘಟನೆ ನಡೆದ ಹಿನ್ನೆಲೆಯಲ್ಲಿ,  ಸಾರ್ವಜನಿಕರು ಮಕ್ಕಳೊಂದಿಗೆ ಪ್ರಾಣಿ ಸಂಗ್ರಹಾಲಯಕ್ಕೆ ತೆರಳಲು ಆತಂಕ ಪಡುವಂತಾಗಿದೆ. ಅವರ ಭಯ ದೂರ ಮಾಡಲು ರೂ 3 ಲಕ್ಷ ವೆಚ್ಚದಲ್ಲಿ  ಜಾಲರಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಪರಮೇಶ್ವರಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

ದುರ್ನಾತ ತಪ್ಪಿಸಿ: ಹುಲಿ, ಚಿರತೆ, ನರಿ, ತೋಳ, ಮೊಸಳೆ, ಕರಡಿ ಮತ್ತಿತರ ಪ್ರಾಣಿಗಳನ್ನು ಇರಿಸಿರುವ ಜಾಗೆಯಲ್ಲಿ ದುರ್ವಾಸನೆ ಹರಡಿದ್ದು, ಹಣ ಕೊಟ್ಟು ಪ್ರಾಣಿ ಸಂಗ್ರಹಾಲಯಕ್ಕೆ ಬರುವ ಸಾರ್ವಜನಿಕರು ಈ ಕ್ರೂರ ಮೃಗಗಳನ್ನು ನೋಡುವುದಕ್ಕೇ ಅಸಾಧ್ಯ ಎಂಬ ಸ್ಥಿತಿ ಇದೆ. ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಜನರನ್ನು ಆಕರ್ಷಿಸುವ ಕೆಲಸವಾಗಬೇಕಿದೆ ಎಂದು ಬುಧವಾರ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದ ಬಳ್ಳಾರಿ ಪಟೇಲ್‌ನಗರದ ಎಂ.ರಂಗಪ್ಪ ಎಂಬುವವರು ಕೋರಿದರು.

ಮಕ್ಕಳು ಈ ಪ್ರಾಣಿಗಳನ್ನು ಪ್ರತ್ಯಕ್ಷ್ಯವಾಗಿ ವೀಕ್ಷಿಸಲು ಬಯಸುತ್ತವೆ. ಅವರನ್ನು ಕರೆತಂದರೆ, ಇಲ್ಲಿ ಪ್ರಜ್ಞೆ ತಪ್ಪುವಂತೆ ದುರ್ವಾಸನೆ ಹರಡಿಕೊಂಡಿದೆ. ಈ ರೀತಿ ಇದ್ದರೆ, ಮತ್ತೊಮ್ಮೆ ಬರುವುದಕ್ಕೆ ಯಾರೂ ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು.

ಮಗು ಚೇತರಿಕೆ: ಕೈ ಕಳೆದುಕೊಂಡು ಶಾಶ್ವತ ಅಂಗವಿಕಲನಾಗಿರುವ ನಿಖಿಲ್‌ಗೆ ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ.

ನಿಖಿಲ್‌ನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೋರಲಾಗಿದೆ. ಮಗುವಿನ ಭವಿಷ್ಯದ ದೃಷ್ಟಿಯಿಂದ ಅರಣ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವ ಕುರಿತೂ ಚಿಂತನೆ ನಡೆದಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಮಣಿಕಂಠನ್ ತಿಳಿಸಿದರು.

ಪಾಲಕರ ಬೇಜವಾಬ್ದಾರಿಯಿಂದ ಇದೇ ಮೊದಲ ಬಾರಿಗೆ ದುರ್ಘಟನೆ ಸಂಭವಿಸಿದೆ. ಸಾರ್ವಜನಿಕರ ರಕ್ಷಣೆಗಾಗಿ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ ಎಂದು ಅವರು ಹೇಳಿದರು.

ಮೈಸೂರಿನಲ್ಲಿರುವ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರಕ್ಕೆ ಈ ಕುರಿತು ಪತ್ರ ಬರೆಯಲಾಗಿದೆ. ಅಗತ್ಯ ಹಣಕಾಸಿನ ನೆರವು ನೀಡುವುದಾಗಿ ಭರವಸೆ ದೊರೆತಿದೆ. ಜಾಲರಿ ಖರೀದಿಸಿ, ಗುರುವಾರ ಕೆಲಸ ಆರಂಭಿಸಲಾಗುತ್ತದೆ  ಎಂದು ಅವರು ತಿಳಿಸಿದರು.

ಪ್ರಾಣಿ ಸಂಗ್ರಹಾಲಯಕ್ಕೆ ಆಗಮಿಸಿದ ಸಂದರ್ಭ ಪಾಲಕರು ಮಕ್ಕಳ ಬಗ್ಗೆ ನಿರ್ಲಕ್ಷ್ಯವಹಿಸದೆ ನಿಗಾ ಇರಿಸಬೇಕು ಎಂದು ಮನವಿ ಮಾಡಿರುವ ಅವರು, ಕೆಲವೇ ದಿನಗಳಲ್ಲಿ ಪ್ರಾಣಿ ಸಂಗ್ರಹಾಲಯವನ್ನು ಮುನಿರಾಬಾದ್ ಅಥವಾ ಹಂಪಿ ಬಳಿ ಸ್ಥಳಾಂತರಿಸುವ ಯೋಜನೆ ಇದೆ. ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT