ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಮೀಸಲು ಅರಣ್ಯ: ಹೆಚ್ಚುವರಿ ಭೂಮಿ ಸೇರ್ಪಡೆ ಇಲ್ಲ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹುಲಿ ಮೀಸಲು ಅರಣ್ಯ ವ್ಯಾಪ್ತಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಮತ್ತು ಭದ್ರಾ ಅಭಯಾರಣ್ಯ ಪ್ರದೇಶದ ಮತ್ತಷ್ಟು ಪ್ರದೇಶವನ್ನು ಸೇರ್ಪಡೆ ಮಾಡುವ ಪ್ರಸ್ತಾವನೆಯಿಂದ ರಾಜ್ಯ ಸರ್ಕಾರ ಹಿಂದೆ
ಸರಿದಿದೆ.

ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಬೆಳಿಗ್ಗೆ ಗೃಹ ಕಚೇರಿ `ಕೃಷ್ಣಾ~ದಲ್ಲಿ ನಡೆದ ಅರಣ್ಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನ 606.57 ಚ. ಕಿ.ಮೀ ಹಾಗೂ ಭದ್ರಾ ಅಭಯಾರಣ್ಯ ಪ್ರದೇಶದ 500.16 ಚ. ಕಿ.ಮೀ ವ್ಯಾಪ್ತಿಯ ಪ್ರದೇಶ ಹುಲಿ ಮೀಸಲು ಅರಣ್ಯಕ್ಕೆ ಸೇರಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಕುದುರೆಮುಖ ವ್ಯಾಪ್ತಿಯ 201.69 ಚ.ಕಿ.ಮೀ ಮತ್ತು ಭದ್ರಾ ಅರಣ್ಯ ವ್ಯಾಪ್ತಿಯ 348.43 ಚ.ಕಿ.ಮೀ ಪ್ರದೇಶವನ್ನು ಸೇರಿಸಲು ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್, ತರೀಕೆರೆ ಶಾಸಕ ಕೆ.ಸುರೇಶ್ ಸೇರಿದಂತೆ ಇತರರು ಆಕ್ಷೇಪ ವ್ಯಕ್ತಪಡಿಸಿದರು. ಉದ್ದೇಶಿತ ಹೆಚ್ಚುವರಿ ಪ್ರದೇಶದಲ್ಲಿ ಸುಮಾರು 30 ಸಾವಿರ ಜನ ನೆಲೆಸಿದ್ದು, ಅವರನ್ನು ಒಕ್ಕಲೆಬ್ಬಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಪ್ರದೇಶದಲ್ಲಿ ಕಾಫಿ, ಟೀ ಮತ್ತು ರಬ್ಬರ್ ತೋಟಗಳಿವೆ. ದಿಢೀರ್ ಎಂದು ಇದೆಲ್ಲವನ್ನೂ ಹುಲಿ ಮೀಸಲು ಅರಣ್ಯ ಎಂದು ಘೋಷಣೆ ಮಾಡಿದರೆ ಇವುಗಳ ಮಾಲೀಕರು ಏನು ಮಾಡಬೇಕು ಎಂದು ಜೀವರಾಜ್ ಪ್ರಶ್ನೆ ಮಾಡಿದರು ಎನ್ನಲಾಗಿದೆ. ಮುಖ್ಯಮಂತ್ರಿ ಸದಾನಂದಗೌಡ ಕೂಡ ಈ ಭಾಗದ ಸಂಸತ್ ಸದಸ್ಯರಾಗಿದ್ದು, ಅವರಿಗೂ ಈ ವಿಚಾರ ಗೊತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಹುಲಿ ಮೀಸಲು ಅರಣ್ಯ ಪ್ರದೇಶಕ್ಕೆ ಹೆಚ್ಚುವರಿ ಪ್ರದೇಶವನ್ನು ಸೇರಿಸಬಾರದು ಎಂದು ಅವರು ಪಟ್ಟುಹಿಡಿದರು ಎಂದು ಗೊತ್ತಾಗಿದೆ.
 
ವಿಷಯದ ಗಂಭೀರತೆ ಅರಿತ ಮುಖ್ಯಮಂತ್ರಿ ಸದಾನಂದ ಗೌಡ ಅವರು ಈಗಿರುವ ಪ್ರದೇಶವನ್ನು ಹಾಗೆಯೇ ಉಳಿಸಿಕೊಂಡು, ಹೊಸದಾಗಿ ಹೆಚ್ಚುವರಿ ಪ್ರದೇಶವನ್ನು ಹುಲಿ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT