ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ನೆಮ್ಮದಿ ಕೇಂದ್ರ ಆರಂಭಕ್ಕೆ ಒತ್ತಾಯ

Last Updated 19 ಜುಲೈ 2012, 5:30 IST
ಅಕ್ಷರ ಗಾತ್ರ

ಶಿಕಾರಿಪುರ: ಪಟ್ಟಣದಲ್ಲಿರುವ ನೆಮ್ಮದಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಸುಲಭವಾಗಿ ಈ ಕೇಂದ್ರಗಳ ಸೇವೆಯನ್ನು ನಾಗರಿಕರಿಗೆ ತಲುಪುವಂತೆ ಮಾಡಬೇಕೆಂದು ಆಗ್ರಹಿಸಿ ಬುಧವಾರ ತಾಲ್ಲೂಕು ಯುವ ಕಾಂಗ್ರೆಸ್ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ  ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಯುವ ಕಾಂಗ್ರೇಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡಿ,  ತಾಲ್ಲೂಕಿನಲ್ಲಿರುವ ನೆಮ್ಮದಿ ಕೇಂದ್ರದ ಕಾರ್ಯ ವೈಖರಿಯಿಂದ ಜನರು ಪರದಾಡುವಂತಾಗಿದ್ದು, ಇತ್ತೀಚೆಗೆ ತಾತ್ಕಾಲಿಕ ಪಡಿತರ ಚೀಟಿಯನ್ನು ಹೊಂದಿರುವ ನಾಗರೀಕರು ಖಾಯಂ ಪಡಿತರ ಚೀಟಿ ಪಡೆಯುವುದು ಕಡ್ಡಾಯವೆಂದು ಸರ್ಕಾರವು ಸೂಚಿಸಿದ್ದು, ಇದರಿಂದಾಗಿ ಬಿಪಿಎಲ್, ಅಂತ್ಯೋದಯ, ಪಡಿತರ ಚೀಟಿ ಹೊಂದಿರುವ ನಾಗರಿಕರು ಮಾಸಿಕವಾಗಿ ಪಡೆಯುವ ಪಡಿತರವು ದೊರಕದೇ ಸಂಕಷ್ಟ ಪಡುತ್ತಿದ್ದಾರೆ ಎಂದು ದೂರಿದರು.

ನಾಗರೀಕರು ತಾತ್ಕಾಲಿಕ ಪಡಿತರ ಚೀಟಿಯನ್ನು ಕಾಯಂ ಪಡಿತರ ಚೀಟಿ ಮಾಡಿಸಿ ಕೊಳ್ಳಲು ನೆಮ್ಮದಿ ಕೇಂದ್ರಗಳಿಗೆ, ಭಾವಚಿತ್ರ ತೆಗೆಯುವ ಕೇಂದ್ರಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಈ ಕಡೆ ಪಡಿತರ ಚೀಟಿಯು ದೊರೆಯುತ್ತಿಲ್ಲ ಮತ್ತು ಕೂಲಿ ಕೆಲಸಕ್ಕೆಂದು ಹೋಗುವ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೇ ಪ್ರತಿ ದಿನ ನೆಮ್ಮದಿ ಕೇಂದ್ರ ಹಾಗೂ ಕಚೇರಿಗಳಿಗೆ ಅಲೆದಾಡಬೇಕಾಗಿದೆ ಎಂದು ಆರೋಪಿಸಿದರು.

ನೆಮ್ಮದಿ ಕೇಂದ್ರವು ಸಹ ತಾಲ್ಲೂಕು ಕಚೇರಿಯಿಂದ ದೂರ ಇರುವುದರಿಂದ ವೃದ್ದರು, ಅಂಗವಿಕಲರು, ಮಹಿಳೆಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕಾಯಂ ಪಡಿತರ ಚೀಟಿಗಾಗಿ ಭಾವಚಿತ್ರ ತೆಗೆಯುವ ಕೇಂದ್ರವು  ತಾಲ್ಲೂಕಿಗೆ ಒಂದೇ ಇರುವುದರಿಂದ, ಖಾಯಂ ಪಡಿತರ ಚೀಟಿ ನಾಗರಿಕರು ನಡೆಸುತ್ತಿರುವ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಕಾಯಂ ಪಡಿತರ ಚೀಟಿ ಪಡೆಯಲು ಕೊಡುವ ದಾಖಲೆಗಳನ್ನು ಒದಗಿಸುವಲ್ಲಿ ನಾಗರಿಕರಿಗೆ ತೊಂದರೆಯಾಗುತ್ತಿದ್ದು, ಸರ್ಕಾರ ಕೆಲವೊದು ದಾಖಲೆಗಳನ್ನು ನೀಡುವುದನ್ನು ಕಡ್ಡಾಯ ಗೊಳಿಸಬಾರದು.
ಹಾಗಾಗಿ, ಜಿಲ್ಲಾಧಿಕಾರಿ ತಾಲ್ಲೂಕಿನಲ್ಲಿರುವ ನೆಮ್ಮದಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜತೆ, ಭಾವಚಿತ್ರ ತೆಗೆಯುವ ಕೇಂದ್ರ ಮತ್ತು ನೆಮ್ಮದಿ ಕೇಂದ್ರಗಳನ್ನು ಆಡಳಿತ ಸೌಧ ಕಟ್ಟಡಗಳಿಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧಕ್ಷ ಗೋಣಿ ಮಾಲತೇಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಗ ರಾಘವೇಂದ್ರನನ್ನು ಸಂಸದ ಮಾಡುವ ಉದ್ದೇಶದಿಂದ ತಾಲ್ಲೂಕಿನಲ್ಲಿ ತಾತ್ಕಾಲಿಕ ಪಡಿತರ ಚೀಟಿಯನ್ನು ವಿತರಣೆ ಮಾಡಿದ್ದರು. ಆದರೆ ಈಗ ತಾತ್ಕಾಲಿಕ ಪಡಿತರ ಚೀಟಿಯನ್ನು ರದ್ದು ಮಾಡುವ ಮೂಲಕ ಜನತಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ   ಭಂಡಾರಿ ಮಾಲತೇಶ್, ನಗರದ ರವಿಕಿರಣ್, ಹುಲ್ಮಾರ್ ಮಧು, ಧಾರಾವಾಡ ಸುರೇಶ್, ಪ್ರದೀಪ್ ಕುಮಟಿ, ರವಿ ಉಪಸ್ಥಿತರಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT