ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯದಲ್ಲಿ ನೆಮ್ಮದಿಯ ದೇವಸ್ಥಾನ: ಸ್ವಾಮೀಜಿ

Last Updated 3 ಡಿಸೆಂಬರ್ 2012, 6:16 IST
ಅಕ್ಷರ ಗಾತ್ರ

ದಾವಣಗೆರೆ: ಊರಿನಲ್ಲಿ ದೇವಸ್ಥಾನ ಇರುವಂತೆಯೇ, ಪ್ರತಿಯೊಬ್ಬರೂ ಹೃದಯದಲ್ಲಿ ಶಾಂತಿ, ಸಮಾಧಾನ ಹಾಗೂ ನೆಮ್ಮದಿ ಎಂಬ ದೇವಸ್ಥಾನ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.

ತಾಲ್ಲೂಕಿನ ಮೆಳ್ಳೇಕಟ್ಟೆ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮವನ್ನು ಭಾನುವಾರ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಯುವಕರು ಅತ್ಯಂತ ಉತ್ಸಾಹದಿಂದ ದೇವಸ್ಥಾನ ಕಟ್ಟಿದ್ದೀರಿ. ಅಂತೆಯೇ, ಹೃದಯದಲ್ಲಿಯೂ ನೆಮ್ಮದಿ ನಿರ್ಮಾಣವಾಗಬೇಕು. ಇಲ್ಲಿನ ಯುವಕರ ಉತ್ಸಾಹ ಜಲಾಶಯದ ಕ್ರೆಸ್ಟ್‌ಗೇಟ್ ತೆರೆದಾಗ ನೀರು ರಭಸದಿಂದ ಹರಿಯುವಂತೆ ಕಾಣುತ್ತಿದೆ. ಜಲಾಶಯದ ನೀರು ಬೆಳೆಗಳಿಗೆ ಉಪಯೋಗ ಆಗುವಂತೆ, ಯುವಕರ ಉತ್ಸಾಹ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿ ಆಗಬೇಕು ಎಂದು ತಿಳಿಸಿದರು.

ಪತಿ-ಪತ್ನಿ ತಪ್ಪು ಮಾಡಿದ್ದನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಸಮಸ್ಯೆ ಪರಿಹರಿಸಿಕೊಳ್ಳಬೇಕು. ತಪ್ಪೇ ಮಾಡದಿದ್ದರೆ ಸುಮ್ಮನಿರಬೇಕು. ಇದರಿಂದ ಸಂಸಾರದಲ್ಲಿ ಸಾಮರಸ್ಯ ಉಂಟಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಗ್ರಾಮಕ್ಕೆ ನಾನು ಹೆಚ್ಚಿನ ಸೌಲಭ್ಯವನ್ನೇನೂ ಕಲ್ಪಿಸಿಲ್ಲ. ಆದರೂ ನನ್ನನ್ನು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸಂತಸ ತಂದಿದೆ ಎಂದರು.

ಪಕ್ಕದಲ್ಲಿದ್ದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಈಗಲೂ ಕಾಲ ಮಿಂಚಿಲ್ಲ. ಊರಿನ ರಸ್ತೆಗಳನ್ನು ಅಭಿವೃದ್ಧಿಪಡಿಸಿಕೊಡಿ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಮೆಳ್ಳೇಕಟ್ಟೆ ಸಮುದಾಯ ಭವನ ನಿರ್ಮಾಣಕ್ಕೆ ರೂ 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಎಂ. ಬಸವರಾಜ ನಾಯ್ಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೀಲಾ ಗದಿಗೇಶ್, ಮಾಜಿ ಅಧ್ಯಕ್ಷ ಮೆಳ್ಳೆಕಟ್ಟೆ ಚಿದಾನಂದ ಐಗೂರು, ಉದ್ಯಮಿ ಎಸ್.ಎಸ್. ಗಣೇಶ್, ಪತ್ರಕರ್ತ ಎಂ.ಎಸ್. ವಿಕಾಸ್, ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ಇದಕ್ಕೂ ಮುನ್ನ, ಸ್ವಾಮೀಜಿ ಹಾಗೂ ಗಣ್ಯರನ್ನು ವಿವಿಧ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT