ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತ ಮುನ್ನೆಚ್ಚರಿಕೆ ನೀಡುವ ಕಾರು

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೃದಯಾಘಾತವೆಂಬ ಆಘಾತ ಯಾವ ಕ್ಷಣದಲ್ಲಿ ಹಠಾತ್ ಆಗಿ ದಾಳಿ ಮಾಡುತ್ತದೆ ಎಂದು ಹೇಳುವುದು ಅಸಾಧ್ಯ. ಇಂದು ಬಹಳಷ್ಟು ಮಂದಿಯನ್ನು ಕಾಡುತ್ತಿರುವ ಈ ಆಗಂತುಕ ವ್ಯಾಧಿಗೆ ಭಯ ಬೀಳದವರಿಲ್ಲವೆಂದೇ ಹೇಳಬಹುದು. ಈ ಮಾರಕ ಆಘಾತಕ್ಕೆ ಮುಂಜಾಗ್ರತೆಯೊಂದೇ ಪರಿಹಾರ ಒದಗಿಸಬಲ್ಲದು ಎನ್ನುತ್ತಾರೆ ತಜ್ಞರು.

ಈ ನಿಟ್ಟಿನಲ್ಲಿ ಜಪಾನ್‌ನ ತಂತ್ರಜ್ಞರು, ಕಾರಿನ ಚಾಲಕನಿಗೆ ಸಂಭವನೀಯ ಹೃದಯಾಘಾತದ ಮುನ್ನೆಚ್ಚರಿಕೆ ನೀಡುವ, ಹೃದ್ರೋಗದ ಬಗ್ಗೆ ಭವಿಷ್ಯ ನುಡಿಯುವ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಎಲೆಕ್ಟ್ರೋಕಾರ್ಡಿಯೋಗ್ರಾಫಿಕ್ ನಿರ್ವಹಣೆಗಾಗಿ ಕಾರಿನ ಸ್ಟಿರಿಂಗ್‌ನಲ್ಲಿ ಎರಡು ವಿದ್ಯುತ್ ಧ್ರುವಗಳನ್ನು ಅಳವಡಿಸಲಾಗಿದೆ. ಸ್ಟೀರಿಂಗ್‌  ಹಿಡಿದ ಚಾಲಕನ ನಾಡಿ ಬಡಿತದಲ್ಲಿನ ಏರಳಿತವನ್ನು ಕಂಡುಕೊಳ್ಳಲು ಇದರೊಟ್ಟಿಗೆ ಸೆನ್ಸರ್ ವ್ಯವಸ್ಥೆ ಅಳವಡಿಸಲಾಗಿದೆ.

ಆದಷ್ಟೂ ಶೀಘ್ರವಾಗಿ ಈ ತಂತ್ರಾಂಶ ಅಭಿವೃದ್ಧಿಪಡಿಸುವ ಮೂಲಕ ಕಾರು ಚಾಲನೆ ವೇಳೆ ಹೃದಯಾಘಾತ ಸಂಭವಿಸಿದಾಗ ಅಪಘಾತಗಳಾಗುವ ಪ್ರಮಾಣವನ್ನು ತಗ್ಗಿಸುವುದು ನಮ್ಮ ಈ ಸಂಶೋಧನೆಯ ಉದ್ದೇಶ’ ಎನ್ನುತ್ತಾರೆ ಈ ಯೋಜನೆಯ ರೂವಾರಿ ಹಾಗೂ ನಿಪ್ಪಾನ್ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಗೌರವ ಪ್ರಾಧ್ಯಾಪಕರಾಗಿರುವ ಟಕಾವ್ ಕಾಟೊ.

ಕಾರು ಚಲಾಯಿಸುವ ಚಾಲಕನ ಹೃದಯಬಡಿ­ತವನ್ನು ಕಾರಿನಲ್ಲಿ ಅಳವಡಿಸಿರುವ ಉಪಕರಣಗಳು ನಿರಂ­ತ­ರವಾಗಿ ದಾಖಲಿಸುತ್ತಿರುತ್ತವೆ. ಹೀಗೆ ದಾಖಲಾಗುವ ದತ್ತಾಂಶವನ್ನು ಕ್ಷಣ ಕ್ಷಣಕ್ಕೂ ವಿಶ್ಲೇಷಿ­ಸುವ ಉಪಕರಣಗಳು ಸಂಭವನೀಯ ಆಘಾತದ ಸುಳಿವು ಹಾಗೂ ಚಾಲಕನಿಂದ ಹೊರಡುವ ಅಪಾಯ ಕಾರಿ ಧ್ವನಿಯನ್ನು ಗುರ್ತಿಸಿ ಕಾರಿನ ಸಂಚಾರ ನಿರ್ದೇಶನ ವ್ಯವಸ್ಥೆಗೆ (navigation system) ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸುವಂತೆ ಸೂಚನೆ ನೀಡುತ್ತವೆ.

ಈ ಸಂಶೋಧನೆಯಲ್ಲಿ ತೀವ್ರ ಹೃದಯಾಘಾತದ ವೇಳೆ ಹೋಲ್ಟರ್ ಮಾನಿಟರ್ (ನಿರಂತರವಾಗಿ ಹೃದಯ ಬಡಿತ ದಾಖಲಿಸುವ ಸಾಧನ) ಧರಿಸಿದ 34 ಜನರ ಹೃದಯ ಬಡಿತದ ದತ್ತಾಂಶಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಇದರಲ್ಲಿ 31 ಜನರಲ್ಲಿ ಹೃದಯ ತೊಂದರೆಗೆ ಪೂರ್ವದ ಒಂದೆರಡು ಗಂಟೆಗಳ ಅವಧಿಯಲ್ಲಿ ಸ್ವನಿಯಂತ್ರಿತ ನರಗಳಲ್ಲಿ ಏರುಪೇರು ಸಾಮಾನ್ಯವಾಗಿ  ಕಂಡುಬಂದಿರುವ ಅಂಶವಾಗಿದೆ.

‘ಬಹುತೇಕರಲ್ಲಿ ಕಂಡುಬಂದಿರುವ ಈ ಸಾಮಾನ್ಯ ಏರುಪೇರಿನ ಅನುಭವವೇ ಸ್ವಲ್ಪಮಟ್ಟಿಗೆ ಹೃದಯಾ­ಘಾತದ ಸುಳಿವು ನೀಡುವುದಾಗಿರುತ್ತದೆ’ ಎನ್ನುತ್ತಾರೆ ಕಾಟೊ.

ಹೃದಯಬಡಿತದ ಸ್ಪಷ್ಟ ದತ್ತಾಂಶವನ್ನು ಪತ್ತೆ ಸಾಧನದ ಸರ್ಕಿಟನ್ನು ಇನ್ನಷ್ಟು ಸುಧಾರಿಸುವ ಮೂಲಕ ಪಡೆಯಬಹುದಾಗಿದೆ ಎನ್ನುತ್ತಾರೆ ಈ ಸಂಶೋಧ­ನೆಯಲ್ಲಿ ಕೈಜೋಡಿಸಿರುವ ಡೆನ್ಸೊ ಕಾರ್ಪೊರೇಷನ್‌ನ ಹಿರಿಯ ಎಂಜಿನಿಯರ್ ತ್ಸುಯೋಶಿ ನಕಗಾವ.

ಶೋಧನೆಯ ಫಲಿತಾಂಶದ ನಿಖರತೆಯನ್ನು ಹೆಚ್ಚಿಸುವುದಕ್ಕಾಗಿ ಸಂಶೋಧಕರು ಕಾರಿನ ಸ್ಟೀರಿಂಗ್ ಹೊರತಾಗಿಯೂ ಸೀಟ್‌ನಲ್ಲಿ ಎಲೆಕ್ಟ್ರೋಡ್ ಅಳವಡಿಸಲು ಮುಂದಾಗಿದ್ದಾರೆ. ಶೀಘ್ರದಲ್ಲಿಯೇ ರಸ್ತೆಗಿಳಿಯಲಿರುವ ಈ ವಿನೂತನ ತಂತ್ರಾಂಶದ ಕಾರಿನಿಂದ ಸ್ಪಲ್ಪಮಟ್ಟಿಗಿನ ಪ್ರಮಾಣದ­ಲ್ಲಾದರೂ ಹೃದಯಾಘಾತವಾದ ತಕ್ಷಣದಲ್ಲಿ ಕಾರು ಅಪಘಾತವಾಗುವುದನ್ನು ತಡೆಯುವಂತಹ ಪರಿಹಾರ ದೊರೆಯಬಲ್ಲದು ಎಂಬ ನಂಬಿಕೆ ನಮ್ಮದು ಎನ್ನುತ್ತಾರೆ ಕಾಟೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT