ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಜಾತೀಯತೆ: ಬೂಟಾ ಸಿಂಗ್ ಕಳವಳ

Last Updated 24 ಡಿಸೆಂಬರ್ 2012, 8:31 IST
ಅಕ್ಷರ ಗಾತ್ರ

ಧಾರವಾಡ: `ಶತಮಾನಗಳಿಂದ ಭಾರತದಲ್ಲಿ ಅಸ್ತಿತ್ವದಲ್ಲಿರುವ ಜಾತೀಯತೆಯು ನಾಗರಿಕ ಸಮಾಜ ಸಾಕಷ್ಟು ಶಿಕ್ಷಣ ಪಡೆದ ಮೇಲೆ ಇನ್ನೂ ಹೆಚ್ಚಾಗಿದೆ. ಪ್ರತಿಯೊಂದರಲ್ಲೂ ಜಾತೀಯತೆ ನುಸುಳುತ್ತಿದೆ. ಪ್ರಬಲ ಜಾತಿಯವರೇ ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದಾರೆ' ಎಂದು ಕೇಂದ್ರದ ಮಾಜಿ ಗೃಹ ಸಚಿವ ಬೂಟಾ ಸಿಂಗ್ ಕಳವಳ ವ್ಯಕ್ತಪಡಿಸಿದರು.

ನಗರದ ಕಲಾಭವನ ಮೈದಾನದಲ್ಲಿ ಭಾನುವಾರ ವಾಲ್ಮೀಕಿ ನಾಯಕ ಸಮಾಜವು ಏರ್ಪಡಿಸಿದ್ದ ಅಖಿಲ ಭಾರತ ವಾಲ್ಮೀಕಿ ಮಹಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, `ಹಿಂದುಳಿದವರು ಇನ್ನೂ ಅದೇ ಸ್ಥಿತಿಯಲ್ಲಿದ್ದಾರೆ. ಕರ್ನಾಟಕ ಹೊರತುಪಡಿಸಿ ತಮಿಳುನಾಡು, ಆಂಧ್ರ ಪ್ರದೇಶ, ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ವಾಲ್ಮೀಕಿ ಜನಾಂಗದವರು ಮಲಹೊರುವ ಹಾಗೂ ಸಿಪಾಯಿಯಂತಹ ಕನಿಷ್ಠ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆಲ್ಲ ಕೊನೆ ಹಾಡಬೇಕಾದರೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಒಟ್ಟಾಗಿ ತಮ್ಮದೇ ಆದ ಪಕ್ಷವನ್ನು ರಚಿಸಿಕೊಂಡು ರಾಜಕೀಯ ಹೋರಾಟಕ್ಕಿಳಿಯಬೇಕು. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಪ್ರಮುಖ ಹುದ್ದೆಗಳನ್ನು ನಮ್ಮದಾಗಿಸಿಕೊಳ್ಳಬೇಕು' ಎಂದು ಹೇಳಿದರು.

ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಮಾತನಾಡಿ, `ರಾಷ್ಟ್ರದೆಲ್ಲೆಡೆ ವಾಲ್ಮೀಕಿ ನಾಯಕ ಸಮುದಾಯದವರಿಗೆ ಶೇ 7ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಶೇ 3ರಷ್ಟೇ ಇದೆ. ಈ ಪ್ರಮಾಣವನ್ನು ಹೆಚ್ಚಿಸಬೇಕು. ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಬೇಕು' ಎಂದು ಸಲಹೆ ನೀಡಿದರು.

`ಮೊದಲು ಬೇಟೆ ಆಡುತ್ತಿದ್ದ ವಾಲ್ಮೀಕಿ ಸಮುದಾಯ ಮುಂದೆ ಹಲವು ಜಾತಿಗಳಾಗಿ ಹರಿದು ಹಂಚಿ ಹೋಯಿತು. ಬೇಟೆ ಸಾಕೆನಿಸಿ ಕುರಿ ಕಾಯಲು ತೊಡಗಿದವನು ಕುರುಬನಾದರೆ, ಒಕ್ಕಲುತನ ಮಾಡುವವರು ಒಕ್ಕಲಿಗರಾದರು. ಈ ಜಾತಿಗಳು ಉತ್ತಮ ಸ್ಥಾನದಲ್ಲಿದ್ದು, ವಾಲ್ಮೀಕಿಗಳು ಶಿಕ್ಷಣ ಪಡೆದು ಇವರನ್ನು ಹಿಂದಕ್ಕೆ ಹಾಕಬೇಕು' ಎಂದು ಕರ್ನಾಟಕ ವಿ.ವಿ. ಕುಲಪತಿ ಡಾ.ಎಚ್.ಬಿ.ವಾಲೀಕಾರ ನುಡಿದರು.

ಮಾಜಿ ಸಚಿವರಾದ ಸತೀಶ ಜಾರಕಿಹೊಳಿ, ಡಾ.ಎಚ್.ಸಿ.ಮಹಾದೇವಪ್ಪ, ಮಹಾದೇವ ಪ್ರಸಾದ್, ಸಮಾಜದ ಮುಖಂಡ ಡಿ. ಬೋರಪ್ಪ, ಮೋಹನ ನಾಗಮ್ಮನವರ  ಮಾತನಾಡಿದರು.

ಗಂಭೀರ ಸಮ್ಮೇಳನದಲ್ಲಿ ನುಸುಳಿದ `ಸೊಂಟದ ವಿಷಯ'!

ವಾಲ್ಮೀಕಿ ಜನಾಂಗದ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅರ್ಧಕ್ಕೂ ಹೆಚ್ಚು ಜನರು ಈ ಜನಾಂಗದವರೇ ಆದ ಚಿತ್ರ ನಟ ಸುದೀಪ್ ಅವರನ್ನು ನೋಡಲು ಆಗಮಿಸಿದ್ದರು. ಅಭಿಮಾನಿಗಳನ್ನು ರಂಜಿಸಲು ಸುದೀಪ್ ಹಾಡಿದ `ಸೊಂಟದ ವಿಷಯ ಬೇಡವೋ ಶಿಷ್ಯ...' ಎಂಬ ಹಾಡು ಸಭೆಯಲ್ಲಿದ್ದ ಗಂಭೀರ ಪ್ರೇಕ್ಷಕರು ಹಾಗೂ ಮಹಿಳೆಯರು ತಲೆ ತಗ್ಗಿಸುವಂತೆ ಮಾಡಿತು.

ಕಾರ್ಯಕ್ರಮದ ಮಧ್ಯೆಯೇ ವೇದಿಕೆಗೆ ಬಂದ ಸುದೀಪ್ ಒಂದು ಗೀತೆ ಹಾಗೂ ಚಿತ್ರವೊಂದರ ಸಂಭಾಷಣೆಯನ್ನು ಹೇಳಿದ ಬಳಿಕ ಈ ಹಾಡನ್ನು ಹಾಡಿದರು.  `ಸೊಂಟದ ವಿಷಯದಲ್ಲಿ ನೀವೆಲ್ಲ ನನಗಿಂತಲೂ ಹೆಚ್ಚು ಪಳಗಿದ್ದೀರಿ' ಎಂದು ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಅವರು, ಸಭೆಯ ಸಾನ್ನಿಧ್ಯ ವಹಿಸಿದ್ದ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರತ್ತ ತಿರುಗಿ, `ಸ್ವಾಮೀಜಿ ಇದು ನಮ್ಮ ಅವರ (ಅಭಿಮಾನಿಗಳು) ವಿಷಯ' ಎಂದರು!

ಈ ಸಂಭಾಷಣೆಯನ್ನು ಕೇಳಲಾಗದ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಸಿ.ಮಹಾದೇವಪ್ಪ, ಮಹಾದೇವ ಪ್ರಸಾದ್ ನಿರ್ಗಮಿಸಿದರು. `ಸಚಿವ ರಾಜು ಗೌಡ ಚಲನಚಿತ್ರವೊಂದರ ಪ್ರಚಾರಕರಂತೆ ವರ್ತಿಸಿದರು' ಎಂದು ಸಮಾಜದ ಪದಾಧಿಕಾರಿಯೊಬ್ಬರು ನೋವು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT