ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಶಸ್ತ್ರಚಿಕಿತ್ಸೆಗೆ ಹೊಸ ವಿಧಾನ

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

ಆಧುನಿಕ ಜೀವನ ಶೈಲಿ, ಒತ್ತಡ, ಬದಲಾದ ಆಹಾರ ಪದ್ಧತಿ ಮನುಷ್ಯನ ಆರೋಗ್ಯವನ್ನು ಕ್ಷೀಣಿಸುತ್ತಿದೆ. ಅದರಲ್ಲೂ ಹೃದಯ ಸಮಸ್ಯೆಗಳ ಪ್ರಕರಣಗಳು ಈಗೀಗ ಹೆಚ್ಚಾಗುತ್ತಿವೆ. ಮಧ್ಯವಯಸ್ಸು ದಾಟುತ್ತಿದ್ದಂತೆ ಹೃದಯ ಸಂಬಂಧಿ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಇಂತಹ ಅಪಾಯಕಾರಿ ಹೃದಯದ ಅರೋಟಾ ಸಮಸ್ಯೆ ಬಹು ಜನರನ್ನು ಕಾಡುತ್ತಿರುವ ಅಂಶಗಳಲ್ಲಿ ಒಂದು. ಆಮ್ಲಜನಕಯುಕ್ತ ರಕ್ತವನ್ನು ಪೂರೈಸುವ ಭಾಗ ಇದಾಗಿದ್ದು, ಅರೋಟಿಕ್ ವ್ಯಾಪ್ತಿಯ ರಕ್ತನಾಳಗಳು ಸಮಸ್ಯೆಗೀಡಾದಾಗ ದೊಡ್ಡ ರಕ್ತನಾಳದಲ್ಲಿ ರಕ್ತ ಪರಿಚಲನೆಗೆ ತೊಂದರೆ ಉಂಟಾಗುತ್ತದೆ. ಇದರಿಂದ ಹೃದಯದಲ್ಲಿ ಸಣ್ಣದಾಗಿ ನೋವು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದು ಕೆಲವೊಮ್ಮೆ ರಕ್ತಸ್ರಾವಕ್ಕೂ ಎಡೆಮಾಡಿಕೊಟ್ಟು ಅಪಾಯಕಾರಿ ಸನ್ನಿವೇಶ ಉಂಟುಮಾಡಬಹುದು.

ಇಂತಹ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಹೃದಯದ ಶಸ್ತ್ರಚಿಕಿತ್ಸೆ ಅತಿ ಸೂಕ್ಷ್ಮವಾದ್ದರಿಂದ ಚಿಕಿತ್ಸೆಗೆ ಒಳಪಟ್ಟ ರೋಗಿ ಶಸ್ತ್ರಚಿಕಿತ್ಸೆ ಮುನ್ನ ಮತ್ತು ನಂತರವೂ ಅತಿ ಜಾಗರೂಕತೆಯಿಂದ ಇರಬೇಕಾಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸೆಯನ್ನು ಇನ್ನಷ್ಟು ಸುಲಭಗೊಳಿಸಲು ಮತ್ತು ರೋಗಿಗೆ ನೋವನ್ನುಂಟು ಮಾಡದೆ ಸಮಸ್ಯೆಯನ್ನು ಅತಿ ಸರಳವಾಗಿ ಪರಿಹರಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಹೊಸ ಸಾಧನವನ್ನು ಪರಿಚಯಿಸಿದೆ.

ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ಹೃದಯದ ಅರೋಟಾ ಸಮಸ್ಯೆಯನ್ನು ಸರಿಪಡಿಸಬಲ್ಲ `ಪರ್‌ಕ್ಲೋಸ್~ ಎಂಬ ಸಾಧನ ಅಪೋಲೋ ಆಸ್ಪತ್ರೆಯಲ್ಲಿ ಸಜ್ಜುಗೊಂಡಿದೆ. ಅಮೆರಿಕದ ಅಬೋಟ್ ವ್ಯಾಸ್ಕುಲಾರ್ ಲ್ಯಾಬ್ಸ್ ಈ ಸಾಧನವನ್ನು ಕಂಡುಹಿಡಿದಿದ್ದು, ಇದೀಗ ಅಪೊಲೊ ಆಸ್ಪತ್ರೆಯಲ್ಲಿ ಈ ಸಾಧನದ ಮೂಲಕ ಶಸ್ತ್ರಚಿಕಿತ್ಸೆ ಆರಂಭಿಸಲಾಗಿದೆ.

ಹಿಂದಿನ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ಈ ಚಿಕಿತ್ಸೆ ತೀರಾ ಭಿನ್ನ. ಚಿಕಿತ್ಸೆಗೆ ಒಳಪಟ್ಟ ವ್ಯಕ್ತಿ ಆ ದಿನವೇ ಎದ್ದು ಓಡಾಡಬಹುದು. ಆಸ್ಪತ್ರೆಯಲ್ಲಿ ದಾಖಲಾಗುವ ಅವಶ್ಯಕತೆಯೇ ಇರುವುದಿಲ್ಲ ಎನ್ನುತ್ತಾರೆ ಹೃದಯತಜ್ಞ ಯೋಗೇಶ್ ಕೊಠಾರಿ.

`10 ಎಂಎಂ ಇನ್ಸಿಶನ್~ ನಂತರ  ಉದ್ದದ ಸೂಜಿಯಂತೆ ಕಾಣುವ ಈ `ಪರ್‌ಕ್ಲೋಸ್~ ಸಾಧನದ ಸಹಾಯದಿಂದ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು. ಈ ಸಾಧನವನ್ನು ನುರಿತ ಹೃದಯತಜ್ಞರು ಅಥವಾ ಸರ್ಜನ್‌ಗಳು ನಿಯಂತ್ರಿಸುತ್ತಾರೆ. ಈ ಸಾಧನ `ಸ್ಟೆಂಟ್~ಗಳನ್ನು ಅರೋಟಾಗೆ ಕಳುಹಿಸುತ್ತದೆ ಮತ್ತು ಅರೋಟಾ `ವಾಲ್ವ್~ಗಳನ್ನು ಬದಲಿಸಿ ಚಿಕಿತ್ಸೆಯನ್ನು ಸರಳವಾಗಿ ಮಾಡಿ ಮುಗಿಸುತ್ತದೆ ಎಂದು ವಿವರಣೆ ನೀಡಿದರು.

ಸುಮಾರು ಒಂದು ಗಂಟೆ ಅವಧಿಯಲ್ಲಿ ಈ ಚಿಕಿತ್ಸೆಯನ್ನು ನಡೆಸಬಹುದು. ಇಲ್ಲಿ ರಕ್ತಸ್ರಾವ ಹಾಗೂ ನೋವಿನ ಅನುಭವವಾಗದು ಎಂದಿದ್ದಾರೆ ಅಪೊಲೊ ಆಸ್ಪತ್ರೆಯ ವೈದ್ಯ ಅದಿಲ್ ಸಾದಿಕ್.

ಈಗಾಗಲೇ ಅರೋಟಾ ಸಮಸ್ಯೆಯಿಂದ ಬಳಲುತ್ತಿದ್ದ ಶಿವರಾಮಕೃಷ್ಣ (60) ಎಂಬುವರಿಗೆ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಅವರು ಈ ಸಮಸ್ಯೆಯಿಂದ ಹೊರಬಂದಿದ್ದಾರೆ. ಅಂತೆಯೇ ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿರುವ ಇನ್ನಷ್ಟು ರೋಗಿಗಳಿಗೆ ಇದು ಉಪಯುಕ್ತವಾಗಬೇಕು ಎಂಬುದು ತಮ್ಮ ಉದ್ದೇಶ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಈ ಶಸ್ತ್ರಚಿಕಿತ್ಸೆಯನ್ನು ವಯೋವೃದ್ಧರಿಗೆ ನಡೆಸಲಾಗುತ್ತದೆ. ಚಿಕಿತ್ಸೆಗೆ ತಗುಲುವ ವೆಚ್ಚ ಸುಮಾರು 3 ಲಕ್ಷ ರೂ. ಎಂದು ಆಸ್ಪತ್ರೆ ತಿಳಿಸಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT