ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸಿ ಕಾಳಜಿ ಸಾಕು

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

`ಆರೋಗ್ಯವಂತ ಮಗು ದೇಶದ ಭವಿಷ್ಯ~ ಎಂಬ ಮಾತು ಈಗ ಅರ್ಥ ಕಳೆದುಕೊಂಡಿದೆ. ದೇಶದ ಆರು ರಾಜ್ಯಗಳಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗಿದೆ ಎಂಬ ಆಘಾತಕಾರಿ ಸಂಗತಿ, ಸಂಘಟನೆಯೊಂದು ದೇಶದ ನೂರು ಜಿಲ್ಲೆಗಳಲ್ಲಿ ಏಳು ವರ್ಷಗಳ ಕಾಲ ನಡೆಸಿದ ಅಧ್ಯಯನ ವರದಿಯಿಂದ ಬೆಳಕಿಗೆ ಬಂದಿವೆ.

`ಅಪೌಷ್ಟಿಕತೆ ರಾಷ್ಟ್ರೀಯ ಅವಮಾನ~ ಎಂದು ವರದಿಯನ್ನು ಬಿಡುಗಡೆ ಮಾಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಪ್ಪಿಕೊಂಡಿದ್ದಾರೆ. ಈಗ ಜಾರಿಯಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯೊಂದನ್ನೇ ನೆಚ್ಚಿಕೊಳ್ಳದೆ ಮಕ್ಕಳ ಅಪೌಷ್ಟಿಕತೆಗೆ ಕಾರಣವಾದ ಸಂಗತಿಗಳನ್ನು ಹುಡುಕಿ ಕ್ರಮ ತೆಗೆದುಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ.
ಮಕ್ಕಳ ಅಪೌಷ್ಟಿಕತೆಗೆ ಬಡತನವೊಂದೇ ಕಾರಣ ಅಲ್ಲ. ಅನಕ್ಷರತೆ, ಬಾಲ್ಯ ವಿವಾಹ, ಎಳೆಯ ಮಕ್ಕಳಿಗೆ ನೀಡಬೇಕಾದ ಆಹಾರ ಕುರಿತಂತೆ ನಮ್ಮ ಜನರಿಗೆ ಇರುವ ಅಜ್ಞಾನವೂ ಕಾರಣ.
 
ಎಳೆಯ ಮಕ್ಕಳು ಮತ್ತು ಬಾಣಂತಿ ಮಹಿಳೆಯರಿಗೆ ಪೌಷ್ಟಿಕಾಂಶ ಆಹಾರ ಪೂರೈಕೆಯೊಂದೇ ಈ ಸಮಸ್ಯೆಗೆ ಪರಿಹಾರ ಅಲ್ಲ. ಕರ್ನಾಟಕ ಸೇರಿದಂತೆ ಗ್ರಾಮೀಣ ಭಾರತದಲ್ಲಿ ಬಾಲ್ಯವಿವಾಹ ಪದ್ಧತಿ ಇನ್ನೂ ರೂಢಿಯಲ್ಲಿದೆ.
 
ಹೆಣ್ಣುಮಕ್ಕಳು ವೈವಾಹಿಕ ಜೀವನಕ್ಕೆ ದೈಹಿಕ ಅರ್ಹತೆ ಪಡೆಯುವ ಮೊದಲೇ ಅವರಿಗೆ ಮದುವೆ ಮಾಡುವ, ಹದಿನೆಂಟು ವರ್ಷ ತುಂಬುವುದರೊಳಗೆ ತಾಯಿಯಾಗುವಂತಹ ಪರಿಸ್ಥಿತಿಯೂ ಮಕ್ಕಳ ಅಪೌಷ್ಟಿಕತೆಗೆ ಕಾರಣ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಿಲ್ಲ.

ಪೌಷ್ಟಿಕಾಂಶಗಳ ಕೊರತೆಯಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಿ ಬುದ್ಧಿಮಾಂದ್ಯತೆ ಸೇರಿದಂತೆ ಹಲವು ನ್ಯೂನತೆಗಳನ್ನು ಮಕ್ಕಳು ಎದುರಿಸಬೇಕಾಗುತ್ತದೆ. ಇದು ಪಾಲಕರಿಗೆ ಅರ್ಥ ಆಗುವವರೆಗೆ ಈ ಸಮಸ್ಯೆ ತಪ್ಪಿದ್ದಲ್ಲ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಎಳೆಯ ಮಕ್ಕಳು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿವೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಇಂಥ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ಪ್ರತಿ ನಾಲ್ಕೈದು ವರ್ಷಗಳಿಗೊಮ್ಮೆ ಅಲ್ಲಿ ಬರ ಬರುತ್ತದೆ.
 
ಜನರು ಉದ್ಯೋಗ ಹುಡುಕಿಕೊಂಡು ಗುಳೇ ಹೋಗುತ್ತಾರೆ. ಜತೆಗೆ ಎಚ್‌ಐವಿ ಸೋಂಕು, ಕುಡಿಯುವ ನೀರಿನ ಕೊರತೆಯೂ ಇದೆ. ಬಡತನದಿಂದಾಗಿ ಎರಡು ಹೊತ್ತಿನ ಊಟ ಹೊಂದಿಸಿಕೊಳ್ಳುವುದೇ ಜನರಿಗೆ ದೊಡ್ಡ ಸಮಸ್ಯೆ. ಹೀಗಾಗಿ ಕಡಿಮೆ ಆದಾಯವಿರುವ ಕುಟುಂಬಗಳ ಗರ್ಭಿಣಿ, ಬಾಣಂತಿ ಮಹಿಳೆಯರೇ ಅಲ್ಲದೆ ಎಳೆಯ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಕ್ಕಳಿಗಾಗಿ ರೂಪಿಸಿದ ಪೌಷ್ಟಿಕಾಂಶ ಪೂರೈಸುವ ಕಾರ್ಯಕ್ರಮಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ.
 
ಈ ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಮಾಡುವುದಷ್ಟೇ ತನ್ನ ಕೆಲಸ ಎಂದು ಸರ್ಕಾರಗಳು ಭಾವಿಸಿವೆ. ಕೆಳ ಹಂತದಲ್ಲಿ ಕಾರ್ಯಕ್ರಮ ಅನುಷ್ಠಾನ ಹೇಗೆ ನಡೆಯುತ್ತಿದೆ ಎಂಬುದನ್ನು ಸರ್ಕಾರ ಗಮನಿಸಬೇಕು. ಸರ್ಕಾರಗಳು ಮಕ್ಕಳ ಆರೋಗ್ಯದ ಬಗ್ಗೆ ಹುಸಿ ಕಾಳಜಿಯನ್ನು ತೋರಿಸುವುದನ್ನು ಕೈಬಿಟ್ಟು ಕಾರ್ಯಕ್ರಮಗಳ ಅನುಷ್ಠಾನದ ಕಡೆಗೆ ನಿಗಾ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT