ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ತೋಟಕೆ ನೀರೆರೆದು...

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹುಯ್ಯೋ ಹುಯ್ಯೋ ಮಳೆರಾಯ
ಪರಿಕಲ್ಪನೆ: ನಗೀನ್ ಅಹಮದ್
ಪು: 71; ಬೆ: ರೂ. 250
ಪ್ರ: ಪರಿಸರ ಪ್ರೀತಿ ಪ್ರಕಾಶನ
ಕಟ್ಟಡ 95, ಮನೆ ನಂ. 198, ಕೆಂಗೇರಿ ಉಪ ನಗರ, ಕೆಎಚ್‌ಬಿ ಕಾಲೋನಿ, ಬೆಂಗಳೂರು- 60

ಇಲ್ಲಿಯವರೆಗೆ ಕನ್ನಡದ ನಿಯತಕಾಲಿಕೆ, ವಾರಪತ್ರಿಕೆಗಳಲ್ಲಿ ಫೋಟೊ ಕಾಮಿಕ್ಸ್ ಪ್ರಕಾರ ಬಳಕೆಯಲ್ಲಿತ್ತು. ಬಹುತೇಕ ಪತ್ತೇದಾರಿ ಕತೆಗಳನ್ನು ಹೇಳಿದ್ದೇ ಇದರ ಹೆಗ್ಗಳಿಕೆಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಹಸಿರಿನ ಕತೆ ಹೇಳಲು ಇದನ್ನು ಬಳಸಲಾಗಿದೆ. ಕೇವಲ ಧಾರಾವಾಹಿ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಪ್ರಕಾರ, ನಗೀನ್ ಅಹಮದ್‌ರ `ಹುಯ್ಯೋ ಹುಯ್ಯೋ ಮಳೆರಾಯ' ಕೃತಿಯ ಮೂಲಕ ಪುಸ್ತಕ ರೂಪಕ್ಕೂ ಒಗ್ಗಿಕೊಂಡಿದೆ.

ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯತ್ನ.ದೃಶ್ಯ-ಶ್ರವ್ಯ ಮಾಧ್ಯಮದ ಪ್ರತಿನಿಧಿಯಾದ ಸಾಕ್ಷ್ಯಚಿತ್ರದಲ್ಲಿ ಇಂಥದ್ದೊಂದು ಕತೆ ಹೇಳುವುದು ಸುಲಭ. ಆದರೆ ಅದನ್ನೇ ಸಚಿತ್ರ ಕೋಶವಾಗಿ ಸೃಷ್ಟಿಸುವುದು ಭಿನ್ನ ಬಗೆಯ ಸಾಹಸ. ಸಾಕ್ಷ್ಯಚಿತ್ರವೊಂದರ ಎಲ್ಲ ಸಾಮರ್ಥ್ಯಗಳು ಪುಸ್ತಕಕ್ಕೆ ಒದಗಿರುವುದು ಕೃತಿಯ ವೈಶಿಷ್ಟ್ಯಗಳಲ್ಲಿ ಒಂದು.

ಸಾಹಿತ್ಯದ ವಿದ್ಯಾರ್ಥಿಯಾಗಿ, ಉಪನ್ಯಾಸಕರಾಗಿ, ರಂಗನಟರಾಗಿ ಗುರುತಿಸಿಕೊಂಡಿರುವ ಲೇಖಕರು ತಮ್ಮ ಅನುಭವಗಳನ್ನು ಪುಸ್ತಕಕ್ಕೆ ಧಾರೆ ಎರೆದಿದ್ದಾರೆ. `ಚಿತ್ರ-ಕತೆ'ಗೆ ಸ್ವತಃ ಸಂಭಾಷಣೆಯನ್ನೂ ಬರೆದಿರುವ ಅವರು ಗ್ರಾಮ್ಯ ಕನ್ನಡದ ಸೊಗಡನ್ನು ವಿಶಿಷ್ಟ ರೀತಿಯಲ್ಲಿ ಹಿಡಿದಿಟ್ಟಿದ್ದಾರೆ. ಮಕ್ಕಳಿಗೆ ಕಾಮಿಕ್ಸ್ ಇಷ್ಟ ಎಂಬುದನ್ನು ಅಧ್ಯಯನದ ಮೂಲಕ ಅರಿತ ಲೇಖಕರು ಅದೇ ಮಾಧ್ಯಮದ ಮೂಲಕ ತಮ್ಮ ಕನಸುಗಳನ್ನು ಬಿತ್ತಿದ್ದಾರೆ. ಆ ಮೂಲಕ ಛಾಯಾಗ್ರಹಣ, ಅಕ್ಷರ ಹಾಗೂ ಮೌಖಿಕ ಪರಂಪರೆಯನ್ನು ಒಟ್ಟಿಗೆ ದುಡಿಸಿಕೊಂಡಿದ್ದಾರೆ. 

ಪರಿಸರ ಸಮಸ್ಯೆ ಕೇವಲ ಒಂದು ಹಳ್ಳಿಗೆ ಸೀಮಿತವಾದುದಲ್ಲ. ಕಟ್ಟಿಗೆಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕತೆ ನಿಧಾನವಾಗಿ ಜಾಗತಿಕ ಸ್ವರೂಪ ಪಡೆಯುತ್ತದೆ. ಮರ ಕಡಿಯುವುದರ ಅಪಾಯಗಳು, ಮಾಲಿನ್ಯದ ವಿವಿಧ ರೂಪಗಳನ್ನು ಬಿಂಬಿಸುತ್ತ ಹೋಗುತ್ತದೆ. ವಾಚ್ಯದ ಮಿತಿಗೆ ಸಿಲುಕದೆ ಧ್ವನಿಪೂರ್ಣವಾಗಿ ಅಂತ್ಯಗೊಂಡಿರುವುದು, ನೀತಿಕತೆಗಳ ಬೋಧನೆಗೆ ಸೀಮಿತವಾಗದೆ ಹೊಸ ವಿಸ್ತಾರಕ್ಕೆ ಚಾಚಿಕೊಂಡಿರುವುದು ಕತೆಯ ಮೊನಚು ಹೆಚ್ಚಲು ಕಾರಣ.

ಅದೇ ಹೊತ್ತಿಗೆ ಹಳ್ಳಿಯ ಮನಸ್ಸು ಬದಲಾಗುತ್ತಿರುವುದನ್ನು ಸೂಕ್ಷ್ಮ ರೀತಿಯಲ್ಲಿ ಪುಸ್ತಕ ಚಿತ್ರಿಸುತ್ತದೆ. ಮರಗಳನ್ನು ದೇವರೆಂದು ಪೂಜಿಸುತ್ತಿದ್ದ ಮುಗ್ಧತೆ ಹೊರಟು ಹೋಗಿ ಗರಗಸವನ್ನು ಪೂಜಿಸುವ ಘಾತುಕತೆ ಕುರಿತು ಕಥನ ವ್ಯಂಗ್ಯವಾಡುತ್ತದೆ. ಮೌಢ್ಯಗಳನ್ನು ಚಿತ್ರಿಸುತ್ತಲೇ ಅವುಗಳ ನಿಶ್ಶಕ್ತಿಯನ್ನೂ ಬಿಂಬಿಸುತ್ತ ವೈಚಾರಿಕತೆಯ ಬೀಜ ಬಿತ್ತುತ್ತದೆ. `ಮಕ್ಕಳಿಗೆ ಮಾತ್ರ' ಎಂದು ವಿಂಗಡಿಸಲಾರದಷ್ಟು ಪ್ರಬುದ್ಧ ವಿಷಯಗಳು ಕಥನದಲ್ಲಿ ಅಡಕವಾಗಿವೆ.

ಕತೆಗೆ ಮತ್ತೊಂದು ಆಯಾಮ ಸೃಷ್ಟಿಸಿರುವುದು ಇಲ್ಲಿನ ಪೌರಾಣಿಕ ಪಾತ್ರಗಳು. ಯಮ- ಚಿತ್ರಗುಪ್ತ, ಇಂದ್ರ, ವರುಣ, ಮೇಘರಾಜ, ವನದೇವಿ ಇತ್ಯಾದಿ ಪಾತ್ರಗಳು ಮಕ್ಕಳ ಕಲ್ಪನೆಯನ್ನು ಹಿಗ್ಗಿಸುವಂತಿವೆ. ಪ್ರಕೃತಿಯ ದಾರುಣ ಸ್ಥಿತಿಗೆ ಕನ್ನಡಿ ಹಿಡಿವಂತೆ ಅಳುತ್ತ ಕುಳಿತ ವನದೇವಿ. ಯಮನನರಕವನ್ನೂ ನಾಚಿಸುವ ನರರ ನರಕ. ಬುದ್ಧಿವಂತರು ಮತಿಹೀನರಾಗುತ್ತಿರುವ ಹೊತ್ತಿನಲ್ಲಿ ಜ್ಞಾನಿಯಂತೆ ಮಾತನಾಡುವ ಮತಿಹೀನ. ಮಾತು ಕೇಳದ ಊರಿನವರಿಂದ ಬುದ್ಧ ದೂರವಾದಂತೆ ಹಳ್ಳಿ ತೊರೆದು ಅಡವಿ ಪಾಲಾದ ಇಲ್ಲಿಯ ಅವಧೂತ. ನಾಡಿನಿಂದ ಕಾಡಿನೆಡೆಗೆ ಹೆಜ್ಜೆ ಹಾಕುವ ಹಳ್ಳಿಗರು... ಇವೆಲ್ಲ ಕಥನದ ಉತ್ತಮ ರೂಪಕಗಳು.

ಯು.ವಿ. ನಂಜಪ್ಪ, ಕೆ. ಪ್ರದೀಪ್, ನಗೀನ್ ಅಹಮದ್ ನಿರ್ಮಾಣದ ಬೇರೆ ಬೇರೆ ಹೊಣೆಗಳ ಜತೆಗೆ ನಟನೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಶೈಲಶ್ರೀ, ಮೇಘ, ನಿಖಿಲ್ ಗೌಡ, ಎಂ. ಕೀರ್ತನಾ ಚಿಣ್ಣರ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವನದೇವಿಯ ಪಾತ್ರದಲ್ಲಿ ಪದ್ಮಶ್ರೀ, ಅಜ್ಜಿಯಾಗಿ ಕಲ್ಯಾಣಿ ಪ್ರಸಾದ್, ಸೂತ್ರಧಾರನಾಗಿ ದೇವರಾಜ್, ಗ್ರಾಮಸ್ಥೆಯಾಗಿ ಕಲಾವತಿ ಅವರ ಪಾತ್ರಗಳು ಗಮನ ಸೆಳೆಯುತ್ತವೆ. 

ಕತೆಯ ಅಂದವನ್ನು ಹೆಚ್ಚಿಸಿರುವುದು ಮಹಲಿಂಗಪ್ಪ ಅವರ ಛಾಯಾಗ್ರಹಣ. ನೆರಳು ಬೆಳಕಿನ ಆಟದೊಡನೆ ಪ್ರತಿಯೊಂದು ಛಾಯಾಚಿತ್ರವೂ ಕಲಾಕೃತಿಯ ಸ್ವರೂಪ ಪಡೆದಿದೆ. `ಸಂಗ್ರಹ'ದಿಂದ ಕೆಲವು ಚಿತ್ರಗಳನ್ನು ಆಯ್ದುಕೊಳ್ಳಲಾಗಿದೆ. ಅವುಗಳ ಮೂಲ ಛಾಯಾಗ್ರಾಹಕರ ಬಗ್ಗೆ ಕೃತಿ ಏನನ್ನೂ ಹೇಳಿಲ್ಲ.

ಫೋಟೊ ಕಾಮಿಕ್ಸ್‌ಗಳ ಮಹತ್ವ ಅಡಗಿರುವುದು ಕೇವಲ ಛಾಯಾಚಿತ್ರಗಳಲ್ಲಿ ಅಲ್ಲ. ಆ ಚಿತ್ರಗಳ ವಿನ್ಯಾಸ ಕೂಡ ಅತಿ ಮುಖ್ಯ. ಹೊಸ ತಂತ್ರಗಳಿಗೆ ಮೊರೆ ಹೋಗದ ಕೆ. ಪುರುಷೋತ್ತಮ ಅವರ ಪುಸ್ತಕ ವಿನ್ಯಾಸ ಸರಳತೆಯಿಂದ ಸೆಳೆಯುತ್ತದೆ. 

ಮಕ್ಕಳಿಗೆ ಕತೆ ಹೇಳಬೇಕು. ಆದರೆ ಬಹುಮಾಧ್ಯಮಗಳು, ನವಮಾಧ್ಯಮಗಳ ಇಂದಿನ ಸಂದರ್ಭದಲ್ಲಿ ಅವು `ಕೇಳು- ಕತೆ' ಅಥವಾ `ಓದು- ಕತೆ'ಯಾಗಿದ್ದರೆ ಸಾಲದು. ಬದಲಿಗೆ `ನೋಡು- ಕತೆ'ಯೂ ಆಗಿರುವುದು ಅಗತ್ಯ. ಸಾಕ್ಷ್ಯಚಿತ್ರವಾದರೆ ಕೇವಲ ಗಂಟೆ- ಅರ್ಧಗಂಟೆಯಲ್ಲಿ ಮೂಡಿ
ಮಾಯವಾಗುತ್ತದೆ. ಆದರೆ ಪುಸ್ತಕ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಬಲ್ಲದು ಎಂಬುದಕ್ಕೆ ಈ ಕೃತಿ ಸಾಕ್ಷಿ. ಇಂಥ ಪ್ರಯತ್ನಗಳು ಹೆಚ್ಚಾಗಿ ನಡೆದರೆ ಚಿಣ್ಣರ ಕಲ್ಪನಾ ಜಗತ್ತು ಮತ್ತಷ್ಟು ಹಿಗ್ಗಬಲ್ಲದು. ರಂಜನೆಯ ಜತೆಗೆ ಬೋಧನೆಯ ಗುರಿಯೂ ಸುಲಭವಾಗಿ ಈಡೇರಬಲ್ಲದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT