ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿನಿಂಬೆ (ಚಿತ್ರ: ದರುವು - ತೆಲುಗು)

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಯಮ ಧರ್ಮರಾಯನಿಗೂ ಚಿತ್ರರಂಗಕ್ಕೂ ಅದೇನು ನಂಟೋ? ತೆಲುಗಿನಲ್ಲಂತೂ `ನರಕ~ ಪ್ರವೇಶಿಸುವ ನಾಯಕರ ದೊಡ್ಡ ದಂಡೇ ಇದೆ. ದೇಶದ ತುರ್ತುಪರಿಸ್ಥಿತಿಯನ್ನು ಅಣಕಿಸಲು ಎನ್‌ಟಿಆರ್ `ಯಮಗೋಲ~ವನ್ನು ಬಳಸಿಕೊಂಡಿದ್ದರು. ಚಿರಂಜೀವಿ, ಜ್ಯೂನಿಯರ್ ಎನ್‌ಟಿಆರ್ ಕೂಡ `ಯಮ ದರ್ಶನ~ ಪಡೆದವರೇ.
 
ಹಾಸ್ಯದ ಹೊನಲು ಹರಿಸಲು, ಪುರಾಣದ ಮಾಯಾಲೋಕವನ್ನು ಬಿಂಬಿಸಲು ಯಮಪುರಿಗಿಂತಲೂ ಸೂಕ್ತ ತಾಣ ಇನ್ನೆಲ್ಲಿದೆ? `ದರುವು~ ನಾಯಕ ಕೂಡ ಅದೇ ಪರಂಪರೆಯನ್ನು ಮುಂದುವರಿಸಿದ್ದಾನೆ. 

ಸೀನಿಯರ್ ಯಮ, ಜ್ಯೂನಿಯರ್ ಯಮನಿಗೆ ಅಧಿಕಾರ ವಹಿಸಿ ರಂಬೆ ಊರ್ವಶಿಯರ ಜತೆ ಸ್ವರ್ಗಕ್ಕೆ ತೆರಳುತ್ತಾನೆ. ಆದರೆ ಚಿತ್ರಗುಪ್ತನಿಗೆ ಮಾತ್ರ ಈ ಯೋಗವಿಲ್ಲ. ಹೀಗಾಗಿ ಜೂ.ಯಮನ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಾನೆ. ಅದಕ್ಕೆ ಅವನು ಬಳಸಿಕೊಳ್ಳುವುದು ಚೆನ್ನೈ ನಿವಾಸಿ ಬುಲೆಟ್ ರಾಜನನ್ನು. ಸದಾ ಜೈಲುವಾಸಿಯಾದ ಆತ ಆಗಾಗ ಹೊರ ಜಗತ್ತಿಗೆ ಬಂದು ವಿಹರಿಸುವುದುಂಟು.

ಒಡವೆ ಕದಿಯಲು ನಿಶ್ಚಿತಾರ್ಥ ಸ್ಥಳಕ್ಕೆ ಬರುವ ಈತನ ಹೃದಯವೇ ಕಳುವಾಗುತ್ತದೆ! ಮದುವೆಗೆ ಅಣಿಯಾಗುತ್ತಿರುವ ಶ್ವೇತಾಳಿಗೆ ಮನ ಸೋತಿರುತ್ತದೆ. ಆದರೆ ಶ್ವೇತಾಳ ಭಾವಿಪತಿ ಇದಕ್ಕೆ ಅಡ್ಡಿ ಪಡಿಸುತ್ತಾನೆ. ಹೊಡೆದಾಟದಲ್ಲಿ ಚಿತ್ರಗುಪ್ತನ ಆಟವೇ ಮೇಲಾಗುತ್ತದೆ. ಆಯಸ್ಸು ಮುಗಿಯದ ಬುಲೆಟ್ ರಾಜ ಯಮಲೋಕ ಪ್ರವೇಶಿಸುತ್ತಾನೆ. ಅದು ಹೇಗೋ ಯಮಲೋಕದ ಪ್ರಮಾದ ರಾಜನ ಅರಿವಿಗೆ ಬರುತ್ತದೆ. ಮುಂದಿನದು ಆತನ ಭೂಲೋಕ ಪ್ರವೇಶ. ರಾಜಕಾರಣಿಯೊಬ್ಬನ ದೇಹದೊಳಗೆ ನೆಲೆಯೂರಿ ಭ್ರಷ್ಟರ ವಿರುದ್ಧ ಸೆಣೆಸುತ್ತಾನೆ.

ರವಿತೇಜ ಅವರ ವಿಶ್ವರೂಪ ದರ್ಶನಕ್ಕಾಗಿಯೇ ಬುಲೆಟ್‌ರಾಜನ ಕತೆ ಹೆಣೆದಂತಿದೆ. ಶಕ್ತಿಯುತ ಸಂಭಾಷಣೆ ಹಾಗೂ ಅವರಿಗೆ ಮಾತ್ರ ಸಾಧ್ಯವಾಗಬಲ್ಲ ಹಾವಭಾವದಿಂದಾಗಿ ಚಿತ್ರಕ್ಕೆ ಅನನ್ಯ ಕಳೆ. ಯಮಲೋಕದಂತೆಯೇ ಭೂಲೋಕವೂ ಇಲ್ಲಿ ವರ್ಣರಂಜಿತ, ವೈಭವಯುತ. ಆ ವೈಭವವನ್ನು ಹೆಚ್ಚಿಸಿರುವುದು ಶ್ವೇತಾ ಪಾತ್ರಧಾರಿ ತಪ್ಸಿ ಅವರ ಮೈಮಾಟ. ಅಳುವ ಕಡೆ ಅಳುವ, ನಗುವ ಕಡೆ ನಗುವ, ಕುಣಿವ ಕಡೆ ಕುಣಿವ ತಪ್ಸಿ ಕೇವಲ ಪ್ರದರ್ಶನದ ಗೊಂಬೆಯಾಗಿ ಉಳಿದಿಲ್ಲ.

ನಾಯಕನ ಅಬ್ಬರದ ಕುಣಿತಕ್ಕೆ ಬೇಕಾದ ಹಾಡುಗಳನ್ನು ವಿಜಯ್ ಆಂಟೋನಿ ಸಂಯೋಜಿಸಿದ್ದಾರೆ, ಆದರೆ ಹಾಗೆ ಮಾಡುವಾಗ ಪ್ರೇಕ್ಷಕರ ಇಷ್ಟ ಕಷ್ಟಗಳನ್ನು ಮರೆತರೇ ಎಂಬ ಅನುಮಾನ ಮೂಡುತ್ತದೆ. ನೋಡಿ ಮರೆಯಬಹುದಾದಂತಹ ಹಾಡುಗಳಿಗಷ್ಟೇ ಅವರ ಕೆಲಸ ಸೀಮಿತ. ಯಮಲೋಕದ ವೈಭವಯುತ ಸೆಟ್‌ಗೆ ಗ್ರಾಫಿಕ್ ಸ್ಪರ್ಶ ದೊರೆತು ಕಿನ್ನರಲೋಕ ಸೃಷ್ಟಿಯಾಗಿದೆ.
 
ನಿರ್ದೇಶಕ ಶಿವ ಚಿತ್ರಕ್ಕೆ ಅಚ್ಚುಕಟ್ಟಾದ ಚೌಕಟ್ಟು ಕಟ್ಟಿದ್ದಾರೆ. ಯಮಪುರಿಯಲ್ಲಿ ಕೆ.ಸತ್ಯನಾರಾಯಣ, ಪ್ರಭು, ಎಂ.ಎಸ್.ನಾರಾಯಣ ಅವರ ಹಾಸ್ಯದ ಹೊನಲಿದೆ. ನೃತ್ಯ ಗುರುವಾಗಿ ಬ್ರಹ್ಮಾನಂದಂ, ಸ್ವಾಮೀಜಿಯಾಗಿ ರಘುಬಾಬು ಭೂಲೋಕದಲ್ಲಿ ನಗಿಸುವ ಹೊಣೆ ಹೊತ್ತವರು. ಸುಶಾಂತ್ ಸಿಂಗ್, ಸಯ್ಯಾಜಿ ಶಿಂಧೆ ಹಾಗೂ ಅವಿನಾಶ್ ಖಳಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದಾರೆ. ರಾಜಕಾರಣಿಯ ತಾಯಿಯಾಗಿ ಜಯಸುಧಾ ಹಾಗೂ ಸ್ನೇಹಿತನಾಗಿ ವೆನ್ನೆಲ ಕಿಶೋರ್ ಕಾಣಿಸಿಕೊಂಡಿದ್ದಾರೆ.

ನಿಂಬೆಹಣ್ಣಿನಿಂದ ನಿಂಬೆರಸವನ್ನು ನಿರೀಕ್ಷಿಸಬಹುದು ದಾಳಿಂಬೆ ರಸವನ್ನಲ್ಲ. ಹೀಗಾಗಿ ರವಿತೇಜರ ಹಿಂದಿನ ಅನೇಕ ಚಿತ್ರಗಳಂತೆ `ದರುವು~ ಕಂಡು ಬಂದರೆ ಅದು ಅವರ ಮಿತಿಯಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT