ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಯೋಜನೆ ಕೈಬಿಡಲು ಆಗ್ರಹ

Last Updated 24 ಜನವರಿ 2012, 10:45 IST
ಅಕ್ಷರ ಗಾತ್ರ

ತರೀಕೆರೆ: ಕೇಂದ್ರ ಸರ್ಕಾರ ಹುಲಿಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸದಂತೆ ಮತ್ತು ಉದ್ದೇಶಿತ ಯೋಜನೆಯಿಂದ ಜಿಲ್ಲೆಯನ್ನು ಕೈಡುವಂತೆ ಒತ್ತಾಯಿಸಿ ತಾಲ್ಲೂಕು ಬಿಜೆಪಿ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಇಲ್ಲಿನ ಸಾಲುಮರದಮ್ಮ ದೇವಾಲಯದ ಮುಂಭಾಗದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲ್ಲೂಕಿನ ಲಿಂಗದಹಳ್ಳಿ ಮತ್ತು ಲಕ್ಕವಳ್ಳಿ ಹೋಬಳಿಯ ಸಾವಿರಾರು ರೈತರು ಮತ್ತು ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರ, ಕೇಂದ್ರ ಪರಿಸರ ಸಚಿವ ಜೈರಾಂ ರಮೇಶ್ ವಿರುದ್ಧ ಘೋಷಣೆ ಕೂಗಿದರು.

ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ಡಿ.ಎಸ್.ಸುರೇಶ್, ರಾಜ್ಯ ಸರ್ಕಾರ ಭದ್ರಾ ವನ್ಯಜೀವಿ ವಿಭಾಗ ಮತ್ತು ಕುದುರೆಮುಖ ಅರಣ್ಯದಲ್ಲಿ ಹುಲಿ ಸಂರಕ್ಷಣಾ ಯೋಜನೆಯನ್ನು ಕೈಬಿಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ  ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ತಾಲ್ಲೂಕಿನ ಲಿಂಗದಹಳ್ಳಿ ಮತ್ತು ಲಕ್ಕವಳ್ಳಿ ಹೋಬಳಿಯ ಜನರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದರು.

ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧ ಕಟುವಾಗಿ ಟೀಕಿಸಿದ ಅವರು, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹುಲಿ ಯೋಜನೆಯನ್ನು ಪ್ರಸ್ತಾಪಿಸುತ್ತಿದ್ದು, ಜಿಲ್ಲೆಯ ಮೂಡಿಗೆರೆ, ತರೀಕೆರೆ, ಶೃಂಗೇರಿ ಕ್ಷೇತ್ರಗಳು ಉದ್ದೇಶಿತ ಯೋಜನೆಯ ವ್ಯಾಪ್ತಿಗೆ ಸೇರಿಸುವುದನ್ನು ವಿರೋಧಿಸಲಾಗಿದೆ. ಮೂಡಿಗೆರೆ ಕ್ಷೇತ್ರದವರೇ ಆದ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಈ ಯೋಜನೆಯನ್ನು ಪಕ್ಷಾತೀತವಾಗಿ ವಿರೋಧಿಸಬೇಕಿದ್ದು, ಒಂದು ವೇಳೆ ರಾಜ್ಯ ಸರ್ಕಾರ ಈ ಯೋಜನೆ ತಡೆಯುವಲ್ಲಿ ವಿಫಲವಾದಲ್ಲಿ ಸರ್ಕಾರದ ವಿರುದ್ಧ ನಾನು ರೈತರ ಪರವಾಗಿ ಹೋರಾಡಲು ಸಿದ್ಧಎಂದ ಅವರು, ಕಾಂಗ್ರೆಸ್ ನಾಯಕರು ತಮ್ಮ ಪ್ರಭಾವ ಬಳಸಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಬಿಡುವಂತೆ ನೋಡಿಕೊಳ್ಳಲಿ ಎಂದರು. 

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎನ್.ಮಂಜುನಾಥ್ ಮಾತನಾಡಿ, ಸ್ಥಳೀಯ ಕಾಂಗ್ರೆಸ್ ನಾಯಕರು ಉದ್ದೇಸಿತ ಹುಲಿ ಯೋಜನೆಯನ್ನು ಅನಗತ್ಯವಾಗಿ ಕ್ಷೇತ್ರದ ಜನರಲ್ಲಿ ಪ್ರಸ್ತಾಪಿಸುತ್ತಾ ಜನರ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ ಎಂದರು.

ಮ್ಯಾಮ್ ಕೋಸ್ ನಿರ್ದೇಶಕ ಆರ್.ದೇವಾನಂದ್ ಮಾತನಾಡಿ, ಸಾವಿರಾರು ವರ್ಷದಿಂದ ರೈತರು ಉಳುಮೆ ಮಾಡುತ್ತಿದ್ದ ಜಾಗವನ್ನು ಹುಲಿ ಯೋಜನೆಗೆ ನೀಡಲು ಕೇಂದ್ರ ಸರ್ಕಾರ ಹೊರಟಿದೆ ಎಂದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಂಬೈನೂರು ಆನಂದಪ್ಪ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ಆನಂದಪ್ಪ, ಸದಸ್ಯ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರವಿ, ಸದಸ್ಯ ಧಮೇಂದ್ರ, ಬಿಜೆಪಿ ಅಧ್ಯಕ್ಷ ಶಾಂತರಾಜ್, ವಿಜಯಾನಾಯ್ಕ, ಮುಖಂಡರಾದ ಅರವಿಂದ್, ಗುರು ಮೂರ್ತಿ, ಅರುಣ್, ಸದಾನಂದ, ದುಗ್ಲಾಪುರ ರವಿ, ಲಕ್ಕವಳ್ಳಿ ರಮೇಶ್, ಮನೋಜ್‌ಕುಮಾರ್ ಮತ್ತು ತಾಲ್ಲೂಕಿನ ಲಿಂಗದಹಳ್ಳಿ ಮತ್ತು ಲಕ್ಕವಳ್ಳಿ ಹೋಬ ಳಿಯ ಸಾವಿರಾರು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT