ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯದಿಂದ ಹೃದಯಕ್ಕೆ ಲಗ್ಗೆ ಇಟ್ಟ ಕ್ಷಿಪಣಿತಜ್ಞ!

Last Updated 19 ಮೇ 2012, 10:25 IST
ಅಕ್ಷರ ಗಾತ್ರ

ಮೈಸೂರು: ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಿ ಗೆಲುವಿನ ಕಾಣಿಕೆ ನೀಡುವ ಕ್ಷಿಪಣಿಗಳನ್ನು ನಿರ್ಮಿಸಿದ ಮೇಧಾವಿ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಶುಕ್ರವಾರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಕೊಟ್ಟ ಉತ್ತರಗಳು `ಹೃದಯ~ಕ್ಕೆ ಲಗ್ಗೆ ಇಟ್ಟವು!

ಜೆಎಸ್‌ಎಸ್ ವೈದ್ಯಕೀಯ ಕಾಲೇಜಿ ನಲ್ಲಿ ಆಯೋಜಿಸಲಾಗಿದ್ದ `ಹೃದಯ ದಿಂದ ಹೃದಯಕ್ಕೆ~ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮನದಲ್ಲಿ ಮೂಡಿ ಬಂದ ಪ್ರಶ್ನೆಗಳಿಗೆ, ಪ್ರೀತಿ ತುಂಬಿದ ಕ್ಷಿಪಣಿಗಳನ್ನು (ಉತ್ತರ) ಬಿಟ್ಟರು ಕಲಾಂ ಸರ್. ಅದರ ಮುಖ್ಯಾಂಶಗಳು ಇಲ್ಲಿವೆ;

ಮಾಧುರಿ ನಾಯ್ಕ:  ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಸಾಮಾಜಿಕ ಜವಾಬ್ದಾರಿಯನ್ನು  ಹೇಗೆ ನಿಭಾಯಿಸಬಹುದು?

ಕಲಾಂ: ನಮ್ಮ ದೇಶದಲ್ಲಿ ಹಳ್ಳಿ, ಪಟ್ಟಣ ಪ್ರದೇಶಗಳಲ್ಲಿ ಬಹಳಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ವೈದ್ಯರು ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಗಾಗ ಭೇಟಿ ಕೊಟ್ಟು ಸೇವೆ ಸಲ್ಲಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅವರ ಅನುಭವ ದಿಂದ ಪಿಎಚ್‌ಸಿಯ ಚಿಕಿತ್ಸಾ ಗುಣಮಟ್ಟ ಸುಧಾರಣೆಯಾಗುತ್ತದೆ.

ರಾಧೇಶ: ನಿಮಗೆ ಸ್ಫೂರ್ತಿಯಾದ ವ್ಯಕ್ತಿಗಳು ಯಾರು ಮತ್ತು ಹೃದ್ರೋಗ ಚಿಕಿತ್ಸೆಯಲ್ಲಿ ಮಹತ್ವದ ಸಂಶೋಧನೆಗೆ ನಿಮಗೆ ಹೇಗೆ ಪ್ರೇರಣೆ ಸಿಕ್ಕಿತು?

ಕಲಾಂ: ನನ್ನ ಶಾಲೆಯ ಶಿಕ್ಷಕ ರಾಗಿದ್ದ ಶಿವಸುಬ್ರಮಣ್ಯ ಅಯ್ಯರ್ ನನ್ನ ಭವಿಷ್ಯಕ್ಕೆ ಹೊಸ ತಿರುವು ನೀಡಿದ ಮತ್ತು ಪ್ರೇರಣೆ ನೀಡಿದ ಶಿಕ್ಷಕ. ಅವರ ಬಳಿ ವಿಜ್ಞಾನದ ಪಾಠ ಕೇಳುತ್ತ ಭೌತಶಾಸ್ತ್ರದಲ್ಲಿ ಆಸಕ್ತಿ ಹೆಚ್ಚಿತು. ಮುಂದೆ ಅದರಲ್ಲಿಯೇ ಸ್ನಾತಕೋತ್ತರ ಪದವಿ, ಸಂಶೋಧನೆ ಮಾಡಿದ ವಿಮಾನಯಾನ ಎಂಜಿನಿಯರ್ ಆದೆ. ಸಂಶೋಧನಾ ರಂಗದಲ್ಲಿ ವಿಶೇಷ ಆಸಕ್ತಿ ವಹಿಸಿದ್ದು ಮಹತ್ವದ ಘಟ್ಟವಾಯಿತು.

ನನ್ನ ಜೊತೆಗೆ ಕಾರ್ಯನಿರ್ವಹಿ ಸುತ್ತಿದ್ದ ವಿಜ್ಞಾನಿಯೊಬ್ಬರಿಗೆ ಹೃದಯದ ತೊಂದರೆಯಿತ್ತು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿ ದಾಗ ಡಾ. ಸೋಮರಾಜು ಎಂಬುವವರು ಆ್ಯಂಜಿಯೋಗ್ರಾಮ್, ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗಳನ್ನು ನೇರವಾಗಿ ತೋರಿಸಿದ್ದರು. ಅಲ್ಲಿ ಬಳಸಲಾಗುತ್ತಿದ್ದ ಸ್ಟಂಟ್ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಬೆಲೆಯದ್ದಾಗಿತ್ತು. ನಂತರ ನಾವು ನಮ್ಮ ಪ್ರಯೋಗಾಲಯದಲ್ಲಿ ಸೋಮರಾಜು ಮಾರ್ಗದರ್ಶನದಲ್ಲಿ ಕಡಿಮೆ ದರದ ಉತ್ತಮ ಗುಣಮಟ್ಟದ ಸ್ಟಂಟ್ ಉತ್ಪಾದನೆ ಮಾಡಿದೆವು. ಅದು ಇವತ್ತು ಕಲಾಂ-ರಾಜು ಕಾರ್ಡಿಯಾಕ್ ಸ್ಟಂಟ್ ಆಗಿದೆ.

ರಾಹುಲ್‌ರೈ:
ಲೂನಾರ್ಸ್‌ (ಉಪಗ್ರಹ) ತಂತ್ರಜ್ಞಾನದ ಮೇಲೆ ನಾವು ಹೂಡುತ್ತಿರುವ ಬಂಡವಾಳ ವ್ಯರ್ಥವಲ್ಲವೇ. ಅದನ್ನು ದೇಶದ ಏಳ್ಗೆಗೆ ಏಕೆ ಬಳಸಬಾರದು?

ಕಲಾಂ: ಇವತ್ತು ನೀವು ನೋಡುತ್ತಿರುವ ಟಿವಿ ಚಾನೆಲ್‌ಗಳು, ಸಂವಹನ, ಹವಾಮಾನ ಮಾಹಿತಿಗಳು ಬರುತ್ತಿರುವುದು ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ಮೂಲಕವೇ. ನೈಸರ್ಗಿಕ ವಿಪತ್ತುಗಳನ್ನು ಮೊದಲೇ ಗ್ರಹಿಸಿ ಜನರಿಗೆ ಮಾಹಿತಿ ನೀಡುವ ಉಪಗ್ರಹಗಳಿಂದ ಎಷ್ಟೋ ಜೀವ, ಆಸ್ತಿಪಾಸ್ತಿಗಳನ್ನು ರಕ್ಷಿಸಲು ಸಾಧ್ಯವಾಗುತ್ತಿದೆ. ಕೃಷಿ, ಮನರಂಜನೆ ಆಧಾರಿತ ಮಾಧ್ಯಮಗಳ ಕಾರ್ಯನಿರ್ವಹಣೆ ಸಾಧ್ಯವಾಗುತ್ತಿದೆ. ಈ ತಂತ್ರಜ್ಞಾನಕ್ಕೆ ಹಾಕುವ ಹಣ ವ್ಯರ್ಥವಲ್ಲ.

ವಿದ್ಯಾರ್ಥಿನಿ: ಶಿಕ್ಷಣ ಸಂಸ್ಥೆಗಳಲ್ಲಿ ಸೌಲಭ್ಯಗಳ ಕೊರತೆಯನ್ನು ಹೇಗೆ ಮೀರಿ ನಿಲ್ಲಬಹುದು?

ಕಲಾಂ: ಒಬ್ಬ ಅತ್ಯುತ್ತಮ ಶಿಕ್ಷಕ ಶಿಕ್ಷಣ ಸಂಸ್ಥೆಯ ಎಲ್ಲ ಕೊರತೆಗಳನ್ನು ತುಂಬಿಬಿಡಬಲ್ಲ. ಇರುವ ಸೌಲಭ್ಯಗಳನ್ನೇ ಸಮರ್ಥವಾಗಿ ಉಪಯೋಗಿಸಿಕೊಂಡು ಜ್ಞಾನಾರ್ಜನೆ ಮಾಡಿಕೊಂಡು ತನ್ನ ಹಾಗೂ ತನ್ನ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಬಲ್ಲರು. ಒಬ್ಬ ಉತ್ತಮ ಶಿಕ್ಷಕನಾಗಲು ಸಂಶೋಧನಾ ಗುಣಗಳಿರಬೇಕು. ಒಬ್ಬ ಉತ್ತಮ ಸಂಶೋಧಕ ಉತ್ತಮ ಶಿಕ್ಷಕನಾಗಲು ಸಾಧ್ಯ.

ಪ್ರಶ್ನೆ: ಮುಂಬರುವ ದಿನಗಳಲ್ಲಿ ತಂತ್ರಜ್ಞಾನದ ಬಳಕೆಯಿಂದ ಶಿಕ್ಷಕರ ಸಂಖ್ಯೆ ಕಡಿಮೆಯಾಗಲಿದೆಯೇ?

ಕಲಾಂ: ಎಂತಹ ತಂತ್ರಜ್ಞಾನ ಬಂದರೂ ಅದು ಶಿಕ್ಷಕರಿಗೆ ಪರ್ಯಾಯವಾಗಲು ಸಾಧ್ಯವೇ ಇಲ್ಲ. ಶಿಕ್ಷಕರ ಜ್ಞಾನ ಮತ್ತು ವೃತ್ತಿಪರತೆಯ ಮಟ್ಟವನ್ನು ತಂತ್ರಜ್ಞಾನವು ದ್ವಿಗುಣಗೊಳಿಸುತ್ತದೆ. ಆಗ ಮತ್ತಷ್ಟು ಶಿಕ್ಷಕರು ಹೆಚ್ಚಾಗುತ್ತಾರೆ.
 
ಅಶ್ವಿನಿ: ನಮ್ಮ ದೇಶದಲ್ಲಿ ಇಂದು ಆಗುತ್ತಿರುವ ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಅಲ್ಲವೇ?

ಕಲಾಂ: ಅತ್ಯುತ್ತಮ ಪ್ರಶ್ನೆ ಇದು. ಆರ್ಥಿಕ ಅಭಿವೃದ್ಧಿ ಎಲ್ಲ ಹಂತಗಳಲ್ಲಿ ಆಗುತ್ತದೆ. ಅದಕ್ಕೆ ಬೇರೆ ಬೇರೆಯವರು ಭಾಗಿಯಾಗುತ್ತಾರೆ. ಆದರೆ ಮಾನವ ಅಭಿವೃದ್ಧಿ ಅಂದರೆ ವ್ಯಕ್ತಿತ್ವ ರೂಪಿಸುವ ಕೆಲಸ ಕೇವಲ ಪ್ರಾಥಮಿಕ ಶಾಲೆ ಶಿಕ್ಷಕರಿಂದ ಮಾತ್ರ ಸಾಧ್ಯ. ಮಾನವೀಯ, ಸಾಮಾಜಿಕ ಮೌಲ್ಯಗಳನ್ನು ತುಂಬಿಸಿ ಬೆಳೆಸುವ ವ್ಯಕ್ತಿ ಪ್ರಾಥಮಿಕ ಶಾಲಾ ಶಿಕ್ಷಕರು ಉತ್ತಮ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಬಲ್ಲರು.

ಪ್ರೀತಿ:
ಜೀವನದಲ್ಲಿ ನೀವು ವಿಮಾನ ಪೈಲೆಟ್‌ಆಗುವ ಗುರಿ ಹೊಂದಿದ್ದಿರಿ. ಆದರೆ ನಂತರ ನೀವು ವಿಜ್ಞಾನಿಯಾಗಿ ಯಶಸ್ವಿಯಾಗಿದ್ದೀರಿ. ಜೀವನದಲ್ಲಿ ಇಂತಹ ಹೊಂದಾಣಿಕೆ ಸಹಜವೇ. ಇಂದಿನ ಯುವಜನತೆ ಇಂತಹ ಸಂದರ್ಭದಲ್ಲಿ ಧೈರ್ಯಗೆಡುತ್ತಿದ್ದಾರೆಯೇ?

ಕಲಾಂ:
ನೀವು ಜೀವನದಲ್ಲಿ ಏನಾದರೂ ಮಹತ್ತರ ಸಾಧನೆ ಮಾಡಬೇಕೆಂದರೆ ನಿಮ್ಮ ಸಮಸ್ಯೆಯನ್ನು ಸೋಲಿಸಬೇಕು. ಅದರಿಂದ ನೀವು ಮತ್ತಷ್ಟು ಎತ್ತರಕ್ಕೆ ಏರುತ್ತಿರಿ. ಸಮಸ್ಯೆಯ ಸುಳಿಯಲ್ಲಿ ನೀವು ಸಿಲುಕಬೇಡಿ. ಧೈರ್ಯದಿಂದ ಎದುರಿಸಿ ಅದನ್ನು ಗೆಲ್ಲಿರಿ. ನಾನು ವಿಮಾನ ಪೈಲೆಟ್ ಆಗದಿದ್ದರೆ ಏನಾಯಿತು. ವಿಮಾನವನ್ನೇ ತಯಾರಿಸುವ ತ್ರಂತ್ರಜ್ಞನಾದೆ. ಕೆಲವು ವರ್ಷಗಳ ಹಿಂದೆ ವಿಮಾನವನ್ನು ಹಾರಿಸುವ ಅವಕಾಶವನ್ನೂ ನಾನು ಪಡೆದೆ. ಜ್ಞಾನ ಮತ್ತು ಧೈಯವೇ ಸರ್ವತ್ರ ಸಾಧನ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT