ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ದರಕ್ಕೆ ವಿದ್ಯುತ್ ಖರೀದಿ ಹುನ್ನಾರ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿರುವ ಸಚಿವರೇ ಅನೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರಾದ ಕಾರಣ ಆ ಕಾರ್ಖಾನೆಗಳ ವಿದ್ಯುತ್ ಅನ್ನು ಹೆಚ್ಚಿನ ದರಕ್ಕೆ ಖರೀದಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ನೇರ ಆರೋಪ ಮಾಡಿದರು.

`ನಾನು ಇಂಧನ ಸಚಿವನಾಗಿದ್ದ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ರೂ 2.48ರಿಂದ ರೂ 2.80 ವರೆಗೆ ಪ್ರತಿ ಯೂನಿಟ್ ವಿದ್ಯುತ್ ಖರೀದಿಸಲು ದೀರ್ಘಾವಧಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಬಿಜೆಪಿ ಮುಖಂಡರಿಗೆ ಅನುಕೂಲ ಮಾಡಲು ಆ ಒಪ್ಪಂದಗಳನ್ನು ರದ್ದು ಮಾಡಿ, ಹೆಚ್ಚಿನ ದರ ನಿಗದಿಪಡಿಸಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸಕ್ಕರೆ ಕಾರ್ಖಾನೆಗಳಿಂದ 650 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದ್ದು, ಇದರಲ್ಲಿ 150 ಮೆಗಾವಾಟ್ ಮಾತ್ರ ಸರ್ಕಾರ ಪಡೆಯುತ್ತಿದೆ. ಉಳಿದ ವಿದ್ಯುತ್ ಅನ್ನು ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಅದಕ್ಕೆ ಪ್ರತಿ ಯೂನಿಟ್‌ಗೆ ರೂ 6.5 ನೀಡಬೇಕೆನ್ನುವ ಷರತ್ತು ಹಾಕಿದ್ದಾರೆ ಎಂದರು.

ಸರ್ಕಾರದಲ್ಲಿರುವ ಸಚಿವರೇ ಸಕ್ಕರೆ ಕಾರ್ಖಾನೆಗಳ ಮಾಲೀಕರಾದ ಕಾರಣ ಸರ್ಕಾರ ಅವರ ಒತ್ತಡಕ್ಕೆ ಮಣಿದು ಜನರ ಹಣವನ್ನು ಪೋಲು ಮಾಡುತ್ತಿದೆ ಎಂದೂ ಆಕ್ಷೇಪಿಸಿದರು.

`ವಿದ್ಯುತ್ ಸಮಸ್ಯೆಗೆ ಹಿಂದಿನ ಸರ್ಕಾರಗಳೇ ಕಾರಣ ಎಂದು ದೂರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಿಲ್ಲ. ನನ್ನ ಅವಧಿಯಲ್ಲಿ 2680 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಿವಿಲ್ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಇದರಿಂದ ಈಗ 1580 ಮೆಗಾವಾಟ್ ಉತ್ಪಾದನೆ ಆಗುತ್ತಿದೆ. ಉಡುಪಿ ಪವರ್ ಕಂಪನಿಯ 2ನೇ ಘಟಕ ಉತ್ಪಾದನೆಗೆ ಸಿದ್ಧ ಇದ್ದರೂ ಅದರಿಂದ ವಿದ್ಯುತ್ ಸರಬರಾಜು ಮಾಡಲು ಲೈನಿನ ವ್ಯವಸ್ಥೆ ಮಾಡಿಕೊಂಡಿಲ್ಲ. ಇದು ರಾಜ್ಯ ಸರ್ಕಾರದ ವೈಫಲ್ಯ~ ಎಂದು ಟೀಕಿಸಿದರು.

`2014ರ ವೇಳೆಗೆ 16,084 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿರುವುದಾಗಿ ಬಿಜೆಪಿ ಸರ್ಕಾರ ಆರಂಭದಲ್ಲಿ ಹೇಳಿತ್ತು. ಆದರೆ, ಇವತ್ತಿನವರೆಗೂ ಆ ನಿಟ್ಟಿನಲ್ಲಿ ಯಾವ ಪ್ರಯತ್ನವೂ ಆಗಿಲ್ಲ. ಛತ್ತೀಸ್‌ಗಡದಲ್ಲಿ 1600 ಮೆಗಾವಾಟ್ ವಿದ್ಯುತ್ ಉತ್ಪಾದಿಸುವುದಾಗಿ ಹೇಳಿದ್ದ ಸರ್ಕಾರ ಅಲ್ಲಿ ಕೇವಲ ಕಾಂಪೌಂಡ್ ಮತ್ತು ಅತಿಥಿ ಗೃಹ ನಿರ್ಮಿಸಿರುವುದು ಬಿಟ್ಟರೆ ಬೇರೇನೂ ಮಾಡಿಲ್ಲ~ ಎಂದು ಟೀಕಿಸಿದರು.

`ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ನೀಡುವುದು ಕಷ್ಟ~
ಬೆಂಗಳೂರು: `ಪ್ರತಿ ಯೂನಿಟ್‌ಗೆ ರಾಜ್ಯ ಸರ್ಕಾರ ನಾಲ್ಕು ರೂಪಾಯಿ ದರ ನಿಗದಿಪಡಿಸಿದರೂ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ನೀಡುವುದು ಕಷ್ಟ ಎಂದು ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರೂ ಆದ ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ 12 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಸಿದ್ಧತೆ ನಡೆಸಿದ್ದು, ಪ್ರತಿಯೊಂದು ವೆುಗಾವಾಟ್ ವಿದ್ಯುತ್ ಉತ್ಪಾದನೆಗೆ ವ್ಯವಸ್ಥೆ ಮಾಡಲು 4 ಕೋಟಿ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ ಕಡಿಮೆ ಬೆಲೆಗೆ ವಿದ್ಯುತ್ ನೀಡುವುದು ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

`ವಿದ್ಯುತ್ ಮಾರಾಟದಿಂದ ಬರುವ ಹಣವನ್ನು ರೈತರಿಗೇ ನೀಡುತ್ತಿದ್ದೇವೆ. ನಮ್ಮ ಭಾಗದಲ್ಲಿ ಕಬ್ಬಿಗೆ ಅತಿ ಹೆಚ್ಚು ದರ ನಿಗದಿ ಮಾಡುವುದೇ ನಮ್ಮ ಕಾರ್ಖಾನೆ. ಅದನ್ನು ನೋಡಿ ಇತರ ಕಾರ್ಖಾನೆಗಳು ದರ ನಿಗದಿ ಮಾಡುತ್ತವೆ~ ಎಂದು ವಿವರಿಸಿದರು. ಅಂತಿಮವಾಗಿ ರಾಜ್ಯ ಸರ್ಕಾರ ನಿಗದಿಪಡಿಸುವ ದರಕ್ಕೆ ವಿದ್ಯುತ್ ನೀಡಲು ತಾವೂ ಬದ್ಧ~ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT