ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದ್ರೋಗ ತಡೆಗಟ್ಟಿ

Last Updated 28 ಸೆಪ್ಟೆಂಬರ್ 2013, 4:29 IST
ಅಕ್ಷರ ಗಾತ್ರ

ಮ್ಮ ಶರೀರದ ಅಂಗಗಳಲ್ಲಿ ಹೃದಯ ಅತ್ಯಂತ ಪ್ರಮುಖವಾದುದು. ಅದು  ಸರಿಯಾಗಿ ಕೆಲಸ ಮಾಡದಿದ್ದರೆ ದಿನನಿತ್ಯದ ಚಟುವಟಿಕೆಗಳನ್ನು ನಡೆಸುವುದು ಕಷ್ಟ. ಇತ್ತೀಚಿನ ವರ್ಷಗಳಲ್ಲಿ ಹೃದ್ರೋಗಗಳಿಂದ ಬಳಲುವವರ ಸಂಖ್ಯೆ ಅಧಿಕವಾಗುತ್ತಿದೆ. ಅನೇಕರು ಸಣ್ಣ ವಯಸ್ಸಿನಲ್ಲೇ ಹಠಾತ್ತನೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಹೃದಯ ಕಾಯಿಲೆ ಹೇಗೆ ಬರುತ್ತದೆ, ಅದಕ್ಕೆ ಕಾರಣಗಳೇನು, ಅದನ್ನು ತಡೆಗಟ್ಟುವ ವಿಧಾನ, ತೆಗೆದುಕೊಳ್ಳಬೇಕಾದ ಮುತುವರ್ಜಿ ಹೇಗೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ವಿಶ್ವ ಹೃದಯ ಪ್ರತಿಷ್ಠಾನ ಕಾರ್ಯ ನಿರತವಾಗಿದೆ. ಈ ಒಕ್ಕೂಟದ ಸಮೀಕ್ಷೆಯ ಪ್ರಕಾರ, ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 17.3 ದಶಲಕ್ಷ ಜನರು ಹೃದಯ ರಕ್ತನಾಳದ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ.

ಈ ಸಂಖ್ಯೆ 2030ರ ಹೊತ್ತಿಗೆ 23 ದಶಲಕ್ಷ  ದಾಟುವ ಸಾಧ್ಯತೆ ಇದೆ ಎನ್ನುತ್ತದೆ ವರದಿ. ಸಾವಿನ ಪ್ರಮಾಣ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಲು ಹಲವು ಕಾರಣಗಳಿರಬಹುದು. ಆದರೆ ಹೃದಯಕ್ಕೆ ಸಂಬಂಧಿಸಿದ ಶೇಕಡಾ 80ರಷ್ಟು ಕಾಯಿಲೆಗಳನ್ನು ಪೂರ್ವ ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿದರೆ ನಿಯಂತ್ರಣ ಸಾಧ್ಯ.

ರಕ್ತನಾಳಗಳು ಮತ್ತು ಹೃದಯದ ಮೇಲೆ ಪರಿಣಾಮ ಬೀರುವ ತೊಂದರೆಗಳನ್ನು ಹೃದ್ರೋಗ ಎಂದು ಕರೆಯುತ್ತಾರೆ. ಇವುಗಳಲ್ಲಿ ಪರಿಧಮನಿಯ ಹೃದ್ರೋಗಗಳು (coronary heart diseases), ಮುಮ್ಮಿದುಳು ರೋಗಗಳು (cerebrovascular diseases) ರಕ್ತಕೊರತೆಯ ಹೃದಯ ರೋಗಗಳು (Peripheral artery disease)  ಇತ್ಯಾದಿ ವಿಧಗಳಿವೆ.

ಹೃದಯಕ್ಕೆ ರಕ್ತ ಪೂರೈಸುವ ನಾಳಗಳಲ್ಲಿ ಆಗುವ ತೊಂದರೆಗೆ ಪರಿಧಮನಿಯ ಹೃದ್ರೋಗ ಎಂದು ಕರೆಯುತ್ತಾರೆ. ನಮ್ಮ ಹೃದಯದ ಅಪಧಮನಿಯ ಗೋಡೆಗಳ ಮೇಲೆ ಅತ್ಯಧಿಕ ಪ್ರಮಾಣದಲ್ಲಿ ಕೊಬ್ಬು, ಕ್ಯಾಲ್ಶಿಯಂ ಹಾಗೂ ಜೀವಕೋಶಗಳ ತ್ಯಾಜ್ಯ ತುಂಬಿಕೊಂಡು ಅಪಧಮನಿಯ ಗಾತ್ರ ಚಿಕ್ಕದಾಗುತ್ತದೆ. ಆಗ ಹೃದಯ ಸಾಕಷ್ಟು ಆಮ್ಲಜನಕವನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ಪರಿಧಮನಿಯ ಹೃದಯ ರೋಗದಿಂದ ಬಳಲುತ್ತಿರುವವರು ದೇಹಕ್ಕೆ ಬೇಕಾಗುವಷ್ಟು ಆಮ್ಲಜನಕ ಸಿಗದೇ ಹೃದಯಾಘಾತಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ.

ಈ ವಿಧದ ಹೃದ್ರೋಗ ಇರುವ ರೋಗಿಗಳಲ್ಲಿ ಅನೇಕ ಲಕ್ಷಣಗಳು ಗೋಚರಿಸುತ್ತವೆ. ಉಸಿರುಗಟ್ಟಿದಂತೆ ಆಗುವುದು, ಗಂಟಲುಗಳಲ್ಲಿ ಊತ, ಎದೆಯಲ್ಲಿ ಉರಿಯೂತ, ದೇಹದಲ್ಲಿ ಆಯಾಸ, ದೌರ್ಬಲ್ಯ ತಲೆದೋರಬಹುದು. ಇದನ್ನು ಆರಂಭದಲ್ಲೇ  ಪತ್ತೆಹಚ್ಚಿ ಗುಣಪಡಿಸದಿದ್ದರೆ ಮುಂದೆ ಹೃದಯ ಬಡಿತದಲ್ಲಿ ಏರಿಳಿತ ಅಥವಾ ಹಠಾತ್ತನೆ ಹೃದಯಾಘಾತ ಉಂಟಾಗುವ ಸಾಧ್ಯತೆ ಇರುತ್ತದೆ.

ಪರಿಧಮನಿಯ ಹೃದ್ರೋಗಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳನ್ನು ಗುರುತಿಸಿ ನಿಯಂತ್ರಿಸುವ ಪ್ರಯತ್ನ ನಡೆಯುತ್ತಿದೆ. ಮಧುಮೇಹ ಅಥವಾ ಇನ್ಸುಲಿನ್ ಪ್ರತಿರೋಧಕ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಇಂತಹ ಮುಖ್ಯವಾದ  ಅಂಶಗಳು ಎಂದು ಪತ್ತೆಹಚ್ಚಲಾಗಿದೆ. ಇದರ ಜೊತೆಗೆ ಮನುಷ್ಯನ ಅಶಿಸ್ತಿನ ಜೀವನಶೈಲಿ, ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳು, ಅನಾರೋಗ್ಯಕರ ಆಹಾರ ಪದ್ಧತಿ ಸಹ ಕಾರಣ ಎಂಬುದು ತಿಳಿದುಬಂದಿದೆ.

ಮಹಿಳೆಯರೂ ಹೊರತಲ್ಲ
ಹೃದ್ರೋಗ ಪುರುಷರಿಗೆ, ಅದರಲ್ಲೂ ವೃದ್ಧರಿಗೆ ಹೆಚ್ಚಾಗಿ ಬರುತ್ತದೆ ಎಂದು ಹೇಳಲಾಗುತ್ತಿದ್ದರೂ ಇತ್ತೀಚೆಗೆ ಮಹಿಳೆಯರಲ್ಲಿ ಕೂಡ ಇದು ಸಾಮಾನ್ಯವಾಗುತ್ತಿದೆ. ಇತ್ತೀಚೆಗೆ ಮಹಿಳೆಯರು ಹೆಚ್ಚಾಗಿ ಎದುರಿಸುತ್ತಿರುವ ಋತುಚಕ್ರದ ಸಮಸ್ಯೆ, ಹಾರ್ಮೋನ್‌ ವರ್ಗಾವಣೆ ಚಿಕಿತ್ಸೆ, ಜನನ ನಿಯಂತ್ರಣ ಗುಳಿಗೆ, ಗರ್ಭಧಾರಣೆಗೆ ಸಂಬಂಧಿಸಿದ ತೊಂದರೆಗಳಿಂದ ಅವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹೃದಯ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಇನ್ನೊಂದು ಆಘಾತಕಾರಿ ಅಂಶವೆಂದರೆ, ವಿಶ್ವದಲ್ಲಿ ಪ್ರತಿ ವರ್ಷ ಹುಟ್ಟುವ ಮಕ್ಕಳಲ್ಲಿ 1.35 ದಶಲಕ್ಷ ಮಕ್ಕಳಿಗೆ ಹೃದ್ರೋಗದ ತೊಂದರೆ ಇರುತ್ತದೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ನಮಗೆ ಒಮ್ಮೆ ಹೃದ್ರೋಗ ಬಂತೆಂದರೆ ಅದನ್ನು ಸಂಪೂರ್ಣ ವಾಸಿ ಮಾಡಲು ಸಾಧ್ಯವಿಲ್ಲ. ಆದರೆ ಅದು ಹೆಚ್ಚಾಗುವುದನ್ನು ನಿಯಂತ್ರಿಸಬಹುದು. ಅದಕ್ಕಾಗಿ ಮುಖ್ಯವಾಗಿ ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕಾದುದು ಅನಿವಾರ್ಯ.

ಇವನ್ನು ಪಾಲಿಸಿಉತ್ತಮ ಜೀವನಕ್ರಮದಿಂದ ಹೃದ್ರೋಗವನ್ನು ಹೇಗೆ ತಡೆಗಟ್ಟಬಹುದು ಎಂಬುದಕ್ಕೆ ಅಮೆರಿಕದ ಹೃದಯ ಸಂಸ್ಥೆಯು ಕೆಲವು ಅಂಶಗಳನ್ನು ಸೂಚಿಸಿದೆ:
ಧೂಮಪಾನ ಹಾಗೂ ಮದ್ಯಪಾನ ಸೇವನೆಯ ಚಟವನ್ನು ಬಿಡುವುದು.
ಜೀವಕ್ಕೆ ಮಾರಕವಾಗುವ ದುರಭ್ಯಾಸಗಳಿಂದ ದೂರ ಇರುವುದು.
ಪ್ರತಿದಿನ ಕನಿಷ್ಠ 30 ನಿಮಿಷವನ್ನು ದೈಹಿಕ ವ್ಯಾಯಾಮಕ್ಕೆ ಮೀಸಲಿಡುವುದು.
ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿದ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು.
ಆರೋಗ್ಯಭರಿತ ಆಹಾರ ಸೇವಿಸುವುದು ಹಾಗೂ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಶಿಸ್ತುಬದ್ಧ ಜೀವನಕ್ರಮವನ್ನು ಅಳವಡಿಸಿಕೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT