ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ–ನರಭಕ್ಷಕವೇ?

ಅಕ್ಷರ ಗಾತ್ರ

ನ್ಯಜೀವಿ ಮತ್ತು ಮಾನವರ ಮಧ್ಯೆ ಸಂಘರ್ಷ ನಡೆಯುವುದು  ಹೊಸದಲ್ಲ. ಆದರೆ ಈ ಘಟನೆಗಳು ವರದಿಯಾದ ಕೆಲ ಸಮಯದ ಬಳಿಕ ಸಂಬಂಧಪಟ್ಟ ಎಲ್ಲರೂ ಎಲ್ಲವನ್ನೂ ಮರೆಯುತ್ತಾರೆ, ಇನ್ನೊಂದು ಆ ಮಾದರಿಯ ಘಟನೆಗಳು ನಡೆಯುವವರೆಗೆ. ಬಂಡೀಪುರ ಮತ್ತು ನಾಗರಹೊಳೆಯ ಅರಣ್ಯ ವ್ಯಾಪ್ತಿಯಲ್ಲಿ ಹುಲಿಗಳು ಮನುಷ್ಯರನ್ನೇ ಗುರಿ ಯಾಗಿಸಿ ನಡೆಸಿದ ದಾಳಿಗಳು ಸಹಜವಾಗಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ.

ಹುಲಿಗಳ ಸಂರಕ್ಷಣಾ ಯೋಜನೆ ಕರ್ನಾಟಕ ದಲ್ಲಿ ಅತ್ಯಂತ ಯಶಸ್ವಿಯಾಗಿದೆ. 2010ರ ಹುಲಿಗಣತಿಯ ಪ್ರಕಾರ ರಾಜ್ಯದಲ್ಲಿ 300 ಹುಲಿಗಳಿವೆ. ಅದರಲ್ಲೂ ಬಂಡೀಪುರ – ನಾಗರ ಹೊಳೆ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾ ಗಿದೆ. ಪ್ರತೀ ನೂರು ಚದರ ಕಿ.ಮೀ. ಪ್ರದೇಶದಲ್ಲಿ ಹತ್ತರಿಂದ ಹದಿನೈದು ಹುಲಿಗಳಿವೆ.

ವೈಲ್‌್ಡ ಲೈಫ್‌ ಕನ್ಸರ್‌ವೇಷನ್‌ ಸೊಸೈಟಿ  ನಿರ್ದೇಶಕ ಉಲ್ಲಾಸ್ ಕಾರಂತರು ಹೇಳಿರುವಂತೆ ಈ ಪ್ರದೇಶಗಳಲ್ಲಿ ಹುಲಿಗಳ ಸಾಂದ್ರತೆ ಈಗಾಗಲೇ ಸಂತೃಪ್ತ ಮಟ್ಟವನ್ನು ಮುಟ್ಟಿದೆ. ಹೆಚ್ಚಾದ ಹುಲಿಗಳ ಸಂಖ್ಯೆ ಎಂದರೆ ನೆಲೆಗಳಿಗಾಗಿ ಹೋರಾಟ ಎಂದೇ ಅರ್ಥ. ರಾಷ್ಟ್ರೀಯ ಉದ್ಯಾನವನಗಳಲ್ಲಿ ಕಳ್ಳ ಬೇಟೆ ನಿಯಂತ್ರಣಕ್ಕೆ ಬಂದು, ಬಲಿ ಪ್ರಾಣಿಗಳ ಸಂಖ್ಯೆಯ ಸಮೃದ್ಧಿ ಯಿಂದಾಗಿ ಸಸ್ಯಾಹಾರಿ ಪ್ರಾಣಿಗಳಾದ ಚಿರತೆ, ಕಾಟಿ, ಕಡವೆಗಳ ಸಂಖ್ಯೆಯಲ್ಲಿ ಹೆಚ್ಚಳವಾದುದು ಹುಲಿಗಳ ಸಂಖ್ಯೆಯ ವೃದ್ಧಿಗೂ ಕಾರಣ ವಾಗುತ್ತದೆ. ಆದರೆ ಹುಲಿಗಳಿಗೆ ಅವಶ್ಯಕವಿರುವ ‘ಆವಾಸ’ವನ್ನು ಹೆಚ್ಚಿಸಲು ಸಾಧ್ಯವಿಲ್ಲವಲ್ಲ?

ಹೆಣ್ಣು ಹುಲಿಯೊಂದಕ್ಕೆ ತನ್ನದೇ ಆದ ‘ವಾಸ ಕ್ಷೇತ್ರ’ ಬೇಕು. ಹುಲಿಗಳ ಸಾಂದ್ರತೆ ಹೆಚ್ಚಾಗಿರುವ ಪ್ರದೇಶದಲ್ಲಿ ಪ್ರತಿ ಹೆಣ್ಣು ಹುಲಿಯ ವಾಸ ಕ್ಷೇತ್ರ 30 ರಿಂದ 50 ಚದರ ಕಿ.ಮೀ ಇರುತ್ತದೆ. ಹಾಗೆಯೇ ಹುಲಿಗಳ ಸಂಖ್ಯೆ ವಿರಳವಾಗಿದ್ದಲ್ಲಿ ಪ್ರತಿ ಹೆಣ್ಣು ಹುಲಿಯ ವಾಸಕ್ಷೇತ್ರ 200 ರಿಂದ 500 ಚದರ ಕಿ.ಮೀ. ಇರುತ್ತದೆ. ನಾವು ಈಗಾಗಲೇ ನೋಡಿದಂತೆ ನಾಗರಹೊಳೆ – ಬಂಡೀಪುರ ಪ್ರದೇಶದಲ್ಲಿ ಪ್ರತಿ ನೂರು ಚದರ ಕಿ.ಮೀ.ಗಳಿಗೆ ಹತ್ತರಿಂದ ಹದಿನೈದು ಹುಲಿಗಳಿವೆ.

ಅಂದಾಗ ಆವಾಸಕ್ಕಾಗಿ ಹೊಡೆದಾಟ ಖಚಿತ. ಈ ರೀತಿಯ ಆವಾಸದ ಹೊಡೆದಾಟದಲ್ಲಿ ದುರ್ಬಲ ಮತ್ತು ವಯಸ್ಸಾದ ಹುಲಿಗಳು ಕಾಡಿನ ಗರ್ಭ ದಿಂದ ಕಾಡಿನ ಅಂಚಿನತ್ತ ತಳ್ಳಲ್ಪಡುವುದು ಸಾಮಾನ್ಯ. ಒಮ್ಮೊಮ್ಮೆ ಕಿರಿಯ ಹುಲಿಗಳೂ ಹೊಸ ನೆಲೆಗಳನ್ನು ಅರಸುತ್ತಾ ಕಾಡಿನ ಅಂಚಿಗೆ ಬರುತ್ತವೆ. ಈ ರೀತಿ ಹುಲಿಗಳು ಅಂಚಿಗೆ ಬಂದಾಗ ಉಂಟಾಗುವ ಹುಲಿ–ಮಾನವ ಸಂಘರ್ಷ ಒಂಟಿಯಾಗಿದ್ದ ಮನುಷ್ಯನ ಸಾವಿನಲ್ಲಿ ಅಂತ್ಯವಾಗಬಹುದು.

ಬಂಡೀಪುರ ಮತ್ತು ನಾಗರಹೊಳೆಯ ಎರಡೂ ಸಂದರ್ಭಗಳಲ್ಲಿ ಹುಲಿ ನರಭಕ್ಷಕ ಆಗಿದೆ. ಬಂಡೀಪುರದ ಸಾವಿನಲ್ಲಿ ಹುಲಿ ಮನುಷ್ಯ ದೇಹವನ್ನು ತಿಂದಿಲ್ಲವಾದರೂ ಎರಡನೇ ಬಲಿ ಯನ್ನು ಸುಮಾರು ನೂರು ಮೀಟರಿನಲ್ಲಿ ಕಾಡಿನೊಳಕ್ಕೆ ಎಳೆದೊಯ್ದಿದೆ ಎನ್ನುವುದು ಅದು ನರಭಕ್ಷಕ ಎನ್ನುವುದನ್ನು ಸೂಚಿಸುತ್ತದೆ ಅಥವಾ ಅಷ್ಟರಲ್ಲಿ ಜನರ ಗುಂಪು ಅದನ್ನು ಓಡಿಸಿದ್ದರಿಂದ ಅದು ಬಿಟ್ಟು ಓಡಿ ಹೋಗಿದೆ ಎಂಬುದು ಪಿ.ಸಿ.ಸಿ.ಎಫ್‌. ಪ್ರಭು ಅವರ ಹೇಳಿಕೆಯಾಗಿದೆ. ಮನುಷ್ಯ ದೇಹದ ರುಚಿ ನೋಡಿದ ಹುಲಿ ಮತ್ತೆ ಮತ್ತೆ ಮಾನವ ಬೇಟೆಯಾಡುತ್ತದೆ ಎನ್ನುವ ವದಂತಿಗಳು ಹಬ್ಬಿ ಆ ಪ್ರದೇಶದ ಜನರಲ್ಲಿ ಭೀತಿ ಯನ್ನುಂಟು ಮಾಡಿರುವುದು ಸಹಜವಾಗಿದೆ.

ಹುಲಿ ಯಾವಾಗ ನರಭಕ್ಷಕವಾಗುತ್ತದೆ?: ಅಧ್ಯ ಯನಗಳ ಪ್ರಕಾರ ಹುಲಿ ಸರಾಸರಿ ವಾರ ಕ್ಕೊಮ್ಮೆ ಒಂದು ಬಲಿ ಪ್ರಾಣಿಯನ್ನು ಕೊಲ್ಲುತ್ತದೆ. ಎಂದರೆ ವರ್ಷಕ್ಕೆ ಐವತ್ತು ಪ್ರಾಣಿಗಳು, ಹುಲಿ ಯೊಂದಕ್ಕೆ ಆಹಾರವಾಗಿಬೇಕು. ಮರಿಗಳು ಇರುವ ತಾಯಿ ಹುಲಿ ತನ್ನೊಂದಿಗೆ ಮರಿಗಳನ್ನು ಪೋಷಿಸಬೇಕಾಗಿರುವುದರಿಂದ ಅದಕ್ಕೆ ವರ್ಷ ವೊಂದಕ್ಕೆ 70 ಬಲಿ ಪ್ರಾಣಿಗಳ ಅಗತ್ಯವಿದೆ. ಹುಲಿಗಳ ವಾರ್ಷಿಕ ಆಹಾರದ ಅಗತ್ಯವನ್ನು ಸರಿ ಯಾಗಿ ಪೂರೈಸಲು ಕನಿಷ್ಠಪಕ್ಷ 500 ಗೊರಸು ಪ್ರಾಣಿಗಳಾದರೂ ಇರಬೇಕು.

ಪ್ರತಿ ಹೆಣ್ಣು ಹುಲಿ ತನ್ನದೇ ಆವಾಸ ವಲಯವನ್ನು ಸ್ಥಾಪಿಸಿಕೊಂಡು ಅದನ್ನು ಇತರ ಹೆಣ್ಣು ಹುಲಿಗಳು ಅತಿಕ್ರಮಿ ಸದಂತೆ ರಕ್ಷಿಸಿಕೊಳ್ಳುತ್ತದೆ. ಅದರೊಂದಿಗಿರುವ ಎಳೆಯ ಹುಲಿಗಳು ಎರಡು ವರ್ಷ ಪ್ರಾಯಕ್ಕೆ ತಲುಪುತ್ತಿದ್ದಂತೆಯೇ ತಮ್ಮ ತಾಯಂದಿರಿಂದ ಹೊರದೂಡಲ್ಪಟ್ಟು ತಮ್ಮದೇ ಆದ ಪ್ರತ್ಯೇಕ ವಲಯಗಳನ್ನು ಸ್ಥಾಪಿಸಿಕೊಳ್ಳಲು ಹೋರಾಡುತ್ತವೆ.

ಈ ರೀತಿಯ ಹೋರಾಟದಲ್ಲಿಯೇ ವಯ ಸ್ಸಾದ ಇಲ್ಲವೇ ದುರ್ಬಲವಾದ ಹುಲಿಗಳು ಕಾಡಿ ನಂಚಿಗೆ ದೂಡಲ್ಪಡುತ್ತವೆ. ‘ವೈಲ್ಡ್ ಲೈಫ್‌ ಕನ್ಸರ್ ವೇಷನ್‌ ಸೊಸೈಟಿಯ ಅಧ್ಯಯನದ ಪ್ರಕಾರ 2006 ರಿಂದ ಇಲ್ಲಿಯವರೆಗೆ ಹತ್ತು ಜನರ ಮೇಲೆ ಹುಲಿಯ ದಾಳಿ ನಡೆದಿದೆ. ಮನುಷ್ಯ ಹುಲಿಯ ಆಹಾರವೇ? ಎನ್ನುವುದಕ್ಕೆ ಇತಿಹಾಸವನ್ನು ಗಮನಿಸಬೇಕಾಗುತ್ತದೆ. ಇತಿ ಹಾಸಪೂರ್ವ ಯುಗದಲ್ಲಿ ಪ್ರಾಣಿಗಳಂತೆ ಮಾನವನು ಅಲೆಮಾರಿಯಾಗಿದ್ದ ಕಾಲದಲ್ಲಿ ಎಲ್ಲ ಜೀವಿಗಳಂತೆ ಮನುಷ್ಯನೂ ಹುಲಿಯ ಆಹಾರದ ಪಟ್ಟಿಯಲ್ಲಿದ್ದ.

ಆದರೆ ಒಮ್ಮೆ ಅವನು ನೆಲೆ ನಿಂತು ಬೆಂಕಿ, ಆಯುಧಗಳನ್ನು ಬಳಸಲು ಪ್ರಾರಂಭಿಸಿದ ಮೇಲೆ ಹುಲಿ ಮನುಷ್ಯನಿಂದ ದೂರ ಸರಿಯಿತು. ಸಾಮಾನ್ಯವಾಗಿ ಮುಸ್ಸಂಜೆ ಯಿಂದ ಬೆಳಗಿನ ಜಾವದವರೆಗೆ ಬೇಟೆಯನ್ನು ಅರಸುತ್ತಾ ಕಾಡಿನಲ್ಲಿ ಓಡಾಡುವ ಹುಲಿ ಮಾನವನಿಂದ ದೂರ ಉಳಿಯುತ್ತದೆ. ಹಾಗೆಂದೇ ಕಾಡಿನಲ್ಲಿ ನಮಗೆ ಕಾಣದಿದ್ದರೂ ಹುಲಿ ನಮ್ಮನ್ನು ನೋಡಿ ದೂರ ಸರಿದು ಹೋಗಿ ರುವ ಸಾಧ್ಯತೆಗಳುಂಟು. ಆದರೆ ಆಕಸ್ಮಿಕವಾಗಿ ಎದುರಾದಾಗ ತನ್ನ ರಕ್ಷಣೆಗಾಗಿ, ಮರಿಗಳೊಂದಿ ಗಿರುವ ಹುಲಿ ಮರಿಗಳ ರಕ್ಷಣೆಗಾಗಿ ಮನುಷ್ಯನ ಮೇಲೆ ಆಕ್ರಮಣ ಮಾಡಿ ಅವನನ್ನು ಕೊಂದಿರ ಬಹುದಾದರೂ ಅದೊಂದು ಸ್ವಭಾವತಃ ‘ನರಭಕ್ಷಕ’ ಎನಿಸಿಕೊಳ್ಳುವುದಿಲ್ಲ.

ಪ್ರಕೃತಿವಾದಿ ಜಿಮ್‌ ಕಾರ್ಬೆಟ್‌ 1907 ರಿಂದ 1911ರ ಅವಧಿಯಲ್ಲಿ ಕುಮಾವ ಪ್ರದೇಶ ದಲ್ಲಿ 236 ಜನರನ್ನು ಕೊಂದ ದಾಖಲೆಯನ್ನು ಹೊಂದಿದ್ದ ಹೆಣ್ಣು ಹುಲಿಯನ್ನು ಬೇಟೆಯಾಡು ತ್ತಾನೆ. ಸುಂದರ ಬನದ ಮ್ಯಾಂಗ್ರೋವ್ ಕಾಡುಗ ಳಲ್ಲಿ ಹುಲಿಗಳು ಮನುಷ್ಯರನ್ನು ಕೊಂದ ಉದಾಹರಣೆಗಳಿವೆ. ಹಲ್ಲು ಮುರಿದು ಹೋದ, ದುರ್ಬಲ ದೇಹದ ವಯಸ್ಸಾದ ಅಥವಾ ಪಂಜದ ಉಗುರುಗಳನ್ನು ಕಳೆದುಕೊಂಡ ಹುಲಿ ಮನುಷ್ಯನ ಮೇಲೆ ಆಕಸ್ಮಿಕವಾಗಿ ಆಕ್ರಮಣ ಮಾಡಿದಾಗ ಅವನು ತನಗೆ ಸುಲಭವಾಗಿ ಬಲಿ ಯಾಗಬಲ್ಲ ಎನ್ನುವುದನ್ನು ಕಂಡುಕೊಂಡರೆ ಮಾನವ ಬೇಟೆಯನ್ನು ಮುಂದುವರಿಸಿ ‘ನರ ಭಕ್ಷಕ’ನಾಗಿ ಪರಿವರ್ತಿತವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಬಂಡೀಪುರ ಪ್ರದೇಶ ಮತ್ತು ನಾಗರ ಹೊಳೆಯ ಹುಲಿಗಳು ಬೇರೆ ಬೇರೆಯಾಗಿರುವ ಸಾಧ್ಯತೆಗಳು ಹೆಚ್ಚು.

ಸರಗೂರು ಸಮೀಪದಲ್ಲಿ ಕಂಡು ಬಂದ ಹುಲಿ ಯನ್ನು ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಒಟ್ಟಿನಲ್ಲಿ ಹುಲಿ ಒಮ್ಮೆ ಮನುಷ್ಯನ ಮೇಲೆ ಆಕ್ರಮಣ ಮಾಡಿದೆ ಎಂದಾದರೆ, ನಿರಾಯುಧ ಒಂಟಿ ಮನುಷ್ಯ, ಸುಲಭವಾದ ಬಲಿ ಎಂಬರಿವು ಅದಕ್ಕೆ ಬರುತ್ತದೆ. ಅದಕ್ಕಾಗಿಯೇ ಅದನ್ನು ಹಿಡಿಯುವ ಪ್ರಯತ್ನ ನಡೆಯುತ್ತದೆ. ಈ ಮಾನವ– ವನ್ಯ ಜೀವಿ ಸಂಘರ್ಷದ ಮೂಲ ಹಿನ್ನೆಲೆ ಮಾನವನ ಅಭಿವೃದ್ಧಿ ಪರ ಚಟುವಟಿಕೆಗಳೇ ಆದರೂ ಕೂಡಾ, ಇದೆರಡರ ನಡುವಿನ ಆಯ್ಕೆಯ ಪ್ರಶ್ನೆ ಬಂದಾಗ ‘ಹುಲಿ’ ಸೋಲಬೇಕಾಗುತ್ತದೆ.

ಅದು ಸಹಜವೂ ಹೌದು. ಇಂತಹ ಸನ್ನಿವೇಶದಲ್ಲಿ ಉತ್ತಮ ಸಂರಕ್ಷಣೆಯ ಪ್ರಯತ್ನಗಳನ್ನು ಶ್ಲಾಘಿಸಬೇಕೋ? ಅಥವಾ ಕ್ಷೀಣಿ ಸುತ್ತಿರುವ ಮನವ ಚಟುವಟಿಕೆ ರಹಿತ ಪ್ರದೇಶ ಗಳನ್ನು ದೂಷಿಸಬೇಕೋ? ಎಂಬ ದ್ವಂದ್ವ ಎದುರಾ ಗುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.
–ಸುಮಂಗಲಾ ಎಸ್‌. ಮುಮ್ಮಿಗಟ್ಟಿ,  ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT