ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ನೋವು : ಮುನ್ನೆಚ್ಚರಿಕೆಯ ಸಂಕೇತ

Last Updated 21 ಜನವರಿ 2011, 10:30 IST
ಅಕ್ಷರ ಗಾತ್ರ

ಹೃ ದಯ ನೋವು ಯಾವ ವಯಸ್ಸಿಗಾದರೂ ಬರಬಹುದು. ಸಾಮಾನ್ಯವಾಗಿ ಈಗ ಇದು 30ರಿಂದ 65 ವರುಷ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಹೃದಯಾಘಾತದ ಮುನ್ನೆಚ್ಚರಿಕೆಯ ಸಂಕೇತವಾಗಿ ಗೋಚರಿಸುವ ಪ್ರಾಮಾಣಿಕ ಹಿತಶತ್ರು. ಇದಕ್ಕೆ ಇಂಗ್ಲಿಷ್‌ನಲ್ಲಿ ‘ಅಂಜೈನಾ’ ಎಂದು ಹೆಸರು. ಇದಕ್ಕಾಗಲಿ ಹಾಗೆ ಇದರಿಂದುಂಟಾಗುವ ಹೃದಯಾಘಾತಕ್ಕೆ ಹೆದರಬೇಕಾಗಿಲ್ಲ. ವೈದ್ಯ ವಿಜ್ಞಾನದ ಅನೇಕ ವಿನೂತನ ಉಪಚಾರದ ವಿಧಾನಗಳು ನಿಮ್ಮ ಹೃದಯಕ್ಕೆ ಶ್ರೀರಕ್ಷೆಯಾಗಿ ನಿಂತಿವೆ.

ಎದೆಗೂಡಿನಲ್ಲಿ  ಅನೇಕ ಅಂಗ ರಚನೆಗಳಿವೆ. ಪುಪ್ಪುಸ, ಶ್ವಾಸನಾಳ, ಪಕ್ಕೆಲುಬು, ಅದಕ್ಕೆ ಅಂಟಿದ ಸ್ನಾಯುಗಳು, ಅನ್ನನಾಳ ಹೀಗೆ ಈ ಮುಂತಾದವುಗಳಲ್ಲಿ ಉಂಟಾಗುವ ‘ನೋವು’ ಹೃದಯ ನೋವಿನ ಕಾಣಿಸುವುದು. ಎದೆಗೂಡಿನ ಈ ನೋವುಗಳಲ್ಲಿ ಹೃದಯ ನೋವೂ ಒಂದು. ಹೀಗಾಗಿ ಈ ತರದ ಭ್ರಮೆಗೆ ಒಳಗಾಗಿ ವ್ಯಕ್ತಿ ಭಯಪಡುವುದು ಸಾಮಾನ್ಯ.

ಹೃದಯ ನೋವು ತನ್ನ ವಿಶಿಷ್ಟ ಲಕ್ಷಣ ಹಾಗೂ ಚಿನ್ಹೆಗಳಿಂದ ಭಿನ್ನವಾಗಿದೆ. ಇದಕ್ಕೆ ಲಿಂಗ ಭೇದವಿಲ್ಲ. ಹೃದಯದ ಸ್ನಾಯುವಿಗೆ ರಕ್ತಪೂರೈಕೆ ಮಾಡುವ ಕಿರಿಟ ರಕ್ತನಾಳಗಳಿವೆ. (ಕೊರೊನರಿ ಆರ್ಟರಿ). ಇವು ನಿಮಿಷಕ್ಕೆ 250 ಎಂ ಎಲ್ ರಕ್ತವನ್ನು ಹೃದಯ ಸ್ನಾಯುವಿಗೆ ಪೂರೈಸುತ್ತವೆ.

ಹೃದಯದ ಮೇಲ್ಗಡೆಗೆ ಇರುವ ಮಹಾಅಭಿಧಮನಿಯಿಂದ ಹೊರಡುವ ಈ ಕಿರಿಟ ನಾಳ ಶಾಖೋಪಶಾಖೆಗಳಿಂದ ಹೃದಯದ ಹಿಂದೆ -ಮುಂದೆ-ತುದಿಗೆ ಎಲ್ಲೆಡೆಗೆ -ರಕ್ತ ಪೂರೈಕೆಯಾಗುತ್ತದೆ.  ಹೃದಯದ ಕ್ರಿಯಾ ಚೈತ್ಯನದ ಚಟುವಟಿಕೆಗೆ ಈ ಕಿರಿಟನಾಳಗಳ  ಶಾಖೆಗಳು ಅಗತ್ಯವಿರುವ ಪ್ರಾಣವಾಯುವನ್ನು ಪೂರೈಸುತ್ತವೆ.

ಆದರೆ ಈ ಕಿರಿಟನಾಳಗಳಲ್ಲಿ ಕೊಬ್ಬಿನಾಂಶ (ಕೊಲೆಸ್ಟರಾಲ್) ಹೆಡಸು ಗಟ್ಟಿ- ನಾಳದ ಒಳಬದಿಯಲ್ಲಿ ತಳವೂರಿ ಗಡಸು ಕಟ್ಟುತ್ತದೆ. ಇದರಿಂದ ರಕ್ತ ಸಂಚಾರ ಕಡಿಮೆಗೊಂಡು ಪ್ರಾಣವಾಯುವಿನ ಸರಬರಾಜಿಗೆ ವ್ಯತ್ಯಯವುಂಟಾಗುತ್ತದೆ. ಹೃದಯದ ಈ ಭಾಗದ ಪ್ರದೇಶದಲ್ಲಿ ಸ್ನಾಯು ನಿಷ್ಕ್ರಿಯಗೊಳ್ಳುತ್ತದೆ. ಇದಕ್ಕೆ ಹೃದಯಾಘಾತವೆಂಬ ಹೆಸರು. ಇದನ್ನು ಇ.ಸಿ.ಜಿ. ದಾಖಲೆಗಳಿಂದ ಖಚಿತ ಪಡಿಸಬಹುದು.

ಹೃದಯ ನೋವು - ಹೃದಯದಿಂದ ಬರುತ್ತಿದೆಯೆ ಅಥವಾ ಎದೆಗೂಡಿನ ಇನ್ನಿತರ ಭಾಗಗಳಿಂದ ಬರುತ್ತಿದೆಯೆ ಎಂಬುದನ್ನು ಡಾಕ್ಟರರು ಪರೀಕ್ಷಿಸಿ ಹೇಳುತ್ತಾರೆ. ಆದರೆ ಒಮ್ಮೊಮ್ಮೆ ‘ಗುಪ್ತಗಾಮಿನಿ’ಯಾಗಿದ್ದು ಇದು ನಯವಂಚಕನಂತೆ ಬರುತ್ತದೆ.

ಅದು ಹೃದಯಾಘಾತದ ಮುನ್ನೆಚ್ಚರಿಕೆಯ ಗಂಟೆ ಬಾರಿಸುತ್ತದೆ. ಹೃದಯದ ನೋವು ಆಗಾಗ ಬರುತ್ತಿರಬಹುದು. ಅದು ಗೊತ್ತಾಗದೆಯೂ ಇರಬಹುದು. ಇಲ್ಲವೆ ಆಗಾಗ ಬಂದು ಮಾಯವಾಗುವ ದೀರ್ಘಾವಧಿಯ ನೋವಾಗಿರಬಹುದು. ಲಘು ವ್ಯಾಯಾಮ ಮಾಡಿದಾಗ - ಇಲ್ಲವೆ ಆಯಾಸಗೊಂಡಾಗ ಕಾಣಿಸಿಕೊಳ್ಳಬಹುದು.

ಹೃದಯ ನೋವು ಕೂಡ ಸ್ಥಾನಪಲ್ಲಟ (ರೆಫರ್ಡ್‌ ಪೇನ್) ನೋವಾಗಿರಬಹುದು. ಹೃದಯದಲ್ಲಿ ಜನ್ಮ ತಳೆದ ಈ ನೋವು ಎಡ ಭುಜದಲ್ಲಿ ಸಾಗಿ ಎಡ ತೋಳಿನ ಒಳ ಬದಿಗೆ ಹೋಗಿ ಮುಂಗೈ ಬೆರಳಿನಲ್ಲಿ ಕೊನೆಗೊಳ್ಳುವುದು. ಅಥವಾ ಕತ್ತು, ಹಲ್ಲುನೋವು, ಹೊಟ್ಟೆನೋವು - ಹೀಗೆ ಇನ್ನಿತರ ಪ್ರದೇಶಗಳಲ್ಲಿಯೂ ಕಾಣಿಸಿಕೊಳ್ಳಬಹುದು.

ಈ ಹೃದಯನೋವಿಗೆ ಜನ್ಮದಾರಭ್ಯದಿಂದ ಇರುವ ಹೃದಯ ಊನತೆಗಳು, ವಂಶ ಜನ್ಯ ವ್ಯಾಧಿ, ದೀರ್ಘಾವಧಿಯ ಮಧುಮೇಹ, ರಕ್ತದ ಏರೊತ್ತಡ, (ನಿರ್ಲಕ್ಷಿಸಿದ ಅನಿಯಂತ್ರಿತ) ಮನೋಒತ್ತಡ, ಬೊಜ್ಜು- ಹೀಗೆ ಹಲವು ಕಾರಣಗಳನ್ನು ನೀಡಬಹುದು. ಇತ್ತೀಚಿನ ಬಹು ಪ್ರಚಲಿತ ಪರಿಕಲ್ಪನೆ - ರಕ್ತದಲ್ಲಿಯ ಕೊಲೆಸ್ಟರಾಲ್ ಮಟ್ಟವು 200 ಮಿಲಿ ಗ್ರಾಂ,/ 1ಡೆ.ಸಿ. ಲೀಟರ್  ಇರಬೇಕು. 250ಮಿಲಿ ಗ್ರಾಂ-ಅಪಾಯದ ಮಟ್ಟವನ್ನು ಸೂಚಿಸುತ್ತದೆ.

ಹೃದಯ ನೋವಿನ ಸುಳಿವುಗಳು

ವ್ಯಾಯಾಮ ಮಾಡಿದಾಗ -ರಭಸದಿಂದ ನಡೆದಾಗ, ಆಯಾಸದಲ್ಲಿ ಹೃದಯನೋವು ಕಾಣಿಸಿಕೊಳ್ಳಬಹುದು.
ನಿದ್ದೆ, ಗೊರಕೆಯಲ್ಲಿ ಕಾಣಿಸಿಕೊಳ್ಳಬಹುದು.

ಚಳಿಗೆ ಬಹು ಕಾಲ ಮೈ ಒಡ್ಡಿದಾಗ ನೋವು (ಹೃದಯದಲ್ಲಿ) ಕಾಣಿಸಿಕೊಳ್ಳಬಹುದು.

ಭಾವೋದ್ವೇಗಕ್ಕೆ ಒಳಗಾಗಿ ಕೋಪಾವಿಷ್ಟರಾಗಿ ಬೆವೆತಾಗ ಹೃದಯನೋವು ಬರಬಹುದು. 

 ದಿನನಿತ್ಯ (ಕೆಲಬಾರಿ) ದಿನದ ನಿಶ್ಚಿತ ವೇಳೆಯಲ್ಲಿಯೇ ಕಾಣಿಸಿಕೊಳ್ಳುವುದು.

ವ್ಯಕ್ತಿಯಿಂದ ವ್ಯಕ್ತಿಗೂ ವಯೋಮಾನದನ್ವಯ ಹೃದಯನೋವಿನ ಸ್ವರೂಪ ಬದಲಾವಣೆಗೊಳ್ಳಲೂಬಹುದು.

ಹೃದಯ ನೋವು ಬರುವ ಮೊದಲು ವಾಂತಿ, ವಾಕರಿಕೆ, ವಿಪರೀತ ಬೆವರುವುದು -ಆಗುತ್ತಿರುತ್ತದೆ.  ಇದು ಹೃದಯಾಘಾತಕ್ಕೂ ಎಡೆಮಾಡಿಕೊಡುತ್ತದೆ.

ಹೃದಯನೋವು -ಎಡಭುಜ ಎಡತೋಳಿನಲ್ಲಿ ಹರಿಯುತ್ತ ಸಾಗುವುದು. ಆ ಸಂದರ್ಭದಲ್ಲಿ ಕಣ್ಣಿಗೆ ಕತ್ತಲೆಯೂ ಬರಲೂಬಹುದು.

ಪೂರ್ವ ಚಿನ್ಹೆಗಳು

ಹೊಟ್ಟೆಯ ಮೇಲ್ಭಾಗದಲ್ಲಿ ಅಪಚನವಾದಂತೆ - ಹುಳಿಸುಡುವಿಕೆ -ಅಸಹನೆ - ಹಿಚುಕಿದಂತಾಗುವುದು. ಎದೆಯುರಿತ.
ಎದೆಯ ಒಳಭಾಗದಲ್ಲಿ ‘ಭಾರ’ವಿದ್ದಂತೆ ಸಂವೇದನೆ. 
ಆಗಾಗ ಉಸಿರು ಕಟ್ಟುವಿಕೆ. 
ಗಂಟಲಲ್ಲಿ ಏನೋ ಸಿಕ್ಕಂತಾಗುವದು. 
ನೋವು ಹರಿದಾಡಿದಂತೆ ಭಾಸವಾಗುವುದು. 
    
ಹೃದಯಾಘಾತವಾದಾಗ...

ವ್ಯಕ್ತಿ ಹಾಗೂ ಕುಟುಂಬದವರು ಆತನ/ ಅವಳ ಮಧುಮೇಹ ರಕ್ತ ಏರೋತ್ತಡ, ಬೊಜ್ಜು-ಇವಕ್ಕಾಗಿ ಸೇವಿಸುವ ಔಷಧಿಗಳನ್ನು ಅರಿತಿರಬೇಕು. ಯಾವುದಕ್ಕೂ ವಿಳಂಬ ಹಾಗೂ ನಿರ್ಲಕ್ಷತೆ ಸಲ್ಲದು. ವ್ಯಕ್ತಿಗೆ ವಿಶ್ರಾಂತಿ ನೀಡಿ ಯಾವುದೇ ಮನೆಯ ಉಪಚಾರಗಳನ್ನು ನೀಡದೆ ಕೂಡಲೇ ಆಸ್ಪತ್ರೆಗೆ ಸಾಗಿಸಬೇಕು. ನೀವು ಎಲ್ಲ ವಿವರಗಳನ್ನು ವೈದ್ಯರಿಗೆ ತಿಳಿಸಿದರೆ  ಅವರು ಕೂಡಲೇ ನಿರ್ಧಾರಕ್ಕೆ ಬರಲು ಅನಕೂಲವಾಗುವುದು. ಆಹಾರ ಪಥ್ಯಾದಿಗಳು ಕಡ್ಡಾಯವಾಗಿರಬೇಕು.

ಧೂಮಪಾನ, ಮದ್ಯಪಾನ  ಬಿಟ್ಟುಬಿಡಬೇಕು.ಕೊಬ್ಬಿನಾಂಶಗಳುಳ್ಳ ಆಹಾರ ತ್ಯಜಿಸಿದರೆ ಉತ್ತಮ. ಹೃದಯಾಘಾತಕ್ಕೆ ಭಯಪಟ್ಟು ರೋಗಿಯು ಮನೋಒತ್ತಡಕ್ಕೆ ಒಳಗಾಗುವುದು ತರವಲ್ಲ. ಮಾನಸಿಕ ನೆಮ್ಮದಿ ತರುವ ಮಾತುಗಳನ್ನಾಡಿ ಅವರಲ್ಲಿ ಧೈರ್ಯ ಸ್ಥೈರ್ಯ ತುಂಬಬೇಕು.

 ನೋವು ಕಾಣಿಸಿದಾಗ ವ್ಯಾಯಾಮ ಅಥವಾ ಆಯಾಸದ ಕೆಲಸ ಮಾಡಬಾರದು. ಯಾವುದಕ್ಕೂ ನಿರ್ಲಕ್ಷ್ಯ ಸಲ್ಲದು. ಸಾಧ್ಯವಿದ್ದರೆ ಜೀವನ ಶೈಲಿ ಬದಲಾಯಿಸಿ ನಿಯಮಿತ ಕ್ರಮ ಅನುಸರಿಸಿ. ಸ್ವಯಂ ವೈದ್ಯಕೀಯ ಮಾಡಬೇಡಿ.

ಡಾಕ್ಟರರ ಬಳಿ ಹೋದಾಗ ಈ ಸಂಗತಿಗಳನ್ನು ಹೇಳಲು ಮರೆಯದಿರಿ. ರೋಗಿಯ ಮಧುಮೇಹ, ಧೂಮಪಾನ, ಮದ್ಯಪಾನ, ರಕ್ತದ ಏರೋತ್ತಡ ಬೊಜ್ಜು ಮುಂತಾದವುಗಳ ರೋಗಚರಿತ್ರೆಯ ವಿವರಗಳನ್ನು ತಿಳಿಸಿ,ಈ ಮೊದಲು ತೆಗೆದುಕೊಳ್ಳುವ ಔಷಧಿಗಳನ್ನು ಹೇಳಿ.

ರೋಗಿಯು ಮೂರ್ಛಾವಸ್ಥೆಯಲ್ಲಿದ್ದರೆ, ಹೃದಯ ನೋವು ಬರುವ ಸಮಯ, ದೈನಂದಿನ ಚಟುವಟಿಕೆಗಳ ಕುರಿತು, ಸೇವಿಸುವ ದಿನನಿತ್ಯದ ಆಹಾರ ಹಾಗೂ ಮನಸ್ಥಿತಿ ಕುರಿತು ಹೇಳಿ. 

 ಲೇಖಕರ ದೂರವಾಣಿ:   9448145831
        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT