ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಕಲ್ ಘಾಟಿ ಬಂದ್: ಸಂಕಷ್ಟದಲ್ಲಿ ಗ್ರಾಮಸ್ಥರು-ವಿದ್ಯಾರ್ಥಿಗಳು

Last Updated 11 ಜನವರಿ 2012, 8:50 IST
ಅಕ್ಷರ ಗಾತ್ರ

ಹೊಸನಗರ: ಶಿವಮೊಗ್ಗ-ಕುಂದಾಪುರ ರಾಜ್ಯ ಹೆದ್ದಾರಿಯ ಹುಲಿಕಲ್ ಘಾಟಿ ತಾತ್ಕಾಲಿಕ ಬಂದ್ ಆದ ಪರಿಣಾಮ ಖೈರುಗುಂದಾ, ಯಡೂರು, ಸುಳಗೋಡು ಈ ಮೂರೂ ಗ್ರಾಮ ಪಂಚಾಯ್ತಿಯ ಗ್ರಾಮಸ್ಥರು, ಶಾಲಾ ಮಕ್ಕಳು ಬಸ್ ಪ್ರಯಾಣಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿ ಬಂದಿದೆ.

ಶಿವಮೊಗ್ಗ-ಹುಲಿಕಲ್ ಘಾಟಿ-ಕುಂದಾಪುರ ಮಾರ್ಗದ ಎಲ್ಲಾ ಬಸ್‌ಗಳು ಈಗ ಬೈಂದೂರು- ಶಿವಮೊಗ್ಗ ರಾಜ್ಯ ಹೆದ್ದಾರಿಯ ಕೊಲ್ಲೂರು ಘಾಟಿಯ ಮೂಲಕ ಹೋಗುತ್ತಿರುವುದರಿಂದ ತಾಲ್ಲೂಕಿನ 3 ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ತಾಲ್ಲೂಕು ಕೇಂದ್ರ ಸಂಪರ್ಕ ಬಹುತೇಕ ಕಡಿದುಕೊಂಡಂತೆ ಆಗಿದೆ ಎಂಬುದು ಗ್ರಾಮಸ್ಥರ ದೂರು.

ಹುಲಿಕಲ್, ಮಾಸ್ತಿಕಟ್ಟೆ, ಯಡೂರು ಗ್ರಾಮಗಳಿಂದ ತೀರ್ಥಹಳ್ಳಿಗೆ ಸುಮಾರು 120ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಮನೆಯಲ್ಲಿಯೇ ಇರಬೇಕಾದ ದುಃಸ್ಥಿತಿ ಬಂದಿದೆ ಎನ್ನುತ್ತಾರೆ ಖೈರುಗುಂದಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಬಿ. ಕೃಷ್ಣಮೂರ್ತಿ.

ಗೂಡ್ಸ್‌ಆಟೋದಲ್ಲಿ ವಿದ್ಯಾರ್ಥಿಗಳು!: ಕುಗ್ರಾಮದ ಹಳ್ಳಿಗಳಿಂದ ಮಾಸ್ತಿಕಟ್ಟೆ, ಕಾನಗೋಡು ಪ್ರೌಢಶಾಲೆ ಹಾಗೂ ಮಾಸ್ತಿಕಟ್ಟೆಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದ ಕಾರಣ ಕಂಡ-ಕಂಡವರ ವ್ಯಾನ್, ಗೂಡ್ಸ್ ಆಟೋಗಳನ್ನು ಕೈಅಡ್ಡ ಹಾಕಿ ಮೊರೆಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಅವರು ದೂರಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಈಗಾಗಲೇ ಸರ್ಕಾರಿ ಬಸ್‌ನಲ್ಲಿ ಸಂಚರಿಸಲು ಒಂದು ವರ್ಷದ ರಿಯಾಯಿತಿ ಪಾಸ್‌ಗಾಗಿ ಹಣವನ್ನು ಪಾವತಿಸಲಾಗಿದೆ. ಆದರೆ, ಸರ್ಕಾರಿ ಬಸ್ ಸಹ ಸಂಚಾರ ಬಂದ್ ಮಾಡಿದೆ. ಕೂಡಲೇ, ಆರ್‌ಟಿಒ ಹಾಗೂ ಜಿಲ್ಲಾಧಿಕಾರಿ  ಈ ಬಗ್ಗೆ ಗಮನಹರಿಸಿ ಹುಲಿಕಲ್- ಯಡೂರು-ತೀರ್ಥಹಳ್ಳಿ ಮಾರ್ಗದಲ್ಲಿ ಶಾಲಾ ಕಾಲೇಜು ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಸಂಚಾರ ವ್ಯವಸ್ಥೆಯನ್ನು ಮಾಡಬೇಕು ಎಂದು ತಾ.ಪಂ. ಸದಸ್ಯ ಬಿ.ಇ. ಮಂಜುನಾಥ್ ಕೋರಿದ್ದಾರೆ.

ಹುಲಿಕಲ್ ಘಾಟಿ ರಸ್ತೆ ದುರಸ್ತಿಯಿಂದಾಗಿ ತಾತ್ಕಾಲಿಕ ಬಸ್ ಸಂಚಾರ ಸ್ಥಗಿತ ಆದ ಕಾರಣ ಹೊಸನಗರ -ನಗರ-ಮಾಸ್ತಿಕಟ್ಟೆ ಹಾಗೂ ಹುಲಿಕಲ್- ಮಾಸ್ತಿಕಟ್ಟೆ -ಯಡೂರು- ತೀರ್ಥಹಳ್ಳಿಗೆ ಸೂಕ್ತ ಪರ್ಯಾಯ ಬಸ್ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT