ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಕೆರೆ ಪಾರ್ಕ್ ಆಮೆಗತಿ ಕಾಮಗಾರಿ

Last Updated 8 ಜುಲೈ 2013, 10:12 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಕೋಟೆ ಪ್ರದೇಶದ ಬಳಿ ಪ್ರಕೃತಿ ಪ್ರಿಯರ ಆಕರ್ಷಕ ತಾಣವಾಗಿ ರೂಪುಗೊಳ್ಳಬೇಕಿದ್ದ ಹುಲಿಕೆರೆ ಉದ್ಯಾನ ಕಾಮಗಾರಿ ಕುಂಟುತ್ತಾ ಸಾಗಿದೆ. ಒಂದೆಡೆ ನಿಗದಿತ ಯೋಜನೆಯಂತೆ ಕಾಮಗಾರಿ ನಡೆಯದಿರುವುದು, ಕಾನೂನು ಪ್ರಕ್ರಿಯೆಗಳ ಅಡ್ಡಿ, ಅದಕ್ಕೆ ತಕ್ಕಂತೆ ನಿಯಮ ಬಾಹಿರವಾಗಿ ಕಾಮಗಾರಿ ನಡೆಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಉದ್ಯಾನ ಪ್ರದೇಶ ಹೇಗಿದೆ?:  ಉದ್ಯಾನವು ಕೊಪ್ಪಳ ಕೋಟೆಯ ಗುಡ್ಡದ ತಪ್ಪಲಿನಲ್ಲಿದೆ. ಹುಲಿಕೆರೆ. ವಿಶಾಲ ಸರೋವರ, ಸುತ್ತಮುತ್ತ ಆವರಿಸಿರುವ ಗುಡ್ಡ-ಬೆಟ್ಟಗಳು ಉದ್ಯಾನ ಪ್ರದೇಶಕ್ಕೆ ವಿಶೇಷ ಮೆರುಗು ನೀಡಿವೆ. ವಿಶಾಲ ಸರೋವರದಲ್ಲಿ ಈ ಹಿಂದೆ ಹುಲಿಗಳು ಬಂದು ನೀರು ಕುಡಿಯುತ್ತಿದ್ದವು. ಹಾಗಾಗಿ ಈ ಪ್ರದೇಶಕ್ಕೆ ಹುಲಿಕೆರೆ ಎಂಬ ಹೆಸರು ಬಂದಿದೆ ಎಂಬುದು ಬಲ್ಲವರ ಮಾತು.

ಈಗ ಏನಾಗಿದೆ?: ಪಾರ್ಕ್ ಅಧಿಕೃತವಾಗಿ ಸುಮಾರು 10 ಗುಂಟೆ ಪ್ರದೇಶದಲ್ಲಿದೆ. ಅಲ್ಲಿ ಹುಲ್ಲು ಹಾಸು ಬೆಳೆಸಲಾಗಿದೆ. ಆದರೆ, ಅದರ ಪಕ್ಕದ ಕೋಟೆಯ ಸ್ಥಳದಲ್ಲಿ ಪಾರ್ಕ್ ಸ್ಥಳವನ್ನು ವಿಸ್ತರಿಸಲಾಗಿದೆ. ಈಗ ಎಲ್ಲ ಜಮೀನು ಸೇರಿ ಸುಮಾರು ಒಂದು ಎಕರೆಯಷ್ಟು ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ರೂ. 3 ಕೋಟಿ ವೆಚ್ಚದಲ್ಲಿ ಉದ್ಯಾನ ಕಾಮಗಾರಿಗೆ 2010-11ನೇ ಸಾಲಿನಲ್ಲಿ ನಗರಸಭೆ ಕಾಮಗಾರಿಗೆ ಪ್ರಸ್ತಾವ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿತ್ತು. ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿಲ್ಲ. ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ. ಹುಲ್ಲುಹಾಸು, ಕಬ್ಬಿಣದ ಬೇಲಿ, ಪುಟ್ಟ ಮನೆಗಳು, ಕಾಲುದಾರಿ, ನಿರ್ಮಾಣ ಹಂತದಲ್ಲಿವೆ. ಕೆಲವು ಛತ್ರಿಗಳನ್ನು ನೆರಳಿಗಾಗಿ ಸ್ಥಾಪಿಸಲಾಗಿದೆ. ಆದರೆ, ಸಾರ್ವಜನಿಕರಿಗೆ ಮುಕ್ತವಾಗಲು ಇನ್ನೂ ಕಾಲಾವಕಾಶ ಬೇಕು ಎನ್ನುತ್ತಾರೆ ಸ್ಥಳೀಯರು.

ನಿಯಮ ಬಾಹಿರ ಕಾಮಗಾರಿ:ಕೋಟೆ ಸ್ಥಳದಲ್ಲಿ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯಿಂದ ಅನುಮತಿ ಪಡೆಯದೆ ಕಾಮಗಾರಿ ನಡೆಸಲಾಗಿದೆ. ಕೋಟೆ ಪ್ರದೇಶದ ನಿಷೇಧಿತ ಸ್ಥಳದಲ್ಲಿ ನಿಸರ್ಗ ಸಹಜವಾಗಿ ಇದ್ದ ಕಲ್ಲುಗಳನ್ನು ಸ್ಫೋಟಿಸಲಾಗಿದೆ. ರಸ್ತೆ ನಿರ್ಮಾಣದ ಹೆಸರಿನಲ್ಲಿ ಹೈದರಾಬಾದ್ ನಿಜಾಮರ ಕಾಲದ ಕೋಟೆಯ ಕಂದಕವನ್ನು ತ್ಯಾಜ್ಯ ವಸ್ತುಗಳನ್ನು ತುಂಬಿ ಮುಚ್ಚಲಾಗಿದೆ. ಈ ಬಗ್ಗೆ ಧಾರವಾಡದ ಪುರಾತತ್ವ ಸಂರಕ್ಷಣಾ ಇಲಾಖೆ ವತಿಯಿಂದ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಗರದ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.

ಈ ಪ್ರದೇಶದಲ್ಲಿ ನಡೆಸಿರುವ ನಿಯಮ ಬಾಹಿರ ನಿರ್ಮಾಣಗಳು ಹಾಗೂ ಕಂದಕಕ್ಕೆ ಹಾಕಿರುವ ತ್ಯಾಜ್ಯಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಕಳೆದ ಡಿ. 4ರಂದು ಹೈಕೋರ್ಟ್ ಆದೇಶ ನೀಡಿತ್ತು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಗರಸಭೆ, ಜಿಲ್ಲಾಡಳಿತ ಕಾಮಗಾರಿ ಮುಂದುವರಿಸಿದೆ ಎಂದು ನಗರದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ದೂರಿದ್ದಾರೆ.

ಅಕ್ರಮ ಆರೋಪ: ಒಟ್ಟಾರೆ ಕಾಮಗಾರಿಗೆ ರೂ 3 ಕೋಟಿ ನಿಗದಿ ಆಗಿದ್ದರೂ ಅಲ್ಲಿ  ರೂ 1 ಕೋಟಿ ವೆಚ್ಚದ ಕಾಮಗಾರಿಯೂ ಸರಿಯಾಗಿ ನಡೆದಿಲ್ಲ. ರಸ್ತೆ ಅಭಿವೃದ್ಧಿ ಮೂಲಸೌಲಭ್ಯ ಒದಗಿಸುವ ಕಾರ್ಯ ಆಗಿಲ್ಲ. ಉದ್ಯಾನಕ್ಕೆ ಬರುವ ರಸ್ತೆಯ ಅಕ್ಕಪಕ್ಕದ ಕಟ್ಟಡಗಳನ್ನು ಕೆಡವಲಾಗಿದೆ. ಅದರ ಮಾಲೀಕರಿಗೆ ಸರಿಯಾಗಿ ಪರಿಹಾರವೂ ಸಿಕ್ಕಿಲ್ಲ. ಒಂದೇ ರೀತಿ ಕಾಮಗಾರಿಯೂ ಆಗಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಮೋಹನ ಆಚಾರ್ಯ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT