ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂ ಗಂಧವಿಲ್ಲದ ಗಲ್ಲಿಯ ಆ್ಯಂಟಿಕ್ ಮನೆ!

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಆ  ಮನೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಬಾಗಿಲಿಗೆ ಅಭಿಮುಖವಾಗಿದ್ದ ಎರಡೂವರೆ ಅಡಿ ಎತ್ತರದ ಗೋಡೆ ಗಡಿಯಾರ ಗಮನ ಸೆಳೆಯಿತು. ಏಳು ಗಂಟೆ ಸೂಚಿಸುತ್ತಿತ್ತು. ಕೆಟ್ಟಿದೆ ಅಂದುಕೊಂಡೆ.

ಅದನ್ನರಿತುಕೊಂಡವರಂತೆ ಮನೆ ಯಜಮಾನ ಶ್ರಿಧರಬಾಬು, `ಬೆನ್ನು ಹಿಡಿದುಕೊಂಡಿದೆ. ಕೀ ಕೊಡಲಾಗುತ್ತಿಲ್ಲ. ಕೀ ಕೊಟ್ಟರೆ ಸಾಕು ಒಂದೂ ದಿನ ಕೆಡದೆ ಕೆಲಸ ಮಾಡುತ್ತದೆ, 150 ವರ್ಷ ದುಡಿಯೋದು ಅಂದ್ರೇನು ತಮಾಷೇನಾ?~... ತಾತನಿಗೇ ಅಂದಂತೆ ಅಕ್ಕರೆಯ ಮಾತಾಡಿದರು. `ಅದು ಹೊಡೆದುಕೊಂಡರೇನೇ ನಮ್ಮ ಮಕ್ಕಳು ಎದ್ದು ಶಾಲೆಗೆ ರೆಡಿಯಾಗೋದು.

ಆಯಿಲಿಂಗೂ ಮಾಡಿಲ್ಲ. ಅದೇ ತರಹ ಹೊಳೀತಾ ಇದೆ~ ಎಂದು ಇನ್ನೊಂದಷ್ಟು ಹೊಗಳಿದರು. ಹೊರಗಿನ ಬಿಸಿಲಿಗೆ ಗಡಿಯಾರದ ಸಾಗುವಾನಿ ಚೌಕಟ್ಟು, ಕಿರೀಟದಂತಹ ಕುಸುರಿ ವಿನ್ಯಾಸ, ಕರ‌್ರಗಿನ ಎಣ್ಣೆ ಮೈ ಕೋರೈಸಿತು. ಅದನ್ನು ಜರ್ಮನಿಯಿಂದ ಆಮದು ಮಾಡಿಸಿಕೊಂಡ ತಾತ ಕಣ್ಣು ಮಿಟುಕಿಸಿದರೇನೊ?

ಶ್ರಿಧರಬಾಬು ಇದ್ದಕ್ಕಿದ್ದಂತೆ ಸ್ಟೂಲ್ ಇಟ್ಟು ಹತ್ತಿ 10 ಅಡಿ ಎತ್ತರದಲ್ಲಿದ್ದ ಆ ಗಡಿಯಾರದ ಬಾಗಿಲು ತೆರೆದು ದಪ್ಪದ ಕೀಲಿಕೈಯಿಂದ ಕಿರ್ರ‌್‌ ಕಿರ್ರ‌್‌ ಅಂತ ಮೂರು ಸುತ್ತು ಕೀಲಿ ತಿರುವಿದರು. ಟಕ್ ಟಕ್ ಶುರುವಾಯ್ತು. ಮುಳ್ಳುಗಳನ್ನು ಹೊಂದಿಸಿ 12 ಮಾಡಿದರು. ಗಂಟೆಯು ಢಣ್ ಢಣ್ ಬಾರಿಸಿತು! ಕಂಚಿನ ಕಡಾಯಿಗೆ ಸುತ್ತಿಗೆಯಲ್ಲಿ ಬಡಿದಂತಾಯಿತು.

ಅದರ ಎಡಬಲದ ಗೋಡೆಯಲ್ಲಿ ಆಳೆತ್ತರದ ಎರಡು ಕನ್ನಡಿಗಳು, `ಹಲೋ ನಾವೂ ಇದ್ದೇವೆ~ ಅಂತ ಕಣ್ಣು ಮಿಟುಕಿಸಿದವು. 150 ವರ್ಷಗಳ ಹಿಂದೆ ದೂರದ ಬೆಲ್ಜಿಯಂನಿಂದ ಈ ಮನೆಗೆ ಬಂದಿರುವ ಸದಸ್ಯರು ಅವರು. ಕರೆಸಿಕೊಂಡವರು ಶ್ರೀಧರಬಾಬು ಅವರ ಮುತ್ತಾತ ವೆಂಕಟಪ್ಪ. (ವೆಂಕಟಪ್ಪನವರ ಮಗ ಎಚ್. ವಿ. ತಿಮ್ಮಯ್ಯ (ಅವಿವಾಹಿತ); ಅವರ ತಮ್ಮನ ಹೆಂಡತಿ ಶಾರದಮ್ಮ; ಅವರ ಮಗಳು ಸಾವಿತ್ರಮ್ಮ, ಈ ಶ್ರೀಧರ್‌ಬಾಬು ತಾಯಿ).

-ಹೀಗೆ, ನಾಲ್ಕು ತಲೆಮಾರುಗಳಿಗೆ `ಚಾಕರಿ~ ಮಾಡಿ ಐದನೇ ತಲೆಮಾರಿಗೆ ಬಡ್ತಿ ಪಡೆದಿರುವ ಈ ಆ್ಯಂಟಿಕ್ ಪೀಸ್‌ಗಳು ಇರುವುದು ಬಳೆಪೇಟೆಯ ಮಡಿಲಲ್ಲಿರುವ ಹೂವಾಡಿಗರ ಗಲ್ಲಿಯಲ್ಲಿ.

ಬಳೆಪೇಟೆಯ ಬಗ್ಗೆ ಏನೋ ಮಾಹಿತಿ ಹುಡುಕುತ್ತಿದ್ದಾಗ ಈ ಶ್ರಿಧರಬಾಬು ಅವರ ವಿಳಾಸದಲ್ಲಿ ಗಮನ ಸೆಳೆದದ್ದು `ಹೂವಾಡಿಗರ ಗಲ್ಲಿ~ (ಹೂವಾಡಿಗರ ಲೇನ್... ಫ್ಲೋರಿಸ್ಟ್ ಲೇನ್ ಅಲ್ಲ!) ಎಂಬ ಹೆಸರು. ರಸ್ತೆ, ಗಲ್ಲಿಯ ತುಂಬಾ ಹೂವಿನ ಘಮಲು ಆವರಿಸಿಕೊಂಡಿದ್ದೀತು ಎಂಬ ಭ್ರಮೆ ಬರಿ ಭ್ರಮೆಯೇ ಆಯಿತು. ಯಾವ ಗಲ್ಲಿಯಲ್ಲಿಯೂ ಓಣಿಯಲ್ಲಿಯೂ ಹೂಗಂಧದ ಸುಳಿವಿರಲಿಲ್ಲ.

ಅಸಲಿಗೆ, ಹೂವಾಡಿಗರ ಗಲ್ಲಿ ಎಂಬ ಈ ಹಳೆ ಬೆಂಗಳೂರಿನ ಪಳೆಯುಳಿಕೆಯಲ್ಲಿ ಈಗ ಇರುವ ಹೂವಾಡಿಗರ ಸಂಖ್ಯೆ ಬೆರಳೆಣಿಕೆಯಷ್ಟು..ಒಂದು ಕಾಲದಲ್ಲಿ ಹೂ ಕಟ್ಟುವವರಿಗೆ, ಮಾರುವವರಿಗೆ ಬದುಕಿನ ಬುತ್ತಿಯಾಗಿದ್ದ ತಾಣ ಈ ಹೂವಾಡಿಗರ ಗಲ್ಲಿ.

ಆದರೆ ಈಗ ಬಗೆಬಗೆ ವ್ಯಾಪಾರ, ವಹಿವಾಟುಗಳವರ ಹೆಜ್ಜೆಗುರುತು. ಅಂತಹ ಬೆರಳೆಣಿಕೆಯ ಹೂವಾಡಿಗರ ಮನೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವವರೇ ಈ ಶ್ರಿಧರಬಾಬು. ಮುತ್ತಾತನ ಕಾಲದಿಂದಲೂ ವಂಶಪಾರಂಪರ‌್ಯವಾಗಿ ನಡೆದುಕೊಂಡು ಬಂದ ವೃತ್ತಿಗೆ ಅಂಟಿಕೊಂಡಿರಲಾಗದೆ ಒಂದು ಹಂತದಲ್ಲಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ನೌಕರಿ ಹಿಡಿದರೂ ಹೂವಿನ ಗಂಧ ಅವರನ್ನು ಮತ್ತೆ ಹೂವಾಡಿಗರ ಗಲ್ಲಿಗೇ ಎಳೆತಂದಿದ್ದನ್ನು ಅವರು ಸೊಗಸಾಗಿ ವಿವರಿಸುತ್ತಾರೆ.

ಹೂವಾಡಿಗರ ಗಲ್ಲಿಯಲ್ಲಿ ಹೂ ಗಂಧವೇ ಇಲ್ಲವಲ್ಲ ಅಂತ ಬೇಸರಿಸಲು ಅವಕಾಶವೇ ಕೊಡದಂತೆ ನಮ್ಮನ್ನು ಆವರಿಸಿಕೊಳ್ಳುತ್ತದೆ ಈ ಮನೆ. ವಯಸ್ಸು... ಮತ್ತದೇ... 150 ವರ್ಷ!ಹೊಸ್ತಿಲಾಚೆ ನಿಂತು ನೋಡಿದರೆ `ಯಾವುದೋ ಒಂದು ಹಳೆಯ ಕಟ್ಟಡ~ವಾಗಿ ಕಾಣಿಸಿದರೂ ಇದು ಅಪ್ಪಟ ಪುರಾತನ ವಸ್ತು ಸಂಗ್ರಹಾಲಯ! ಅಲ್ಲಿ ಈಗ ಇರುವುದು ಐದನೇ ತಲೆಮಾರಿನ ಸದಸ್ಯರು.

ಈಗಿನ ಯಜಮಾನ ಶ್ರೀಧರಬಾಬು ಪಾಲಿಗೆ ಈ ಮನೆಯೆ ಒಂದು ಅನುಭೂತಿ. `ಹೆಂಡತಿ ಮನೆಗೆ ಹೋದವನು ಅಲ್ಲಿ ನಿದ್ದೆ ಬಾರದೆ ಮಧ್ಯರಾತ್ರಿ ಎರಡು ಗಂಟೆಗೆ ಇಲ್ಲಿಗೆ ಬಂದದ್ದೂ ಇದೆ~ ಎಂಬ ಅವರ ಮಾತಿನಲ್ಲೇ ಮನೆಯೊಂದಿಗಿನ ಅವರ ನಂಟಿನ ಸೆಳಕಿದೆ.

`ನಮ್ಮ ಮುತ್ತಾತ ಮತ್ತು ತಾತ ವೈಭೋಗದಲ್ಲಿ ಬದುಕಿದವರು. ವಿದೇಶದಿಂದ ವಿಲಾಸಿ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದು ಅವರಿಗೆ ಶೋಕಿ. ಬೆಲೆಯ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ ಅವರು. ಮುತ್ತಾತ ಆಗಿನ ಕಾಲದಲ್ಲೇ ಮುಂಚೂಣಿ ಹೂವಿನ ವ್ಯಾಪಾರಿ.

ಅವರ ಪತ್ನಿ, ನಮ್ಮ ಮುತ್ತಜ್ಜಿಯೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರಂತೆ. ಅದೇ ಪರಂಪರೆ ತಾತನ ಕಾಲದಲ್ಲೂ ಮುಂದುವರಿಯಿತು. ಈ ಮನೆ ಮುಂದೆ ನಮ್ಮ ತಾಯಿ ಸಾವಿತ್ರಮ್ಮನವರಿಗೆ ವಂಶಪಾರಂಪರ‌್ಯವಾಗಿ ಬಂತು. ನಮ್ಮ ಅಪ್ಪ-ಅಮ್ಮ ಇಬ್ಬರೂ ಹೂವಾಡಿಗರ ಗಲ್ಲಿಯಲ್ಲಿ ನಂಬರ್ ಒನ್ ಹೂ ವ್ಯಾಪಾರಿಗಳಾಗಿದ್ದವರು.
 
ನನ್ನ ಐದನೇ ವಯಸ್ಸಿಗೇ ಅಪ್ಪನನ್ನು ಕಳಕೊಂಡಿದ್ದರಿಂದ ಅವರ ವಹಿವಾಟಿನ ವಿಚಾರ ಗೊತ್ತಿಲ್ಲ. ಆದರೆ ತಾಯಿ ಎಲ್ಲ ಸವಾಲುಗಳನ್ನು ಎದುರಿಸಿ ನಂಬರ್ ಒನ್ ಸ್ಥಾನದಲ್ಲೇ ಮುಂದುವರಿದರು. ಈರೋಡ್‌ನಲ್ಲಿ ನೆಲೆಸಿದ್ದ ನೀಲಗಿರೀಸ್ ಕುಟುಂಬ ಹಾಗೂ ಖೋಡೇಸ್ ಕುಟುಂಬಕ್ಕೆ ನಮ್ಮ ತಾಯಿಯೇ ಫ್ಲೋರಿಸ್ಟ್ ಆಗಿದ್ದರು~ ಎಂದು ನೆನಪಿನ ಬುತ್ತಿ ಬಿಚ್ಚುತ್ತಾರೆ.

ಹೀಗೆ ಮಾತು ಸಾಗಿರುವಾಗ ಅಡುಗೆ ಮನೆಯಿಂದ ಒಂದು ಊಟದ ತಟ್ಟೆ ತಂದರು ಶೈಲಾ. ಕನಿಷ್ಠ ಮೂರು ಕೆ.ಜಿ. ತೂಗುವ ಕಂಚಿನ ತಟ್ಟೆ. ಮುತ್ತಾತ ವೆಂಕಟಪ್ಪ ಅವರ `ಕಂಚಿ~! ಬೆನ್ನಲ್ಲೇ ತಾಮ್ರ ಮತ್ತು ಕಂಚಿನ ಪಾತ್ರೆಗಳು, ಕಾಲುದೀಪಗಳೂ ಬಂದವು. ಐದನೇ ತಲೆಮಾರಿನ ಸುಪರ್ದಿಯಲ್ಲೊಂದು ವಸ್ತು ಸಂಗ್ರಹಾಲಯ!

ತಮ್ಮ ಮನೆಗೆ `ಆ್ಯಂಟಿಕ್ ಪೀಸ್~ನ ಮೌಲ್ಯವಿದೆ ಎಂಬ ಸತ್ಯವನ್ನು ಅರಿತಿರುವ ಶ್ರೀಧರಬಾಬು ದಂಪತಿ, ಇಡೀ ಗಲ್ಲಿಯ ಮನೆಗಳು, ಮನೆಗಳವರು ಆಧುನಿಕತೆಗೆ ತೆರೆದುಕೊಂಡರೂ ತಮ್ಮ ಮನೆಯ `ಇತಿಹಾಸ~ಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಕಾಪಾಡಿಕೊಂಡಿರುವುದು ವಿಶೇಷ.

110 ವರ್ಷಗಳಿಂದಲೂ ಗಟ್ಟಿಮುಟ್ಟಾಗಿ ಮನೆಯನ್ನು ಹೊತ್ತು ನಿಂತಿರುವ ಮಣ್ಣಿನ ಗೋಡೆ, ಹೊಸ್ತಿಲು, ಮೆಟ್ಟಿಲು, ಪ್ರವೇಶದ್ವಾರದ ಇಕ್ಕೆಲಗಳಲ್ಲಿರುವ ಮೆಷ್... ಈ ಮನೆಗೆ ಈ ಮನೆಯೇ ಸಾಟಿ! ಭೇಷ್...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT