ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಕಾನ್ವೆಂಟ್ ವ್ಯಾಮೋಹ

Last Updated 4 ಫೆಬ್ರುವರಿ 2011, 5:30 IST
ಅಕ್ಷರ ಗಾತ್ರ

ತುಮಕೂರು: ಸರ್ಕಾರಿ ಆಸ್ಪತ್ರೆ ಬೇಡ, ಸರ್ಕಾರಿ ಶಾಲೆ ಬೇಡ. ಆದರೆ ಸರ್ಕಾರಿ ಉದ್ಯೋಗ ಬೇಕು ಎನ್ನುವ ಮನಸ್ಥಿತಿ ಈಗಲೂ ಜನರಲ್ಲಿದೆ.

ಇದಕ್ಕೆ ಈಚೆಗೆಷ್ಟೇ ನಡೆದ ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆ) ಪರೀಕ್ಷೆ ಇದಕ್ಕೆ ಒಂದು ಉತ್ತಮ ಉದಾಹರಣೆ. ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳೂ ಪರೀಕ್ಷೆ ಬರೆದಿದ್ದರು. ಆದರೆ ಕೆಲಸ ಗಿಟ್ಟಿಸಿಕೊಂಡ ಬಹುತೇಕರು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು.

ಸರ್ಕಾರಿ ಶಾಲೆಗಳಿಗೆ ಎಲ್ಲ ಸೌಲಭ್ಯ   ನೀಡುತ್ತಿದ್ದರೂ ಬರುವ ಮಕ್ಕಳ ಸಂಖ್ಯೆ   ಕುಸಿಯುತ್ತಿದ್ದರೆ, ಅತ್ತಕಡೆ ಅಗತ್ಯ ಸೌಲಭ್ಯಗಳು ಇಲ್ಲದೆಯೂ ಕಾನ್ವೆಂಟ್‌ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಕರಿದ್ದಾರೆ ಎಂಬುದಕ್ಕೆ ಹಲವು ಮಾನದಂಡಗಳು ದೊರೆಯುತ್ತವೆ.

ಈ ಶಿಕ್ಷಕರು ಎರಡು ವರ್ಷ ಸಮಗ್ರ ಡಿಇಡಿ ತರಬೇತಿ ಜತೆಗೆ ಪಿಯುಸಿ, ಸಿಇಟಿಯಲ್ಲಿ ಉತ್ತಮ ಶ್ರೇಣಿ ಪಡೆದವರು. ಆದರೆ ಕಾನ್ವೆಂಟ್ ಶಿಕ್ಷಕರ ಶೈಕ್ಷಣಿಕ ಸಾಧನೆಗೆ ಹೋಲಿಸಿದರೆ ಕನ್ನಡ ಸರ್ಕಾರಿ ಶಾಲಾ ಶಿಕ್ಷಕರ ಗುಣಮಟ್ಟ ಹತ್ತು ಪಟ್ಟು ಉತ್ತಮವಾಗಿದೆ ಎಂಬುದನ್ನು ಸಮೀಕ್ಷೆಗಳು    ತೆರೆದಿಡುತ್ತವೆ.

ಜಿಲ್ಲೆಯಲ್ಲಿ ಒಟ್ಟು ಆರು ಕಿರಿಯ ಪ್ರಾಥಮಿಕ, 148 ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಿವೆ. ಇನ್ನು ಉಳಿದ ಬಹುತೇಕ ಶಾಲೆಗಳು ಅನಧಿಕೃತ. ಶಿಕ್ಷಣ ಕಾಯ್ದೆ ನೀತಿ ಅನ್ವಯ ವರ್ಷಕ್ಕೆ ದಾಖಲಾತಿ ಶುಲ್ಕ, ಕ್ರೀಡಾ ಶುಲ್ಕ, ಲ್ಯಾಬ್, ವೈದ್ಯಕೀಯ ಮುಂತಾದ ಶುಲ್ಕ ಸೇರಿ 6ರಿಂದ 7ನೇ ತರಗತಿಗೆ ರೂ. 48 ಶುಲ್ಕ, 8ರಿಂದ 10ನೇ ತರಗತಿಗೆ ರೂ. 185 ಶುಲ್ಕ ಮಾತ್ರ ತೆಗೆದುಕೊಳ್ಳಬೇಕು. ಇನ್ನು 1ರಿಂದ 5ನೇ ತರಗತಿಗೆ ಯಾವುದೇ ಹಣ ತೆಗೆದುಕೊಳ್ಳಬಾರದು ಎಂಬ ನಿಯಮವಿದ್ದರೂ ಖಾಸಗಿ ಶಾಲೆಗಳು ನರ್ಸರಿಯಿಂದಲೇ ಸಾವಿರಾರು ರೂಪಾಯಿ ಡೊನೇಷನ್ ಪಡೆಯುತ್ತಿವೆ.

ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಮೂಲಸೌಕರ್ಯ ಇಲ್ಲದಿರುವುದು, ಹಣ ಸುಲಿಗೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕಳೆದ ವರ್ಷ ಮೂರು ಶಾಲೆಗಳ ಮೇಲೆ ಕ್ರಮ ಜರುಗಿಸಲಾಗಿದೆ ಎನ್ನುತ್ತದೆ ಶಿಕ್ಷಣ ಇಲಾಖೆ. ವಿಪರ್ಯಾಸ ಸಂಗತಿ ಎಂದರೆ ಡೊನೇಷನ್ ಹೆಸರಲ್ಲಿ ಶೋಷಣೆ ಮಾಡುತ್ತಿರುವ, ಸೌಕರ್ಯ ನೀಡದ ಖಾಸಗಿ ಶಾಲೆಗಳೆಷ್ಟು ಎಂಬ ಪ್ರಶ್ನೆಗೆ ಜಿಲ್ಲೆಯ ಬಹುತೇಕ

ಬಿಇಒಗಳ ಬಳಿ ಮಾಹಿತಿ ಇಲ್ಲ.
ಗ್ರಾಮೀಣ, ಅರೆ ಗ್ರಾಮೀಣ ಪ್ರದೇಶದ ಬಹಳಷ್ಟು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸರಿಯಾದ ಸೌಕರ್ಯಗಳಿರಲಿ,  ಶಿಕ್ಷಕರಿಗೆ ಕನಿಷ್ಠ ವಿದ್ಯಾರ್ಹತೆಯೂ ಇಲ್ಲ. ಆದರೂ ನೂರಾರು ರೂಪಾಯಿ ಶುಲ್ಕ ವಸೂಲಿ ನಡೆಯುತ್ತದೆ.   ಪಾಲಕರು ಇಂಥ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದು ಕಂಡುಬರುತ್ತದೆ.

ಸರ್ವಶಿಕ್ಷಣ ಅಭಿಯಾನದಡಿ ಕನ್ನಡ ಪ್ರಾಥಮಿಕ ಶಾಲೆಗೆ ಆಟದ ಮೈದಾನ, ಪ್ರಯೋಗಾಲಯ, ಕಂಪ್ಯೂಟರ್, ಉಚಿತ ಪಠ್ಯ ಪುಸ್ತಕ, ಸೈಕಲ್, ಸಮವಸ್ತ್ರ, ಹಿಂದುಳಿದ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಇದೆ. ಒಟ್ಟಿನಲ್ಲಿ ಯಾವುದೇ ರೀತಿಯ ಖರ್ಚಿಲ್ಲ. ಇದರ ತದ್ವಿರುದ್ದ ಸ್ಥಿತಿಗತಿ ಕಾನ್ವೆಂಟ್ ಶಾಲೆಗಳದ್ದು.

ಅರ್ಹತೆ ಇಲ್ಲದಿದ್ದರೂ ಕೇವಲ ಆಂಗ್ಲ ಮಾಧ್ಯಮ ಎಂಬ ಮಾತ್ರಕ್ಕೆ ಹಣ ಕಿತ್ತುಕೊಳ್ಳುತ್ತಿದ್ದಾರೆ ಎಂಬುದು ಹಲವು ಪಾಲಕರ ದೂರು. ಯಾಕಾದರೂ ಇಂಗ್ಲಿಷ್ ಶಾಲೆಗೆ ಸೇರಿಸಿದೆವೊ ಎಂದು ತಮ್ಮನ್ನು ತಾವೇ ಪೋಷಕರು ಶಪಿಸಿಕೊಳ್ಳುವುದನ್ನು ನೋಡಿದ್ದೇವೆ ಎನ್ನುತ್ತಾರೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು.

‘ಲಕ್ಷಾಂತರ ರೂಪಾಯಿ ವ್ಯಯಿಸಿ ಜತೆಗೆ ಕಾನ್ವೆಂಟ್ ಶಾಲಾ ಶಿಕ್ಷಕರಿಂದ ಬೈಯಿಸಿಕೊಂಡು ಖಾಸಗಿ ಶಾಲೆಗಳಿಗೆ ಏಕೆ ಸೇರಿಸಬೇಕು. ಅದರ ಬದಲು ಕನ್ನಡ ಸರ್ಕಾರಿ ಶಾಲೆಗೆ ಸೇರಿಸಿ ಸ್ವಲ್ಪ ಕಾಳಜಿ ವಹಿಸಿದ್ದರೆ ಎಲ್ಲರಂತೆ ನಮ್ಮ ಮಕ್ಕಳು ಬೆಳೆಯುವುದರಲ್ಲಿ ಎರಡೂ ಮಾತಿಲ್ಲ. ಅದಕ್ಕೆ ನನ್ನ ಮಗುವನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದೇನೆ’ ಎಂದು ಗೃಹಿಣಿ ಜಿ.ಶಶಿಕಲಾ ‘ಪ್ರಜಾವಾಣಿ’ ಜತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT