ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಸರಗಳವು ಪ್ರಕರಣ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸರಗಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಆಗಸ್ಟ್‌ ತಿಂಗಳಲ್ಲಿ ದುಷ್ಕರ್ಮಿಗಳು ಒಟ್ಟು 49 ಮಹಿಳೆಯರಿಂದ ಸರ ದೋಚಿದ್ದರೆ, ಸೆಪ್ಟಂಬರ್‌ನ ಮೊದಲ 17 ದಿನಗಳಲ್ಲಿ 12 ಕಡೆ ಸರ ಕಳವಾಗಿರುವುದು ವರದಿಯಾಗಿದೆ.

ಸಾಮಾನ್ಯವಾಗಿ ಸರಗಳವು ಪ್ರಕರಣಗಳು ನಸುಕಿನ ವೇಳೆಯಲ್ಲೇ ನಡೆಯುತ್ತವೆ. ಮಹಿಳೆ­ಯರು ವಾಯುವಿಹಾರಕ್ಕೆ ಬರುವ ಹಾಗೂ ಮನೆ ಮುಂದೆ ಕಸ ಗುಡಿಸುವ ಈ ಸಮಯದಲ್ಲಿ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಅಥವಾ ಇನ್ನಾವುದೋ ನೆಪದಲ್ಲಿ ಬಂದು ಸರ ದೋಚಿ ಹೋಗುತ್ತಾರೆ. ಹೀಗಾಗಿ ನಸುಕಿನ ವೇಳೆ ಗಸ್ತು ಹೆಚ್ಚಿಸಿದರೆ ಇಂತಹ ಅಪರಾಧಗಳನ್ನು ನಿಯಂತ್ರಿಸಬಹುದು’ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

  ‘ಸರಗಳವು, ಕನ್ನಕಳವು, ದರೋಡೆಯಂತಹ ಕೃತ್ಯಗಳು ನಿಯಂತ್ರಿಸಲು ಸಾಧ್ಯವಿರುವ ಅಪರಾಧ ಪ್ರಕರಣಗಳಾಗಿವೆ. ಸಿಬ್ಬಂದಿ ಸಮರ್ಪಕ ರೀತಿಯಲ್ಲಿ ಗಸ್ತು ತಿರುಗಿದರೆ ಹಾಗೂ ಸಾರ್ವಜನಿಕರು ಸ್ವಲ್ಪ ಜಾಗೃತಿ ವಹಿಸಿದರೆ ಇಂತಹ ಅಪರಾಧಗಳು ಕ್ರಮೇಣ ಕಡಿಮೆಯಾಗುತ್ತವೆ. ಸ್ಥಳೀಯ ಮಟ್ಟದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಈಗಾಗಲೇ ಇ–ಬೀಟ್‌ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಗಸ್ತನ್ನು ಹೆಚ್ಚಿಸಲಾಗುವುದು’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ತಿಳಿಸಿದರು.

ಸರಗಳವು ಪ್ರಕರಣಗಳ ಜತೆ ಜತೆಗೆ ಕನ್ನಕಳವು ಪ್ರಕರಣಗಳೂ ಹೆಚ್ಚುತ್ತಿವೆ. ಈ ತಿಂಗಳ ಮೊದಲ 17 ದಿನಗಳಲ್ಲಿ ಒಟ್ಟು 58 ಮನೆಗಳಲ್ಲಿ ಕಳವು ಮಾಡಲಾಗಿದೆ. ಈ ಪೈಕಿ ರಾತ್ರಿ ಸಮಯದಲ್ಲಿ 49 ಮತ್ತು ಹಾಡಹಗಲೇ 9 ಮನೆಗಳಲ್ಲಿ ಕಳವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಅಪರಾಧ ವಿಭಾಗದ ಅಧಿಕಾರಿಗಳು, ‘ಹಬ್ಬ ಹಾಗೂ ವಾರಾಂತ್ಯದ ಸಾಲು ರಜೆಗಳ ಸಂದರ್ಭದಲ್ಲಿ ಕುಟುಂಬ ಸದಸ್ಯರೆಲ್ಲಾ ಊರಿಗೆ ತೆರಳಿರುತ್ತಾರೆ ಎಂಬುದನ್ನು ಅರಿತ ದುಷ್ಕರ್ಮಿಗಳು ಈ ಕೃತ್ಯ ಎಸಗುತ್ತಾರೆ. ಊರಿಗೆ ತೆರಳುವಾಗ ಸ್ಥಳೀಯ ಠಾಣೆಗೆ ವಿಷಯ ತಿಳಿಸಿ ಹೋಗಬೇಕು ಎಂದು ಮನವಿ ಮಾಡಿದರೂ ಜನ ತಲೆಕೆಡಿಸಿ
ಕೊಳ್ಳುತ್ತಿಲ್ಲ.

ಪೊಲೀಸರ ಸೋಗಿನಲ್ಲಿ ಒಂಟಿ ಮಹಿಳೆಯರಿಂದ ಸರ ದೋಚತ್ತಿದ್ದ ಇರಾನ್‌ ಮೂಲದ ದುಷ್ಕರ್ಮಿಗಳನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅವರ ಬಂಧನದ ನಂತರದ ಮೂರ್ನಾಲ್ಕು ತಿಂಗಳಲ್ಲಿ ಸರಗಳವು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ತಲೆಮರೆಸಿಕೊಂಡು ಓಡಾಡುತ್ತರುವ ಆ ಗುಂಪಿನ ಇತರೆ ಸದಸ್ಯರು ಅಪರಾಧ ಕೃತ್ಯಗಳನ್ನು ಮುಂದುವರಿಸಿರುವ ಸಾಧ್ಯತೆ ಇದೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಸಿಬ್ಬಂದಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಕಡೆ ಸರಗಳವು
ಬೆಂಗಳೂರು:
ನಗರದ ಕಾಡುಗೊಂಡನಹಳ್ಳಿ ಮತ್ತು ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ಮಂಗಳ­ವಾರ ಬೆಳಿಗ್ಗೆ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಸರಗಳ್ಳರು ಮಹಿಳೆಯರ ಲಕ್ಷಾಂತರ ರೂಪಾಯಿ ಮೌಲ್ಯದ ಸರಗಳನ್ನು ದೋಚಿದ್ದಾರೆ.

ಎಚ್‌ಬಿಆರ್‌ ಲೇಔಟ್‌ ಒಂದನೇ ಹಂತದ ಐದನೇ ಅಡ್ಡರಸ್ತೆಯಲ್ಲಿ ಡಾ.ಶೋಭಾರಾಣಿ ಎಂಬುವರ 80 ಗ್ರಾಂ ತೂಕದ ಸರವನ್ನು ದೋಚಲಾಗಿದೆ.

ಶೋಭಾರಾಣಿ ಅವರು ಮನೆಯ ಮುಂದೆ ನೀರು ಹಾಕುತ್ತಿದ್ದಾಗ ಅಲ್ಲಿಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ವಿಳಾಸ ಕೇಳುವ ನೆಪದಲ್ಲಿ ಅವರನ್ನು ಮಾತನಾಡಿಸಿ ಸರ ಕಿತ್ತು­ಕೊಂಡು ಪರಾರಿಯಾಗಿದ್ದಾರೆ. ಕಾಡುಗೊಂಡನ­ಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತೊಂದು ಪ್ರಕರಣ: ಚಿಕ್ಕ ಆಡುಗೋಡಿ ಒಂದನೇ ಅಡ್ಡರಸ್ತೆಯಲ್ಲಿ ದುಷ್ಕರ್ಮಿಗಳು ಶಾಲಿನಿ ಎಂಬುವರ ಆರು ಗ್ರಾಂ ತೂಕದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಶಾಲಿನಿ ಅವರು ಮನೆಯ ಸಮೀಪವೇ ವಾಯುವಿಹಾರ ಮಾಡುತ್ತಿದ್ದಾಗ ಸರಗಳ್ಳರು ಬೈಕ್‌ನಲ್ಲಿ ಹಿಂಬಾಲಿಸಿ ಬಂದು ಈ ಕೃತ್ಯ ಎಸಗಿದ್ದಾರೆ. ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT