ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಗೆ ನಿರ್ಬಂಧ: ಒಬಾಮ ಅತೃಪ್ತಿ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಚಿಲ್ಲರೆ ವಹಿವಾಟು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಭಾರತ ನಿರ್ಬಂಧ ವಿಧಿಸಿರುವ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿನ ಬಂಡವಾಳ ಹೂಡಿಕೆ ಸನ್ನಿವೇಶ ಕ್ರಮೇಣ ದುರ್ಬಲವಾಗುತ್ತಿದೆ ಎಂಬುದು ಅಮೆರಿಕದ ಹಲವು ಉದ್ಯಮಿಗಳ ಭಾವನೆಯಾಗಿದೆ. ಈ ಪರಿಸ್ಥಿತಿಯಿಂದ ಹೊರಬರಲು  ಭಾರತ  ಮತ್ತೊಂದು ಸುತ್ತಿನ ಕಠಿಣ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿನ ಬಂಡವಾಳ ಹೂಡಿಕೆ ಪರಿಸ್ಥಿತಿ ಬಗ್ಗೆ ಯಾವುದೇ ನಕಾರಾತ್ಮಕ ಟೀಕೆ ಮಾಡುವ ಗೋಜಿಗೆ ಹೋಗದೆ, ಪರೋಕ್ಷ ಹೇಳಿಕೆಗಳ ಮೂಲಕ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.`ಉಭಯ ರಾಷ್ಟ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗಬೇಕಾದರೆ ಚಿಲ್ಲರೆ ವಹಿವಾಟು ಹಾಗೂ ಇನ್ನಿತರ ಕೆಲ ಕ್ಷೇತ್ರಗಳಲ್ಲಿನ ವಿದೇಶಿ ಬಂಡವಾಳ ಹೂಡಿಕೆಗೆ ನಿರ್ಬಂಧ ಇರಬಾರದು; ಭಾರತದ ಬೆಳವಣಿಗೆಗೆ ಕೂಡ ಇದು ಅತ್ಯವಶ್ಯಕ ಎಂಬುದು ಅಮೆರಿಕದ ಉದ್ಯಮಿಗಳ ತರ್ಕವಾಗಿದೆ~ ಎಂದಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ವಹಿವಾಟು ಹಾಗೂ ಬಂಡವಾಳ ಹೂಡಿಕೆ ವೃದ್ಧಿಸುವ ಮೂಲಕ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬಹುದು. ಶಿಕ್ಷಣ, ವಿಜ್ಞಾನ, ಆಧುನಿಕ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ  ಸಹಕಾರ ಬಲಪಡಿಸಿಕೊಳ್ಳಲು ಅವಕಾಶಗಳಿವೆ ಎಂದರು.

ಭ್ರಷ್ಟಾಚಾರವು  ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿಗೂ ಇದು ಮಾರಕವಾಗಿದೆ. ಹೀಗಾಗಿ ಭ್ರಷ್ಟಾಚಾರದ ವಿರುದ್ಧ ಎರಡೂ ರಾಷ್ಟ್ರಗಳು ಒಗ್ಗೂಡಿ ಹೋರಾಡುವ ಅಗತ್ಯವಿದೆ. ಭಾರತ ಸೇರಿದಂತೆ ಯಾವುದೇ ರಾಷ್ಟ್ರದ ಆರ್ಥಿಕ ಅಭ್ಯುದಯ ಕುರಿತು ಸಲಹೆ ನೀಡುವುದು ಅಮೆರಿಕದ ಕೆಲಸವಲ್ಲ. ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಭಾರತೀಯರಿಗೆ ಬಿಟ್ಟದ್ದು.

ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ರಾಷ್ಟ್ರವನ್ನು ಸ್ಪರ್ಧಾತ್ಮಕಗೊಳಿಸಲು ಮತ್ತಷ್ಟು ಆರ್ಥಿಕ ಸುಧಾರಣೆಗಳು ಅಗತ್ಯ ಎಂಬ ಅಭಿಪ್ರಾಯ ಭಾರತದಲ್ಲೇ ಬಲಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ, ಭಾರತ ಯಾವುದೇ ಕಠಿಣ ಕ್ರಮ ಕೈಗೊಂಡರೂ ಅಮೆರಿಕ ಅದಕ್ಕೆ ಸಹಕರಿಸಲಿದೆ ಎಂದು ಒಬಾಮ ನುಡಿದರು.

ಜಾಗತಿಕ ಆರ್ಥಿಕ ಹಿನ್ನಡೆ ನಡುವೆಯೂ ಭಾರತದ ಸಮಾಧಾನಕರ ಆರ್ಥಿಕ ಬೆಳವಣಿಗೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತವು ತನ್ನ ನೀತಿಯಿಂದಾಗಿ ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ. ಈಗ ಜಗತ್ತಿನ ಅತ್ಯಧಿಕ ಮಧ್ಯಮ ವರ್ಗದ ಜನಸಂಖ್ಯೆ ಇರುವ ರಾಷ್ಟ್ರ ಅದಾಗಿದೆ ಎಂದು ಹೇಳಿದರು.

ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶ್ಲಾಘಿಸಿದ ಬರಾಕ್ ಒಬಾಮ, ಸಿಂಗ್ ಅವರ ಒಳನೋಟಗಳನ್ನು ತಾನು ಗೌರವಿಸುವುದಾಗಿಯೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT