ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂ ಮನದ ಮಕ್ಕಳಿಗೆ ಸಮ್ಮೇಳನವೇ ಉದ್ಯಾನ

ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ:ನಾವು ಎಳೆಯರು, ನಾವು ಗೆಳೆಯರು.. ಕತೆ ಹೇಳುವೆವು, ಕವಿತೆ ಓದುವೆವು...
Last Updated 5 ಡಿಸೆಂಬರ್ 2013, 7:03 IST
ಅಕ್ಷರ ಗಾತ್ರ

ಕೋಲಾರ: ಮುಚ್ಚಿದ ಚಿನ್ನದ ಗಣಿಯ ಊರಿನಲ್ಲಿ ಗುರುವಾರ ಮಕ್ಕಳ ಸಾಹಿತ್ಯ ಸಮ್ಮೇಳನ ಸಂಭ್ರಮ. ಅದೂ ಜಿಲ್ಲೆ­ಯಲ್ಲಿ ಮೊದಲ ಬಾರಿಗೆ ಸಾಹಿತ್ಯಾಸಕ್ತ ಮಕ್ಕಳೆಲ್ಲರೂ ಒಟ್ಟಿಗೇ ಸೇರಿ ಕತೆ ಹೇಳುವ, ಕವಿತೆ ಬರೆಯುವ, ಓದುವ ಅಪರೂಪದ ಸನ್ನಿವೇಶ ನಿರ್ಮಾಣ­ವಾಗ­ಲಿದೆ. ಜಗತ್ತಿನೆಲ್ಲೆಡೆ ಚರ್ಚೆಯಾ­ಗು­ತ್ತಿ­ರುವ ಕೌಶಲಗಳ (ಸ್ಕಿಲ್ಸ್) ಕುರಿತೂ ಮಕ್ಕಳ ಗೋಷ್ಠಿ ಇರುವುದು ಮತ್ತೊಂದು ಹಿರಿಮೆ.

ಕೆಜಿಎಫ್‌ನ ರಾಬರ್ಟ್‌ಸನ್ ಪೇಟೆಯ ಪ್ರಖ್ಯಾತ ಕನ್ನಡ ಸಂಘದ ಆವರಣ ಮಕ್ಕಳು ಹಾಗೂ ಮಕ್ಕಳ ಸಾಹಿತ್ಯದ ಝೇಂಕಾರಕ್ಕೆ ವೇದಿಕೆ­ಯಾಗ­ಲಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೆಜಿಎಫ್‌ನಲ್ಲಿರುವ ಪರಿಷತ್‌ನ ವಿಶೇಷ ಘಟಕದ ಸಂಯುಕ್ತ ಆಶ್ರಯ­ದಲ್ಲಿ ನಡೆಯಲಿರುವ ಸಮ್ಮೇಳನ ಜಿಲ್ಲೆಯಲ್ಲಿ ಹೊಸ ದಾಖಲೆಯನ್ನು ಬರೆಯಲು ಹೊರಟಿದೆ. ‘ಎಳೆಯ ಗೆಳೆಯರೇ’ ಅದಕ್ಕೆ ಮೊದಲ ಪದವನ್ನು ಇಡಲಿದ್ದಾರೆ. ವೇದಿಕೆಯಲ್ಲಿ ಜಿಲ್ಲೆಯ ಸುಮಾರು 15ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಸುಮಾರು 30ಕ್ಕೂ ಹೆಚ್ಚು ಮಕ್ಕಳ ಪಾಲ್ಗೊಳ್ಳುವಿಕೆ ಇಲ್ಲಿ ಮಹತ್ವದ್ದಾಗಿದೆ.

ಸಿನಿಮಾ ಹಾಡುಗಳನ್ನು ಆಧರಿಸಿದ ‘ಕಲ್ಚರಲ್ ಪ್ರೋಗ್ರಾಂ’ಗಳ ಭರಾಟೆಯ ನಡುವೆಯೇ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ವ್ಯಕ್ತಿತ್ವ ವಿಕಸನದ ಕುರಿತ ಅಭಿ­ರುಚಿ ನಿರ್ಮಾಣದ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನವು ಮೂಡಿಬರಲಿರುವುದು ಸಂಘಟಕರಲ್ಲಿ, ಪೋಷಕರಲ್ಲಿ ಮತ್ತು ಮಕ್ಕಳಲ್ಲಿ ಹಲವು ನಿರೀಕ್ಷೆಗಳನ್ನೂ ಮೂಡಿ­ಸಿದೆ. ಸುಮಾರು ಒಂದು ಸಾವಿರ ಮಕ್ಕಳು ಸಮ್ಮೇಳನದಲ್ಲಿ ಪಾಲ್ಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಸಾಹಿತ್ಯವೆಂದರೆ ಬರೀ ಸಾಹಿತ್ಯದ ಚರ್ಚೆಯಷ್ಟೇ ಇಲ್ಲಿ ನಡೆಯುವುದಿಲ್ಲ. ಕತೆ, ಕವಿತೆಗಳ ಜೊತೆ ಸಖ್ಯದ ಆಖ್ಯಾ­ನದ ಪಾಠಗಳೂ ಉಂಟು. ಮಕ್ಕಳು ರೂಢಿಸಿಕೊಳ್ಳಬೇಕಾದ ಕೌಶಲಗಳ ಕುರಿತು ಮಕ್ಕಳೇ ಮಾತಾಡುವರು.

ಇಂತ ಮಕ್ಕಳ ಸಮ್ಮೇಳನಕ್ಕೆ ದೊಡ್ಡ­ವರು ಜೊತೆಯಾಗುವರು. ಮಕ್ಕಳು ಮುನ್ನೆಲೆಯಲ್ಲಿ, ದೊಡ್ಡವರು ಹಿನ್ನೆಲೆ­ಯಲ್ಲಿ. ದೊಡ್ಡವರೆಂದರೆ ಗಂಭೀರ ವದ­ನದ, ದೊಡ್ಡ ಶಬ್ದಗಳ, ಬೇಕು- ಬೇಡಗಳ ಭಾರವನ್ನು ಹೊರಿಸಿ ಭಯಬೀಳಿಸುವ ದೊಡ್ಡವರಲ್ಲ. ಮಕ್ಕಳೊಂದಿಗೆ ಮಕ್ಕಳಾ­ಗು­ವವರು. ಮಕ್ಕಳಿಗೆ ಏನು ಬರೆದರೆ ಮನದಟ್ಟಾದೀತು ಎಂದು ಹಗಲಿರುಳೂ ಚಿಂತಿಸುವವರು. ಮಕ್ಕಳಿಗೇನು ಬೇಕು ಎಂದು ಸದಾ ಚಿಂತಿಸುವವರು. ಮುಖ್ಯ­ವಾಗಿ ಮಕ್ಕಳ ತಲೆ ಖಾಲಿ ತಪ್ಪಲೆಯಲ್ಲ ಎನ್ನುವುದನ್ನು ಅರಿತ­ವರು. ಮಕ್ಕಳಿ­ಗಾ­ಗಿಯೇ ಜೀವನವನ್ನು ಮುಡುಪಿಟ್ಟವರು. ಅಂಥ ಅಪರೂಪದ ಹಿರಿಯರನ್ನು, ಮಕ್ಕಳ ಸಾಹಿತ್ಯದಲ್ಲಿ ಪರಿಶ್ರಮವುಳ್ಳ­ವರನ್ನು ಸನ್ಮಾನಿಸುವ ಕಾರ್ಯವೂ ಸಮ್ಮೇಳನದಲ್ಲಿ ನಡೆಯಲಿದೆ. ಮಕ್ಕಳೇ ಅವರನ್ನು ಸನ್ಮಾನಿಸಲಿದ್ದಾರೆ.

ಕೋಲಾರದ ಗೋಕುಲ ವಿದ್ಯಾ­ಸಂಸ್ಥೆಯ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ವಿ.ರಂಜನಿ ಇದುವರೆಗಿನ ಮಕ್ಕಳ ಸಾಹಿತ್ಯದ ಅವಲೋಕನವನ್ನು ಮಾಡ­ಲಿ­ರು­ವುದು ಮತ್ತೊಂದು ವಿಶೇಷ. ಹಿಂದಿನ ಮಕ್ಕಳ ಸಾಹಿತ್ಯ ಹೇಗಿತ್ತು? ಇಂದಿನ ಮಕ್ಕಳ ಸಾಹಿತ್ಯ ಹೇಗಿದೆ? ಮುಂದೆ ಹೇಗಿರಬೇಕು ಎಂಬುದರ ವಿಶ್ಲೇಷಣೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ವಿಜ್ಞಾನ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿಯೇ ಅಗಸ್ತ್ಯ ಫೌಂಡೇಶನ್ ವತಿಯಿಂದ ವಿಜ್ಞಾನ ವಸ್ತು ಪ್ರದರ್ಶನವೂ ನಡೆಯ­ಲಿರುವುದು ಮತ್ತೊಂದು ವಿಶೇಷ.

ತರಬೇತಿ: ದೊಡ್ಡವರಿಗಾಗಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಯಾರಿಗೂ ತರಬೇತಿಯನ್ನೇನೂ ಕೊಡು­ವುದಿಲ್ಲ. ಆದರೆ ಮಕ್ಕಳ ಸಾಹಿತ್ಯ ಸಮ್ಮೇ­ಳನದ ಗೋಷ್ಠಿಗಳಲ್ಲಿ ಪಾಲ್ಗೊಳ್ಳ­ಲಿ­ರುವ ಮಕ್ಕಳಿಗೆ ವಿಶೇಷ ತರಬೇತಿ­ಯನ್ನೂ ನೀಡಲಾಗಿದೆ ಎಂಬುದೇ ವಿಶೇಷ,
ಸಮ್ಮೇಳನದ ನೆಪದಲ್ಲಿ ಜಿಲ್ಲೆಯ ಹತ್ತಾರು ಶಾಲೆಗಳ ಹಲವು ಮಕ್ಕಳಿಗೆ ಕತೆಗಳನ್ನು ಹೇಳುವ, ಬರೆಯುವ, ಕವಿತೆ­ಗ­ಳನ್ನು ಬರೆಯುವ, ಬರೆದಿದ್ದನ್ನು ಓದುವ ಬಗೆಯ ಕುರಿತು ತರಬೇತಿಯನ್ನೂ ನೀಡಲಾಗಿದೆ.

ಕತೆ ಬರೆಯುವುದು ಮತ್ತು ಕತೆ ಹೇಳುವುದು ಹೇಗೆ ಎಂಬ ಕುರಿತು, ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಮಕ್ಕಳಿಗೆ ಲೇಖಕ, ಅನುವಾದಕ ಕನ್ನಡ ಸ.ರಘುನಾಥ, ಆರ್.ಚೌಡರೆಡ್ಡಿ ಕನ್ನಡ ಸಂಘದ ಆವರಣದಲ್ಲಿ ಈಗಾಗಲೇ ತರ­ಬೇತಿ ತರಗತಿ ನಡೆಸಿದ್ದಾರೆ. ಶ್ರೀನಿವಾಸ­ಪುರ­ದಲ್ಲಿ ಮಂಗಳವಾರವೂ ವೇದಿಕೆ ಶಿಸ್ತು, ಮಾತುಗಾರಿಕೆ, ಸಭಾಕಂಪನ­ವನ್ನು ಮೀರುವ ಕುರಿತು ತರಬೇತಿ ನೀಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕಗಳ ಮೂಲಕವೇ ಆಸಕ್ತ ಮತ್ತು ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಆಯ್ಕೆ ಮಾಡಲಾಗಿದೆ.  ಕತೆ, ಕವನ ಮತ್ತು ಚರ್ಚಾಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿರುವ ಮಕ್ಕಳಿಗೆ ಕಳೆದ ನವೆಂಬರಿನಲ್ಲಿ ವಿಶೇಷ ಕಾರ್ಯಾ­ಗಾರನ್ನೂ ನಡೆಸಲಾಗಿದೆ.

ಮಕ್ಕಳು ಹೆಚ್ಚು ಉತ್ಸಾಹ ತೋರುತ್ತಿ­ದ್ದಾರೆ. ಮೂವತ್ತು ಮಕ್ಕಳು ಬನ್ನಿ ಎಂದರೆ ಐವತ್ತು ಮಕ್ಕಳು ತಾ ಮುಂದು ನಾ ಮುಂದು ಎಂದು ಬರುತ್ತಿದ್ದಾರೆ. ಇದೇ ಮನಃಸ್ಥಿತಿಯನ್ನು ಕಾಪಾಡಿ­ಕೊಂಡರೆ ಹೊಸ ತಲೆಮಾರಿನ ಲೇಖ­ಕರು ಜಿಲ್ಲೆಯಿಂದ ಹೊಮ್ಮುತ್ತಾರೆ ಎನ್ನುವ ಭರವಸೆ ಇದೆ ಎನ್ನುತ್ತಾರೆ ಸ.ರಘು­ನಾಥ. ಅವರು ಕಥಾ­ಗೋಷ್ಠಿ­ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಮಕ್ಕಳಿಗೆ ಕವಿತೆ ಬರೆಯಬೇಕೆನ್ನುವ ಆಸಕ್ತಿ ಇದೆ. ಆದರೆ ಪ್ರೋತ್ಸಾಹದ ಕೊರತೆ ಇದೆ. ಸರಿಯಾದ ಪ್ರೋತ್ಸಾಹ ಸಿಕ್ಕರೆ ಉತ್ತಮ ಕವಿಗಳು ಹೊರ­ಹೊಮ್ಮ­ಬಲ್ಲರು. ಮಕ್ಕಳನ್ನು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿಸಿ ಸೃಜನ­ಶೀಲ ಸಾಹಿತ್ಯದ ಕುರಿತು ಚರ್ಚೆ ನಡೆಸು­ವುದು ದೊಡ್ಡ ಸವಾಲು. ಆದರೆ ಪ್ರಯೋಜನದ ದೃಷ್ಟಿಯಿಂದ ಈ ಸಮ್ಮೇಳನ ವಿಶಿಷ್ಟವಾಗಲಿದೆ. ಮಕ್ಕಳ ಸಾಹಿತ್ಯದ ಬಗ್ಗೆ, ಮಕ್ಕಳ ಸಾಹಿತ್ಯಕ್ಕೆ ತಮ್ಮ ಕೊಡುಗೆಯೂ ಇರಬಹುದು ಎಂಬ ಜಾಗೃತಿಯಂತೂ ಮೂಡಲಿದೆ ಎನ್ನು­ತ್ತಾರೆ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿರುವ ಕವಿ ಆರ್.ಚೌಡರೆಡ್ಡಿ.

ಕತ್ತಲಲ್ಲಿ ಹಣತೆಯನ್ನು ಹುಡುಕು­ವುದು ಮತ್ತು ಹಣತೆಯನ್ನು ಹಚ್ಚು­ವುದು ಹೇಗೆ ಎನ್ನುವ ಚಿಂತನೆಯ ಪ್ರಯತ್ನ­ವಾಗಿ ಸಮ್ಮೇಳನ ರೂಪು­ಗೊಂಡಿದೆ. ಈಗ ಹಣತೆ ಹುಡುಕುವ ಕೆಲಸವಷ್ಟೇ ನಡೆಯುತ್ತಿದೆ. ಸಮ್ಮೇಳನ ನಂತರ ಹಣತೆ ಹಚ್ಚುವ ಕೆಲಸ ಆಗ­ಬೇಕು ಎನ್ನುವುದು ಸ.ರಘುನಾಥ ಅವರ ವಿಶ್ಲೇಷಣೆ.

ಮಕ್ಕಳ ಪಾಲ್ಗೊಳ್ಳುವಿಕೆಯೇ ಮುಖ್ಯ
ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತಂದು ದೊಡ್ಡವರು ಭಾಷಣ ಮಾಡುವುದು ಸಾಮಾನ್ಯ. ಆದರೆ ಈ ಸಮ್ಮೇಳನದಲ್ಲಿ ಮಕ್ಕಳೇ ಎಲ್ಲವನ್ನೂ ನಿರ್ವಹಿಸಲಿದ್ದಾರೆ. ದೊಡ್ಡವರು ಪ್ರೇರಕರಾಗಿ ಮತ್ತು ಮಾರ್ಗದರ್ಶಕರಾಗಿ ಅವರ ಹಿಂದೆ ಇರುತ್ತಾರೆ ಅಷ್ಟೆ. ಮಕ್ಕಳ ಪ್ರತಿಭೆಗೆ ಸಾಣೆ ಹಿಡಿಯುವ, ಮಕ್ಕಳ ಸೂಕ್ಷ್ಮತೆಯನ್ನು ಅರಿಯುವ ಹೊಸ ಬಗೆಯ ಪ್ರಯತ್ನವಾಗಿ ಜಿಲ್ಲಾ ಮಟ್ಟದಲ್ಲಿ ಮೊದಲ ಬಾರಿಗೆ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.

---–ಬಿ.ಎಸ್.ಪೀತಾಂಬರರಾವ್, ಪರಿಷತ್‌ನ ವಿಶೇಷ ಘಟಕದ ಕಾರ್ಯದರ್ಶಿ

ದಾನಗುಣದ ಸ್ಕೂಲ್ ಕ್ಯಾಪ್ಟನ್...
ಜಿಲ್ಲೆಯ ಮೊದಲ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ರಾಜಲಕ್ಷ್ಮೀ ಅನಾಥ ಬಾಲಕಿ. ಸಣ್ಣ ವಯಸ್ಸಿನಲ್ಲಿಯೇ ಅಪ್ಪ ಅಮ್ಮನನ್ನು ಕಳೆದುಕೊಂಡು ಬೇರೆಯವರ ಆಶ್ರಯದಲ್ಲಿ ಬೆಳೆದವಳು. ತಮಿಳುನಾಡಿನ ಮಧುರೈ ಜಿಲ್ಲೆಯವರಾದರೂ ಒಂದನೇ ತರಗತಿಯಿಂದ ಬೆಂಗಳೂರಿನಲ್ಲಿಯೇ ಓದಿದ್ದಾರೆ. ಮಾತೃಭಾಷೆ ತಮಿಳಾದರೂ, ಕನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಕನ್ನಡ ಎಂದರೆ ಆಕೆಗೆ ಹೆಮ್ಮೆ.

ಪ್ರಸ್ತುತ ಚಾಂಪಿಯನ್‌ರೀಫ್ಸ್‌ನ ಸಂತ ಜೋಸೆಫ್‌ ಕಾನ್ವೆಂಟ್‌ನ ಆಶ್ರಮದಲ್ಲಿ ಆಕೆಯ ಕಲಿಕೆ ಮತ್ತು ವಾಸ. ರಾಜಲಕ್ಷ್ಮಿ ಬಗ್ಗೆ ಆಶ್ರಮ ಮತ್ತು ಶಾಲೆಯಲ್ಲಿ ಅತೀವ ಗೌರವವಿದೆ ಎಂಬುದು ವಿಶೇಷ..

‘ಅವಳು ಸ್ಕೂಲ್‌ ಕ್ಯಾಪ್ಟನ್‌. ಎಲ್ಲದರಲ್ಲೂ ಮುಂದೆ. ಅಷ್ಟೇ ಸಹೃದಯಿ’ ಎಂಬುದು ಶಾಲೆಯ ಮುಖ್ಯಶಿಕ್ಷಕಿ ಅಮುದ ಅವರ ಹೆಮ್ಮೆಯ ನುಡಿ.

ಆಶ್ರಮದಲ್ಲಿರುವ ಇತರ ಮಕ್ಕಳ ಬಗ್ಗೆ ಆಕೆ ತುಂಬು ವಾತ್ಸಲ್ಯ ತೋರುತ್ತಾಳೆ. ತನಗೆ ಉಡುಗೊರೆಯಾಗಿ ಬಂದ ಉಡುಪುಗಳನ್ನು ಬೇರೆ ಮಕ್ಕಳಿಗೆ ದಾನ ಮಾಡಿ ಕರುಣೆಯನ್ನು ಮೆರೆಯುತ್ತಾಳೆ. ಸದಾ ಒಂದಲ್ಲ ಒಂದು ರೀತಿಯ ಚಟುವಟಿಕೆಯಲ್ಲಿ ತೊಡಗುವ ಆಕೆ ಎಲ್ಲಾ ರೀತಿಯಲ್ಲೂ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಲು ಅರ್ಹತೆಯನ್ನು ಹೊಂದಿದ್ದಾಳೆ ಎಂದು ಶಿಕ್ಷಕಿ ಮೇರಿಯಾ ಸಿಂಥಿಯಾ ಅಭಿಮಾನದಿಂದ ಹೇಳುತ್ತಾರೆ.

ರಾಜಲಕ್ಷ್ಮಿ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿ­ರುವುದು ಕಾನ್ವೆಂಟ್‌ನಲ್ಲಿ ಅತ್ಯಂತ ಸಂಭ್ರಮಕ್ಕೆ ಕಾರಣ­ವಾಗಿದೆ. ರಾಜ್ಯದ ವಿವಿಧೆಡೆ ಇರುವ ಕಾನ್ವೆಂಟ್‌ನ 36 ಶಾಖೆಗಳಿಗೂ ವಿಷಯ ಮುಟ್ಟಿಸ­ಲಾಗಿದೆ. ಎಲ್ಲೆಡೆ ಪ್ರಸಂಶೆ ವ್ಯಕ್ತವಾಗುತ್ತಿದೆ. ಸಾಹಿತ್ಯ ಸಮ್ಮೇಳನಕ್ಕೆ ಆಕೆ­ಯನ್ನು ಯಾವ ರೀತಿ ಸಿದ್ಧಪಡಿಸಬೇಕು. ಆಕೆ ನಡವಳಿಕೆ, ಉಡುಪು ಹೇಗಿರಬೇಕು ಎಂಬ ನಿಟ್ಟಿ­ನಲ್ಲಿ ಕಾನ್ವೆಂಟ್‌ನ ಸಿಸ್ಟರ್‌ಗಳು ಸಲಹೆ ಮತ್ತು ಸೂಚನೆ, ಮಾರ್ಗದರ್ಶನ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT