ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳುಕು ಹಲ್ಲು... ಪರಿಹಾರವೇನು?

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಹಲ್ಲು ದೇಹದ ಒಂದು ಪ್ರಮುಖವಾದ ಅಂಗ. ನಾವು ಸತ್ತ ನಂತರ ದೇಹ ಮಣ್ಣಿನಲ್ಲಿ ಕೊಳೆತಾಗಲೂ ದೀರ್ಘಕಾಲೀನವಾಗಿ ಉಳಿಯುವ ಅಂಗ ಹಲ್ಲು ಮಾತ್ರ . ಅಷ್ಟೊಂದು ಗಟ್ಟಿತನ ಇರುವ ಹಲ್ಲನ್ನು ಕೇವಲ 2-3 ವರ್ಷಗಳ ಅಂತರದೊಳಗೇ ನಿಮ್ಮ ಹಲ್ಲನ್ನು ನಿಮಗೆ ಗೊತ್ತಿಲ್ಲದೇ ಕರಗಿಸಿ ಬಿಡುವ ರೋಗವೇ ಹುಳುಕು.  ಕ್ರಿ.ಪೂದಲ್ಲಿ  ಮತ್ತು ಶಿಲಾಯುಗದ ಮಾನವರ ಹಲ್ಲುಗಳಲ್ಲೂ ಈ ಹುಳುಕು ಇತ್ತೆಂಬುದಕ್ಕೆ ವೈಜ್ಞಾನಿಕ ಪುರಾವೆಯಿದೆ.

ಶತ-ಶತಮಾನಗಳಿಂದಲೂ ಮಾನವನ ಹಲ್ಲುಗಳನ್ನೇ ತಮ್ಮ ನೆಲೆಯಾಗಿ ಮಾಡಿಕೊಂಡ ಈ ಹುಳುಕಿಗೆ ಕಾರಣ ಒಂದು ಸೂಕ್ಷ್ಮ ಕ್ರಿಮಿಯಾದ  ಸ್ಟ್ರೆಪ್ಟೊಕಾಕಸ್ ಮ್ಯೂಟ್ಯಾನ್ಸ್. ಯಃಕಶ್ಚಿತ್ ಸೂಕ್ಷ್ಮಗ್ರಾಹಿ ಕ್ರಿಮಿಯಾದ ಇದು ಒಂದು ಹಲ್ಲನ್ನೇ ಕರಗಿಸುವಷ್ಟು ಶಕ್ತಿಶಾಲಿಯಾಗಿದೆ.

ಸಾಮಾನ್ಯವಾದ ವಾತಾವರಣದಲ್ಲಿ ಬದುಕುವ ಈ ಸೂಕ್ಷ್ಮಾಣು ಮನುಷ್ಯನ ಬಾಯಿ ಮತ್ತು ಜೊಲ್ಲಿನಲ್ಲಿ ಒಂದನೇ ವಯಸ್ಸಿನಿಂದಲೇ ಗೋಚರಿಸಲಾರಂಭಿಸುತ್ತದೆ. ಅಂದರೆ ಹಲ್ಲು ಮೂಡುವ ಸಮಯಕ್ಕೆ ಸರಿಯಾಗಿ ಬಾಯೊಳಗೆ ಪ್ರವೇಶ ಪಡೆಯುತ್ತದೆ. ಸ್ವಚ್ಛ, ಆರೋಗ್ಯಕರ ಬಾಯಲ್ಲಿ ಇದು ಇದ್ದರೂ ನಿಸ್ತೇಜವಾಗಿರುತ್ತದೆ ಮತ್ತು ಕಾರ್ಯಹೀನ ಸ್ಥಿತಿಯಲ್ಲಿರುತ್ತದೆ. ಆದರೆ ಯಾವಾಗಲಾರದರೂ ಬಾಯಿಯಲ್ಲಿ  ಸಿಹಿ, ಅಂಟು, ಸಕ್ಕರೆ ಅಂಶ, ಆಮ್ಲ ಪದಾರ್ಥಗಳ ಅಂಶ, ಹುಳಿ ಇಡುತ್ತೀರೋ ಆಗ ಬಾಯಿಯ ಪಿ.ಎಚ್ ಮಟ್ಟ ಕುಸಿಯುತ್ತದೆ.  ಸಾಮಾನ್ಯವಾಗಿ ಆಮ್ಲ-ಪ್ರತ್ಯಾಮ್ಲದ ಸಮತೋಲನ ಅಂಶವೇ ಪಿ.ಎಚ್. ಇದು  7  ಇರಬೇಕು. 

ಸಾಮಾನ್ಯದಿಂದ (7ಕ್ಕಿಂತ) ಕಡಿಮೆ ಆದರೆ ಬಾಯಿಯ ಆಮ್ಲೀಯ ಗುಣ ಹೆಚ್ಚುತ್ತದೆ. ಇದು ಕಡಿಮೆಯಾದಷ್ಟೂ ಆಮ್ಲೀಯ ಗುಣ ಹೆಚ್ಚುತ್ತದೆ. ರೋಗಾಣು ಜಾಗೃತಿಗೊಳ್ಳುತ್ತದೆ ಮತ್ತು ತನ್ನ ಕಾರ್ಯವಾದ ಹುಳುಕು ಹಿಡಿಯುವುದನ್ನು ಶುರು ಮಾಡುತ್ತದೆ. ಇದು ಹೆಚ್ಚಾಗಿ ಬಳಸುವ ದವಡೆ ಹಲ್ಲುಗಳನ್ನೇ ಹಾಳುಗೆಡವುತ್ತದೆ. ಏಕೆಂದರೆ ದವಡೆ ಹಲ್ಲಿನ ಸುತ್ತಳತೆ ಹೆಚ್ಚು. ಅಂಟು ಪದಾರ್ಥ ಕೂರಲು ಅನುಕೂಲವಾಗಿರುವಂತಹ ವಿಸ್ತೃತ ಜಾಗ.  ಕಾರಣಗಳು ಹಲವಾರಿದ್ದರೂ ಮುಖ್ಯವಾದ ಕಾರಣವೇ ಹಲ್ಲಿನ ಬಗೆಗಿರುವ ನಿರ್ಲಕ್ಷ್ಯ ಮನೋಭಾವ. ಈ ಸಮಸ್ಯೆ ಮಹಿಳೆಯರಿಗೆ ಹೆಚ್ಚಾಗಿ ಕಂಡು ಬರುತ್ತದೆ.

ವಿಶ್ವದಾದ್ಯಂತ ಹಲ್ಲಿಗೆ ಪ್ರಮುಖವಾಗಿ ಕಾಡುವ ಸಮಸ್ಯೆ ಹುಳುಕು ಹಲ್ಲೇ ಆಗಿದೆ ಮತ್ತು ಹಲ್ಲು ತೆಗೆಸಲು ಶೇ 80 ಕಾರಣ ಇದೇ ಆಗಿದೆ.  ಹುಳುಕು ಹಲ್ಲು ಆಗಲು ಕಾರಣ ಹಲವಾರಿದ್ದರೂ ರೋಗ ಬಾರದಂತೆ, ಬಂದರೂ ಹೆಚ್ಚಾಗದಂತೆ ಜಾಗ್ರತೆ ವಹಿಸುವ ಜವಾಬ್ದಾರಿ ನಮ್ಮ ಮೇಲಿರುತ್ತದೆ.  ರೋಗದ ಉಪಶಮನಕ್ಕಿಂತ ಅದನ್ನು ಬಾರದಂತೆ ತಡೆಗಟ್ಟುವುದೇ ಉತ್ತಮ ಮಾರ್ಗ. ಒಂದು ದವಡೆ ಹಲ್ಲು ಹುಳುಕಿನಿಂದ ಹಾಳಾದರೆ ಜಗಿಯುವ ಸಾಮರ್ಥ್ಯ  ಶೇ 50 ಕಡಿಮೆಯಾದಂತೆ. ಆದರೆ ತೊಂದರೆ ಬರುವ ತನಕ ಎಂದಿಗೂ ಕಾಯಬಾರದು. ಹುಳುಕು ಬಾರದಂತೆ ತಡೆಯಲು ಯಾವುದೇ ಔಷಧಗಳು ಲಭ್ಯವಿಲ್ಲ. ಆದ್ದರಿಂದ ಜಾಗ್ರತೆ ವಹಿಸುವುದೊಂದೇ ಮಾರ್ಗ.

ಹಲ್ಲು ಹುಳುಕಾಗದಂತೆ ತಡೆಗಟ್ಟಲು ಏನು ಮಾಡಬೇಕು?

ದಿನಕ್ಕೆರಡು ಬಾರಿ ಸರಿಯಾದ ಕ್ರಮದಲ್ಲಿ ಹಲ್ಲು ಸ್ವಚ್ಛ ಮಾಡಬೇಕು.
ಅಂಟು, ಸಿಹಿ ಪದಾರ್ಥ ಸೇವನೆಗೆ ಕಡಿವಾಣ ಹಾಕಿರಿ.
ಹಲ್ಲಿನ ಆರೋಗ್ಯಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಿರಿ.
ಯಾವುದೇ ಸಕ್ಕರೆ, ಸಿಹಿ ಅಂಶದ ಸೇವನೆ  ನಂತರ ಬಾಯನ್ನು ನೀರಿನಿಂದ ಮುಕ್ಕಳಿಸಬೇಕು.
ಹಲ್ಲು ಹುಳುಕಿನ ಸೂಚನೆ ಕಂಡು ಬಂದರೆ ದಂತವೈದ್ಯರನ್ನು ಕಾಣಿರಿ.
ಹುಳುಕು ಹಲ್ಲುಗಳನ್ನು ಶುರುವಿನಲ್ಲಿಯೇ ಸರಿ ಪಡಿಸಬೇಕು.
ಸಣ್ಣ ಪ್ರಮಾಣದ ಹುಳುಕು ಹಲ್ಲುಗಳಿಗೆ ವೈದ್ಯರಿಂದ ಬೆಳ್ಳಿ, ಸಿಮೆಂಟ್ ಮುಂತಾದವನ್ನು ಚಿಕಿತ್ಸೆಗನುಸಾರವಾಗಿ  ತುಂಬಿಸಬೇಕು.
ಹಲ್ಲುಗಳ ಮೇಲೆ, ನಡುವೆ ಆಹಾರಕಣ ಸಿಕ್ಕಿ ಬೀಳದಂತೆ ಜಾಗ್ರತೆ ವಹಿಸಬೇಕು. ಊಟದ ನಡುವೆ ಸಿಹಿ ಅಂಶ ಸೇವನೆ ಮಾಡದಿರಿ.

ಹಲ್ಲು ಹುಳುಕಾಗಲು ಕಾರಣಗಳು:
ಹಲ್ಲಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಭಾವನೆ ತಾಳಿರುವುದು.
ಹಲ್ಲಿನ ಸ್ವಚ್ಛತೆ ಬಗ್ಗೆ ಗಮನ ನೀಡದಿರುವುದು.
ಅತಿಯಾದ ಸಕ್ಕರೆ ಅಂಶದ ಕಾಫಿ-ಟೀ ಸೇವನೆ.
ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಫ್ಲೋರೈಡ್ ಅಂಶ ಕಡಿಮೆ ಇರುವುದು.
ಸವೆದ, ಮುರಿದ ಹಲ್ಲು, ವಕ್ರಹಲ್ಲು.
ಆಹಾರ ಕಣ ಸಿಕ್ಕಿ ಬೀಳುವ ಜಾಗಗಳು.
ಆಳವಾದ, ಅಗಲವಾದ ಹಲ್ಲಿನ ಜಾಗಗಳು, ಗುಂಡಿಯಾಕಾರದ ಮೇಲ್ಜಾಗ, (ಜಗಿಯುವ ಭಾಗ).
ಅತಿಯಾದ ಅಂಟು ಪದಾರ್ಥ ಸೇವನೆ, ಚಾಕಲೇಟ್, ಐಸ್‌ಕ್ರೀಂನ ಹೆಚ್ಚು ಬಳಕೆ.
ಅತೀ ಸಂವೇದನಾಶೀಲಯುಕ್ತ ಹಲ್ಲುಗಳು.

ಹಲ್ಲು ಹುಳುಕಾಗುವುದರ ಲಕ್ಷಣಗಳು:
ತಣ್ಣೀರು, ಗಾಳಿ, ಸಿಹಿ, ಹುಳಿ ಅಂಶದ ಪದಾರ್ಥಗಳಿಗೆ ಹಲ್ಲುಗಳು  ಜುಂ  ಎನ್ನುವುದು.
ಆಹಾರ ಸಿಕ್ಕಿ ಬೀಳುವುದು, ಕಚ್ಚುವಾಗ ನೋವು, ಸಂವೇದನೆ.

ಹೀಗೆ ಪರೀಕ್ಷಿಸಿ ಕೊಳ್ಳಿ:
ಪ್ರತಿ ತಿಂಗಳಿಗೊಮ್ಮೆ ಕನ್ನಡಿಯಲ್ಲಿ ನಿಮ್ಮ ಹಲ್ಲುಗಳನ್ನು ನೋಡಿಕೊಳ್ಳಿರಿ. ಬಿಳಿಭಾಗದಲ್ಲಿ ಕಪ್ಪು ಕಲೆ, ರೇಖೆ, ಆಳದ ಮೇಲ್ಭಾಗ ಗೋಚರಿಸುತ್ತಿದೆಯೇ? ಹೀಗಾಗುತ್ತಿದ್ದಲ್ಲಿ ವೈದ್ಯರನ್ನು ಕಾಣಿರಿ.

 ನೆನಪಿಡಿ: ಹುಳುಕು ಹಲ್ಲುಗಳನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ ಸರಿಪಡಿಸಬೇಕು.
ಲೇಖಕರ ದೂರವಾಣಿ:
9342466936
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT