ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಹೀರಾ ನಸೀಂ

Last Updated 14 ಅಕ್ಟೋಬರ್ 2011, 8:30 IST
ಅಕ್ಷರ ಗಾತ್ರ

ಯಾದಗಿರಿ: ರಾಜ್ಯದ 30 ನೇ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ ಮಹಿಳಾ ಅಧಿಕಾರಿಗಳ ಆಡಳಿತ ಮುಂದುವರಿದಿದ್ದು, ಈ ಪಟ್ಟಿಗೆ ಇದೀಗ ಮತ್ತೊಬ್ಬ ಅಧಿಕಾರಿ ಸೇರ್ಪಡೆ ಆಗಿದ್ದಾರೆ. ಜಿಲ್ಲೆಯ ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಹೀರಾ ನಸೀಂ ಅಧಿಕಾರಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದು, ಜಿಲ್ಲೆಯ ಮತ್ತೊಂದು ಪ್ರಮುಖ ಹುದ್ದೆಯಲ್ಲಿ ಮಹಿಳಾ ಅಧಿಕಾರಿ ನೇಮಕಗೊಂಡಂತಾಗಿದೆ.

ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತರು, ಯಾದಗಿರಿ ತಹಸೀಲ್ದಾರರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಜಿಲ್ಲೆಯ ಮೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಯಾದಗಿರಿ ನಗರಸಭೆ ಅಧ್ಯಕ್ಷರು, ಶಹಾಪುರ ಪುರಸಭೆ ಅಧ್ಯಕ್ಷೆ, ಮುಖ್ಯಾಧಿಕಾರಿ ಸೇರಿದಂತೆ ಜಿಲ್ಲೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ.

ಎನ್. ಶಿವರಾಜ ಅವರ ನಿಧನದ ನಂತರ ತೆರವಾಗಿದ್ದ ಯಾದಗಿರಿ ಅಪರ ಜಿಲ್ಲಾಧಿಕಾರಿಗಳ ಹುದ್ದೆಯನ್ನು ಇದೀಗ ಜಹೀರಾ ನಸೀಂ ವಹಿಸಿಕೊಂಡಿದ್ದು, ಈ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ.

ಇದುವರೆಗೆ ಜಹೀರಾ ನಸೀಂ ಅವರು, ಮೈಸೂರು ನಗರ ಯೋಜನಾ ಕೋಶದ ಯೋಜನಾಧಿಕಾರಿಗಳಾಗಿ ಹಾಗೂ ಪ್ರಭಾರ ಅಪರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಅವರು, ಮೂಲತಃ ಗುಲ್ಬರ್ಗ ಜಿಲ್ಲೆಯವರಾಗಿದ್ದಾರೆ.

ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೂತನ ಯಾದಗಿರಿ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಗುರುವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಜಿಲ್ಲೆಯ ಬಗ್ಗೆ ಅಧ್ಯಯನ ಮಾಡುತ್ತೇನೆ. ನಂತರವಷ್ಟೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಗಮನ ನೀಡಲಾಗುವುದು ಎಂದು ತಿಳಿಸಿದರು.

ಹೊಸ ಜಿಲ್ಲೆಯಾಗಿದ್ದರೂ, ತವರು ಜಿಲ್ಲೆಗೆ ಹೊಂದಿಕೊಂಡಿದೆ. ಹೀಗಾಗಿ ಯಾವುದೇ ತೊಂದರೆ ಆಗುವುದಿಲ್ಲ. ಜನರು, ಅಧಿಕಾರಿಗಳ ಸಹಕಾರದಿಂದ ಜಿಲ್ಲೆಗೆ ಅಗತ್ಯವಿರುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಗುರನೀತ್ ತೇಜ್ ಮೆನನ್ ಸದ್ಯಕ್ಕೆ ದೀರ್ಘ ರಜೆ ಮೇಲೆ ತೆರಳಿದ್ದು, ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ಜೈನ್, ಪ್ರಭಾರ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ನೂತನ ಅಪರ ಜಿಲ್ಲಾಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದ್ದು, ಗುರುವಾರವೇ ಸಾಕಷ್ಟು ಕೆಲಸಗಳನ್ನು ಜಹೀರಾ ನಸೀಂ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT