ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗ್ಗೋಡಿನ ಚರಕ ಉತ್ಸವದಲ್ಲಿ ವಿವಿಧ ಕ್ಷೇತ್ರದವರ ಸಮಾಗಮ

Last Updated 22 ಜನವರಿ 2011, 6:50 IST
ಅಕ್ಷರ ಗಾತ್ರ

ಶಿವಮೊಗ್ಗ: ಅದೊಂದು ಅಪರೂಪದ ಸಮಾಗಮ. ಗಾಂಧೀಜಿ ಹಾಕಿಕೊಟ್ಟ ಸ್ವದೇಶಿ ಆಂದೋಲನದ ನೆಲೆಗಟ್ಟಿನಲ್ಲೇ ಸಾವಿರಾರು ಜನರಿಗೆ ಸ್ವಾವಲಂಬಿ ಬದುಕು ತೋರಿಸಿಕೊಟ್ಟವರೆಲ್ಲ ಅಲ್ಲಿ ಸೇರಿದ್ದರು.

ಕೈಮಗ್ಗ ಉದ್ಯಮ, ಹಳ್ಳಿಗಳ ಬೆಳವಣಿಗೆಗೆ ಇರುವ ಮತ್ತೊಂದು ದೊಡ್ಡ ಕ್ಷೇತ್ರ ಎನ್ನುವುದನ್ನು ಸಾಬೀತುಪಡಿಸಿದವರು ಅಲ್ಲಿ ನೆರೆದಿದ್ದರು. ಕಳೆದ 30-40ವರ್ಷಗಳಿಂದ ಹಿಡಿದು ಆರು ತಿಂಗಳಲ್ಲೇ ತಮ್ಮ ಊರನ್ನು ಕೈಮಗ್ಗದಿಂದಲೇ ಬೆಳಗಿಸಿದ ನೇಕಾರರು ಸೇರಿದಂತೆ ಸಾಹಿತಿಗಳು, ಲೇಖಕರು, ವಿನ್ಯಾಸಕರಾರರು ಹೆಗ್ಗೋಡಿನ ‘ಚರಕ ಉತ್ಸವ’ದಲ್ಲಿ ಸಮಾಗಮಗೊಂಡಿದ್ದರು.

ಇವರೆಲ್ಲ ಉತ್ಸವದಲ್ಲಿ ನಡೆದ ಸಂವಾದದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು ಹೀಗೆ.

‘ನಮಗೆ ಕೈಮಗ್ಗವೇ ಗೊತ್ತಿರಲಿಲ್ಲ. ಆದರೆ, ಕಗ್ಗ ಹಳ್ಳಿಗೆ ಯಾವುದಾದರೂ ರೀತಿಯಲ್ಲಿ ಬೆಳಕು ಬರಬೇಕೆಂಬ ಆಸೆ ಇತ್ತು. ಈ ಬಗ್ಗೆ ತಹಶೀಲ್ದಾರರೊಂದಿಗೆ ಚರ್ಚಿಸಿದ್ದೆವು. ಆಗ, ಹೊಳೆದದ್ದು ಕೈಮಗ್ಗ ಉದ್ಯಮ. ಭರವಸೆಯಿಂದ 20 ಜನ ಸ್ತ್ರೀಶಕ್ತಿ ಸಂಘ ರಚಿಸಿ, ಆರಂಭಿಸಿದೆವು. ಆರು ತಿಂಗಳಲ್ಲಿ ಊರನ್ನು ಎಲ್ಲರೂ ಗುರುತಿಸುವಂತಾಯಿತು. ತರಬೇತಿ ಕೇಂದ್ರವನ್ನು ಸ್ಥಳೀಯ ಉಪಕರಣಗಳಿಂದಲೇ ಕಟ್ಟಿದೆವು’ ಎಂದು ಶೃಂಗೇರಿಯ ಗೂರಿಗೆಯ ಶಾರದಾ ವಿವರಿಸಿದಾಗ ಕರತಾಡನ.

ಬೆಳಗಾವಿಯ ದೇಸೀ ಪ್ರಶಸ್ತಿ ಪುರಸ್ಕೃತ ಗೋಪಿಕೃಷ್ಣ, ‘ಗ್ರಾಮೀಣ ಜನ, ನಿರಂತರ ಉದ್ಯೋಗ ದೊರಕುವಂತಹದ್ದು ಏನಾದರೂ ಕಲ್ಪಿಸಿ ಅಂತಿದ್ರು. ಅದಕ್ಕೆ ಕಂಡುಕೊಂಡ ಮಾರ್ಗ ನೂಲುವುದು. ಇಂದು ಉತ್ತರ ಕರ್ನಾಟಕದ ಶೈಲಿಯಲ್ಲಿ ವಿವಿಧ ಕೈಮಗ್ಗದ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ನಮಗೆ ಮಾರುಕಟ್ಟೆ ದೊಡ್ಡದಿದೆ. ಆದರೆ, ಅದಕ್ಕೆ ತಕ್ಕಂತೆ ಉತ್ಪಾದನೆ ಸಮಸ್ಯೆಯಾಗುತ್ತಿದೆ’ ಎಂಬ ಮಾತು ಜನರ ಹುಬ್ಬೇರಿಸುವಂತೆ ಮಾಡಿತು. 

ವಿನ್ಯಾಸ ಕೇಂದ್ರದ ಅನಂತಮೂರ್ತಿ ಮಾತನಾಡಿ, ಬಟ್ಟೆಗೆ ಬಣ್ಣಹಾಕುವುದಾಗಲಿ, ವಿನ್ಯಾಸ ಮಾಡುವುದಾಗಲಿ ಎಲ್ಲವೂ ಗುಣಮಟ್ಟದ್ದಿದ್ದಾಗ ಗ್ರಾಹಕರು ಮುಗಿಬೀಳುತ್ತಾರೆ. ಕಂಟೇನರ್‌ಗಟ್ಟಲೆ ಈಗ ಬೇಡಿಕೆ ಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಾಟಕಾರರ ಡಾ.ಕೆ. ಮರುಳಸಿದ್ದಪ್ಪ ಮಾತನಾಡಿ, ಇಂದು ಹಳ್ಳಿಗಳಲ್ಲಿನ ವಲಸೆ ಸಮಸ್ಯೆ ತಡೆಯುವ ತುರ್ತಿದೆ. ಹುಡುಗರಿಗೆ ಹಳ್ಳಿಗಳಲ್ಲಿ ಬದುಕು ನಡೆಸಬಹುದು ಎಂಬ ಭರವಸೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕೈಮಗ್ಗದ ಕ್ರಾಂತಿ ಯಶಸ್ಸು ಕಾಣಬೇಕಿದೆ ಎಂದು ಪ್ರತಿಪಾದಿಸಿದರು.

ನೇಕಾರಿಕೆ ಅಧಿಕಾರಿ ಧರಣೇಶ್ ಮಾತನಾಡಿ, ನೇಕಾರರು ಕೈಮಗ್ಗ ತಯಾರಿಕೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಆದರೆ, ಕೆಲವು ಕಡೆ ಭೇಟಿ ನೀಡಿದಾಗ, ಅವ್ಯವಸ್ಥೆಯಾಗಿರುವುದು ಕಂಡುಬರುತ್ತದೆ ಎಂದರು.

ಸಂವಾದದಲ್ಲಿ ಎಚ್.ಎಸ್. ಗುರುನಾಥ್ ಮಾತನಾಡಿ, ಕೈಮಗ್ಗದ ಉತ್ಪನ್ನಗಳ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೈಮಗ್ಗ ಲಾಂಛನ ಪ್ರಸ್ತುತಪಡಿಸಲಾಗಿದೆ. ಇದರ ಉಪಯೋಗ ಪಡೆಯಬೇಕು ಎಂದರು.

ವಿನ್ಯಾಸಕಾರ ಶೇಖರ್, ಮಹಾರಾಷ್ಟ್ರದ ವಿನ್ಯಾಸಕಿ ಗೀತಾ ಪಾಟೀಲ್, ನಿವೃತ್ತ ಪ್ರಾಂಶುಪಾಲ ಗುರುರಾಜ್ ಬಾಪಟ್ ರಾಜ್ಯದ ವಿವಿಧೆಡೆಯಿಂದ ಕೈಮಗ್ಗ ಉದ್ದಿಮೆದಾರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT