ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಿಂದಲೇ ಬದುಕು

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಸೂಜಿ ಮಲ್ಲಿಗೆ, ಕಾಕಡ, ಸುಗಂಧರಾಜ, ಗುಲಾಬಿ... ಈ ಗ್ರಾಮದಲ್ಲಿ ವಿವಿಧ ಬಗೆಯ ಹೂವಿನ ತೋಟಗಳೇ ಕಾಣುತ್ತವೆ. ಕರ್ನಾಟಕ- ಆಂಧ್ರಪ್ರದೇಶ ಗಡಿಯಲ್ಲಿರುವ ಬೀದರ್ ತಾಲ್ಲೂಕಿನ ಈ ಊರಿನ ಹೆಸರು ಸುಲ್ತಾನ್‌ಪುರ (ಜೆ). ಹೂವು ಇಲ್ಲಿ ಕೇವಲ ಅಲಂಕಾರಿಕವಷ್ಟೇ ಅಲ್ಲ. ಹೆಚ್ಚಿನ ಕುಟುಂಬಗಳಿಗೆ ಆದಾಯದ ಮೂಲ, ಬದುಕು ಕಟ್ಟಿಕೊಡುವ ಮಾರ್ಗ.

ಜಿಲ್ಲೆಯ ಇತರೆಡೆ ಬರ ಇದ್ದರೂ ಇಲ್ಲಿನ ಹೂ ಬೆಳೆಗಾರ ಕುಟುಂಬಗಳಿಗೆ ಅದರ ಪರಿಣಾಮ ಅಷ್ಟಾಗಿ ಬಾಧಿಸುವುದಿಲ್ಲ. ಏಕೆಂದರೆ ನೀರಾವರಿ ಸೌಲಭ್ಯ ಇರುವ ಕುಟುಂಬಗಳು ಕನಿಷ್ಠ ಒಂದು ಎಕರೆಯಲ್ಲಾದರೂ ಹೂವು ಬೆಳೆಯುತ್ತವೆ. ಇಲ್ಲಿ ಬೆಳೆಯುವ ಹೂವು ಬೀದರ್‌ನ ಮಾರುಕಟ್ಟೆಯಷ್ಟೇ ಅಲ್ಲ; ನೆರೆಯ ಹೈದರಾಬಾದ್‌ಗೂ ಹೋಗುತ್ತದೆ.

`ಹೂವು ಇದೆ ಎಂದೇ ನಾವು ಉಳಿದಿದ್ದೇವೆ. ಇಲ್ಲವಾದಲ್ಲಿ ಎಂದೋ ಗುಳೆ ಹೋಗಬೇಕಾಗಿತ್ತು~ ಎನ್ನುವುದು ಹೂವು ಬೆಳೆಯುವ ರೈತ ನಾಗಶೆಟ್ಟಿ ಅವರ ಮಾತು. ಪುಷ್ಪಕೃಷಿಯ ಮೇಲೆ ಅವರ ಅವಲಂಬನೆ, ಚಟುವಟಿಕೆ ಗಮನಿಸಿದರೆ ಅದು ಅತಿಶಯೋಕ್ತಿ ಎನಿಸುವುದಿಲ್ಲ.

ಬೀದರ್‌ನಿಂದ ಸುಮಾರು 4-5 ಕಿ.ಮೀ. ದೂರದ ಸುಲ್ತಾನ್‌ಪುರ ಗ್ರಾಮದಲ್ಲಿ ನೀರಾವರಿ ಸೌಲಭ್ಯ ಇರುವ ಸುಮಾರು 40-50 ಕುಟುಂಬಗಳು ಹೀಗೆ ಪುಷ್ಪ ಕೃಷಿ ಅವಲಂಬಿಸಿವೆ. ಬಹುತೇಕ ಕೃಷಿ ಕೂಲಿ ಕಾರ್ಮಿಕರಿಗೂ ಪುಷ್ಪಕೃಷಿ ಉದ್ಯೋಗವನ್ನು ಒದಗಿಸಿದೆ. ಹೀಗಾಗಿ, ಪುಷ್ಪಕೃಷಿ ಈ ಊರಿನ ಬಂಧು.

ನಾಗಶೆಟ್ಟಿ ಅವರು ಸೂಜಿ ಮಲ್ಲಿಗೆ, ಗುಲಾಬಿ ಬೆಳೆಯುತ್ತಾರೆ. ಅವರು ಹೇಳುವಂತೆ ಪ್ರಸ್ತುತ ಸೂಜಿ ಮಲ್ಲಿಗೆ ಕಿಲೋಗೆ 300 ರೂಪಾಯಿ ಇದೆ. `ನಿತ್ಯ ಎರಡು-ಮೂರು ಕಿಲೋ ಸಿಗುತ್ತದೆ. ಇದನ್ನು ಬೀದರ್‌ನ ಹೂವಿನ ಮಾರುಕಟ್ಟೆಗೆ ಒಯ್ದು ಕೊಡುತ್ತೇವೆ. ಫಸಲು ಚೆನ್ನಾಗಿರುವ ಕಾರಣ ಬದುಕು ನಡೆಯುತ್ತಿದೆ~.

ಪತ್ನಿಯೊಂದಿಗೆ ಬೆಳಿಗ್ಗೆಯೇ ತೋಟಕ್ಕೆ ಬರುವ ಅವರು ಸುಮಾರು ಒಂದು ಗಂಟೆ ಹೂವಿನ ಮೊಗ್ಗು ಸಂಗ್ರಹಿಸುತ್ತಾರೆ. ಮೊಗ್ಗು ಜಾಸ್ತಿ ಇದ್ದರೆ ಕೂಲಿಯೊಬ್ಬರಿಗೆ ಕೆಲಸ ಸಿಗುತ್ತದೆ. ಒಂದು ಕಿಲೊ ಮೊಗ್ಗು ಕಿತ್ತರೆ 60 ರೂಪಾಯಿ ಕೂಲಿ ಸಂದಾಯವಾಗುತ್ತದೆ. ಮೊಗ್ಗು ಪ್ರಮಾಣ ಆಧರಿಸಿ ಕೂಲಿಯಾಳುಗಳ ಸಂಖ್ಯೆಯೂ ಹೆಚ್ಚಬಹುದು.

ಆದರೆ, ಇತ್ತೀಚಿಗೆ ಅಂತರ್ಜಲ ಕಡಿಮೆ ಆಗುತ್ತಿದೆ ಎಂಬುದು ಪುಷ್ಪ ಕೃಷಿಕರನ್ನು ಆತಂಕಕ್ಕೆ ಗುರಿಮಾಡಿದೆ. `ಬೋರ್‌ವೆಲ್ ಇದ್ದರೂ ನೀರಿನ ಪ್ರಮಾಣ ಕಡಿಮೆ. ಜೊತೆಗೆ ಕರೆಂಟ್ ಸಮಸ್ಯೆಯೂ ಇದೆ. ನೀರು ಹಾಯಿಸದಿದ್ದರೆ ಗಿಡ ಒಣಗುತ್ತದೆ. ಹೂವು ಬಾಡುತ್ತದೆ. ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಒಮ್ಮೆ ಹಾಯಿಸಿದರೆ ಒಂದು ಸಾಲಿಗೆ ನೀರು ದಕ್ಕುತ್ತದೆ. ಉಳಿದಂತೆ, ಸಮಸ್ಯೆಯೇ~ ಎನ್ನುತ್ತಾರೆ ರೈತ ಮಹಿಳೆ ಮಹಾದೇವಿ.

~ಸಾಮಾನ್ಯವಾಗಿ ಮದುವೆ ಸಂದರ್ಭದಲ್ಲಿ ಬೇಡಿಕೆ ಹೆಚ್ಚು. ಆಗ ಸ್ವಲ್ಪ ಹೆಚ್ಚಿನ ಶ್ರಮ ಹಾಕಬೇಕು. ಸುಗಂಧರಾಜ ಹೂವಿಗೆ ಕಿಲೋಗೆ 120 ರೂಪಾಯಿ ಇದೆ. ನಿತ್ಯ 5 ರಿಂದ 6 ಕಿಲೋಕ್ಕೇನೂ ಮೋಸವಿಲ್ಲ. ಕನಿಷ್ಠ ಎರಡು ಗಂಟೆ ಶ್ರಮ ಹಾಕಬೇಕು~ ಎಂದು ಎರಡೂ ಕೈಯಲ್ಲಿ ಸುಗಂಧರಾಜ ಹಿಡಿದು ಸಂಭ್ರಮಿಸುವ ಶಿವಕುಮಾರ್ ಹೇಳುತ್ತಾರೆ.

ಬೆಳಿಗ್ಗೆಗೇ ಹೂವಿನ ತೋಟಕ್ಕೆ ಬರುವ ಅವರಿಗೆ ಮಗನೂ ಸಾಥ್ ನೀಡುತ್ತಾರೆ. ಇಬ್ಬರೂ ಒಟ್ಟಿಗೆ ಕೈಹಾಕಿದರೆ ಒಂದೆರಡು ಗಂಟೆಯಲ್ಲಿ 4-5 ಕಿಲೋ ಹೂವು ಮಡಿಲು ಸೇರುತ್ತದೆ. ಅವನ್ನು ಮಾರುಕಟ್ಟೆಗೆ ತಲುಪಿಸಿದರೆ ಆಯಿತು. ನಾಳೆ ಬೆಳಿಗ್ಗೆಯವರೆಗೂ ಉಸಾಬರಿ ಇರುವುದಿಲ್ಲ.

`ಸಮೀಪದ ಹೈದರಾಬಾದ್‌ನಲ್ಲಿ ಹೂವಿಗೆ ಹೆಚ್ಚು ಬೇಡಿಕೆ ಬಂದಾಗ ವ್ಯಾಪಾರಿಗಳು ತೋಟದ ಬಳಿಗೇ ಬಂದು ಹೂವು ಖರೀದಿಸುವುದೂ ಇದೆ. ಆ ಸಂದರ್ಭದಲ್ಲಿ ಸಾಗಣೆ  ವೆಚ್ಚ ಉಳಿಯುತ್ತದೆ. ಇಲ್ಲವಾದರೆ ನೇರವಾಗಿ ನಾವೇ ಹೂವನ್ನು ಮಾರುಕಟ್ಟೆಗೆ ತಲುಪಿಸಬೇಕು~ ಎನ್ನುತ್ತಾರೆ ಮಹಾದೇವಿ.

ಸುಲ್ತಾನ್‌ಪುರ (ಜೆ) ಗ್ರಾಮದಲ್ಲಿರುವ ಹೂವಿನ ತೋಟಗಳು ಬಹುತೇಕ ಆಸುಪಾಸಿನ, ನೆರೆಯ ಆಂಧ್ರಪ್ರದೇಶದ ಗಡಿ ಗ್ರಾಮಗಳ ಕೂಲಿ ಕಾರ್ಮಿಕರನ್ನೂ ಸೆಳೆಯುತ್ತಿವೆ. ಅವರಿಗೂ ಅನ್ನದ ದಾರಿ ಮಾಡಿಕೊಟ್ಟಿವೆ.

ಆದರೆ ಪುಷ್ಪ ಕೃಷಿ ಕೈಹಿಡಿದಿದ್ದರೂ ದಿನೇ ದಿನೇ ಹೆಚ್ಚುತ್ತಿರುವ ನೀರಿನ ಕೊರತೆ ಬೆಳೆಗಾರರನ್ನು ಕಾಡುತ್ತಿದೆ. ಬೋರ್‌ವೆಲ್ ಇದ್ದರೂ ನೀರಿನ ಲಭ್ಯತೆ ಕಡಿಮೆ. ನೀರಿನ ಅಭಾವದಿಂದ ಗುಲಾಬಿ, ಸೂಜಿಮಲ್ಲಿಗೆ ಇತ್ಯಾದಿ ಹೂವಿನ ಇಳುವರಿಯೂ ಕಡಿಮೆ ಆಗುತ್ತದೆ.

ತೋಟಗಾರಿಕೆ, ಕೃಷಿ ಇಲಾಖೆಯಿಂದ ಯಾವುದೇ ನೆರವು ಪಡೆದಿಲ್ಲವಾ ಎಂಬ ಪ್ರಶ್ನೆಗೆ, `ಅದನ್ನ ಹೆಂಗ್ ಪಡೀಬೇಕು ಅಂಥ ಗೊತ್ತಿಲ್ರಿ. ಹೋದ ವರ್ಷ ಎರಡು ಸಲ 10 ಸಾವಿರ ರೂಪಾಯಿ ಕೊಟ್ರು (ಸುವರ್ಣ ಭೂಮಿ ಯೋಜನೆ). ಉಳಿದಂತೆ ಏನೂ ಇಲ್ರಿ~ ಎಂದೊಬ್ಬ ರೈತರು ಹೇಳುತ್ತಾರೆ.

ಲಭ್ಯವಿರುವ ನೀರನ್ನೇ ಸಮರ್ಪಕ, ಪರಿಣಾಮಕಾರಿಯಾಗಿ ಬಳಸುವ ಸಾಧ್ಯತೆಗಳ ಬಗೆಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ಕೊಟ್ಟು ರೈತರ ಬೆಂಬಲಕ್ಕೆ ಬಂದರೆ ಸುಲ್ತಾನ್‌ಪುರ (ಜೆ) ಗ್ರಾಮದ ಹೂವಿನ ತೋಟಗಳಲ್ಲಿ ಹೆಚ್ಚು ಹೂವುಗಳ ಜೊತೆಗೆ, ಇದನ್ನು ನಂಬಿದವರ ಬದುಕು ಸಹ ಅರಳಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT