ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಸ್ನೇಹಿ ವಾತಾವರಣ ಸೃಷ್ಟಿಸಿ

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹೀರೊ ಮೋಟೊ ಕಾರ್ಪ್ ಕಂಪೆನಿಯು ವರ್ಷಕ್ಕೆ 18 ಲಕ್ಷ  ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಬೃಹತ್‌ ಘಟಕವನ್ನು ಆಂಧ್ರ­ ಪ್ರದೇ­ಶದ ಚಿತ್ತೂರು ಜಿಲ್ಲೆಯಲ್ಲಿ ಸ್ಥಾಪಿಸುವ ಸಂಬಂಧ ಆ ರಾಜ್ಯ ಸರ್ಕಾರ­ದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕದ ಧಾರವಾಡ ಬಳಿ ಸ್ಥಾಪನೆಯಾಗ­ಬಹು­ದಾಗಿದ್ದ ಈ ಕಾರ್ಖಾನೆ ಆಂಧ್ರ ಪಾಲಾಗಲು ರಾಜ್ಯ ಸರ್ಕಾರದ ಮಂದ­ಗತಿ ಧೋರಣೆಯೂ ಒಂದು ಕಾರಣ ಆಗಿರಬಹುದು.

₨ 1,600 ಕೋಟಿ ಬಂಡ­­ವಾಳ ಹೂಡಿಕೆಯ ಈ ಕಾರ್ಖಾನೆಯನ್ನು ರಾಜ್ಯದಲ್ಲಿ ಸ್ಥಾಪಿಸುವ ಸಂಬಂಧ ಒಂದು ವರ್ಷದ ಹಿಂದೆಯೇ ಕಂಪೆನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಇಂತಹ ದೊಡ್ಡ ಕಂಪೆನಿಯು ಒಲವು ತೋರಿದ ತಕ್ಷಣ ಅದಕ್ಕೆ ಬೇಕಾದ ಭೂಮಿ, ಇತರೆ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮತ್ತಷ್ಟು ಆಸ್ಥೆ ವಹಿಸ­ಬೇಕಿತ್ತು. ಆ ಕಂಪೆನಿ ಕೇಳಿದ್ದ ಕೆಲವು ರಿಯಾಯಿತಿಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ವಿಳಂಬ ನೀತಿ ಅನುಸರಿಸಿದ್ದು ಸರಿಯಲ್ಲ. ಕಾರ್ಖಾನೆಗೆ ಒಟ್ಟು 500 ಎಕರೆ ಭೂಮಿ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರ­ಡಿಸಿದೆ ಎಂದು ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇ­ಶ­ಕರು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಆದೇಶದ ಪ್ರತಿ ಕೈಗಾರಿಕಾ ಇಲಾಖೆಯ ಅಧೀನದಲ್ಲಿಯೇ  ಇರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡ­ಳಿಗೆ ಸಿಕ್ಕಿಲ್ಲ ಎಂದರೆ ಅದು ಕಂಪೆನಿಗೆ ಯಾವಾಗ ಸಿಗುತ್ತಿತ್ತೊ? ಇದು ಆಡ­ಳಿ­ತಾ­ರೂಢರ ಇಚ್ಛಾಶಕ್ತಿ ಕೊರತೆಗೆ ಕನ್ನಡಿ. ರಾಜ್ಯದಲ್ಲಿ ಕೈಗಾರಿಕಾ ಖಾತೆಗೆ  ಪ್ರತ್ಯೇಕ  ಸಚಿವರೇ ಇಲ್ಲ. ಹತ್ತಾರು ಪ್ರಮುಖ ಖಾತೆಗಳನ್ನು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರೇ ನಿಭಾಯಿಸಲು ಸಾಧ್ಯವೇ?

ಕಳೆದ ವಾರವಷ್ಟೇ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಿದೆ. ಅದರ ಬೆನ್ನಿಗೇ ಹೀರೊ ಮೋಟೊ ಕಾರ್ಪ್‌ ಕಂಪೆನಿ ರಾಜ್ಯದಿಂದ ಹೊರ­ಹೋಗಿದೆ. ಒಂದು ಪ್ರಮುಖ ಕಂಪೆನಿ ನೆಲೆ ನಿಂತರೆ ಸಾವಿರಾರು ಮಂದಿಗೆ ಉದ್ಯೋಗ ಅವಕಾಶ ದೊರೆಯುತ್ತದೆ. ಕನಿಷ್ಠ ಆ ದೃಷ್ಟಿಯಿಂದಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು.

ಬರೀ ಬೆಂಗಳೂರು ಅಥವಾ ಅದರ ಸುತ್ತ­ ಮು­ತ್ತಲಿನ ಪ್ರದೇಶವೇ ಬೇಕು ಎಂದು ಉದ್ಯಮಿಗಳೂ ಬಯಸಬಾರದು. ಈ ಕಂಪೆನಿ ಈಗ ಚಿತ್ತೂರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ, ಬೆಂಗಳೂರಿನ ಜತೆ­­­­ಗಿ­ರುವ ಸಂಪರ್ಕ ಸೌಲಭ್ಯದ ಲೆಕ್ಕಾಚಾರ ಕಾರಣ ಇದ್ದಿರಬಹುದು. ಚಿತ್ತೂರಿ­ನಿಂದ  ಬೆಂಗಳೂರು ಕೇವಲ 178 ಕಿ.ಮೀ. ಅಂತರದಲ್ಲಿದೆ.

ಒಂದು ರಾಜ್ಯ ಸರ್ಕಾರದ ಜತೆ ಮಾತುಕತೆ ನಡೆಸುತ್ತಲೇ  ಮತ್ತೊಂದು ರಾಜ್ಯಕ್ಕೆ ಜಿಗಿಯುವ ಕಂಪೆ­ನಿಗಳ ಪ್ರವೃತ್ತಿ ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಇಲ್ಲಿ ಎದುರಾ­ಗು­ತ್ತದೆ. ಈ ಅನು­ಭವಗಳಿಂದ ಸರ್ಕಾರ ಪಾಠ ಕಲಿಯಬೇಕು.  ಹೂಡಿಕೆ­ಸ್ನೇಹಿ ವಾತಾವರಣ ಸೃಷ್ಟಿಸಬೇಕು. ಉದ್ಯಮಗಳ ಸ್ಥಾಪನೆಗೆ ಆಸಕ್ತಿ ತೋರು­ವವರ ಮನವಿಗೆ ತಕ್ಷಣ ಸ್ಪಂದಿಸಬೇಕು. ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಕೈಗಾರಿಕೆಗಳು ಬೆಳೆಯುವಂತೆ ನೋಡಿಕೊಳ್ಳಬೇಕು. ಜಿಲ್ಲೆ­ಗೊಂದು ಬೃಹತ್‌ ಉದ್ಯಮ ಸ್ಥಾಪನೆ ಸರ್ಕಾರದ ಗುರಿ, ಆದ್ಯತೆ ಆಗಬೇಕು. ಅಂಥ ಕೈಗಾರಿಕಾ ನೀತಿ ರೂಪಿಸಿ ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಪ್ರದರ್ಶಿ­ಸ­ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT