ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹೆಚ್ಚುತ್ತಿರುವ ಮನುಷ್ಯನ ಸ್ವಾರ್ಥ'

ರಾಜಾಪುರದಲ್ಲಿ ಉಜ್ಜಯಿನಿ ಶ್ರೀಗಳು, ಧರ್ಮ ಸಮಾವೇಶದಲ್ಲಿ ಭಾಗಿ
Last Updated 8 ಜುಲೈ 2013, 10:44 IST
ಅಕ್ಷರ ಗಾತ್ರ

ಆನೇಕಲ್: `ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದರಿಂದ ನಿರಂತರ ಅವಘಡ ಘಟಿಸುತ್ತಿವೆ' ಎಂದು ಉಜ್ಜಯಿನಿಯ ಜಗದ್ಗುರು ಶ್ರೀ ಸಿದ್ದಲಿಂಗ ಶ್ರೀಗಳು ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ರಾಜಾಪುರದಲ್ಲಿ ರೇಣುಕಾ  ಸ್ವಾಮೀಜಿಗಳ ಸ್ಮರಣೋತ್ಸವ ಮತ್ತು ರೇಣುಕಾಚಾರ್ಯ ಜಯಂತಿ, ಜನಜಾಗೃತಿ ಧರ್ಮ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ತಂತ್ರಜ್ಞಾನ ಇಂದು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಮತ್ತೊಂದು ಭೂಮಿಯೊಂದನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಮನುಷ್ಯ ಸಮಸ್ತ ಪ್ರಕೃತಿಯನ್ನು ಸ್ವಾರ್ಥಕ್ಕೆ ಬಳಸಿಕೊಂಡು ಹೆಚ್ಚೆಚ್ಚು ಉಪಕಾರ ಪಡೆಯುತ್ತಿದ್ದಾನೆ. ಆದರೆ ಸ್ವಾರ್ಥದಿಂದಾಗಿ ಧರ್ಮವನ್ನೇ ಬಿಟ್ಟು ಪಶುವಿನಂತಾಗುತ್ತಿದ್ದಾನೆ' ಎಂದು ವಿಷಾದಿಸಿದರು.

`ವಿಜ್ಞಾನ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದರೂ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಪ್ರತಿಯೊಬ್ಬರ್ಲ್ಲಲೂ ತನ್ನಂತೆಯೇ ಪರರು ಎಂಬ ಭಾವನೆ ಇದ್ದರೆ ಮಾತ್ರ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ' ಎಂದರು.

`ಸ್ವಾಮೀಜಿಗಳು ಕಲೆಕ್ಷನ್‌ಗಿಂತ ದೇವರೊಂದಿಗೆ ಭಕ್ತರನ್ನು ಕನೆಕ್ಷನ್ ಮಾಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.  ಗುರಗಳು ಎನಿಸಿಕೊಂಡವರು ಲೋಭ, ಮೋಹಗಳಿಂದ ವಿಮುಕ್ತರಾಗಿರಬೇಕು' ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್.ಬಸವರಾಜು ಮಾತನಾಡಿ, `ರಾಜಾಪುರ ಮಠದ ಲಿಂಗೈಕ್ಯ ರೇಣುಕಾ ಶಿವಾಚಾರ್ಯ ಸ್ವಾಮೀಜಿಗಳು ಬಡವ ಬಲ್ಲಿದರೆಂದೇ ಎಲ್ಲ ಭಕ್ತರಿಗೂ ಮಾರ್ಗದರ್ಶನ ನೀಡುತ್ತಿದ್ದರು. ಕರ್ನಾಟಕ, ಆಂಧ್ರ, ತಮಿಳುನಾಡುಗಳಲ್ಲಿ ಸಂಚರಿಸಿ ಧರ್ಮೋಪದೇಶ ಮಾಡಿ ಧರ್ಮ ಪ್ರವನಾಚಾರ್ಯ ಎಂಬ ಬಿರುದು ಪಡೆದಿದ್ದರು' ಎಂದರು.

ರಾಜಾಪುರ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, `ಮಠದ ವತಿಯಿಂದ ವೃದ್ಧಾಶ್ರಮ, ಆಸ್ಪತ್ರೆ ತೆರೆಯಲಾಗಿದ್ದು ಗ್ರಾಮಸ್ಥರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು' ಎಂದರು.

ಮಠದ ವತಿಯಿಂದ 200 ಮಂದಿ ಗ್ರಾಮಸ್ಥರಿಗೆ ಉಚಿತ ನಿವೇಶನಗಳನ್ನು ವಿತರಿಸಲಾಯಿತು. ಜಾನಪದ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಎಂ.ಕೆ.ಸಿದ್ದರಾಜು, ವರ್ತೂರು ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಗುಮ್ಮಳಾಪುರ ಮಠದ ಶಿವಾನಂದ ಸ್ವಾಮೀಜಿ, ಬಳ್ಳನಾಪುರ ಮಠದ ಶ್ರೀಗಳು, ಬೆಳ್ಳಾವಿ ಶ್ರೀಗಳು, ಶಾಸಕ ಬಿ.ಶಿವಣ್ಣ, ಸಾಹಿತಿ ಎಂ.ಜಿ.ನಾಗರಾಜು, ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಜಿಗಣಿ ಶಂಕರ್, ಹೆನ್ನಾಗರ ಗ್ರಾ.ಪಂ ಅಧ್ಯಕ್ಷ ಆರ್.ಕೆ.ಕೇಶವ, ಹಾರಗದ್ದೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್.ನಟರಾಜ್, ಮಠದ ವಿಶ್ವನಾಥ್, ಸಿ.ನಟರಾಜ, ಬಿಜ್ಜಹಳ್ಳಿ ನಾಗರಾಜು, ಮುಖಂಡರಾದ ಪ್ರಕಾಶ್, ಎಚ್.ಎಸ್.ನಂಜಣ್ಣ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT