ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಏಜೆನ್ಸಿಗೆ ಪತ್ರ ಬರೆಯಲು ನಿರ್ಧಾರ

`ಆಧಾರ' ಏಜೆನ್ಸಿ ಅದ್ವಾನಕ್ಕೆ ಜಿಲ್ಲಾಧಿಕಾರಿ ಗರಂ!
Last Updated 7 ಸೆಪ್ಟೆಂಬರ್ 2013, 6:07 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ `ಆಧಾರ ಸಂಖ್ಯೆ' ನೋಂದಣಿ ಯೋಜನೆ ಪ್ರಕ್ರಿಯೆ ನೀರಸವಾಗಿದ್ದು, ಚುರುಕುಗೊಳಿಸಬೇಕಾಗಿದೆ. ಹೆಚ್ಚುವರಿ ಏಜೆನ್ಸಿ ಒದಗಿಸಬೇಕು ಹಾಗೂ ಈಗ ವಹಿಸಿರುವ ಏಜೆನ್ಸಿಗಳಲ್ಲೂ ಕಾರ್ಯಕ್ಷಮತೆ ಕೊರತೆ ಇದೆ. ಇಂಥವುಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಆಧಾರ ನೋಂದಣಿ ಪ್ರಕ್ರಿತೆ ಏಜೆನ್ಸಿ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ 18.23 ಲಕ್ಷ ಜನರಿದ್ದಾರೆ. ಕೇವಲ 4,39,031 ಜನ ಮಾತ್ರ ಆಧಾರ ನೋಂದಣಿ ಮಾಡಿಸಿ ಆಧಾರ ಗುರುತಿನ ಚೀಟಿ ಪಡೆದಿದ್ದಾರೆ. ಮಾರ್ಚ್-2014ರೊಳಗೆ ಪೂರ್ಣಗೊಳಿಸಲು ಸರ್ಕಾರದ ಆದೇಶವಿದೆ. ಕೇವಲ 4 ಏಜೆನ್ಸಿ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಅವುಗಳೂ ಕೂಡಾ ನಿರ್ದಿಷ್ಟ ಮಟ್ಟದಲ್ಲಿ ಕಾರ್ಯ ನಿರ್ವಹಿಸಿಲ್ಲ ಎಂದು ಹೇಳಿದರು.

ಫಿನೋಪೆಟಿಕ್ ಸಂಸ್ಥೆ 100ರಲ್ಲಿ 32 ಕಡೆ, ಕೆಡಬ್ಲ್ಯು ಕನ್ಸಲ್ಟೆನ್ಸಿ 25ರಲ್ಲಿ 11 ಕಡೆ, ಹೈದರಾಬಾದ್‌ನ ಶ್ರೀವನ್ ಇನ್‌ಫೋಟೆಕ್ 100ರಲ್ಲಿ 95 ಕಡೆ, ಟೇರಾ ಸಾಫ್ಟವೇರ್ ಕಂಪೆನಿ 100ರಲ್ಲಿ 30 ಕಡೆ ಮಾತ್ರ ಕೆಲಸ ಮಾಡುತ್ತಿವೆ. ಈ ನಾಲ್ಕೂ ಸಂಸ್ಥೆಗಳೂ 328 ಕಿಟ್ ಕೊಡಬೇಕು. ನಿರ್ದಿಷ್ಟಮಟ್ಟದ ಆಪರೇಟ್ಸ್ ಹೊಂದಿರಬೇಕು. ಆದರೆ ಕೇವಲ 168 ಕಿಟ್ ಹೊಂದಿದ್ದು, ಆಪರೇಟರ್ಸ್‌ ಸಮಸ್ಯೆ ಇದೆ ಎಂದು ಹೇಳಿದರು.

ಆಂಧ್ರಪ್ರದೇಶ ಹಾಗೂ ಬೇರೆ ಕಪ್ಪು ಪಟ್ಟಿಗೆ ಸೇರಿಸಿದ ಇಂಥ ಸಂಸ್ಥೆಗಳಿಗೆ ಇಲ್ಲಿ ಆಧಾರ ನೋಂದಣಿ ಕಾರ್ಯಕ್ಕೆ ಗುರುತಿಸಿ ಏಜೆನ್ಸಿ ವಹಿಸಿಕೊಡಲಾಗಿದೆ. ಇವುಗಳ ಕಾರ್ಯ ತೃಪ್ತಿಕರವಾಗಿಲ್ಲ. ಹೀಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಪತ್ರ ಬರೆಯದೇ ಇದ್ದರೆ ಜಿಲ್ಲಾಡಳಿತ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ಏಜೆನ್ಸಿಗಳಲ್ಲೇ ತಾಳಮೇಳವಿಲ್ಲ. ಎಷ್ಟು ಪ್ರಮಾಣದಲ್ಲಿ ಕೆಲಸ ಮಾಡಲಾಗಿದೆ. ಎಲ್ಲೆಲ್ಲಿ ಕೆಲಸ ಮಾಡಲಾಗುತ್ತಿದೆ. ಕಿಟ್ ಎಷ್ಟು, ಆಪರೇಟರ್ಸ್‌ ಎಷ್ಟಿದ್ದಾರೆ ಎಂಬುದರ ಬಗ್ಗೆಯೇ ಗೊಂದಲವಿದೆ. ಸಭೆಯಲ್ಲಿ ಅರೆಬರೆ ಮಾಹಿತಿ ಕೊಟ್ಟಿದ್ದಾರೆ. ಇದಕ್ಕೆಲ್ಲ ಪರಿಹಾರವಾಗಿ ಹೊಸ ಏಜೆನ್ಸಿ ಕೊಡಬೇಕು ಹಾಗೂ ಈಗಿರುವ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಶುಲ್ಕ ಪಡೆದರೆ ಕ್ರಮ: ಆಧಾರ ಯೋಜನೆ ನೋಂದಣಿಗೆ ಯಾವುದೇ ಶುಲ್ಕವನ್ನು ಸಾರ್ವಜನಿಕರು ಪಾವತಿಸಬಾರದು. ಯಾರಾದರೂ ಏಜೆನ್ಸಿಯವರು ಶುಲ್ಕ ಪಡೆದರೆ ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ, ಉಪವಿಭಾಗಾಧಿಕಾರಿ ಮಂಜುಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT