ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವುಗಳ ಜೊತೆಗೇ ತರಕಾರಿ!

ಒಂದೇ ಜಮೀನಿನಲ್ಲಿ ಗುಲಾಬಿ, ಚೆಂಡುಹೂ, ಬಜ್ಜಿ ಮೆಣಸಿನಕಾಯಿ
Last Updated 9 ಡಿಸೆಂಬರ್ 2013, 10:20 IST
ಅಕ್ಷರ ಗಾತ್ರ

ಮಾಲೂರು: ಒಂದೇ ಜಮೀನಿನಲ್ಲಿ ಗುಲಾಬಿ, ಚೆಂಡು ಹೂ, ಬಜ್ಜಿ­ಮೆಣಸಿನ ಕಾಯಿಯನ್ನು ಏಕಕಾಲಕ್ಕೆ ಬೆಳೆಯ­ಬಹುದೇ? –ಇದೊಂದು ವಿಲಕ್ಷಣ ಪ್ರಶ್ನೆ. ರಾಗಿಯ ನಡುವೆ ಅವರೆ, ಸಜ್ಜೆ ಮೊದಲಾದವನ್ನು ಮಿಶ್ರ ಬೆಳೆಯಾಗಿ ಬೆಳೆಯುವುದು ಸಹಜ. ಆದರೆ ಹೂ ಗಿಡಗಳ ನಡುವೆ ತರಕಾರಿ ಬೆಳೆಯುವುದು ಸಾಧ್ಯವಿಲ್ಲ ಎನ್ನುವಂತೆ ಇಲ್ಲ.

ಏಕೆಂದರೆ ಅಂಥದೊಂದು ಪ್ರಯೋಗವನ್ನು ಮಾಡಿ ಯಶಸ್ವಿಯಾಗಿ­ದ್ದಾರೆ ತಾಲ್ಲೂಕಿನ ದೊಮ್ಮಲೂರು ಗ್ರಾಮದ ರೈತ ಮಾರೇಗೌಡ. ಹೂವು­ಗಳ ಜೊತೆಗೇ ತರಕಾರಿ ಬೆಳೆಯ­ಬಹುದು. ಹೆಚ್ಚು ಆದಾಯವನ್ನೂ ಪಡೆಯಬಹುದು ಎಂದು ಅವರು ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ.

ತಾಲ್ಲೂಕಿನ ನೊಸಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಡಿ ಗ್ರಾಮ­ವಾದ ದೊಮ್ಮಲೂರು ಪಟ್ಟಣದಿಂದ 18 ಕಿ.ಮೀ ದೂರದಲ್ಲಿದೆ. ಗ್ರಾಮದ ಬಹುತೇಕ ಜನತೆ ಕೃಷಿಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡಿದ್ದಾರೆ.  ತಾಲ್ಲೂಕಿ­ನಾದ್ಯಂತ ಮಳೆ ಅಭಾವದಿಂದ ಅಂತ­ರ್ಜಲ ಮಟ್ಟ ಕುಸಿದು ನೀರಿನ ಕೊರತೆ­ಯಿಂದ ರೈತರು ಕೃಷಿ ಚಟುವಟಿಕೆಗಳನ್ನು ತೊರೆದು ಉಪಕಸುಬುಗಳ ಕಡೆ ಮುಖ ಮಾಡುತ್ತಿರುವ ಈ ಸಂದರ್ಭದಲ್ಲಿ ರೈತ ಮಾರೇಗೌಡ ತಮ್ಮ ಎರಡು ಎಕರೆ ಭೂಮಿಯಲ್ಲಿ ಹನಿ ನೀರಾವರಿ ಅಳವಡಿಸಿ ಮಿಶ್ರ ಬೇಸಾಯ ಪದ್ಧತಿ ಪ್ರಾರಂಭಿಸಿದ್ದಾರೆ.

ಕೊಳವೆ ಬಾವಿಯಲ್ಲಿನ ಅಲ್ಪಸ್ವಲ್ಪ  ನೀರಿನಲ್ಲೇ ಹನಿ ನೀರಾವರಿ ಅಳವಡಿಸಿ ಎರಡು ಎಕರೆ ಭೂಮಿ­ಯಲ್ಲಿ ಗುಲಾಬಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಗುಲಾಬಿ ಹೂವುಗಳಲ್ಲೇ ಕರಿಷ್ಮಾ ತಳಿಯ ಹೂಗಳು ಬಾಡದೆ ಹೆಚ್ಚು ದಿನಗಳು ಉಳಿಯುವುದರಿಂದ ದೂರದ ಮಾರುಕಟ್ಟೆಗಳಿಗೆ ಸರಬ­ರಾಜು ಮಾಡಲು ಅನುಕೂಲವಾಗು­ತ್ತದೆ ಎಂದು ತೀರ್ಮಾನಿಸಿದ್ದು ಅವರಿಗೆ ಅನುಕೂಲಕರವಾಗಿ ಪರಿಣಮಿಸಿದೆ.

ಅದೇ ಜಾತಿಯ ಸಸಿಗಳನ್ನೇ 8 ಅಡಿ ಅಂತರದಲ್ಲಿ ಸಾಲುಗಳನ್ನು ತೆಗೆದು ಗಿಡದಿಂದ ಗಿಡಕ್ಕೆ ಎರಡುವರೆ ಅಡಿ ದೂರದಲ್ಲಿ 1x1 ಅಡಿ ಹಳ್ಳ ಮಾಡಿ ನಾಟಿ ಗೊಬ್ಬರ ನೀಡಿ ಸಸಿಗಳನ್ನು ನಾಟಿ  ಮಾಡಲಾಗಿದೆ.

ಗುಲಾಬಿ ಗಿಡಗಳ ಸಾಲುಗಳ ನಡುವೆ ಗಿಡದಿಂದ ಗಿಡಕ್ಕೆ ನಾಲ್ಕು ಅಡಿ ಅಂತರದಲ್ಲಿ ಸಾಲು ತೆಗೆದು ಯರೋನಿ ಜಾತಿಯ ಬಜ್ಜಿ ಮೆಣಸಿನಕಾಯಿ ಸಸಿ­ಗಳನ್ನು ನಾಟಿ ಮಾಡಲಾಗಿದೆ. 6 ತಿಂಗಳ ಬೆಳೆಯಾಗಿರುವ ಬಜ್ಜಿ ಮೆಣಸಿನ­ಕಾಯಿ ಫಸಲು ಗಿಡದ ತುಂಬ ತುಂಬಿ­ಕೊಂಡು ರೈತನ ಪಾಲಿಗೆ ಕಾಮಧೇನುವಾಗಿದೆ.

ಗುಲಾಬಿ ಗಿಡದಿಂದ ಗಿಡದ ನಡುವೆ ಎರಡೂವರೆ ಅಡಿ  ಅಂತರವಿದ್ದು, ಅದರಲ್ಲಿ  ಆ್ಯರೋ ಆರೆಂಜ್ ಜಾತಿಯ ಚೆಂಡು ಹೂ ನಾಟಿ ಮಾಡಲಾಗಿದೆ. ಚೆಂಡು ಹೂಗಳು ಸೊಂಪಾಗಿ ಗಿಡಗಳಲ್ಲಿ ಕಂಗೊಳಿಸುತ್ತಿದೆ. ಆ್ಯರೋ ಆರೆಂಜ್ ಜಾತಿಯ ಚೆಂಡು ನಾಟಿ ಮಾಡಿದ 45 ದಿನಗಳಿಗೆ ಹೂ ಬಿಡಲು ಪ್ರಾರಂಭಿಸುತ್ತವೆ.

ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಾಟಿ ಮಾಡಿರುವುದರಿಂದ, ನವೆಂಬರ್ ತಿಂಗಳಲ್ಲಿ ಫಸಲು ಹೇರಳವಾಗಿ ಬರುತ್ತದೆ. ಅದೇ ತಿಂಗಳಲ್ಲಿ ಅಧಿಕ ಹಬ್ಬ ಹರಿದಿನಗಳು ಬರುವುದರಿಂದ ಹೂವಿಗೆ ಹೆಚ್ಚು ಬೇಡಿಕೆ ಉಂಟಾಗಿ ಅಧಿಕ ಲಾಭ ಗಳಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಬೋರೇಗೌಡ.

ನಾಟಿ ಮಾಡಿದ ಗುಲಾಬಿ ಗಿಡಗಳಲ್ಲಿ ಹೂವು ಪ್ರಾರಂಭವಾಗಲು ಆರು ತಿಂಗಳ ಕಾಲಾವಕಾಶ ಬೇಕು. ಅಲ್ಲಿವರೆಗೂ, ಆರರಿಂದ ಏಳು ತಿಂಗಳು ಸತತವಾಗಿ ಫಸಲು ಬಿಡುವ ಬಜ್ಜಿ ಮೆಣಸಿಕಾಯಿಯ ಬೆಳೆ ಹಾಗೂ ಚೆಂಡು ಹೂ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬಹುದು.

ಗುಲಾಬಿ ಹೂ ಬರುವ ವೇಳೆಗೆ ಎರಡೂ ಬೆಳೆ ಮುಗಿದಿರುತ್ತದೆ. ಅದ­ರಿಂದ ರೈತರಿಗೆ ಅಧಿಕ ಲಾಭ ಗಳಿಸಲು ಸಾಧ್ಯವಾಗುತ್ತದೆ. ರೈತರು ಕಡಿಮೆ ನೀರಿನಲ್ಲಿ ಇರುವ ಕೃಷಿ ಭೂಮಿಯನ್ನೇ ಸಮರ್ಪಕವಾಗಿ ಬೆಳೆಸಿ­ಕೊಂಡು ಮಿಶ್ರಬೆಳೆ ಬೇಸಾಯದಲ್ಲಿ ತೊಡಗಿಸಿ­ಕೊಂಡರೆ ಹೆಚ್ಚು ಲಾಭ ಗಳಿಸಲು ಅನುಕೂಲವಾಗುತ್ತದೆ ಎಂಬುದು ಮಾರೇಗೌಡ ಅವರ ಖಚಿತ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT