ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿವೇಷಕ್ಕೆ ಜೀವ ಕಳೆ

Last Updated 16 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಹುಲಿವೇಷ ಮಲೆನಾಡಿನ ಗ್ರಾಮೀಣ ಜಾನಪದ ಕಲೆ. ಇತ್ತೀಚಿನ ವರ್ಷಗಳಲ್ಲಿ ಈ ಹುಲಿವೇಷ  ಕಳೆಗುಂದಿದೆ. ಹುಲಿವೇಷಕ್ಕೆ ಚೈತನ್ಯ ನೀಡುವ ಕೆಲಸವನ್ನು ತೀರ್ಥಹಳ್ಳಿಯ ಮಾರಿಕಾಂಬ ಗೆಳೆಯರ ಬಳಗ ಮಾಡುತ್ತಿದೆ.
 
ಕಳೆದ ವಿಜಯದಶಮಿಯಂದು ತೀರ್ಥಹಳ್ಳಿಯ ಗೋಪಾಲಗೌಡ ರಂಗ ಮಂದಿರದಲ್ಲಿ ನೋಟಸ್ ಫಾರ್ಮಾಸ್ಯುಟಿಕಲ್ಸ್ ಸಹಯೋಗದಲ್ಲಿ  ಹುಲಿವೇಷದ ಸ್ಪರ್ಧೆ ನಡೆಯಿತು.

ಹುಲಿವೇಷದ ಸ್ಪರ್ಧೆ ನಡೆಸುವುದರ ಹಿಂದೆ ಒಂದು ಸದುದ್ದೇಶವಿದೆ. ಸ್ಪರ್ಧೆಯ ಮೂಲಕ ಕಲಾವಿದರನ್ನು ಗುರುತಿಸಿ ಈ ಕಲೆಯನ್ನು ಉಳಿಸುವುದೇ ಆಗಿದೆ. ಸ್ಪರ್ಧೆಯನ್ನು ನೂರಾರು ಜನರು ವೀಕ್ಷಿಸಿದರು. ಮಕ್ಕಳಿಗೆ ಈ ಕಲೆ ಅಪಾರ ಕುತೂಹಲ ಮೂಡಿಸಿತು.

`ಡಂಕಣಕ ಡಂಕಣಕ~ ಎಂಬ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಹುಲಿವೇಷಧಾರಿಗಳು ಇಡೀ ರಂಗಮಂದಿರವನ್ನು ಆವರಿಸಿಕೊಂಡು ಕುಣಿದರು. ಜನರೂ ಮೈಮರೆತು ಕುಣಿಯುವಂತೆ ಮಾಡಿದರು. ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆಗಳು ರಂಗಮಂದಿರದ ತುಂಬಾ ಪ್ರತಿಧ್ವನಿಸಿತು. ನೆರೆದಿದ್ದ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಮಲೆನಾಡಿನಲ್ಲಿ ಸೆಪ್ಟೆಂಬರ್ ಕೊನೆಯ ವಾರದ ಹೊತ್ತಿಗೆ ಮುಂಗಾರು ಮಳೆ ಕಡಿಮೆಯಾಗುತ್ತ ಬಿಸಿಲು ಮೂಡುತ್ತದೆ. ಮೂರು ತಿಂಗಳು ಬೇಸಾಯದ ಕೆಲಸಗಳಲ್ಲಿ ಮೈಮರೆತ ಗ್ರಾಮೀಣ ಜನರ ಮನಸ್ಸು ಮನರಂಜನೆ ಬಯಸುತ್ತದೆ. ಹಾಗೇ ದಸರಾ ಹಬ್ಬದ ಸಿದ್ಧತೆಗಳು ಆರಂಭವಾಗುತ್ತವೆ.
 
ವಿಜಯದಶಮಿಯಂದು ಬನ್ನಿ ಮುಡಿಯುವ ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸುತ್ತಮುತ್ತಲ ಗ್ರಾಮಗಳ ಜನರು ತೀರ್ಥಹಳ್ಳಿಗೆ ಬರುತ್ತಾರೆ. ವಿಜಯದಶಮಿ ಮೆರವಣಿಗೆಯಲ್ಲಿ ಜನಪದ ಕಲಾತಂಡಗಳು ಭಾಗವಹಿಸುತ್ತವೆ. ಮೆರವಣಿಗೆ ಕಳೆ ಕಟ್ಟುವುದು ಹುಲಿವೇಷದ ಕಲಾವಿದರಿಂದ.

ದಸರಾದಲ್ಲಿ ಪೂಜಿಸಲ್ಪಡುವ ದೇವಿಯ ವಾಹನ ಹುಲಿಯಾದ್ದರಿಂದ ಬಹುಶಃ ವಿಜಯದಶಮಿಯಂದು ಹುಲಿವೇಷ ಕುಣಿತ ಆಚರಣೆಗೆ ಬಂದಿರಬಹುದು. ಹುಲಿವೇಷದ ಕುಣಿತಕ್ಕೆ ಮೆರಗು ಬರುವುದು ತಮಟೆ ವಾದನದಿಂದ. ತಮಟೆಯ (ಡಂಕಣಕ, ಡಂಕಣಕ) ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಕುಣಿತ ಆರಂಭವಾದಂತೆ ನೋಡುಗರಲ್ಲಿಯೂ ಕುಣಿಯುವ ಉಮೇದು ಬೆಳೆಯುತ್ತದೆ.
 
ಸ್ಥಳೀಯ ಕಲಾವಿದ ವಿಠಣ್ಣ ಅವರ ತಮಟೆ ಬಡಿತದ ತಾಳಕ್ಕೆ ಹೆಜ್ಜೆ ಹಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹುಲಿವೇಷದ ಕುಣಿತದ ಜತೆಗೆ ಇತ್ತೀಚೆಗೆ ಡಿಸ್ಕೋ ಮಾದರಿಯ ಕುಣಿತವೂ ಸೇರಿಕೊಂಡಿದೆ. ಉದ್ದನೆ ಬಾಲದ ಹುಲಿ ವೇಷಧಾರಿಯನ್ನು ಝೆಂಡಾ  ಎಂದು ಗುರುತಿಸುತ್ತಾರೆ.
 
ಈ ವೇಷಧಾರಿ ತನ್ನ ಉದ್ದನೆಯ ಬಾಲದೊಂದಿಗೆ ಹಲವಾರು ಕಸರತ್ತಿನ ನೃತ್ಯ ಪ್ರದರ್ಶಿಸುತ್ತಾನೆ. ಹುಲಿಯನ್ನು ಕೋವಿ ಹಿಡಿದ ಬೇಟೆಗಾರ ಹಿಂಬಾಲಿಸುವುದು, ಹುಲಿ ಮತ್ತು  ಬೇಟೆಗಾರನ ನಡುವಣ  ಕಾಳಗ, ಎರಡು ಹುಲಿಗಳ ನಡುವಿನ ಕದನ ಆಕರ್ಷಣೀಯ. ವೇಷಧಾರಿಯ ಕುಣಿತದ  ಗತ್ತು, ಗಾಂಭೀರ್ಯ, ಹಾವ ಭಾವಗಳು ಜನರನ್ನು ಮೋಡಿ ಮಾಡುತ್ತವೆ.

ನಗರೀಕರಣದಿಂದಾಗಿ ಬಯಲಾಟ, ದೊಡ್ಡಾಟ ಅಂಟಿಕೆ ಪಿಂಟಿಕೆ, ಸುಗ್ಗಿಕುಣಿತ, ದಾಸರ ಪದಗಳಂತಹ ಎಷ್ಟೋ ಗ್ರಾಮೀಣ ಕಲೆ ಹಾಗೂ ಪ್ರತಿಭೆಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತಿವೆ. ಈ ಕಲೆಯನ್ನು ಉಳಿಸುವ ಪ್ರಯತ್ನ ಮೆಚ್ಚುವಂಥದ್ದು.
ಮಾರಿಕಾಂಬ ಗೆಳೆಯರ ಬಳಗ 30 ವರ್ಷಗಳಿಂದ ತೀರ್ಥಹಳ್ಳಿಯಲ್ಲಿ ಕ್ರಿಯಾಶೀಲವಾಗಿದೆ.

ಬಳಗ ಸದಸ್ಯರು  ಕಬಡ್ಡಿ,ಖೋಖೋ ಮತ್ತಿತರ ಗ್ರಾಮೀಣ ಆಟಗಳನ್ನು ಪ್ರೋತ್ಸಾಹಿಸಲು ಹೊನಲು ಬೆಳಕಿನ ಪಂದ್ಯಾವಳಿಗಳನ್ನು ನಡೆಸಿಕೊಂಡು ಬರುತ್ತಿದೆ.ಈಗ ಹುಲಿವೇಷದ ಪೋಷಣೆಗೆ ಮುಂದಾಗಿದೆ. ಹುಲಿ ವೇಷದ ಬಣ್ಣ ಹಾಕಲು ಕಲಾವಿದರಿಗೆ ಹಣದ ಕೊರತೆ ಇತ್ತು ಇದನ್ನು ಗಮನಿಸಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
 
ಪ್ರತಿ ಹುಲಿ ವೇಷಧಾರಿಗೆ 750ರೂ ಬಣ್ಣದ ಖರ್ಚಿಗೆ ನೀಡಲಾಯಿತು. ಕಳೆದ ನಾಲ್ಕ ವರ್ಷಗಳಿಂದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳೀಯ ಮುಖಂಡ ಆರ್. ಮದನ್ ಅವರ ನೇತೃತ್ವದಲ್ಲಿ ಸ್ಪರ್ಧೆಗಳು ನಡೆದವು.

ವಿಜೇತರಿಗೆ ಅನುಕ್ರಮವಾಗಿ 3000, 2000 ಹಾಗೂ 1000 ರೂಗಳ ಪ್ರೋತ್ಸಾಹ ಧನ ನೀಡಲಾಯಿತು. ಕೋವಿ ಹಿಡಿದ ವೇಷಧಾರಿಗೆ ಮತ್ತು ಅತ್ಯುತ್ತಮ ತಮಟೆ ಕಲಾವಿದರಿಗೆ ಬಹುಮಾನ ನೀಡಲಾಯಿತು.

ಬಳಗದ ಪ್ರಯತ್ನದಿಂದಾಗಿ ಈ ಬಾರಿಯ ಮೈಸೂರು ದಸರಾದಲ್ಲಿ ತೀರ್ಥಹಳ್ಳಿಯ ನಾಲ್ವರು ಹುಲಿವೇಷಧಾರಿಗಳ  ತಂಡ ಹಾಗೂ ಶಿವಮೊಗ್ಗ ದಸರಾದಲ್ಲಿ ರಾಮ ಲಕ್ಷ್ಮಣರೆಂಬ ಸೋದರರು ಭಾಗವಹಿಸಿದ್ದರು.

ಹೆಚ್ಚಿನ ಸಂಖ್ಯೆಯ ವೇಷಧಾರಿಗಳು ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬುದು ಗೆಳೆಯರ ಬಳಗದ ಅಧ್ಯಕ್ಷ ಮಂಜುನಾಥ್ ರವರ ಅಭಿಲಾಷೆ. ಮರೆಯಾಗುತ್ತಿರುವ ಜಾನಪದ ಕಲೆಯೊಂದರ ಪುನಶ್ಚೇತನಕ್ಕೆ ಸಂಸ್ಥೆ ಪ್ರಯತ್ನಿಸುತ್ತಿರುವ ನಿಜಕ್ಕೂ ಸ್ವಾಗತಾರ್ಹ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT