ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಗ್ರಾಮೀಣ ಮಕ್ಕಳ ಮನೆಪಾಠ ಹವ್ಯಾಸ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದ ಗ್ರಾಮೀಣ ಭಾಗದಲ್ಲಿ ಮನೆ ಪಾಠಕ್ಕೆ ಹೋಗುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೇ? ಹೌದೆನ್ನುತ್ತದೆ ಮಾನವ ಸಂಪನ್ಮೂಲ ಸಚಿವಾಲಯದ `ಶಿಕ್ಷಣ ಸ್ಥಿತಿಗತಿ~ ಕುರಿತ ವಾರ್ಷಿಕ ವರದಿ. ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆಗಳ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಪಾಠ ಪಡೆಯುತ್ತಿದ್ದಾರೆಂದು ಸೋಮವಾರ ಬಿಡುಗಡೆಯಾದ ವರದಿ ಸ್ಪಷ್ಟಪಡಿಸಿದೆ.

ಮಾನವ ಸಂಪನ್ಮೂಲ ಸಚಿವಾಲಯದ ನಿರ್ದೇಶನದ ಮೇರೆಗೆ `ಪ್ರಥಮ್~ ಸ್ವಯಂ ಸೇವಾ ಸಂಸ್ಥೆ ರಾಜ್ಯದ 1ರಿಂದ 8ನೇ ತರಗತಿವರೆಗಿನ 781ಶಾಲೆಗಳೂ ಸೇರಿದಂತೆ ದೇಶದ ಗ್ರಾಮೀಣ ಭಾಗದ ಶಾಲೆಗಳ ಮಾದರಿ ಸಮೀಕ್ಷೆ ನಡೆಸಿ ಈ ವರದಿ ಸಿದ್ಧಪಡಿಸಿದೆ. 2007ರಲ್ಲಿ ಶೇ. 8.4ರಷ್ಟು ಸರ್ಕಾರಿ ಶಾಲೆ ಮಕ್ಕಳು ಮನೆ ಪಾಠ ಪಡೆಯುತ್ತಿದ್ದರೆ, ಇದು ಕಳೆದ ವರ್ಷ ಶೇ.7.7ಕ್ಕೆ ಇಳಿದಿದೆ. ಹಾಗೇ 2007ರಲ್ಲಿ ಶೇ.15.5ರಷ್ಟು ಖಾಸಗಿ ಶಾಲೆ ಮಕ್ಕಳು ಮನೆ ಪಾಠಕ್ಕೆ ಹೋಗುತ್ತಿದ್ದರೆ, ನಾಲ್ಕು ವರ್ಷದ ಬಳಿಕ ಈ ಸಂಖ್ಯೆ 18.9ಕ್ಕೆ ಏರಿದೆ.

2010ರಲ್ಲಿ ಸರ್ಕಾರಿ ಶಾಲೆಯ ಶೇ. 6.7ರಷ್ಟು, ಖಾಸಗಿ ಶಾಲೆಯ ಶೇ.17.7ರಷ್ಟು ಮಕ್ಕಳು ಮನೆ ಪಾಠಕ್ಕೆ ಹೋಗುತ್ತಿದ್ದರು. ಇದು ಶುಲ್ಕ ಕೊಟ್ಟು ಮನೆ ಪಾಠ ಪಡೆದಿರುವ ಮಕ್ಕಳ ಸಮೀಕ್ಷೆ ಮಾತ್ರ. ಶುಲ್ಕ ಪಾವತಿಸದೆ ಶಾಲೆ ಹೊರಗೆ ಪಾಠ ಕೇಳಿರುವ ಮಕ್ಕಳನ್ನು ಸಮೀಕ್ಷೆ ಒಳಗೊಂಡಿಲ್ಲ. ಮನೆ ಪಾಠಕ್ಕೆ ಹೋದವರಲ್ಲಿ ಐದನೇ ತರಗತಿ ಮಕ್ಕಳೇ ಹೆಚ್ಚು ಎಂದು ಸಮೀಕ್ಷೆ ತಿಳಿಸಿದೆ.
 
ಮಕ್ಕಳ `ಓದಿನ ಮಟ್ಟ~ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತ್ಯಲ್ಪ ಪ್ರಮಾಣದಲ್ಲಿ ಏರಿಳಿತ ಕಂಡಿದೆ. ಸರ್ಕಾರಿ ಶಾಲೆಗಳ ಮಕ್ಕಳ ಗುಣಮಟ್ಟದಲ್ಲಿ ಸುಧಾರಣೆಯಾಗಿದ್ದರೆ, ಖಾಸಗಿ ಶಾಲೆಗಳ ಮಕ್ಕಳ ಗುಣಮಟ್ಟ ಕಡಿಮೆಯಾಗಿದೆ. 5 ವರ್ಷದ ಹಿಂದೆ 1ನೇ ತರಗತಿ ಪಠ್ಯ ಓದಲಾಗದ ಮೂರನೇ ತರಗತಿಯ ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ ಶೇ.60 ಇದ್ದರೆ, ಕಳೆದ ವರ್ಷ ಇದು ಶೇ.59ಕ್ಕೆ ಇಳಿದಿದೆ. ಖಾಸಗಿ ಶಾಲೆಗಳ ಮಕ್ಕಳ ಸಂಖ್ಯೆ ಕ್ರಮವಾಗಿ ಶೇ.38 ಮತ್ತು ಶೇ.50. 2010ರಲ್ಲಿ ಸರ್ಕಾರಿ ಶಾಲೆ ಮಕ್ಕಳ ಸಂಖ್ಯೆ ಶೇ. 60 ಇದ್ದರೆ, ಖಾಸಗಿ ಶಾಲೆ ಮಕ್ಕಳ ಸಂಖ್ಯೆ ಶೇ.45.

ಗಣಿತ ವಿಭಾಗದಲ್ಲಿ ಬಹುತೇಕ ರಾಜ್ಯಗಳು ಹಿನ್ನಡೆ ಹೊಂದಿದ್ದರೆ, ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡು 2010ಕ್ಕೆ ಹೋಲಿಸಿದರೆ 2011ರಲ್ಲಿ ಪ್ರಗತಿ ಸಾಧಿಸಿವೆ. ಶಾಲೆಗೆ ದಾಖಲಾದ ಮಕ್ಕಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಿಗೆ ಹೋಗುವ ಮಕ್ಕಳ ಸಂಖ್ಯೆ ವಿಪರೀತ ಏರಿಕೆ ಆಗಿದೆ. ಶಾಲೆ ಬಿಟ್ಟ 15-16 ವರ್ಷದ ವಯೋಮಾನದ ವಿದ್ಯಾರ್ಥಿಗಳಲ್ಲಿ ಬಾಲಕರದೇ ಮೇಲುಗೈ. ಮಕ್ಕಳು ಹಾಗೂ ಶಿಕ್ಷಕರ ಅನುಪಾತದಲ್ಲೂ ಕರ್ನಾಟಕ ಪರವಾಗಿಲ್ಲ ಎನ್ನುವ ಸ್ಥಿತಿಯಲ್ಲಿದೆ. `ಶಿಕ್ಷಣ ಹಕ್ಕು ಯೋಜನೆ (ಆರ್‌ಟಿಇ) ಜಾರಿಗೆ ತರುವಲ್ಲಿ ರಾಜ್ಯ ಮುಂದಿದೆ. ಆಟದ ಮೈದಾನ, ಶಾಲಾ ಕಾಂಪೌಂಡ್, ಕುಡಿಯುವ ನೀರು, ಶೌಚಾಲಯ, ಹೆಣ್ಣು ಮಕ್ಕಳ ಶೌಚಾಲಯ, ಬಿಸಿಯೂಟ ಸೇರಿದಂತೆ ಮಕ್ಕಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡಿದೆ.

2010ರಲ್ಲಿ 769 ಶಾಲೆಗಳಿಗೆ ಸಮೀಕ್ಷಾ ತಂಡ ಭೇಟಿ ನೀಡಿ ವರದಿ ಸಲ್ಲಿಸಿತ್ತು. ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಈ ವರದಿ ಬಿಡುಗಡೆ ಮಾಡಿದರು. ಪ್ರಥಮ್ ಪ್ರತಿಷ್ಠಿತ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಕಳೆದ ಸಲ ಇದು ಸಲ್ಲಿಸಿದ ವರದಿ ಸಂಸತ್ತಿನಲ್ಲಿ ಉಲ್ಲೇಖಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT