ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರ ಸಂಪತ್ತು ವೃದ್ಧಿಸಿದ ಕಂಪೆನಿಗಳು

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೂಡಿಕೆದಾರರ ಪಾಲಿಗೆ 2013 ಮಿಶ್ರಫಲದ ವರ್ಷ. ಹಣಕಾಸು ಮಾರುಕಟ್ಟೆಯಲ್ಲಿನ ಅಸ್ಥಿರತೆ ಸ್ವಲ್ಪ ಸಿಹಿಯನ್ನೂ, ಸ್ವಲ್ಪ ಕಹಿಯನ್ನೂ ಹೂಡಿಕೆದಾರರಿಗೆ ಉಣಿಸಿದೆ. ಹಣ­ದುಬ್ಬರ, ಬಡ್ಡಿ ದರ ಏರಿಕೆ, ಡಾಲರ್‌ ವಿರುದ್ಧ ರೂಪಾಯಿ ಅಪಮೌಲ್ಯ, ಭಾರತೀಯ ರಿಸರ್ವ್‌ ಬ್ಯಾಂಕ್‌ ಅನುಸರಿಸಿದ ಬಿಗಿ ಹಣಕಾಸು ನೀತಿ  ಪೇಟೆಯ ಸಂಪತ್ತು ಕರಗುವಂತೆ ಮಾಡಿದೆ. ಆದರೆ, ಐ.ಟಿ ಕಂಪೆನಿಗಳು ಮಾತ್ರ ಹೂಡಿಕೆದಾರರ ಸಂಪತ್ತನ್ನು ಗಣನೀಯವಾಗಿ ವೃದ್ಧಿಸಿವೆ.

ಸಾಫ್ಟ್‌­ವೇರ್‌ ಸೇವಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿ­ಎಸ್‌) ಕಳೆದ ಐದು ವರ್ಷಗಳಿಂದ ಹೂಡಿಕೆದಾರರ ಸಂಪತ್ತನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌, ರಿಲಯನ್ಸ್‌ ಕಮ್ಯುನಿಕೇಷನ್‌ ಸಹ ಹೂಡಿಕೆದಾರರಿಗೆ ಹೆಚ್ಚು ಲಾಭ ತಂದುಕೊಟ್ಟ 100 ಕಂಪೆನಿಗಳ ಪಟ್ಟಿಯಲ್ಲಿವೆ. ಆದರೆ, ಈ ಬಾರಿ ಈ ಕಂಪೆನಿಗಳ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಕುಸಿತ ಕಂಡಿದೆ.

ಒಟ್ಟಿನಲ್ಲಿ ಬ್ಯಾಂಕಿಂಗ್‌, ಲೋಹ ವಲಯದ ಕಂಪೆನಿಗಳಿಗೆ ಹೋಲಿಸಿದರೆ ಐ.ಟಿ ಕಂಪೆನಿಗಳ ಮಾರುಕಟ್ಟೆ ಮೌಲ್ಯ ಏರಿಕೆ ಕಂಡಿದೆ ಎಂದು ಹಣಕಾಸು ಮಾರುಕಟ್ಟೆ ಅಧ್ಯಯನ ಸಂಸ್ಥೆ ‘ಮೋತಿಲಾಲ್‌ ಓಸ್ವಾಲ್‌’ ನಡೆಸಿದ ಸಮೀಕ್ಷೆ ತಿಳಿಸಿದೆ. 2008ರಿಂದ 2013ರವರೆಗೆ ಯಾವ ಯಾವ ಕಂಪೆನಿಗಳು ಹೂಡಿಕೆದಾರರ ಸಂಪತ್ತನ್ನು ಎಷ್ಟೆಷ್ಟು ವೃದ್ಧಿಸಿವೆ ಎನ್ನುವುದರ ಕುರಿತು ಸಂಸ್ಥೆ ಅಧ್ಯಯನ ನಡೆಸಿದೆ. ಕಂಪೆನಿಗಳ ಸ್ವಾಧೀನ ವಿಲೀನ ಪ್ರಕ್ರಿಯೆ, ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಲಾಭಾಂಶ ವಿತರಣೆ, ಮುಖಬೆಲೆ ಸೀಳಿಕೆ ವಿಚಾರ ಇತ್ಯಾದಿ ಸಂಗತಿಗಳ ಮೇಲೂ ಈ ಅಧ್ಯಯನ ಬೆಳಕು ಚೆಲ್ಲಿದೆ.

ಜತೆಗೆ ಹೂಡಿಕೆದಾರರ ಸಂಪತ್ತು ಕರಗಿಸಿದ 10 ಕಂಪೆನಿಗಳ ಪಟ್ಟಿಯನ್ನೂ ಮೋತಿಲಾಲ್‌ ಓಸ್ವಾಲ್‌ ತಜ್ಞರ ತಂಡ ಬಿಡುಗಡೆ ಮಾಡಿದೆ. ಇದರಲ್ಲಿ ಎಂಎಂಟಿಸಿ, ಎನ್‌ಎಂಡಿಸಿ, ಡಿಎಲ್‌ಎಫ್‌, ರಿಲಯನ್ಸ್‌ ಪವರ್‌,  ಬಿಎಚ್‌ಇಎಲ್‌, ಎಸ್‌ಎಐಎಲ್‌, ಭಾರ್ತಿ ಏರ್‌ಟೆಲ್‌, ಎನ್‌ಟಿಪಿಸಿ ಸೇರಿವೆ. ಸಂಪತ್ತು ವೃದ್ಧಿಯಲ್ಲಿ ಟಿಸಿಎಸ್‌ ಮತ್ತು ಐಟಿಸಿ ಕ್ರಮವಾಗಿ ಮೊದಲೆರಡು ಸ್ಥಾನ ಗಳಿಸಿವೆ. ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೊಸಿಸ್‌, ಸನ್‌ ಫಾರ್ಮಾ, ಒಎನ್‌ಜಿಸಿ, ಎಚ್‌ಡಿಎಫ್‌ಸಿ, ಟಾಟಾ ಮೋಟಾರ್ಸ್‌, ಎಚ್‌ಯುಎಲ್‌, ವಿಪ್ರೊ ನಂತರದ ಸ್ಥಾನಗಳಲ್ಲಿವೆ. ಐ.ಟಿ ಹೊರತು­ಪಡಿಸಿದರೆ ಭಾರಿ ಯಂತ್ರೋ­ಪಕರಣ, ಗ್ರಾಹಕ ಸರಕು ವಲಯದ ಎರಡು ಕಂಪೆನಿಗಳು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ವೇಗವಾಗಿ ಹೂಡಿಕೆದಾ­ರರ ಸಂಪತ್ತು ವೃದ್ಧಿಸಿದ ಕಂಪೆನಿ ಎಂಬ ಹೆಗ್ಗಳಿಕೆ ಈ ಬಾರಿ ‘ಟಿಟಿಕೆ ಪ್ರೆಸ್ಟೀಜ್‌’ನದ್ದಾಗಿದೆ. ಪ್ರೆಸ್ಟೀಜ್‌ನ ಷೇರು ಮೌಲ್ಯ ಕಳೆದ ಐದು ವರ್ಷಗಳಲ್ಲಿ 28 ಪಟ್ಟು ಹೆಚ್ಚಿದೆ. ಹೂಡಿಕೆದಾರರಿಗೆ ಶೇ 95ರಷ್ಟು ಲಾಭಾಂಶವನ್ನೂ ಕಂಪೆನಿ ನೀಡಿದೆ. ಹೂಡಿಕೆದಾರರ ಸಂಪತ್ತನ್ನು ಸುಸ್ಥಿರವಾಗಿ ಬೆಳೆಸಿದ ಕಂಪೆನಿ ಎನ್ನುವ ಹೆಗ್ಗಳಿಕೆ ‘ಏಷ್ಯನ್‌ ಪೇಂಟ್ಸ್‌’ಗೆ ಲಭಿಸಿದೆ. 2004ರಿಂದ 2013ರ ನಡುವೆ ಕಂಪೆನಿಯ ‘ಸಿಎಜಿಆರ್‌’ ಶೇ 36ರಷ್ಟು ಹೆಚ್ಚಳ ಕಂಡಿದೆ ಎನ್ನುವುದು ಗಮನೀಯ.

ಸದ್ಯ ಮುಂಬೈ ಷೇರುಪೇಟೆಯ ಬಂಡ­ವಾಳ ಮೌಲ್ಯ ₨67.76 ಲಕ್ಷ ಕೋಟಿಯಷ್ಟಿದೆ. ಇದರಲ್ಲಿ ಹೂಡಿಕೆ­ದಾರರ ಸಂಪತ್ತು ವೃದ್ಧಿಸಿದ ಕಂಪೆನಿಗಳ ಮಾರುಕಟ್ಟೆ ಮೌಲ್ಯ ₨5 ಸಾವಿರ ಕೋಟಿಗಿಂತಲೂ ಹೆಚ್ಚಿದೆ.  ಹಣಕಾಸು ಮಾರುಕಟ್ಟೆ ಅಸ್ಥಿರತೆ ನಡುವೆಯೂ ಮಧ್ಯಮ ಮತ್ತು ಸಣ್ಣ ಕಂಪೆನಿಗಳು ಹೂಡಿಕೆದಾರರಿಗೆ ಹೆಚ್ಚು ಲಾಭಾಂಶ ವಿತರಿಸಿವೆ ಎಂದಿದ್ದಾರೆ ‘ಮೋತಿಲಾಲ್‌ ಓಸ್ವಾಲ್‌’ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಮ್‌ದೇವ್‌ ಅಗರ್‌ವಾಲ್‌.
ಸಂಪತ್ತು ವೃದ್ಧಿಯಲ್ಲಿ ವಲಯವಾರು ಕಂಪೆನಿಗಳನ್ನು ಗಣನೆಗೆ ತೆಗೆದು­ಕೊಂಡರೆ ರಿಟೇಲ್‌ ವಲಯವೂ ಹೂಡಿಕೆದಾರರಿಗೆ ಲಾಭ ತಂದಿವೆ. 1999ರಿಂದ ರಿಟೇಲ್‌ ವಲಯ ನಿರಂತರ ಏರಿಕೆ ಕಾಣುತ್ತಿದೆ ಎಂದು ಈ ಅಧ್ಯಯನ ವಿಶ್ಲೇಷಿಸಿದೆ.

ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಸಂಪತ್ತು ವೃದ್ಧಿಯಲ್ಲಿ ಹಿಂದೆ ಬಿದ್ದಿವೆ. 2005ರಿಂದ 2013ರ ನಡುವೆ ಈ ಕಂಪೆನಿಗಳ ಷೇರು ಮೌಲ್ಯ ಶೇ 51ರಷ್ಟು ಕುಸಿತ ಕಂಡಿದೆ. ಇದೇ ವೇಳೆ  ಪ್ರತಿಸ್ಪರ್ಧಿ ಕಾರ್ಪೊರೇಟ್‌ ಕಂಪೆನಿಗಳ ಮಾರುಕಟ್ಟೆ ಮೌಲ್ಯ ಗಣನೀಯ ಏರಿಕೆ ಕಂಡಿದೆ. ತಂತ್ರಜ್ಞಾನ ಅಳವಡಿಕೆಯಲ್ಲಿ ಹಿಂದೆ ಬಿದ್ದಿರುವುದು, ಸರ್ಕಾರಿ ನೀತಿಯಲ್ಲಿನ ಮಹತ್ವದ ಬದಲಾವಣೆಗಳು, ಬಂಡ­ವಾಳ ಹೂಡಿಕೆ ಕೊರತೆಯಿಂದ ಈ ಕಂಪೆನಿಗಳು ಸ್ಪರ್ಧೆಯಲ್ಲಿ ಹಿಂದೆ ಬಿದ್ದಿದ್ದು, ಆಕರ್ಷಣೆ ಕಳೆದುಕೊಂಡಿದೆ ಎಂದು ಈ ಅಧ್ಯಯನ ತಿಳಿಸಿದೆ. ‘ಅಲ್ಪಾವಧಿ ಲಾಭಗಳಿಗೆ ಮರುಳಾ­ಗದೆ, ದೀರ್ಘಾವಧಿ ಹೂಡಿಕೆಗೆ ಗಮನ ಹರಿಸಬೇಕು. ಇದರಿಂದ ಪೇಟೆಯಲ್ಲಿ ಸ್ಥಿರತೆ ಮೂಡುತ್ತದೆ‘ ಎಂಬ ಸಲಹೆಯನ್ನೂ ಮೋತಿಲಾಲ್‌ ಓಸ್ವಾಲ್‌ ಮುಂದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT