ಬಾಡಿಗೆ ಪಾವತಿ ಆಗದೇ ಇರುವ ಹಿನ್ನೆಲೆಯಲ್ಲಿ ಆರ್.ಆರ್.ಶಿಪ್ಪಿಂಗ್ ಬಂದರು ಇಲಾಖೆ ನೀಡುತ್ತಿರುವ ಸೇವೆಯನ್ನು ನಿಲ್ಲಿಸಿದೆ. ಬಾಡಿಗೆ ಪಡೆವ ಕುರಿತು ಆರ್.ಆರ್.ಶಿಪ್ಪಿಂಗ್ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ, ಬಂದರು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿತ್ತು. ಆದರೆ ಅಧಿಕಾರಿಗಳು ಸೂಕ್ತ ಉತ್ತರ ನೀಡದೇ ಇರುವುದರಿಂದ ಟಗ್ ಸೇವೆ ನಿಲ್ಲಿಸಲು ಶಿಪ್ಪಿಂಗ್ ನಿರ್ಧರಿಸಿದೆ. ಟಗ್ ಸೇವೆ ನಿಂತಿದ್ದರಿಂದ ಕಾರವಾರ ವಾಣಿಜ್ಯ ಬಂದರಿನಲ್ಲಿ ಹಡಗುಗಳ ಆಗಮನ ನಿಂತಿದೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿದೆ. ಟಗ್‌ನ ಬಾಡಿಗೆ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಿ ಬಂದರಿನಲ್ಲಿ ವಹಿವಾಟು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಬಂದರು ಬಳಕೆದಾರರ ಸಂಘ ಸರಕಾರವನ್ನು ಆಗ್ರಹಿಸಿದೆ.