ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ಮಾರುಕಟ್ಟೆಗೆ ಹೈಟೆಕ್ ಸ್ಪರ್ಶ

Last Updated 15 ಸೆಪ್ಟೆಂಬರ್ 2011, 6:40 IST
ಅಕ್ಷರ ಗಾತ್ರ

ಅಂಕುಡೊಂಕು ಕಲ್ಲುಹಾಸು. ಅದರ ಮೇಲೆಯೇ ಹೂವುಗಳ ರಾಶಿ. ಅಲ್ಲಿ ನಿತ್ಯ ಲಕ್ಷಾಂತರ ರೂಪಾಯಿಯ ಹೂವಿನ ವಹಿವಾಟು. ಮಳೆ, ಚಳಿ, ಬಿಸಿಲು ಎನ್ನದೇ ವ್ಯಾಪಾರ. ಸೂಕ್ತ ಮಾರುಕಟ್ಟೆ ಇಲ್ಲದ್ದಕ್ಕೆ `ಹೂವುಗಳು ಮಳೆಗೆ ರಾಡಿಯಾಗುತ್ತವೆ; ಬಿಸಿಲಿಗೆ ಬಾಡಿ ಹೋಗುತ್ತಿವೆ~.

- ಇದು ದಾವಣಗೆರೆ ನಗರದ ಹೂವಿನ ವ್ಯಾಪಾರಿಗಳ ನಿತ್ಯದ ಗೋಳು.
ಸೂಕ್ತ ಮಾರುಕಟ್ಟೆ ಇಲ್ಲದೇ ಪಿ.ಬಿ. ರಸ್ತೆಯ ಪಕ್ಕದಲ್ಲಿ ಹತ್ತಾರು ವರ್ಷಗಳಿಂದಲೂ ಹೂವಿನ ವಹಿವಾಟು ನಡೆಯುತ್ತಿದೆ. ಕೆಲವು ವ್ಯಾಪಾರಿಗಳು ಬಾಡಿಗೆ ಕೊಠಡಿ ಪಡೆದು ವ್ಯಾಪಾರ ನಡೆಸುತ್ತಿದ್ದಾರೆ.

`ಹೂವು ಚೆಲುವೆಲ್ಲಾ ನಂದೆಂದಿತು...~ ಎನ್ನಬೇಕಿತ್ತು. ಆದರೆ, ರಾಜ್ಯದ ತುಮಕೂರು, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ನಾನಾ ಜಿಲ್ಲೆಗಳಿಂದ ಬಂದ ಹೂವುಗಳು ಇಲ್ಲಿ ಘಮಘಮಿಸುತ್ತಿಲ್ಲ. ಅದಕ್ಕೆ ಮಾರುಕಟ್ಟೆಯ ಅವ್ಯವಸ್ಥೆ ಕಾರಣ.

ಇಷ್ಟು ದಿವಸನಗಳ ಇಂತಹ ಅವ್ಯವಸ್ಥೆಗೆ ಸದ್ಯದಲ್ಲೇ ಮುಕ್ತಿ ಸಿಗಲಿದೆ. ಅದಕ್ಕೆ ಕಾರಣ `ಹೈಟೆಕ್ ಪುಷ್ಪ ಹರಾಜು ಕೇಂದ್ರ~ ಸ್ಥಾಪನೆ. ಇಲ್ಲಿನ ಆರ್‌ಎಂಸಿ ಯಾರ್ಡ್‌ನಲ್ಲಿ ಸದ್ಯದಲ್ಲೇ ಕೇಂದ್ರ ಉದ್ಘಾಟನೆಗೊಂಡು ಹೂವುಗಳು ವೈಜ್ಞಾನಿಕವಾಗಿ ಶೇಖರಣೆಗೊಳ್ಳುವ ಮೂಲಕ ಹೊರರಾಜ್ಯಗಳಿಗೆ ಸೇರುವ ಭಾಗ್ಯ ಲಭಿಸಲಿದೆ.

ಕೇಂದ್ರದಲ್ಲಿ ಇಂಟರ್‌ನೆಟ್ ಸೇವೆಯ ಕಂಪ್ಯೂಟರ್ ವ್ಯವಸ್ಥೆ, ಮಾರಾಟ ಮಾಡುವ ಸ್ಥಳ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದರಗಳ ಬಗ್ಗೆ ಮಾಹಿತಿ, ಖರೀದಿದಾರರ ಸಂಪೂರ್ಣ ವಿಳಾಸ ಸೇರಿದಂತೆ ಇತರ ಮಾಹಿತಿಗಳೂ ಕ್ಷಣಾರ್ಧದಲ್ಲಿ ರೈತರಿಗೆ ಸಿಗಲಿವೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಬದಲು ರೈತರು ಕೇಂದ್ರಕ್ಕೆ ಹೂವನ್ನು ತಂದರೆ ಸಾಕು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂವಿಗೆ ಇರುವ ಧಾರಣೆ ನೋಡಿ ವ್ಯಾಪಾರ ಮಾಡಬಹುದು. ಧಾರಣೆಯ ವ್ಯತ್ಯಾಸವೂ ಕೂಡ ತಪ್ಪುತ್ತದೆ.

ಇಲ್ಲಿಂದ ಶಿವಮೊಗ್ಗ, ಶಿರಸಿ, ಹುಬ್ಬಳ್ಳಿ, ಮಹಾರಾಷ್ಟ್ರಕ್ಕೆ ನಿತ್ಯ ವಿವಿಧ ಬಗೆಯ ಹೂವುಗಳು ಸರಬರಾಜಾಗುತ್ತವೆ. ರಾತ್ರಿ ಕಟ್ಟಿದ ಹೂವುಗಳನ್ನು ರೈತರು ನೇರವಾಗಿ ತಂದು ಏಜೆಂಟ್ ಮೂಲಕ ವ್ಯಾಪಾರ ಮಾಡುತ್ತಾರೆ. ಬೆಳಿಗ್ಗೆ ಬಿಡಿ ಹೂವಿನ ವಹಿವಾಟು ನಡೆಯುತ್ತದೆ. ರೈತರೇ ನೇರವಾಗಿ ಅಂಗಡಿಗೆ ಕಮಿಷನ್ ನೀಡಿ ವ್ಯಾಪಾರ ಮಾಡುವುದೂ ಉಂಟು. ಆದ್ದರಿಂದ, ಆಧುನಿಕ ಮಾರುಕಟ್ಟೆ ವ್ಯವಸ್ಥೆ ಬೇಕು ಎಂಬುದು ನಮ್ಮ ಬಹುದಿನಗಳ ಬೇಡಿಕೆಯಾಗಿತ್ತು ಎನ್ನುತ್ತಾರೆ ವ್ಯಾಪಾರಿಗಳು.

`ಕೆಲವು ಜಾತಿಯ ಹೂವುಗಳಿಗೆ ವೈಜ್ಞಾನಿಕ ಶೇಖರಣೆ ಅಗತ್ಯ. ಈ ವ್ಯವಸ್ಥೆಯಿಲ್ಲದ್ದಕ್ಕೆ ಹೂವುಗಳೆಲ್ಲಾ ಹಾಳಾಗುತ್ತಿವೆ. ಇದರಿಂದ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ. ಕೆಲವೊಮ್ಮೆ ಈಗಿರುವ ಮಾರುಕಟ್ಟೆಯಲ್ಲಿ ಬೆಳಕೂ ಇರುವುದಿಲ್ಲ. ಕತ್ತಲೆಯಲ್ಲೇ ವ್ಯಾಪಾರ ಮಾಡುವ ಸ್ಥಿತಿಯಿದೆ. ಕಾಕಡ ಮಲ್ಲಿಗೆಯನ್ನು ರೈತರು ತುಮಕೂರು ಜಿಲ್ಲೆಯ ನರಸಿಂಹಬೂದಿಯಿಂದ ಇಲ್ಲಿಗೆ ತರುತ್ತಾರೆ. ಇಲ್ಲಿ ಅವುಗಳ ಕಟ್ಟು ಬಿಚ್ಚಿ ಹೊಸ ಪೆಂಡಿ ಮಾಡಬೇಕು. ರಾತ್ರಿ ಸ್ಥಳಾವಕಾಶವೇ ಇರುವುದಿಲ್ಲ. ಹಾಗಾಗಿ, ಹೂವುಗಳೆಲ್ಲಾ ಕೆಟ್ಟು ಹೋಗುವ ಸಂದರ್ಭವೇ ಹೆಚ್ಚು~ ಎನ್ನುತ್ತಾರೆ ಹೂವಿನ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಮಲ್ಲಪ್ಪ.

`ನಗರದಲ್ಲಿ ್ಙ 1.99 ಕೋಟಿ ವೆಚ್ಚದಲ್ಲಿ `ಹೈಟೆಕ್ ಪುಷ್ಪಾ ಹರಾಜು ಕೇಂದ್ರ~ದ ಕಟ್ಟಡ ನಿರ್ಮಾಣವಾಗಿದೆ. ಅದರಲ್ಲಿ 16 ಮಳಿಗೆಗಳನ್ನು ನಿರ್ಮಿಸಲಾಗಿದೆ. ಹರಾಜು ಕೇಂದ್ರ, ಕ್ಯಾಂಟೀನ್, ರೈತರಿಗೆ ವಸತಿ ವ್ಯವಸ್ಥೆ, ಕಚೇರಿ ನಿರ್ಮಿಸಲಾಗಿದೆ. ಪೇಟಿಂಗ್, ಎಲೆಕ್ಟ್ರಿಕ್ ಕೆಲಸ ಮಾತ್ರ ಬಾಕಿಯಿದ್ದು, ಪಿ.ಬಿ. ರಸ್ತೆಯಲ್ಲಿ ನಡೆಯುತ್ತಿರುವ ಮಾರುಕಟ್ಟೆಯನ್ನು ಅಲ್ಲಿಗೆ ಸ್ಥಳಾಂತರಿಸುವುದು ನಮ್ಮ ಉದ್ದೇಶ. ಶೀಘ್ರ ರೈತರು, ವ್ಯಾಪಾರಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಲಾಗುವುದು~ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕದಿರೇಗೌಡ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT