ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಅಂಕ ಬರಲು ಕೈಬರಹ ಕೈಚಳಕ!

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಂಪ್ಯೂಟರ್ ಬಂದ ನಂತರ ಕೈ ಬರಹ ಬಹುತೇಕ ನಿಂತೇ ಹೋಗಿದೆ. ಆದರೆ, ಕೆಪಿಎಸ್‌ಸಿ ಮುಖ್ಯ ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬರಲು ಕೈಬರಹವೇ ಆಸರೆಯಾಗುತ್ತದೆ. ಆದರೆ ಇದು ಸದುದ್ದೇಶಕ್ಕೆ ಬಳಕೆಯಾಗುವುದಿಲ್ಲ.

ಅಕ್ರಮವಾಗಿ ಹೆಚ್ಚು ಅಂಕ ಪಡೆಯಲು ಅಭ್ಯರ್ಥಿಯ ಕೈಬರಹ ನೆರವಾಗುತ್ತದೆ ಎಂಬುದನ್ನುಕೆಪಿಎಸ್‌ಸಿ ಮೂಲಗಳೇ ತಿಳಿಸುತ್ತವೆ.
ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಗಳ ಹೆಸರು ಇರುವುದಿಲ್ಲ. ಕೇವಲ ನೋಂದಣಿ ಸಂಖ್ಯೆ ಮಾತ್ರ ಇರುತ್ತದೆ. ಇದರಿಂದ ಮೌಲ್ಯಮಾಪನ ಮಾಡುವವರಿಗೆ ತಾವು ಯಾರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ ಎನ್ನುವುದು ಗೊತ್ತಿರುವುದಿಲ್ಲ. ಆದರೂ ಇಲ್ಲಿ ಅಕ್ರಮ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರೆ ಕೆಪಿಎಸ್‌ಸಿ ಮೂಲಗಳು ಅಚ್ಚರಿಯ ವಿಷಯಗಳನ್ನು ಹೊರಗೆ ಹಾಕುತ್ತವೆ.

ಮೌಲ್ಯಮಾಪಕರಿಗೆ ತಾವು ಯಾರ ಪತ್ರಿಕೆ ಮೌಲ್ಯಮಾಪನ ಮಾಡುತ್ತಿದ್ದೇವೆ ಎನ್ನುವುದು ಗೊತ್ತಿಲ್ಲದೇ ಇರುವ ಹಾಗೆಯೇ ಅಭ್ಯರ್ಥಿಗಳಿಗೂ ತಮ್ಮಉತ್ತರ ಪತ್ರಿಕೆ ಯಾರು ಮೌಲ್ಯಮಾಪನ ಮಾಡುತ್ತಾರೆ ಎನ್ನುವುದೂ ಗೊತ್ತಿರುವುದಿಲ್ಲ. ಇವೆಲ್ಲ ಗೌಪ್ಯ ವಿಷಯಗಳು. ಕೆಪಿಎಸ್‌ಸಿ ಅಧ್ಯಕ್ಷ, ಕಾರ್ಯದರ್ಶಿ, ಪೀಠಾಧಿಕಾರಿ ಸೇರಿ ಕೆಲವರನ್ನು ಬಿಟ್ಟು ಉಳಿದವರಿಗೆ ಈ ಮಾಹಿತಿ ಇರುವುದಿಲ್ಲ. ಆದರೂ ಇಲ್ಲಿ ಚಮತ್ಕಾರಗಳು ನಡೆಯುತ್ತವೆ. ಕೈಚಳಕ ನಡೆಸುವ ಜನರು ಕೆಪಿಎಸ್‌ಸಿಯಲ್ಲಿಸಾಕಷ್ಟು ವರ್ಷಗಳಿಂದ ತುಂಬಿಕೊಂಡಿದ್ದಾರೆ. ಅಧ್ಯಕ್ಷರು, ಕಾರ್ಯದರ್ಶಿಗಳು ಬದಲಾದರೂ ಇವರು ಬದಲಾಗುವುದೇ ಇಲ್ಲ.

ಯಾವ ವಿಷಯದ ಉತ್ತರ ಪತ್ರಿಕೆಗಳನ್ನು ಯಾರು ಮೌಲ್ಯಮಾಪನ ಮಾಡುತ್ತಾರೆ ಎನ್ನುವ ಗುಟ್ಟನ್ನು ಕೆಪಿಎಸ್‌ಸಿ ಒಳಗಿರುವವರೇ ತಮಗೆ ಬೇಕಾದವರಿಗೆ ರಟ್ಟು ಮಾಡುತ್ತಾರೆ. ಮೌಲ್ಯಮಾಪಕರು ಯಾರು ಎನ್ನುವುದನ್ನು ತಿಳಿದುಕೊಂಡ ಅಭ್ಯರ್ಥಿಗಳು ಅವರ ಬಳಿಗೆ ಹೋಗಿ ತಮಗೆ ಹೆಚ್ಚಿನ ಅಂಕ ಬರುವುದಕ್ಕೆ `ವ್ಯವಹಾರ' ಕುದುರಿಸುತ್ತಾರೆ. ಮೌಲ್ಯಮಾಪಕರಿಗೆ ತನ್ನ ಉತ್ತರ ಪತ್ರಿಕೆ ಗುರುತಿಸಲು ಅನುಕೂಲವಾಗುವಂತೆ ಅಭ್ಯರ್ಥಿ ತನ್ನ ಕೈಬರಹದ ಕಾಗದ ಹಾಗೂ ತಾನು ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿ ಏನೇನು ಬರೆದಿದ್ದೇನೆ ಎನ್ನುವುದನ್ನು ತಿಳಿಸುತ್ತಾನೆ. ಹೀಗೆ ಉತ್ತರ ಪತ್ರಿಕೆಯನ್ನು ಪತ್ತೆ ಹಚ್ಚುವ ಮೌಲ್ಯಮಾಪಕರು ತಮ್ಮ ಜೊತೆ ವ್ಯವಹಾರ ಮಾಡಿಕೊಂಡ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ನೀಡುತ್ತಾರೆ ಎಂದು ಈ ಮೂಲಗಳು ಹೇಳುತ್ತವೆ.

ಈ ಬಾರಿ ಭೂಗೋಳ ವಿಷಯದ ಉತ್ತರ ಪತ್ರಿಕೆಯನ್ನು ಧಾರವಾಡದ ವಿಷಯ ತಜ್ಞರು ಹಾಗೂ ಮನಃಶಾಸ್ತ್ರ, ಸಾರ್ವಜನಿಕ ಆಡಳಿತದ ಉತ್ತರ ಪತ್ರಿಕೆಗಳನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮೌಲ್ಯಮಾಪನ ಮಾಡಿದ್ದಾರೆ ಎಂದೂ ಈ ಮೂಲಗಳು ಹೇಳುತ್ತವೆ. ಭೂಗೋಳ, ಕನ್ನಡ ಸಾಹಿತ್ಯ, ಮಾನವ ಶಾಸ್ತ್ರ, ಸಾರ್ವಜನಿಕ ಆಡಳಿತ ಮುಂತಾದ ವಿಷಯಗಳಲ್ಲಿ ತಮಗೆ ಬೇಕಾದವರಿಗೆ ಹೆಚ್ಚಿನ ಅಂಕ ನೀಡುವಂತೆ ಕೆಪಿಎಸ್‌ಸಿ ಅಧ್ಯಕ್ಷ ಗೋನಾಳ ಭೀಮಪ್ಪ ಅವರು ಒತ್ತಡ ತಂದಿದ್ದರು ಎಂದೂ ಆರೋಪಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ವಿಷಯಗಳ ಉತ್ತರ ಪತ್ರಿಕೆಗಳನ್ನು ಅರ್ಥಶಾಸ್ತ್ರ ಮತ್ತು ಸಮಾಜ ಶಾಸ್ತ್ರದ ಪ್ರಾಧ್ಯಾಪಕರು ಮೌಲ್ಯಮಾಪನ ಮಾಡಿದ್ದಾರೆ. ಇಂಗ್ಲಿಷ್ ಮಾಧ್ಯಮದವರ ಉತ್ತರ ಪತ್ರಿಕೆಗಳನ್ನು ಕನ್ನಡ ಮಾಧ್ಯಮದ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದ್ದಾರೆ ಎಂದು ಈ ಬಾರಿ ಕೆಪಿಎಸ್‌ಸಿ ಪರೀಕ್ಷೆ ಬರೆದ ಗಂಗಾಧರಯ್ಯ ಅವರು ದೂರು ನೀಡಿದ್ದು ಇದರ ಆಧಾರದಲ್ಲಿಯೇ ಡಿಪಿಎಆರ್ ಉಪ ಕಾರ್ಯದರ್ಶಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಮಗೆ ಬೇಕಾದವರಿಗೆ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ಹೆಚ್ಚು ಅಂಕ ಬರುವಂತೆ ಮಾಡಲು ಪೀಠಾಧಿಕಾರಿ ಅರುಣಾಚಲಂ ಮತ್ತು ಕೆಪಿಎಸ್‌ಸಿ ಕಾರ್ಯದರ್ಶಿ ಸುಂದರ್ ಕಾರಣ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಅರುಣಾಚಲಂ ಅವರು 2006ರಲ್ಲಿಯೇ ನಿವೃತ್ತಿ ಹೊಂದಿದ್ದರೂ 2013ರವರೆಗೂ ಅವರು ಪೀಠಾಧಿಕಾರಿಯಾಗಿ ಮುಂದುವರಿದಿದ್ದಾರೆ. ಅಲ್ಲದೆ ಗೌಪ್ಯತೆ ವಿಭಾಗದ ಮುಖ್ಯಸ್ಥರೂ ಆಗಿದ್ದರು. ನಿವೃತ್ತರಾದ ನಂತರವೂ 7 ವರ್ಷಗಳ ಕಾಲ ಅತ್ಯಂತ ಪ್ರಮುಖವಾದ ವಿಭಾಗದ ಮುಖ್ಯಸ್ಥರಾಗಿ ಅವರು ಮುಂದುವರಿದಿದ್ದು ಹೇಗೆ? ಎಂದು ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಂದರ್ಶನದಲ್ಲಿ ಅತ್ಯಂತ ಕಡಿಮೆ ಅಂಕ ಪಡೆದ ಅಭ್ಯರ್ಥಿಯೊಬ್ಬರು ಪ್ರಶ್ನೆ ಮಾಡುತ್ತಾರೆ. ಈ ಬಗ್ಗೆಯೂ ಸಿಐಡಿ ತನಿಖೆ ನಡೆಯಬೇಕು ಎಂದೂ ಅವರು ಒತ್ತಾಯಿಸುತ್ತಾರೆ. 

ಗಂಗಾಧರಯ್ಯ ಅವರ ದೂರಿನ ಹಿನ್ನೆಲೆಯಲ್ಲಿಯೇ ಕೆಪಿಎಸ್‌ಸಿ ನಿವೃತ್ತ ಅಧ್ಯಕ್ಷ ಗೋನಾಳ ಭೀಮಪ್ಪ, ಕಾರ್ಯದರ್ಶಿ ಸುಂದರ್ ಮತ್ತು ಪೀಠಾಧಿಕಾರಿ ಅರುಣಾಚಲಂ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು ಸಿಐಡಿ ತನಿಖೆ ನಡೆಯುತ್ತಿದೆ.

ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಹಾಗೂ ಸಂದರ್ಶನದಲ್ಲಿ ಕೆಲವು ಅಭ್ಯರ್ಥಿಗಳಿಗೆ ಹೆಚ್ಚು ಅಂಕ ಬರಲು ಕೆಪಿಎಸ್‌ಸಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೊರಗಿನವರೂ ಕಾರಣರಾಗಿದ್ದಾರೆ. ಇದು ಐಪಿಸಿ 464, 465, 468, 406, 471, 420, 120ಬಿ ವಿಧಿಗಳ ಪ್ರಕಾರ ಅಪರಾಧವಾಗಿದೆ ಎಂದು ಡಿಪಿಎಆರ್ ಉಪ ಕಾರ್ಯದರ್ಶಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT